ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಡ್ಮಿಂಟನ್‌ ಪ್ರತಿಭೆಗೆ ಕ್ರಿಕೆಟರ್‌ ಆಗುವ ಕನಸು

ರಾಷ್ಟ್ರಮಟ್ಟದ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಪದಕ ಗೆಲ್ಲುವಾಸೆ
Last Updated 21 ಜೂನ್ 2022, 4:10 IST
ಅಕ್ಷರ ಗಾತ್ರ

ಭರಮಸಾಗರ: ಗ್ರಾಮೀಣ ಭಾಗದಲ್ಲಿ ಸೂಕ್ತ ತರಬೇತಿ, ಪ್ರೋತ್ಸಾಹ, ವ್ಯವಸ್ಥಿತ ಕ್ರೀಡಾಂಗಣದ ಕೊರತೆ ಇದ್ದರೂ ಕೆಲವರು ಮಾತ್ರ ಅದನ್ನೆಲ್ಲ ಮೀರಿ, ಅಡೆ–ತಡೆ ದಾಟಿ ಅಂದುಕೊಂಡಿದ್ದನ್ನು ಸಾಧಿಸುವ ತುಡಿತ ಹೊಂದಿರುತ್ತಾರೆ. ಅಂಥವರಲ್ಲಿ ಭರಮಸಾಗರದ ಕ್ರೀಡಾಪಟು ಕೆ. ಇಲಿಯಾಸ್ ಕೂಡ ಒಬ್ಬರು.

ಹೋಬಳಿಯ ಆಜಾದ್‌ನಗರದ ಖಾಸಿಂ ಅಲಿ ಹಾಗೂ ಜೀನಾಬಿ ದಂಪತಿಯ ಪುತ್ರ ಕೆ.ಇಲಿಯಾಸ್‌ ಅವರಿಗೆ ಕ್ರೀಡಾರಂಗದಲ್ಲಿ ಏನನ್ನಾದರೂ ಸಾಧಿಸಬೇಕು ಎಂಬ ಹೆಬ್ಬಯಕೆ. ಬ್ಯಾಡ್ಮಿಂಟನ್ ಜೊತೆಗೆ ಕ್ರಿಕೆಟ್‌ನಲ್ಲೂ ಅಪಾರ ಆಸಕ್ತಿ ಹೊಂದಿದ್ದು, ದಾವಣಗೆರೆಯ ಬಿ.ಎಸ್. ಚನ್ನಬಸಪ್ಪ ಪದವಿ ಕಾಲೇಜಿನಲ್ಲಿ ಬಿಕಾಂ ವ್ಯಾಸಂಗ ಮಾಡುತ್ತಿದ್ದಾರೆ.

ಭರಮಸಾಗರದ ಎಸ್‌ಜೆಎಂ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ಬಾಪೂಜಿ ಶಾಲೆಯಲ್ಲಿ ಪ್ರೌಢಶಿಕ್ಷಣ ವ್ಯಾಸಂಗ ಮಾಡಿದ ಇಲಿಯಾಸ್‌ ಅವರಿಗೆ ಬ್ಯಾಡ್ಮಿಂಟನ್ ಬಗ್ಗೆ ಆಸಕ್ತಿ ಮೂಡಿದ್ದು ಪ್ರಾಥಮಿಕ ಶಾಲೆಯಲ್ಲಿದ್ದಾಗ. ಶಿಕ್ಷಕರಾದ ಪಂಚಾಕ್ಷರಿ ಮತ್ತು ನಾಗರಾಜ್ ಅವರು ನೀಡಿದ ಮಾರ್ಗದರ್ಶನ, ಪ್ರೋತ್ಸಾಹ ಅವರ ಮುಂದಿನ ಕ್ರೀಡಾ ಭವಿಷ್ಯಕ್ಕೆ ಭದ್ರ ಬುನಾದಿಯಾಯಿತು.

ಪ್ರಥಮ ಪಿಯುಸಿಯಲ್ಲಿದ್ದಾಗ ಶಿವಮೊಗ್ಗದಲ್ಲಿ, ದ್ವಿತೀಯ ಪಿಯುಸಿಯಲ್ಲಿದ್ದಾಗ ಹಾಸನದಲ್ಲಿ ನಡೆದ ರಾಜ್ಯಮಟ್ಟದ ಬ್ಯಾಡ್ಮಿಂಟನ್ ಸ್ಪರ್ಧೆಗೆ ಆಯ್ಕೆಯಾಗಿದ್ದರು. ಭರಮಸಾಗರ ಸರ್ಕಾರಿ ಪ್ರಥಮ ದರ್ಜೆ ಪದವಿ ಕಾಲೇಜಿನಲ್ಲಿ ಮೊದಲ ವರ್ಷದ ವ್ಯಾಸಂಗ ಮಾಡುತ್ತಿದ್ದಾಗ ದಾವಣಗೆರೆ ವಿಶ್ವವಿದ್ಯಾಲಯದ ಕ್ರೀಡಾಕೂಟದಲ್ಲಿ ವಿಜೇತರಾಗಿ ಚೆನ್ನೈನಲ್ಲಿ ನಡೆದ ಅಖಿಲ ಭಾರತ ವಿಶ್ವವಿದ್ಯಾಲಯಗಳ ಸ್ಪರ್ಧೆಯಲ್ಲಿ ಪಾಲ್ಗೊಂಡರು. ನಂತರ ಅಲ್ಲಿ ಒಳಾಂಗಣ ಕ್ರೀಡಾಂಗಣ, ತರಬೇತುದಾರರ ಸೌಲಭ್ಯ ಇಲ್ಲ ಎನ್ನುವ ಕಾರಣಕ್ಕೆ ಹೆಚ್ಚಿನ ತರಬೇತಿ ಪಡೆಯುವ ಉದ್ದೇಶದಿಂದ ದಾವಣಗೆರೆಗೆ ತೆರಳಿ ಬಿ.ಎಸ್. ಚನ್ನಬಸಪ್ಪ ಕಾಲೇಜು ಸೇರಿಕೊಂಡರು. ದ್ವಿತೀಯ ವರ್ಷದಲ್ಲಿ ಅಖಿಲ ಭಾರತ ವಿಶ್ವವಿದ್ಯಾಯಲಗಳ ಕ್ರೀಡಾಕೂಟಕ್ಕೆ ಆಯ್ಕೆಯಾದರೂ ಕೋವಿಡ್‌ನಿಂದಾಗಿ ಪಂದ್ಯಗಳು ನಡೆಯಲಿಲ್ಲ. 6 ತಿಂಗಳ ಹಿಂದೆ ವಿಜಯವಾಡದಲ್ಲಿ ನಡೆದ ಅಖಿಲ ಭಾರತ ವಿಶ್ವವಿದ್ಯಾಲಯಗಳ ಕ್ರೀಡಾಕೂಟದಲ್ಲಿ ಪಾಲ್ಗೊಂಡು ಪ್ರೀ ಕ್ವಾರ್ಟರ್‌ ಫೈನಲ್ ಹಂತ ತಲುಪಿದರು.

ಬ್ಯಾಡ್ಮಿಂಟನ್‌ನಲ್ಲಿ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಪದಕ ಗೆಲ್ಲುವ ಆಸೆ ಇರಿಸಿಕೊಂಡಿದ್ದಾರೆ. 2017ರಲ್ಲಿ ದ್ವೀತಿಯ ಪಿಯು ವ್ಯಾಸಂಗ ಮಾಡುತ್ತಿದ್ದಾಗ ಜಿಲ್ಲಾ ಮಟ್ಟದ ಎತ್ತರ ಜಿಗಿತದಲ್ಲಿ ಪ್ರಥಮ ಸ್ಥಾನ ಪಡೆದು ಉಡುಪಿಯಲ್ಲಿ ನಡೆದ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದಾರೆ. ಕನ್ಯಾಕುಮಾರಿ, ಬೆಂಗಳೂರುಗಳಲ್ಲಿ ನಡೆದ ಪ್ರಮುಖ ಕ್ರಿಕೆಟ್ ಟೂರ್ನಿಯಲ್ಲಿ ಪಾಲ್ಗೊಂಡಿದ್ದಾರೆ. ಕ್ರಿಕೆಟ್‌ ಮೇಲಿನ ಮೋಹದಿಂದ ಅಂತಿಮ ವರ್ಷದ ಪದವಿ ವ್ಯಾಸಂಗ ಬಾಕಿ ಇರುವಂತೆಯೇ ತಾತ್ಕಾಲಿಕವಾಗಿ ಕಾಲೇಜು ತೊರೆದು ಹೈದರಾಬಾದ್‌ಗೆ ತೆರಳಿ ಖಾಸಗಿ ಕಂಪನಿಯಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದಾರೆ. ಕ್ರಿಕೆಟ್‌ ಅಕಾಡೆಮಿ ಸೇರಿ ಹೆಚ್ಚಿನ ತರಬೇತಿ ಪಡೆಯಬೇಕು; ಶ್ರದ್ಧೆಯಿಂದ ಅಭ್ಯಾಸ ಮಾಡಿ ಕ್ರೀಡಾ ಕೌಶಲ ವೃದ್ಧಿಸಿಕೊಂಡು ಉತ್ತಮ ಕ್ರಿಕೆಟರ್ ಆಗಿ ರೂಪುಗೊಂಡು ಐಪಿಎಲ್‌ನಲ್ಲಿ ಆಡಬೇಕು ಎಂಬ ಕನಸು ಹೊಂದಿದ್ದಾರೆ ಇಲಿಯಾಸ್‌.

ಗೆಲ್ಲುವ ಛಲ ಮೂಡಿಸಿದ ಸೋಲು

ಸತತ 12 ವರ್ಷಗಳ ಕಾಲ ಜಿಲ್ಲಾ ಮಟ್ಟದ ಬ್ಯಾಡ್ಮಿಂಟನ್‌ ಕ್ರೀಡಾಕೂಟದಲ್ಲಿ ಪ್ರಥಮ ಸ್ಥಾನ ಪಡೆದಿದ್ದ ಶಾಲೆಯು, ನಾನು ಆಟದಲ್ಲಿ ಶಾಲೆಯನ್ನು ಪ್ರತಿನಿಧಿಸಿದ ವರ್ಷ ಸೋಲು ಕಾಣುವಂತಾಗಿದ್ದು ನನ್ನಲ್ಲಿ ತೀವ್ರ ನೋವು ಉಂಟುಮಾಡಿತು. ಜೊತೆಗೆ ಗೆಲ್ಲುವ ಛಲ ಮೂಡಿಸಿತು. ಹೀಗಾಗಿ ದಾವಣಗೆರೆಯ ಪ್ರಕಾಶ್ ಎಂಬುವರ ಬಳಿ ನೆಹರೂ, ಸುಭಾಷ್‌ಚಂದ್ರ ಬೋಸ್ ಒಳಾಂಗಣ ಕ್ರೀಡಾಂಗಣದಲ್ಲಿ 2 ವರ್ಷ ತರಬೇತಿ ಪಡೆದೆ. 9 ಮತ್ತು 10ನೇ ತರಗತಿಯಲ್ಲಿ ಜಿಲ್ಲಾಮಟ್ಟದ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಗೆಲುವು ಸಾಧಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾದೆ.

ಚೆನ್ನೈ ಹಾಗೂ ವಿಜಯವಾಡದಲ್ಲಿ ನಡೆದ ಅಖಿಲ ಭಾರತ ವಿಶ್ವವಿದ್ಯಾಲಯ ಕ್ರೀಡಾಕೂಟದ ಬ್ಯಾಡ್ಮಿಂಟನ್ ಡಬಲ್ಸ್‌ನಲ್ಲಿ ರಾಜ್ಯದ ಪ್ರಸಿದ್ಧ ಆಟಗಾರ ದಾವಣಗೆರೆಯ ಎನ್.ಕೆ. ಅಭಿಷೇಕ್ ಅವರ ಜೊತೆಗಾರರಾಗಿ ಆಡಿದ್ದು, ಶಿವಮೊಗ್ಗದ ಪೃಥ್ವಿ ಅವರ ಜೊತೆ ಅಭ್ಯಾಸ ಪಂದ್ಯ ಆಡುವ ಅವಕಾಶ ಸಿಕ್ಕಿದ್ದು ನನ್ನಲ್ಲಿಯ ಕ್ರೀಡಾ ಕೌಶಲ ವೃದ್ಧಿಗೆ ಸಹಕಾರಿಯಾಯಿತು.

– ಕೆ. ಇಲಿಯಾಸ್, ಭರಮಸಾಗರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT