ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾರಿ ಯಾವುದಯ್ಯ ವಾಹನ ಸಂಚಾರಕ್ಕೆ..?

ನಗರದ ಹಲವು ರಸ್ತೆಗಳಲ್ಲಿ ನಡೆಯುತ್ತಿದೆ ಕಾಮಗಾರಿ, ವಾಹನ ದಟ್ಟಣೆ ಕಿರಿಕಿರಿ
Last Updated 19 ಏಪ್ರಿಲ್ 2021, 4:00 IST
ಅಕ್ಷರ ಗಾತ್ರ

ಚಿತ್ರದುರ್ಗ: ನಗರದಲ್ಲಿ ಸಂಚರಿಸಲು ಮುಂದಾಗುವ ವಾಹನ ಸವಾರರಿಗೆ ದಾರಿಯ ಪ್ರಶ್ನೆ ಕಾಡುವುದು ಸಹಜ. ಬಹುತೇಕ ರಸ್ತೆಗಳಲ್ಲಿ ಅಭಿವೃದ್ಧಿ ಕಾಮಗಾರಿ ನಡೆಯುತ್ತಿರುವುದರಿಂದ ಸುಗಮ ಸಂಚಾರಕ್ಕೆ ತೊಡಕು ಉಂಟಾಗಿದೆ. ಸಂಚಾರ ದಟ್ಟಣೆ ಹೆಚ್ಚಾಗಿದ್ದು, ಸವಾರರು ಕಿರಿಕಿರಿ ಅನುಭವಿಸುವಂತಾಗಿದೆ.

ಬಿ.ಡಿ.ರಸ್ತೆ, ಹೊಳಲ್ಕೆರೆ ಮಾರ್ಗ, ದಾವಣಗೆರೆ ರಸ್ತೆ, ಜೋಗಿಮಟ್ಟಿ ರಸ್ತೆ, ತುರುವನೂರು ರಸ್ತೆ, ಭೀಮಸಮುದ್ರ ರಸ್ತೆ, ದೊಡ್ಡಪೇಟೆಯ ರಾಜಬೀದಿ, ಕರುವಿನಕಟ್ಟೆ ವೃತ್ತ ಸಮೀಪದ ಬೀದಿಗಳು, ವಿ.ಪಿ.ಬಡಾವಣೆಯ ರಸ್ತೆಗಳು... ಹೀಗೆ ನಗರದ ಬಹುತೇಕ ಎಲ್ಲ ರಸ್ತೆಗಳಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಮೆದೇಹಳ್ಳಿ ರಸ್ತೆ ಹಾಗೂ ಜೆಸಿಆರ್‌ ಬಡಾವಣೆಯ ರಸ್ತೆಗಳ ಕಾಮಗಾರಿಗೆ ಸಿದ್ಧತೆ ನಡೆಯುತ್ತಿದೆ. ವಾಹನ ಸಂಚಾರಕ್ಕೆ ರಸ್ತೆ ಎಲ್ಲಿದೆ ಎಂದು ಹುಡುಕುವ ಸ್ಥಿತಿ ನಿರ್ಮಾಣವಾಗಿದೆ.

ಪರ್ಯಾಯ ವ್ಯವಸ್ಥೆ ಇಲ್ಲ:ರಸ್ತೆ ಕಾಮಗಾರಿ ಕೈಗೆತ್ತಿಕೊಳ್ಳುವ ಮೊದಲು ಸಂಬಂಧಿಸಿದ ಪ್ರಾಧಿಕಾರದ ಪೂರ್ವಾನುಮತಿ ಪಡೆಯುವ ನಿಯಮವನ್ನು ಸರ್ಕಾರ ರೂಪಿಸಿದೆ. ಕಾಮಗಾರಿಗೆ ಅನುಮತಿ ನೀಡುವ ಮೊದಲು ವಾಹನ ಸಂಚಾರಕ್ಕೆ ಪೊಲೀಸ್‌ ಇಲಾಖೆ ಪರ್ಯಾಯ ಮಾರ್ಗ ಸೂಚಿಸುತ್ತದೆ. ಕಾಮಗಾರಿಗೆ ಕಾಲಮಿತಿ ನಿಗದಿಪಡಿಸಲಾಗುತ್ತದೆ. ಆದರೆ, ಇಂತಹ ಯಾವುದೇ ಪರ್ಯಾಯ ವ್ಯವಸ್ಥೆಗಳು ನಗರದ ರಸ್ತೆ ಕಾಮಗಾರಿಯ ವಿಚಾರದಲ್ಲಿ ತೆಗೆದುಕೊಂಡಂತೆ ಕಾಣುತ್ತಿಲ್ಲ.

ಬಿ.ಡಿ.ರಸ್ತೆ ಹಾಗೂ ದಾವಣಗೆರೆ ರಸ್ತೆಯನ್ನು ಅಗೆದು ಹಾಕಿದಾಗ ಇಂತಹ ಪರ್ಯಾಯ ಮಾರ್ಗದ ಸೂಚನೆ ಹೊರಬಿದ್ದಿತ್ತು. ಖಾಸಗಿ ಹಾಗೂ ಕೆಎಸ್‌ಆರ್‌ಟಿಸಿ ಬಸ್‌ಗಳು ನಿಲ್ದಾಣಕ್ಕೆ ಹೇಗೆ ಸಾಗಬೇಕು ಎಂಬ ಮಾರ್ಗ ತಿಳಿಸಲಾಗಿತ್ತು. ಆ ಬಳಿಕ ಆರಂಭವಾದ ಯಾವ ರಸ್ತೆಯ ಕಾಮಗಾರಿಗೂ ಇಂತಹ ಸೂಚನೆ ನೀಡಲೇ ಇಲ್ಲ. ರಾತ್ರಿ ನೋಡಿದ ರಸ್ತೆಯಲ್ಲಿ ಹಗಲು ಸಾಗಲು ಪರದಾಡುವ ಸ್ಥಿತಿ ನಗರದಲ್ಲಿದೆ.

ಜೋಗಿಮಟ್ಟಿ ರಸ್ತೆ ಹಾಗೂ ಕರುವಿನಕಟ್ಟೆ ವೃತ್ತದ ಸಮೀಪದ ಬೀದಿಗಳ ಕಾಮಗಾರಿ ಕೈಗೆತ್ತಿಕೊಂಡ ಪರಿಣಾಮ ಸಂಚಾರ ಸಮಸ್ಯೆ ತೀವ್ರವಾಗಿ ಕಾಡಲಾರಂಭಿಸಿದೆ. ಬಹುತೇಕ ಎಲ್ಲ ಮಾರ್ಗಗಳು ಬಂದ್‌ ಆಗದ್ದು, ದ್ವಿಚಕ್ರ ವಾಹನ ಸಾಗಲು ಮಾತ್ರ ಅವಕಾಶವಿದೆ. ಹೀಗೆ ಸಾಗಲು ಪ್ರಯತ್ನಿಸಿ ಆಯತಪ್ಪಿ ಬಿದ್ದ ಸವಾರರಿಗೆ ಲೆಕ್ಕವಿಲ್ಲ.

ಕಾಮಗಾರಿ ಮಧ್ಯೆ ಸಂಚಾರ:ಬಹುತೇಕ ಮಾರ್ಗಗಳಲ್ಲಿ ಕಾಮಗಾರಿ ನಡುವೆಯೇ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ವಾಹನವೊಂದು ಸಾಗಲು ಮಾತ್ರ ದಾರಿ ಬಿಟ್ಟು ಉಳಿದ ರಸ್ತೆಯನ್ನು ಸಂಪೂರ್ಣ ಕಿತ್ತುಹಾಕಲಾಗಿದೆ. ಗಾಂಧಿ ವೃತ್ತದಿಂದ ಕನಕ ವೃತ್ತದವರೆಗಿನ ಹೊಳಲ್ಕೆರೆ ಮಾರ್ಗ ಹಾಗೂ ಗಾಂಧಿ ವೃತ್ತದಿಂದ ಜೆಎಂಐಟಿ ವೃತ್ತದವರೆಗಿನ ದಾವಣಗೆರೆ ರಸ್ತೆಯಲ್ಲಿ ಇಂತಹ ಸಮಸ್ಯೆ ಇದೆ. ಸಂಚಾರದಲ್ಲಿ ಸಣ್ಣ ಸಮಸ್ಯೆ ಉಂಟಾದರೂ ಗಂಟೆಗಟ್ಟಲೆ ಟ್ರಾಫಿಕ್‌ ಕಿರಿಕಿರಿ ಅನುಭವಿಸಬೇಕಾಗುತ್ತದೆ.

ಮದಕರಿನಾಯಕ ವೃತ್ತದಿಂದ ಪ್ರವಾಸಿ ಮಂದಿರದವರೆಗಿನ ಬಿ.ಡಿ. ರಸ್ತೆಯಲ್ಲಿಯೂ ಇದೇ ಸಮಸ್ಯೆ ಇದೆ. ಹಲವು ರಸ್ತೆಗಳು ಬಂದು ಸೇರುವ ಅಂಬೇಡ್ಕರ್‌ ವೃತ್ತದ ಬಳಿ ವಾಹನ ದಟ್ಟಣೆ ಹೆಚ್ಚಾಗುತ್ತಿದೆ. ಸಂಚಾರ ದಟ್ಟಣೆ ನಿಯಂತ್ರಿಸಬೇಕಾದ ಸಂಚಾರ ಠಾಣೆಯ ಪೊಲೀಸರು ದಂಡ ವಸೂಲಿಗಷ್ಟೇ ಸೀಮಿತವಾಗಿದ್ದಾರೆ.

ಕೋಟೆ ಸಂಪರ್ಕ ಭಾಗಶಃ ಕಡಿತ
ಪ್ರಮುಖ ಪ್ರವಾಸಿ ತಾಣವಾಗಿರುವ ಐತಿಹಾಸಿಕ ಕಲ್ಲಿನ ಕೋಟೆ, ಜೋಗಿಮಟ್ಟಿ ಹಾಗೂ ಆಡುಮಲ್ಲೇಶ್ವರ ಕಿರು ಮೃಗಾಲಯ ಸಂಪರ್ಕಿಸುವ ರಸ್ತೆಗಳು ಭಾಗಶಃ ಕಡಿತಗೊಂಡಿವೆ. ಬೇರೆ ಊರಿನಿಂದ ಬರುವ ಪ್ರವಾಸಿಗರು ತಾಣಗಳಿಗೆ ತೆರಳಲು ಪರದಾಡುತ್ತಿದ್ದಾರೆ.

ಕಲ್ಲಿನ ಕೋಟೆಯನ್ನು ಸಂಪರ್ಕಿಸುವ ದೊಡ್ಡಪೇಟೆ ರಾಜಬೀದಿ, ಕರುವಿನಕಟ್ಟೆ ವೃತ್ತ, ಜೋಗಿಮಟ್ಟಿ ನಾಲ್ಕನೇ ಕ್ರಾಸ್‌ ಸಂಪೂರ್ಣ ಬಂದ್‌ ಆಗಿವೆ. ಗಾಂಧಿ ವೃತ್ತದಿಂದ ಆನೆಬಾಗಿಲು ಮೂಲಕ ಸಾಗುವ ಮಾರ್ಗ ಮಾತ್ರ ವಾಹನ ಸಂಚಾರಕ್ಕೆ ಮುಕ್ತವಾಗಿದೆ. ಆದರೆ, ಇದರಲ್ಲಿ ಬಸ್‌ ಸೇರಿ ದೊಡ್ಡ ವಾಹನ ಸಂಚರಿಸಲು ಆಗದು. ಜೋಗಿಮಟ್ಟಿ ಹಾಗೂ ಆಡುಮಲ್ಲೇಶ್ವರ ಕಿರು ಮೃಗಾಲಯ ಸಂಪರ್ಕಿಸುವ ಜೋಗಿಮಟ್ಟಿ ರಸ್ತೆಯಲ್ಲಿ ಕಾಮಗಾರಿ ನಡೆಯುತ್ತಿದೆ.

*
ಎಲ್ಲೆಡೆ ಏಕಕಾಲಕ್ಕೆ ಕಾಮಗಾರಿ ನಡೆಯುತ್ತಿರುವುದರಿಂದ ಸಂಚಾರ ನಿಯಂತ್ರಣ ಕಷ್ಟವಾಗುತ್ತಿದೆ. ರಸ್ತೆ ಸಂಪರ್ಕ ಕಡಿತಗೊಳಿಸುವ ಮುನ್ನ ಮಾಹಿತಿ ನೀಡುವಂತೆ ಗುತ್ತಿಗೆದಾರರಿಗೆ ಸೂಚನೆ ನೀಡಲಾಗಿದೆ.
–ಜಿ.ರಾಧಿಕಾಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT