ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರೈತ ಉತ್ಪಾದಕ ಸಂಘಗಳನ್ನು ಸದೃಢಗೊಳಿಸಿ; ತರಳಬಾಳು ಶ್ರೀ

Published 5 ಜುಲೈ 2024, 14:15 IST
Last Updated 5 ಜುಲೈ 2024, 14:15 IST
ಅಕ್ಷರ ಗಾತ್ರ

ಸಿರಿಗೆರೆ: ‘ಸಂಕಟದಲ್ಲಿರುವ ರೈತ ಸಮುದಾಯದ ನೆರವಿಗೆ ಆರಂಭವಾಗಿರುವ ಅಮೃತ ರೈತ ಉತ್ಪಾದಕ ಸಂಘಗಳನ್ನು ಸರ್ಕಾರ ಸದೃಢಗೊಳಿಸಬೇಕು’ ಎಂದು ತರಳಬಾಳು ಪೀಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.

ಚಿತ್ರದುರ್ಗ, ದಾವಣಗೆರೆ ಮತ್ತು ಹಾವೇರಿ ಜಿಲ್ಲೆಯ ತರಳಬಾಳು ಅಮೃತ ರೈತ ಉತ್ಪಾದಕ ಸಂಘಗಳ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಶ್ರೀಗಳು, ‘ಒಡಂಬಡಿಕೆ ಆಗಿರುವಂತೆ ಸರ್ಕಾರವು ಸಂಘಗಳ ನೆರವಿಗೆ ಕೂಡಲೇ ಬರಬೇಕು’ ಎಂದರು.

ಹದಿನೈದು ತಿಂಗಳಿಂದ ಸಿಬ್ಬಂದಿಗೆ ವೇತನ ಮಂಜೂರಾಗಿಲ್ಲ. ಸಂಘಗಳಿಗೆ ಬರಬೇಕಾದ ಅನುದಾನವೂ ಬಂದಿಲ್ಲ. ಈ ವಿಚಾರವಾಗಿ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.‌ಮಲ್ಲಿಕಾರ್ಜುನ್‌ ಅವರೊಡಗೂಡಿ ಕೃಷಿ ಸಚಿವ ಎನ್.‌ಚಲುವರಾಯಸ್ವಾಮಿ ಅವರ ಜೊತೆ ಬೆಂಗಳೂರಿನ ತರಳಬಾಳು ಕೇಂದ್ರದಲ್ಲಿ ಸಭೆ ಆಯೋಜಿಸಲು ತೀರ್ಮಾನಿಸಲಾಯಿತು.

ಪ್ರಧಾನಿ ನರೇಂದ್ರ ಮೋದಿ ನೂತನ ಸರ್ಕಾರದ 100 ದಿನಗಳ ರೂಪುರೇಷೆಗಳನ್ನು ಸಿದ್ಧಗೊಳಿಸುವುದಾಗಿ ಹೇಳಿದ್ದಾರೆ. ಈ ಕಾರ್ಯಸೂಚಿಯಲ್ಲಿ ದೇಶದ ಕೃಷಿ ಸಮುದಾಯದ ಕುರಿತು ಇರುವ ನ್ಯೂನತೆಗಳನ್ನು ಸರಿಪಡಿಸುವ ಮತ್ತು ರೈತರ ಪಾಲಿಗೆ ಆಶಾದಾಯಕವಾಗಿರುವ ಅಮೃತ ರೈತ ಉತ್ಪಾದಕ ಸಂಘಗಳಿಗೆ ಹೆಚ್ಚಿನ ನೆರವು ನೀಡುವ ಅಂಶಗಳು ಕಾರ್ಯಸೂಚಿಯಲ್ಲಿ ಇರುವಂತೆ ನೋಡಿಕೊಳ್ಳಲು ಕೇಂದ್ರ ಸರ್ಕಾರದ ಗಮನ ಸೆಳೆಯಲು ತೀರ್ಮಾನಿಸಲಾಯಿತು.

‘ರೈತ ಉತ್ಪಾದಕ ಸಂಘಗಳಿಂದ ರೈತರಿಗೆ ಸಬ್ಸಿಡಿ ದರದಲ್ಲಿ ಬೀಜ, ರಸಗೊಬ್ಬರ, ಕೃಷಿ ಸಲಕರಣೆಗಳನ್ನು ಒದಗಿಸುವ ಯೋಜನೆಗೆ ಹಣಕಾಸಿನ ಅಡ್ಡಿ ಇದೆ. ಬೃಹತ್ ಉದ್ದಿಮೆದಾರರು ಸಂಘಗಳಿಂದ ಡೆಪಾಸಿಟ್‌ ಹಣಕ್ಕೆ ಬೇಡಿಕೆ ಇಡುತ್ತಿದ್ದಾರೆ. ಇದರಿಂದ ನಿರೀಕ್ಷಿತ ಮಟ್ಟದಲ್ಲಿ ಕೃಷಿಕರಿಗೆ ನೆರವಾಗಲು ಸಾಧ್ಯವಾಗುತ್ತಿಲ್ಲ’ ಎಂಬ ಕುರಿತು ತರಳಬಾಳು ಶ್ರೀಗಳು ಮಾತನಾಡಿ, ಜಲಗಾಂವ್‌ನಲ್ಲಿರುವ ಜೈನ್‌ ಇರಿಗೇಷನ್‌ ಕಂಪನಿಯೊಂದಿಗೆ ಮಾತನಾಡಿ ಕೃಷಿ ಸಲಕರಣೆಗಳ ಸರಬರಾಜಿನ ಕುರಿತು ಚರ್ಚಿಸಲಾಗುವುದು’ ಎಂದು ತಿಳಿಸಿದರು.

ಕೆ.ಪಿ.ಬಸವರಾಜ್‌, ದಾವಣಗೆರೆ ತರಳಬಾಳು ಕೆವಿಕೆ ಮುಖ್ಯಸ್ಥ ಟಿ.ಎನ್.‌ದೇವರಾಜ್‌, ರೈತ ಸಂಘದ ರಾಜ್ಯ ಘಟಕದ ಅಧ್ಯಕ್ಷ ಎಚ್.‌ಆರ್.‌ಬಸವರಾಜಪ್ಪ, ಎಚ್.ವಿ.ವಾಮದೇವಪ್ಪ, ವೀರಣ್ಣ ಜತ್ತಿ, ಹಂಪೋಳ್‌, ರೈತ ಉತ್ಪಾದಕ ಸಂಘಗಳ ಪದಾಧಿಕಾರಿಗಳು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT