ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಲ ಸಚಿವರ ನಡವಳಿಕೆ ಬದಲಾಗಬೇಕು: ಎಂ.ಪಿ.ರೇಣುಕಾಚಾರ್ಯ ಹೇಳಿಕೆ

Last Updated 3 ಫೆಬ್ರುವರಿ 2022, 3:25 IST
ಅಕ್ಷರ ಗಾತ್ರ

ಚಿತ್ರದುರ್ಗ: ಬಿಜೆಪಿ ಅಧಿಕಾರಕ್ಕೆ ಬಂದಾಗಲೆಲ್ಲಾ ಕೆಲವರು ಸಚಿವರಾಗುತ್ತಿದ್ದಾರೆ. ಪಕ್ಷ ತಮ್ಮ ಸ್ವಂತ ಆಸ್ತಿಎಂಬಂತೆ ವರ್ತನೆ ಮಾಡುತ್ತಿದ್ದಾರೆ. ಅಂಥವರು ಅಧಿಕಾರ ತ್ಯಾಗ ಮಾಡಿ ಮತ್ತೊಬ್ಬರಿಗೆ ಅವಕಾಶ ಕಲ್ಪಿಸಬೇಕು ಎಂದು ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಒತ್ತಾಯ ಮಾಡಿದರು.

ಇಲ್ಲಿನ ಭೋವಿ ಗುರುಪೀಠದಲ್ಲಿ ಬುಧವಾರ ಮಠಾಧೀಶರೊಂದಿಗೆ ಚರ್ಚೆ ನಡೆಸುವ ಮುನ್ನ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

‘ಸರ್ಕಾರ ತಮ್ಮಿಂದಲೇ ರಚನೆಯಾಗಿದೆ ಎಂಬಂತೆ ಕೆಲ ಸಚಿವರು ವರ್ತನೆ ಮಾಡುತ್ತಿದ್ದಾರೆ. ಅವರ ಕಾರ್ಯವೈಖರಿ ಬಗ್ಗೆ ಪಕ್ಷದ ಬಹುತೇಕ ಶಾಸಕರಲ್ಲಿ ಅಸಮಾಧಾನವಿದೆ. ಶಾಸಕಾಂಗ ಸಭೆಯಲ್ಲಿ ಈ ವಿಷಯ ಪ್ರಸ್ತಾಪ ಮಾಡಿದ್ದೇನೆ. ಹಲವು ಶಾಸಕರ ಧ್ವನಿಯಾಗಿ ಮಾತನಾಡಿದ್ದೇನೆ. ಆದರೂ, ಅವರಲ್ಲಿ ಸುಧಾರಣೆ ಕಾಣುತ್ತಿಲ್ಲ. ಸೋಮಾರಿ ಹಾಗೂ ನಿರ್ಲಕ್ಷ್ಯ ತೋರುವ ಸಚಿವರ ಹೆಸರನ್ನು ಪಕ್ಷದ ವರಿಷ್ಠರ ಗಮನಕ್ಕೆ ತರಲಾಗಿದೆ’ ಎಂದು ಹೇಳಿದರು.

‘ಸಚಿವ ಸಂಪುಟದಲ್ಲಿ ನಾಲ್ಕು ಸ್ಥಾನಗಳು ಖಾಲಿ ಇವೆ. ಆರೇಳು ಸಚಿವರನ್ನು ಕೈಬಿಡುವ ಅಗತ್ಯವಿದೆ. ವಿಧಾನಸಭಾ ಚುನಾವಣೆಗೆ 15 ತಿಂಗಳು ಮಾತ್ರ ಬಾಕಿ ಇದೆ. ಉತ್ತಮ ಆಡಳಿತ ನೀಡಿದ ಬಿಜೆಪಿಯ ವರ್ಚಸ್ಸು ಹೆಚ್ಚಿಸುವ ಕೆಲಸ ಆಗಬೇಕಿದೆ. ಸರ್ಕಾರವನ್ನು ಬಲಪಡಿಸುವ ಹಾಗೂ ಬಿಜೆಪಿಯನ್ನು ಮತ್ತೊಮ್ಮೆ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಸಚಿವ ಸಂಪುಟ ಪುನರ್‌ ರಚನೆ ಆಗಬೇಕಿದೆ’ ಎಂದು ಅಭಿಪ್ರಾಯ ಹೊರಹಾಕಿದರು.

‘ಸಂಪುಟ ವಿಸ್ತರಣೆ ಅಥವಾ ಪುನರ್‌ ರಚನೆಯ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತೀರ್ಮಾನ ಕೈಗೊಳ್ಳುತ್ತಾರೆ. ಪಂಚರಾಜ್ಯ ಚುನಾವಣೆಯಲ್ಲಿ ಸಕ್ರಿಯವಾಗಿರುವ ಪಕ್ಷದ ವರಿಷ್ಠರು ನಿರ್ದೇಶನ ನೀಡಲಿದ್ದಾರೆ. ಅವರ ತೀರ್ಮಾನವನ್ನು ಪ್ರಶ್ನಿಸುವುದಿಲ್ಲ. ನಾನು ಮೂರು ಬಾರಿ ಶಾಸಕನಾಗಿದ್ದು, ಅಬಕಾರಿ ಸಚಿವನಾಗಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಚಿವನಾಗಬೇಕು ಎಂಬ ಆಕಾಂಕ್ಷೆ ನನ್ನಲ್ಲೂ ಇದೆ. ನಾನು ಸನ್ಯಾಸಿ ಅಲ್ಲ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿದರು.

ಅರುಣ್‌ ಸಿಂಗ್‌ ಭೇಟಿ 8ರಂದು

ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್‌ಸಿಂಗ್‌ ಅವರನ್ನು ಭೇಟಿ ಮಾಡಲು ಇದೇ ಫೆ.8ರಂದು ದೆಹಲಿಗೆ ತೆರಳಿಲಿದ್ದೇನೆ ಎಂದು ರೇಣುಕಾಚಾರ್ಯ ತಿಳಿಸಿದರು.

‘ಪಕ್ಷ ಹಾಗೂ ಸಚಿವ ಸಂಪುಟ ವಿಸ್ತರಣೆಗೆ ಸಂಬಂಧಿಸಿದಂತೆ ಬಹಿರಂಗವಾಗಿ ಹೇಳಿಕೆ ನೀಡದಂತೆ ಅರುಣ್‌ ಸಿಂಗ್‌ ಅವರು ಸೂಚನೆ ನೀಡಿದ್ದಾರೆ. ಈ ಬಗ್ಗೆ ಚರ್ಚಿಸಲು ದೆಹಲಿಗೆ ಆಹ್ವಾನಿಸಿದ್ದಾರೆ. ಅಭಿವೃದ್ಧಿ, ಪಕ್ಷ ಸಂಘಟನೆ ಹಾಗೂ ಸಚಿವ ಸಂಪುಟದ ವಿಸ್ತರಣೆಯ ಬಗ್ಗೆಯೂ ಪ್ರಸ್ತಾಪ ಮಾಡಲಿದ್ದೇನೆ’ ಎಂದರು.

‘ಭ್ರಮಾಲೋಕದಲ್ಲಿ ಕಾಂಗ್ರೆಸ್‌’

ರಾಜ್ಯದ ಅಧಿಕಾರದ ಗದ್ದುಗೆ ಹಿಡಿಯುವ ಭ್ರಮಾಲೋಕದಲ್ಲಿ ಕಾಂಗ್ರೆಸ್‌ ಇದೆ. ಇದು ಅವರ ಹಗಲುಗನಸು ಎಂದು ಎಂ.ಪಿ.ರೇಣುಕಾಚಾರ್ಯ ಹೇಳಿದರು.

‘ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬರಬೇಕು ಎಂಬುದು ನಾಡಿನ ಜನರ ಅಪೇಕ್ಷೆ. ಎಲ್ಲರೂ ಒಗ್ಗೂಡಿ ಕೆಲಸ ಮಾಡುತ್ತೇವೆ. ಬಸವರಾಜ ಬೊಮ್ಮಾಯಿ ಅವರೇ ಪೂರ್ಣ ಅವಧಿವರೆಗೆ ಮುಖ್ಯಮಂತ್ರಿ ಆಗಿ ಮುಂದುವರಿಯಲಿದ್ದಾರೆ. ಬಿಜೆಪಿ ಆಂತರಿಕ ವಿಚಾರದ ಬಗ್ಗೆ ನಿರ್ಧರಿಸಲು ಸತೀಶ ಜಾರಕಿಹೊಳಿ ಯಾರು’ ಎಂದು ಪ್ರಶ್ನೆ ಮಾಡಿದರು.

ಧರ್ಮ, ಸಂಸ್ಕೃತಿ ನಂಬಿ ಬದುಕು ಕಟ್ಟಿಕೊಂಡಿರುವ ವ್ಯಕ್ತಿ ನಾನು. ಮಠಾಧೀಶರ ಬಗ್ಗೆ ಭಯ ಮತ್ತು ಭಕ್ತಿ ಇದೆ. ಸಮಯ ಸಿಕ್ಕಾಗ ಎಲ್ಲ ವರ್ಗದ ಮಠಾಧೀಶರನ್ನು ಭೇಟಿ ಮಾಡುವ ರೂಢಿ ಬೆಳೆಸಿಕೊಂಡಿದ್ದೇನೆ.

–ಎಂ.ಪಿ.ರೇಣುಕಾಚಾರ್ಯ, ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT