ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

21ನೇ ಶತಮಾನದಲ್ಲೂ ಜಾತಿ ವ್ಯವಸ್ಥೆ ಜೀವಂತ

ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಸ್ವಾಮೀಜಿ ಬೇಸರ
Last Updated 28 ಜನವರಿ 2023, 6:32 IST
ಅಕ್ಷರ ಗಾತ್ರ

ಹೊಸದುರ್ಗ: ‘ದೇಶದಲ್ಲಿ ಶ್ರೇಣೀಕೃತ ಜಾತಿ ವ್ಯವಸ್ಥೆ ಇನ್ನೂ ಜೀವಂತವಾಗಿರುವುದು ದೊಡ್ಡ ದುರಂತವೇ ಸರಿ. ಅಸ್ಪೃಶ್ಯತೆ, ಅಸಮಾನತೆ ತಾಂಡವವಾಡಿ ಅಭಿವೃದ್ಧಿ ಕುಂಠಿತವಾಗಿದೆ’ ಎಂದು ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದರು.

ತಾಲ್ಲೂಕಿನ ಸಾಣೆಹಳ್ಳಿಯಲ್ಲಿ ಶನಿವಾರ ಬಸವೇಶ್ವರ ಹಾಗೂ ಮೈಲಾರಲಿಂಗೇಶ್ವರ ನೂತನ ದೇವಾಲಯಗಳ ಪ್ರಾರಂಭೋತ್ಸವ ಹಾಗೂ ಶರಣ ಸಮ್ಮೇಳನ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದರು.

‘ನೂರಾರು ವರ್ಷಗಳಿಂದ ಬಸವೇಶ್ವರರು, ದಾಸ ಶ್ರೇಷ್ಠರು ಅವಿರತ ಹೋರಾಟ ಮಾಡಿದರೂ ಭಾರತದಲ್ಲಿ ಜಾತಿ ವ್ಯವಸ್ಥೆ ಬದಲಾಗಿಲ್ಲ. ದೇಶ ವಿಶ್ವದಲ್ಲಿಯೇ ಅತ್ಯಂತ ಪವಿತ್ರವಾದ ಪುಣ್ಯಭೂಮಿ. ಈ ಪುಣ್ಯ ಭೂಮಿಯಲ್ಲಿ ಬಸವಾದಿ ಶರಣರು, ದಾಸ
ಶ್ರೇಷ್ಠರು ಸಂತರು ಬದುಕಿ
ಸಮಾನತೆಗಾಗಿ ಹೋರಾಡಿದ್ದಾರೆ. ಆದರೂ ಇಲ್ಲಿನ ಶ್ರೇಣೀಕೃತ ಜಾತಿ ವ್ಯವಸ್ಥೆಯಲ್ಲಿ ಅನೇಕ ತಾರತಮ್ಯಗಳನ್ನು ಕಾಣುತ್ತಿದ್ದೇವೆ. ಸಮಾನತೆ ಸಂಪೂರ್ಣವಾಗಿ ದೊರೆತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ಜಾತೀಯ ಕಾರಣಕ್ಕಾಗಿ ಒಬ್ಬ ವ್ಯಕ್ತಿಯನ್ನು ಮತ್ತೊಂದು ಸಮುದಾಯ ಕೀಳಾಗಿ ಕಾಣುವ ಅನಿಷ್ಟ ಪದ್ಧತಿ ಇನ್ನೂ ಜಾರಿಯಲ್ಲಿರುವುದು ದುರಂತವೇ ಸರಿ. ಈ ಪುಣ್ಯ ಭೂಮಿಯಲ್ಲಿ ಬುದ್ಧ, ಬಸವ, ಅಂಬೇಡ್ಕರ್ ಮತ್ತು ದಾಸ ಶ್ರೇಷ್ಠರು ಜಾತಿಯ ವಿರುದ್ಧ ಎಷ್ಟೇ ಹೋರಾಟ ಮಾಡಿದರೂ ಜಾತಿ ವ್ಯವಸ್ಥೆ ದೇಶದಿಂದ ಹೋಗದಿರುವುದು ವಿಪರ್ಯಾಸ. ಅವರವರ ಧರ್ಮದ ಅನುಸಾರ ಯೇಸು, ಅಲ್ಲ ಮತ್ತು ಶಿವನನ್ನುಆರಾಧಿಸುತ್ತಿದ್ದಾರೆ. ಇವೆಲ್ಲವೂ ಒಂದೇ ದೈವ ಶಕ್ತಿಯಾಗಿದೆ’ ಎಂದು ಹೇಳಿದರು.

‘ದೇವಸ್ಥಾನಗಳು ಶ್ರದ್ಧಾಕೇಂದ್ರ ಗಳಾಗಬೇಕೇ ಹೊರತು ಮೂಢನಂಬಿಕೆಗಳ ಮೂಲಕ ಸುಲಿಗೆ ಕೇಂದ್ರ ಆಗಬಾರದು. ಇನ್ನೂ ಭಜನಾ ಕೇಂದ್ರ ಆದರೆ ಒಳ್ಳೆಯದು. ದೇವಾಸ್ಥಾನದಲ್ಲಿ ವಿಭಜನೆ ಮಾಡಬಾರದು. ಎಲ್ಲ ವರ್ಗದ ಜನರಿಗೂ ದೇವಾಲಯಗಳಲ್ಲಿ ಅವಕಾಶ ಕಲ್ಪಿಸಬೇಕು. ಯುವಕರು ದುಶ್ಚಟಗಳಿಂದ ದೂರವಿದ್ದು, ಶ್ರದ್ಧೆಯಿಂದ ಕೆಲಸ ಮಾಡಬೇಕು’ ಎಂದು ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ತಿಳಿ ಹೇಳಿದರು.

ಕುಂಚಟಿಗ ಮಠದ ಶಾಂತವೀರ ಸ್ವಾಮೀಜಿ ಮತ್ತು ಭಗೀರಥ ಗುರು ಪೀಠದ ಪುರುಷೋತ್ತಮಾನಂದಪುರಿ ಸ್ವಾಮೀಜಿ, ಸಚಿವ ಮಾಧುಸ್ವಾಮಿ, ಮಾಜಿ ಶಾಸಕರಾದ ಇಲ್ಕಲ್ ವಿಜಯಕುಮಾರ್, ಟಿ.ಎಚ್. ಬಸವರಾಜಪ್ಪ, ರಾಜಕೀಯ ಮುಖಂಡರಾದ ಎಸ್. ಲಿಂಗಮೂರ್ತಿ, ಹೆಬ್ಬಳ್ಳಿ ಓಂಕಾರಪ್ಪ, ಟಿ. ಮಂಜುನಾಥ್, ಜೆಡಿಎಸ್ ಅಭ್ಯರ್ಥಿ ಎಂ. ತಿಪ್ಪೇಸ್ವಾಮಿ. ಗ್ರಾಮ ಪಂಚಾಯಿತಿ ಅಧ್ಯಕ್ಷ ರಂಗಪ್ಪ, ಉಪಾಧ್ಯಕ್ಷೆ ಅಂಬಿಕಾ ಸ್ವಾಮಿ ಹಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT