ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧರ್ಮಪುರ: ಬಟನ್‌ ರೋಸ್‌ ಬೆಳೆದು ಬದುಕು ಅರಳಿಸಿಕೊಂಡ ರೈತ

ಇತರರಿಗೆ ಮಾದರಿಯಾದ ಹರಿಯಬ್ಬೆ ಗ್ರಾಮದ ಶ್ರೀನಿವಾಸ
Last Updated 19 ಏಪ್ರಿಲ್ 2023, 7:38 IST
ಅಕ್ಷರ ಗಾತ್ರ

ಧರ್ಮಪುರ: ಮಳೆಯಾಶ್ರಿತ ಸಾಂಪ್ರದಾಯಿಕ ಬೆಳೆಗಳಿಗೆ ಸೀಮಿತವಾಗದೆ ಕೃಷಿಯಲ್ಲಿ ಹೊಸ ಹೊಸ ಪ್ರಯೋಗ ಮಾಡಿ ಯಶಸ್ವಿಯಾಗಿರುವ ಹರಿಯಬ್ಬೆ ರೈತ ಶ್ರೀನಿವಾಸ ಇತರರಿಗೆ ಮಾದರಿಯಾಗಿದ್ದಾರೆ.

ಪದವಿಪೂರ್ವ ಶಿಕ್ಷಣ ಮುಗಿಸಿ ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದ ಇವರು, ಕೋವಿಡ್‌ ವೇಳೆ ಹುಟ್ಟೂರಿಗೆ ಮರಳಿ ಕೃಷಿಯಲ್ಲಿ ತೊಡಗಿಕೊಂಡಿದ್ದು, ಇದೀಗ ಅಲ್ಲಿಯೇ ಬದುಕು ಕಟ್ಟಿಕೊಂಡು ಉತ್ತಮ ಆದಾಯ ಕಾಣುತ್ತಿದ್ದಾರೆ.

ಹತ್ತು ಎಕರೆಯ ಜಮೀನಿನಲ್ಲಿ ಅಡಿಕೆ, ಬಾಳೆ, ಪಪ್ಪಾಯ ಬೆಳೆದಿರುವ ಅವರು, ಎರಡು ಎಕರೆಯಲ್ಲಿ ಬಟನ್ ರೋಸ್ ಬೆಳೆದು ಉತ್ತಮ ಆದಾಯ ಪಡೆಯುತ್ತಿದ್ದಾರೆ.

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಅತಿ ಹೆಚ್ಚು ಬೆಳೆಯುತ್ತಿದ್ದ ಬಟನ್ ರೋಸ್ ಇಂದು ಚಿತ್ರದುರ್ಗ ಜಿಲ್ಲೆಯ ಧರ್ಮಪುರ ಹೋಬಳಿಯ ಹರಿಯಬ್ಬೆ, ವೇಣುಕಲ್ಲುಗುಡ್ಡ, ಧರ್ಮಪುರ, ಕೃಷ್ಣಾಪುರ, ಪಿ.ಡಿ.ಕೋಟೆ, ಖಂಡೇನಹಳ್ಳಿ, ಈಶ್ವರಗೆರೆ, ಕೋಡಿಹಳ್ಳಿ, ತೋಪಿನ ಗೊಲ್ಲಾಹಳ್ಳಿ, ಬ್ಯಾಡರಹಳ್ಳಿ ಗ್ರಾಮಗಳಿಗೆ ವ್ಯಾಪಿಸಿದೆ.

‘ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಹಗಲಕೋಟೆಯಲ್ಲಿ ಬಟನ್ ರೋಸ್ ನರ್ಸರಿ ಹೆಚ್ಚಾಗಿ ಲಭ್ಯವಿದೆ. ಗಿಡದಿಂದ ಗಿಡಕ್ಕೆ 3 ಅಡಿ, ಸಾಲಿನಿಂದ ಸಾಲಿಗೆ 9 ಅಡಿ ಅಂತರದಲ್ಲಿ ಗಿಡ ನಾಟಿ ಮಾಡಲಾಗಿದೆ. ಹನಿ ನೀರಾವರಿ ವ್ಯವಸ್ಥೆ ಮಾಡಲಾಗಿದ್ದು, ಸಾವಯವ ಕೃಷಿ ಪದ್ಧತಿ ಅಳವಡಿಸಲಾಗಿದೆ. ಇದರಿಂದ ಸಮೃದ್ಧವಾಗಿ ಗಿಡಗಳು ಬೆಳವಣಿಗೆಯಾಗಿ ಒಂದು ವರ್ಷದಿಂದ ಹೂವು ಬರುತ್ತಿದ್ದು, ಪ್ರತಿದಿನ ಸರಾಸರಿ 1 ಕ್ವಿಂಟಲ್ ಹೂವು ಬರುತ್ತಿದೆ’ ಎಂದು ಶ್ರೀನಿವಾಸ್‌ ತಿಳಿಸಿದರು.

‘ಮಾರುಕಟ್ಟೆಯಲ್ಲಿ ಹಬ್ಬ ಮತ್ತಿತರ ಧಾರ್ಮಿಕ ಉತ್ಸವ ಕಾರ್ಯಕ್ರಮಗಳ ಸಂದರ್ಭದಲ್ಲಿ ಪ್ರತಿ 1 ಕೆ.ಜಿ. ₹ 400ರಿಂದ ₹ 500 ಸಿಗುತ್ತದೆ. ಬೇರೆ ದಿನಗಳಲ್ಲಿ ₹ 200ರಿಂದ ₹ 300ರವರೆಗೆ ಸಿಗಲಿದೆ. ವರ್ಷದಲ್ಲಿ ಈಗಾಗಲೇ ಸುಮಾರು ₹ 15 ಲಕ್ಷದಷ್ಟು ಆದಾಯ ಬಂದಿದೆ’ ಎಂದು ಅವರು ಹೇಳಿದರು.

ಶ್ರೀನಿವಾಸ್‌ ಅವರ ಸಂಪರ್ಕ ಸಂಖ್ಯೆ 99806– 42441.

***

ಬಟನ್ ರೋಸ್ ಬೆಳೆಯಲು ಸೂಕ್ತ ವಾತಾವರಣ

‘ಬಟನ್ ರೋಸ್ ಹೂವು ಉತ್ತಮ ಆದಾಯ ನೀಡುತ್ತಿದೆ. ಧರ್ಮಪುರ ಹೋಬಳಿಯಲ್ಲಿ ಈ ಬೆಳೆ ಬೆಳೆಯಲು ಉತ್ತಮ ಹವಾಗುಣವಿದೆ. ಬೆಳೆದ ಹೂವಿಗೆ ಸರಿಯಾದ ಮಾರುಕಟ್ಟೆ ಲಭ್ಯವಿಲ್ಲ. ಜತೆಗೆ ಈಗ ಬಿಸಿಲಿನ ತಾಪ 38ರಿಂದ 40 ಡಿಗ್ರಿ ಸೆಲ್ಸಿಯಸ್‌ ಇರುವುದರಿಂದ ಹೂವು ಬೇಗನೆ ಹಾಳಾಗುತ್ತಿದೆ. ಅದಕ್ಕಾಗಿ ಕೂಲಿಂಗ್ ಹೌಸ್ ನಿರ್ಮಾಣವಾಗಬೇಕು. ಬೆಳೆ ಬೆಳೆಯುವ ರೈತರಿಗೆ ಸರ್ಕಾರದಿಂದ ಮತ್ತಷ್ಟು ಉತ್ತೇಜನ ಮತ್ತು ಸಹಾಯಧನ ಸಿಗುವಂತಾಗಬೇಕು’ ಎಂದು ರೈತ ಶ್ರೀನಿವಾಸ ಒತ್ತಾಯಿಸಿದ್ದಾರೆ.

***

ಸಬ್ಸಿಡಿ ಸೌಲಭ್ಯ

ಗುಲಾಬಿ ಬೆಳೆಯಲು ನರೇಗಾ ಯೋಜನೆ ಅಡಿ ಸಬ್ಸಿಡಿ ಸೌಲಭ್ಯ ಕಲ್ಪಿಸಲಾಗುತ್ತಿದೆ. ಇದರಿಂದ ಗುಲಾಬಿ ನಾಟಿ ಮಾಡುವ ಪ್ರತಿ ರೈತನಿಗೆ ಪ್ರತಿ ಎಕರೆಗೆ ಕೂಲಿ ವೆಚ್ಚ ₹ 79,000, ಸಾಮಗ್ರಿ ವೆಚ್ಚ ₹ 23,000 ಕೊಡಲಾಗುವುದು. ರಾಷ್ಟ್ರೀಯ ತೋಟಗಾರಿಕಾ ಮಿಷನ್ ಅಡಿ ಉತ್ತೇಜನ ನೀಡಲು ಸಹಾಯಧನವಾಗಿ ₹ 15,000 ನೀಡಲಾಗುವುದು’ ಎಂದು ಸಹಾಯಕ ತೋಟಗಾರಿಕೆ ಅಧಿಕಾರಿ ಡಿ.ಆರ್.ಚೇತನ್ ಕುಮಾರ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT