ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರದುರ್ಗ-ಶಿವಮೊಗ್ಗ ರಸ್ತೆ ವಿಸ್ತರಣೆಗೆ ಹಾದಿ ಸುಗಮ

ಬೆಳ್ಳಂಬೆಳಿಗ್ಗೆ ಹಿಟಾಚಿ, ಜೆಸಿಬಿ ಸದ್ದು, ರಸ್ತೆ ಪಕ್ಕದ ಮನೆ, ಕಾಂಪೌಂಡ್ ತೆರವು
Last Updated 17 ಜನವರಿ 2022, 4:51 IST
ಅಕ್ಷರ ಗಾತ್ರ

ಹೊಳಲ್ಕೆರೆ: ಭಾನುವಾರ ಬೆಳ್ಳಂಬೆಳಿಗ್ಗೆ ಹಿಟಾಚಿ, ಜೆಸಿಬಿಗಳು ಸದ್ದು ಮಾಡಿದವು. ಪಟ್ಟಣದ ಮುಖ್ಯ ಸರ್ಕಲ್‌ನಿಂದ ಚಿತ್ರದುರ್ಗ ಮಾರ್ಗದಲ್ಲಿ ರಸ್ತೆ ಪಕ್ಕದಲ್ಲಿದ್ದ ಮನೆಗಳು, ಕಾಂಪೌಂಡ್ ಹಾಗೂ ಶೆಡ್‌ಗಳನ್ನು ನೆಲಸಮಗೊಳಿಸಿದವು. ಈ ಮೂಲಕ ಮುಖ್ಯರಸ್ತೆ ವಿಸ್ತರಣೆಗೆ ಇದ್ದ ತೊಡಕುಗಳು ನಿವಾರಣೆ ಆದವು.

ಪಟ್ಟಣದ ಚಿತ್ರದುರ್ಗ-ಶಿವಮೊಗ್ಗ ಮಾರ್ಗದ ರಾಷ್ಟ್ರೀಯ ಹೆದ್ದಾರಿ-13ರ ರಸ್ತೆ ವಿಸ್ತರಣೆ ಬಹುದಿನಗಳ ಕನಸಾಗಿತ್ತು. ರಸ್ತೆ ವಿಸ್ತರಣೆಗೆ ಮನೆಗಳನ್ನು ತೆರವುಗೊಳಿಸುವುದು ಸವಾಲಿನ ಕೆಲಸವಾಗಿತ್ತು. ಕೆಲವರು ಪರಿಹಾರ ಪಡೆದುಕೊಂಡು ರಸ್ತೆ ಪಕ್ಕದಲ್ಲಿದ್ದ ಮನೆಗಳನ್ನು ತೆರವು ಮಾಡಿದ್ದರು. ಇನ್ನು ಕೆಲವರು ಹೆಚ್ಚು ಪರಿಹಾರಕ್ಕೆ ಆಗ್ರಹಿಸಿ ನ್ಯಾಯಾಲಯದ ಮೆಟ್ಟಿಲು ಏರಿದ್ದರು. ಈಗ ಎಲ್ಲ ಪ್ರಕರಣಗಳು ಮುಗಿದಿದ್ದು, ರಸ್ತೆ ವಿಸ್ತರಣೆಗೆ ಕಾಲ ಕೂಡಿ ಬಂದಿದೆ.

‘ಪಟ್ಟಣದ ವ್ಯಾಪ್ತಿಯಲ್ಲಿ 3.5 ಕಿ.ಮೀ. ರಸ್ತೆ ವಿಸ್ತರಣೆ ಮಾಡಲಾಗುವುದು. ಈ ಮಾರ್ಗದಲ್ಲಿ ಷಟ್ಪಥ ರಸ್ತೆ ನಿರ್ಮಾಣ ಆಗಲಿದ್ದು, ನಾಲ್ಕು ಪಥಗಳು ವಾಹನ ಸಂಚಾರಕ್ಕೆ ಬಳಕೆ ಆಗಲಿವೆ. ಹೊರಗಿನ ಎರಡು ಪಥಗಳು ಸರ್ವಿಸ್‌ ರಸ್ತೆಗಳಾಗಿದ್ದು, ಜನರ ಸಂಚಾರಕ್ಕೆ ಬಳಕೆ ಆಗಲಿವೆ. ಅರೇಹಳ್ಳಿ ಬಳಿ ರೈಲ್ವೆ ಮೇಲ್ಸೇತುವೆ ನಿರ್ಮಿಸಲಾಗುವುದು. ಪಟ್ಟಣದ ಸರ್ಕಲ್ ಕೂಡ ಅಭಿವೃದ್ಧಿ ಮಾಡಲಾಗುವುದು’ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಎಂಜಿನಿಯರ್ ಭರಮರೆಡ್ಡಿ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

‘ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅನುದಾನದಲ್ಲಿ ರಸ್ತೆ ವಿಸ್ತರಣೆ ನಡೆಯಲಿದೆ. ಪಟ್ಟಣದಲ್ಲಿ ಸುಂದರ ರಸ್ತೆ ನಿರ್ಮಾಣ ಆಗಲಿದ್ದು, ಸಾರ್ವಜನಿಕರ ಬಹುದಿನಗಳ ಕನಸು ಇನ್ನು ಆರು ತಿಂಗಳಲ್ಲಿ ನನಸಾಗಲಿದೆ. ರಸ್ತೆ ಮಧ್ಯೆ ಡಿವೈಡರ್, ಲೈಟಿಂಗ್ ಬರಲಿದೆ. ಮನೆ ಕಳೆದುಕೊಂಡವರಿಗೆ ದುಪ್ಪಟ್ಟು ಪರಿಹಾರ ನೀಡಲಾಗಿದೆ. ಇದರಿಂದ ಕೆಲವು ಕುಟುಂಬಗಳಿಗೆ ತೊಂದರೆ ಆಗಿರಬಹುದು. ಆದರೆ ರಸ್ತೆ ವಿಸ್ತರಣೆಯಿಂದ ಸೂರ್ಯ ಚಂದ್ರ ಇರುವವರೆಗೆ ಸಾರ್ವಜನಿಕರಿಗೆ ಅನುಕೂಲ ಆಗಲಿದೆ’ ಎಂದು ಶಾಸಕ ಎಂ. ಚಂದ್ರಪ್ಪ ಪ್ರತಿಕ್ರಿಯಿಸಿದರು.

‘ಪಟ್ಟಣದಲ್ಲಿ ವಾಹನ ದಟ್ಟಣೆ ಹೆಚ್ಚಾಗಿತ್ತು. ಸಾರ್ವಜನಿಕರು, ವಿದ್ಯಾರ್ಥಿಗಳು ರಸ್ತೆ ದಾಟಲು ಹರಸಾಹಸ ಮಾಡಬೇಕಾಗಿತ್ತು. ಈಗ ರಸ್ತೆ ವಿಸ್ತರಣೆ ಆಗುವುದರಿಂದ ಸಾರ್ವಜನಿಕರಿಗೆ ಅನುಕೂಲ ಆಗಲಿದೆ. ಶಾಸಕ ಎಂ. ಚಂದ್ರಪ್ಪ ಹೆಚ್ಚು ಜವಾಬ್ದಾರಿ ವಹಿಸಿ ರಸ್ತೆ ವಿಸ್ತರಣೆ ಮಾಡಿಸುತ್ತಿದ್ದಾರೆ. ರಸ್ತೆಯ ಪಕ್ಕದಲ್ಲಿರುವ ಪೈಪ್‌ಲೈನ್ ಸ್ಥಳಾಂತರ ಮಾಡಲಾಗುವುದು’ ಎಂದು ಪುರಸಭೆ ಅಧ್ಯಕ್ಷ ಆರ್.ಎ. ಅಶೋಕ್ ತಿಳಿಸಿದರು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಎಂಜಿನಿಯರ್ ಭರಮರೆಡ್ಡಿ, ಡಿವೈಎಸ್‌ಪಿ ಪಾಂಡುರಂಗ, ಸಿಪಿಐ ರವೀಶ್, ಎಸ್ಐ ವಿಶ್ವನಾಥ್, ಚಿಕ್ಕಜಾಜೂರು ಎಸ್ಐ ಬಾಹುಬಲಿ, ಪುರಸಭೆ ಮುಖ್ಯಾಧಿಕಾರಿ ಎ. ವಾಸಿಂ ಇದ್ದರು.

.....

ಈಗಾಗಲೇ ಹೊಸದುರ್ಗ ಮಾರ್ಗದ ರಸ್ತೆ ವಿಸ್ತರಣೆ ಮಾಡಿದ್ದು, ಬೀದಿದೀಪ ಅಳವಡಿಸಲಾಗಿದೆ. ಇನ್ನು 6 ತಿಂಗಳಲ್ಲಿ ಚಿತ್ರದುರ್ಗ-ಶಿವಮೊಗ್ಗ ಮಾರ್ಗದ ರಸ್ತೆಯೂ ವಿಸ್ತರಣೆ ಆಗಲಿದ್ದು, ಪಟ್ಟಣಕ್ಕೆ ಹೊಸ ಮೆರುಗು ಬರಲಿದೆ.

-ಎಂ. ಚಂದ್ರಪ್ಪ, ಶಾಸಕ ಹಾಗೂ ಕೆಎಸ್ಆರ್‌ಟಿಸಿ ಅಧ್ಯಕ್ಷ

......

ಪಟ್ಟಣದ ಸಾರ್ವಜನಿಕರ ಬಹು ವರ್ಷಗಳ ಕನಸು ಈಡೇರುವ ಸಮಯ ಈಗ ಬಂದಿದೆ. ಶಾಸಕರ ಜತೆಗೂಡಿ ಪಟ್ಟಣವನ್ನು ಸುಂದರಗೊಳಿಸಲಾಗುವುದು. -ಆರ್.ಎ. ಅಶೋಕ್, ಪುರಸಭೆ ಅಧ್ಯಕ್ಷ

....

ತೆರವಿಗೆ ಇನ್ನೊಂದೇ ಮನೆ ಬಾಕಿ!

ಪಟ್ಟಣದ ರಸ್ತೆ ವಿಸ್ತರಣೆಗೆ ಇದ್ದ ಎಲ್ಲ ತೊಡಕುಗಳು ನಿವಾರಣೆ ಆಗಿದ್ದು, ಅನಿಲ್ ಕುಮಾರ್ ಎಂಬುವರು ಒಂದು ಮನೆ ತೆರವುಗೊಳಿಸುವುದು ಮಾತ್ರ ಬಾಕಿ ಇದೆ. ಪರಿಹಾರ ನೀಡಲು ಅಳತೆಯಲ್ಲಿ ವ್ಯತ್ಯಾಸ ಮಾಡಿದ್ದಾರೆ. ಇದರಿಂದ ನಮಗೆ ಅನ್ಯಾಯ ಆಗಿದೆ ಎಂದು ಅವರು ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದು, ಮನೆ ತೆರವಿಗೆ ತಡೆಯಾಜ್ಞೆ ನೀಡಲಾಗಿದೆ. ಇವರ ಜತೆಗೆ ಪಕ್ಕದಲ್ಲಿ ನಿವೇಶನ, ಶೇಡ್ ಹೊಂಡಿರುವ 10 ಜನ ಪರಿಹಾರದ ಹಣ ಪಡೆದುಕೊಂಡಿಲ್ಲ. ‘ಪರಿಹಾರದ ಹಣದ ಬಗ್ಗೆ ನಮ್ಮ ತಕರಾರಿಲ್ಲ. ಸರಿಯಾಗಿ ಅಳತೆ ಮಾಡಿ ಪರಿಹಾರ ಕೊಡಲಿ’ ಎಂದು ಮಾಲಿಕ ಅನಿಲ್ ಕುಮಾರ್ ತಿಳಿಸಿದರು.

‘ಒಬ್ಬಿಬ್ಬರಿಗೆ ನೀಡುವ ಪರಿಹಾರದಲ್ಲಿ ಸಣ್ಣ ತಾಂತ್ರಿಕ ತೊಡಕಾಗಿದ್ದು, ಬಗೆಹರಿಸಲಾಗುವುದು. ಅನಿಲ್ ಕುಮಾರ್ ಆರ್.ಎಸ್.ಎಸ್, ಜನಸಂಘದ ಸದಸ್ಯರು. ಅವರಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಬಗ್ಗೆ ಹೆಚ್ಚು ಅಭಿಮಾನ ಇದೆ. ಮೋದಿಯವರ ಕನಸಾದ ರಾಷ್ಟ್ರೀಯ ಹೆದ್ದಾರಿ ವಿಸ್ತರಣೆಗೆ ಅವರು ಅಡ್ಡಗಾಲು ಹಾಕುವುದಿಲ್ಲ ಎಂಬ ನಂಬಿಕೆ ಇದೆ’ ಎಂದು ಶಾಸಕ ಎಂ. ಚಂದ್ರಪ್ಪ ವಿಶ್ವಾಸ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT