ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಯಕನಹಟ್ಟಿ: ಚಿಕ್ಕಕೆರೆ ಸುತ್ತ ಘನತ್ಯಾಜ್ಯದ್ದೇ ಕಾರುಬಾರು

ಸಣ್ಣ ನೀರಾವರಿ, ಪ.ಪಂ. ಅಧಿಕಾರಿಗಳ ನಿರ್ಲಕ್ಷ್ಯ: ಆರೋಪ‍
ಧನಂಜಯ ವಿ.
Published 10 ಫೆಬ್ರುವರಿ 2024, 5:43 IST
Last Updated 10 ಫೆಬ್ರುವರಿ 2024, 5:43 IST
ಅಕ್ಷರ ಗಾತ್ರ

ನಾಯಕನಹಟ್ಟಿ: ಪಟ್ಟಣಕ್ಕೆ ಹೊಂದಿಕೊಂಡಿರುವ ಜಿಲ್ಲೆಯ ಐತಿಹಾಸಿಕ ನಾಯಕನಹಟ್ಟಿ ಗುರುತಿಪ್ಪೇರುದ್ರಸ್ವಾಮಿ ಚಿಕ್ಕಕೆರೆಯ ಸುತ್ತ ತ್ಯಾಜ್ಯದ ರಾಶಿ ಬಿದ್ದಿದೆ. ಕಟ್ಟಡಗಳ ತ್ಯಾಜ್ಯವನ್ನು ಸುರಿಯುತ್ತಿರುವುದರಿಂದ ಕೆರೆ ಪರಿಸರ ಹಾಳಾಗುತ್ತಿದೆ.

16ನೇ ಶತಮಾನದಲ್ಲಿ ಕಾಯಕಯೋಗಿ ಗುರು ತಿಪ್ಪೇರುದ್ರಸ್ವಾಮಿ ಅವರು ನಾಯಕನಹಟ್ಟಿ ಹೋಬಳಿಯಲ್ಲಿ ಐದು ಕೆರೆಗಳನ್ನು ನಿರ್ಮಿಸಿದ್ದಾರೆ ಎನ್ನುವ ಪ್ರತೀತಿ ಇದೆ. ಅದರಲ್ಲಿ ಚಿಕ್ಕಕೆರೆಯೂ ಒಂದು. ಈ ಕೆರೆಯ ಬಗ್ಗೆ ಜನರಿಗೆ ಭಕ್ತಿ ಇದೆ. ಕೆರೆಯ ಮುಂಭಾಗದಲ್ಲೇ ತಿಪ್ಪೇರುದ್ರಸ್ವಾಮಿ ಅವರ ಹೊರಮಠವಿದೆ. ತ್ಯಾಜ್ಯ ಎಸೆಯುತ್ತಿರುವುದಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತ್ಯಾಜ್ಯ ಸಂಗ್ರಹಕ್ಕಾಗಿ ಕೆರೆ ಬಳಕೆ:

ಪಟ್ಟಣದ ಬಾರ್‌ಗಳಲ್ಲಿನ ಪೌಚ್‌ಗಳು, ಬಾಟಲಿಗಳು, ಕ್ಷೌರಮಾಡಿದ ಕೂದಲು, ಕಟ್ಟಡದ ಅವಶೇಷಗಳು ಸೇರಿದಂತೆ ಹಲವು ತ್ಯಾಜ್ಯವನ್ನು ಕೆರೆಯ ದಂಡೆಗೆ ಹಾಕಲಾಗುತ್ತಿದೆ. ಇದರಿಂದ ಕೆರೆ ಪರಿಸರ ಹಾಳಾಗುತ್ತಿದೆ. ಈ ಬಗ್ಗೆ ಪಟ್ಟಣ ಪಂಚಾಯಿತಿಯ ಎಚ್ಚರಿಕೆಯ ನಾಮಫಲಕ ಅಳವಡಿಸಿದರೂ ಯಾವುದೇ ಪ್ರಯೋಜನವಾಗಿಲ್ಲ.

ಸೀಮೆಜಾಲಿ ಗಿಡಗಳ ಹಾವಳಿ:‌

ಚಿಕ್ಕಕೆರೆಯು 389.19ಎಕರೆ ವಿಸ್ತೀರ್ಣ ಹೊಂದಿದೆ. ಇಷ್ಟು ದೊಡ್ಡಕೆರೆಯಲ್ಲಿ ನೀರು ಸಂಗ್ರಹವಾದರೆ ನಾಯಕನಹಟ್ಟಿ ಹೋಬಳಿಯ 20ಕ್ಕೂ ಹೆಚ್ಚು ಗ್ರಾಮಗಳ ಅಂತರ್ಜಲ ವೃದ್ಧಿಯಾಗುತ್ತದೆ. 10 ವರ್ಷಗಳಿಂದ ಚಿಕ್ಕಕೆರೆಗೆ ಮಳೆಯ ಕೊರತೆಯಿಂದ ನೀರು ಬಂದಿಲ್ಲ. ಇದರಿಂದ ಸೀಮೆಜಾಲಿಗಿಡಗಳು ಬೆಳೆದಿವೆ.

ಮೂರ‍್ನಾಲ್ಕು ದಿನಗಳಿಂದ ಪಟ್ಟಣದ ಬಿಳೇಕಲ್ ಬಡಾವಣೆ ಸೇರಿದಂತೆ ಹಲವು ಕಡೆಗಳಲ್ಲಿ ಪಟ್ಟಣ ಪಂಚಾಯಿತಿ ನಗರೋತ್ಥಾನ ಯೋಜನೆಯ ಅಡಿಯಲ್ಲಿ ₹ 50ಲಕ್ಷ ವೆಚ್ಚದ ಚರಂಡಿ ಕಾಮಗಾರಿ ನಡೆಯುತ್ತಿದ್ದು, ಚರಂಡಿ ತೆಗೆಯುವ ಮತ್ತು ಅದರಿಂದ ಉತ್ಪಾದನೆಯಾಗುವ ಘನ ತ್ಯಾಜ್ಯವನ್ನು ಕಾಮಗಾರಿ ಪಡೆದ ಗುತ್ತಿಗೆದಾರರು ಇಲ್ಲಿಗೆ ತಂದು ಹಾಕುತ್ತಿದ್ದಾರೆ. ಆದರೂ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.

ಶಾಸಕ ಎನ್.ವೈ.ಗೋಪಾಲಕೃಷ್ಣ ಈಚೆಗೆ ಚಿಕ್ಕಕೆರೆಯ ಪುನಶ್ಚೇತನಕ್ಕೆ ಮತ್ತು ಕೆರೆ ಪರಿಸರದ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದ್ದಾರೆ. ಇಷ್ಟಾದರೂ ಸಂಬಂಧಪಟ್ಟ ಅಧಿಕಾರಿಗಳು ಕೆರೆ ಆವರಣಕ್ಕೆ ತ್ಯಾಜ್ಯ ಸುರಿಯುತ್ತಿರುವುದನ್ನು ನಿಯಂತ್ರಿಸುತ್ತಿಲ್ಲ.
- ಆರ್. ಶ್ರೀಕಾಂತ್ ಗ್ರಾಮಸ್ಥ
ಚಿಕ್ಕಕೆರೆಯಲ್ಲಿ ಜಾಲಿಗಿಡಗಳು ಬೆಳದಿವೆ. ಗುಂಡಿ ತೆಗೆದು ಮಣ್ಣು ಸಾಗಿಸಿ ಕೆರೆಯ ಪರಿಸರ ಹದಗೆಡಿಸಲಾಗಿದೆ. ಕೆರೆ ಸ್ವಚ್ಛತೆಗಾಗಿ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಪಟ್ಟಣ ಪಂಚಾಯಿತಿ ಸದಸ್ಯರ ಬಳಿ ಮಾತನಾಡುತ್ತೇನೆ.
ಎನ್.ವೈ. ಗೋಪಾಲಕೃಷ್ಣ ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT