ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕತ್ತರಿಸಬೇಕಿರುವುದು ಅಂಬಲ್ಲ, ಅಹಂ’

ರಾಜವಂಶಸ್ಥರ ಭಕ್ತಿ ಸ್ವೀಕರಿಸಿದ ಶಿವಮೂರ್ತಿ ಮುರುಘಾ ಶರಣರು
Last Updated 27 ಅಕ್ಟೋಬರ್ 2020, 4:06 IST
ಅಕ್ಷರ ಗಾತ್ರ

ಚಿತ್ರದುರ್ಗ: ಬಾಳೆಯ ಕಂಬವನ್ನು ಕತ್ತಿಯಿಂದ ಕತ್ತರಿಸುವುದು ಸುಲಭ. ಇದನ್ನು ಯಾರು ಬೇಕಾದರೂ ಮಾಡಬಹುದು. ಮಾನವ ಕತ್ತರಿಸಬೇಕಿರುವುದು ಅಂಬು ಎಂಬ ಬಾಳೆ ಕಂಬವನ್ನಲ್ಲ, ಅಹಂಕಾರವನ್ನು ಎಂದು ಶಿವಮೂರ್ತಿ ಮುರುಘಾ ಶರಣರು ಅಭಿಪ್ರಾಯಪಟ್ಟರು.

ಕೋಟೆಯ ಚಿನ್ಮೂಲಾದ್ರಿ ಮೇಲುದುರ್ಗದ ಮುರುಘಾ ಮಠದಲ್ಲಿ ಸೋಮವಾರ ರಾಜವಂಶಸ್ಥರಿಂದ ಭಕ್ತಿ ಸ್ವೀಕರಿಸಿ ಅವರು ಮಾತನಾಡಿದರು.

‘ಮಾನವನ ಬದುಕು ಬಾಳೆ ಕಂಬದಂತೆ ಇರಬೇಕು. ಅಹಂ ಕಡಿದರೆ ನಿಜವಾದ ವಿಜಯೋತ್ಸವ ಸಿಗುತ್ತದೆ. ಆ ದಿಸೆಯಲ್ಲಿ ಎಲ್ಲರೂ ಕಾರ್ಯಪ್ರವೃತ್ತರಾಗಬೇಕು’ ಎಂದರು.

‘12ನೇ ಶತಮಾನದಲ್ಲಿ ನಡೆದ ಚಳವಳಿ ಹೊಸ ತತ್ವವೊಂದನ್ನು ಜಗತ್ತಿನ ಮುಂದಿಟ್ಟಿತು. ಶೂನ್ಯ ಸಿದ್ಧಾಂತ ಅಲ್ಲಿಂದ ಮುನ್ನೆಲೆಗೆ ಬಂದಿತು. ಶೂನ್ಯ ಸಿದ್ಧಾಂತವನ್ನು ಜಗತ್ತಿಗೆ ಸಾರುವ ನಿರ್ಧಾರವನ್ನು ಬಸವಾದಿ ಶರಣರು ಕೈಗೊಂಡರು. ಮುರುಘಾ ಮಠ ಶೂನ್ಯ ಸಿದ್ಧಾಂತವನ್ನು ಪ್ರಚಾರ ಮಾಡುತ್ತಿದೆ. ಇದಕ್ಕೆ ಶರಣ ಸಂಸ್ಕೃತಿ ಎಂಬ ಹೆಸರಿದೆ’ ಎಂದು ಹೇಳಿದರು.

‘ಮುರುಘಿ ಶಾಂತವೀರ ಸ್ವಾಮೀಜಿ ಈ ಪ್ರಾಂತ್ಯಕ್ಕೆ ಮುಪ್ಪಿನ ವಯಸ್ಸಿನಲ್ಲಿ ಬಂದರು. ಭರಮಣ್ಣನಾಯಕ ದೊರೆಯಾಗುತ್ತಾರೆ ಎಂಬ ಸತ್ಯವನ್ನು ತಿಳಿಸಿಕೊಟ್ಟರು. ಅವರು ನುಡಿದಿದ್ದು ಭವಿಷ್ಯವಲ್ಲ. ತ್ರಿಕಾಲ ಜ್ಞಾನಿಗಳಾಗಿದ್ದ ಅವರ ಬಾಯಿಯಿಂದ ಸತ್ಯ ಮಾತ್ರ ಹೊರಬರುತ್ತಿತ್ತು’ ಎಂದರು.

‘ಚಿತ್ರದುರ್ಗದಲ್ಲಿ ನೆಲೆ ಸಿಗುತ್ತದೆ ಎಂಬುದು ಶಾಂತವೀರ ಸ್ವಾಮೀಜಿ ಅವರಿಗೆ ಮೊದಲೇ ಗೊತ್ತಿತ್ತು. ಅವರು ಅಂದುಕೊಂಡಂತೆ ಭರಮಣ್ಣ ನಾಯಕ ದೊರೆ ಯಾದರು’ ಎಂದರು.

ರಾಜವಂಶಸ್ಥರಾದ ಸಿ.ಪಿ.ರಾಜಣ್ಣ, ಬಿ.ಎಸ್‌.ಮದಕರಿ ನಾಯಕ, ಪರಶುರಾಮ ನಾಯಕ ಹಾಗೂ ಪಿ.ಕಿರಣ್‌ ಕುಮಾರ್‌ ಭಕ್ತಿ ಸಮರ್ಪಣೆ ಮಾಡಿದರು. ಕನಕಪುರದ ಮರಳೇಗವಿಮಠದ ಮುಮ್ಮಡಿ ಶಿವರುದ್ರ ಸ್ವಾಮೀಜಿ, ಭೋವಿ ಗುರುಪೀಠದ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಟಿ.ಯೋಗೇಶ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT