ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದಿನಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ: ಸಿ.ಸಿ.ಟಿವಿ ಕ್ಯಾಮೆರಾ ಕಣ್ಗಾವಲು

78 ಪರೀಕ್ಷಾ ಕೇಂದ್ರ; 24,228 ವಿದ್ಯಾರ್ಥಿಗಳು
Published 25 ಮಾರ್ಚ್ 2024, 8:30 IST
Last Updated 25 ಮಾರ್ಚ್ 2024, 8:30 IST
ಅಕ್ಷರ ಗಾತ್ರ

ಚಿತ್ರದುರ್ಗ: ಜಿಲ್ಲೆಯ 78 ಪರೀಕ್ಷಾ ಕೇಂದ್ರಗಳಲ್ಲಿ ಮಾರ್ಚ್ 25ರಿಂದ ಏಪ್ರಿಲ್‌ 6ರವರೆಗೆ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಯಲಿದೆ. ಇದೇ ಮೊದಲ ಬಾರಿಗೆ ಸಿ.ಸಿ. ಟಿವಿ ಕ್ಯಾಮೆರಾ ಕಣ್ಗಾವಲಿನಲ್ಲಿ ನಡೆಯುವ ಪರೀಕ್ಷೆಗೆ ಸಕಲ ಸಿದ್ಧತೆಗಳು ಪೂರ್ಣಗೊಂಡಿವೆ.

ಪರೀಕ್ಷೆಯನ್ನು ವ್ಯವಸ್ಥಿತವಾಗಿ, ಯಾವುದೇ ಲೋಪದೋಷವಿಲ್ಲದಂತೆ ಸುಗಮವಾಗಿ ನಡೆಸಲು ಈಗಾಗಲೇ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಕರ್ನಾಟಕ ಶಾಲಾ ಶಿಕ್ಷಣ ಮೌಲ್ಯಮಾಪನ ಮಂಡಳಿಯ ಮಾರ್ಗಸೂಚಿಯಂತೆ ಪರೀಕ್ಷಾ ಕೊಠಡಿಗಳಲ್ಲಿ ಗಾಳಿ, ಬೆಳಕು, ಆಸನ, ಶುದ್ಧ ಕುಡಿಯುವ ನೀರು, ಶೌಚಾಲಯ ವ್ಯವಸ್ಥೆಯನ್ನು ಸಮರ್ಪಕವಾಗಿ ಕಲ್ಪಿಸಲಾಗಿದೆ. ಜತೆಗೆ ಪ್ರಥಮ ಚಿಕಿತ್ಸಾ ಪರಿಕರದೊಂದಿಗೆ ಆರೋಗ್ಯ ಸಿಬ್ಬಂದಿ ಕರ್ತವ್ಯ ನಿರ್ವಹಿಸಲಿದ್ದಾರೆ.

ಕೆಲ ಪರೀಕ್ಷಾ ಕೇಂದ್ರಗಳಲ್ಲಿ ಸಾಮೂಹಿಕ ನಕಲು ಪ್ರಕರಣಗಳು ನಡೆಯುತ್ತವೆ ಎಂಬ ದೂರು ಪಾಲಕರಿಂದ ವ್ಯಾಪಕವಾಗಿತ್ತು. ಈ ಎಲ್ಲದಕ್ಕೂ ಪೂರ್ಣ ವಿರಾಮ ಹಾಕಲು ಪರೀಕ್ಷಾ ಕೇಂದ್ರಗಳ ಸಂಖ್ಯೆ ಕಡಿಮೆ ಮಾಡಲಾಗಿದೆ. ಅದರಲ್ಲೂ ಗ್ರಾಮೀಣ ಭಾಗದಲ್ಲಿ ಈ ಸಂಖ್ಯೆ ಕಡಿತಗೊಳಿಸಲಾಗಿದೆ.

ಇದುವರೆಗೆ 150 ವಿದ್ಯಾರ್ಥಿಗಳಿದ್ದರೂ ಪ್ರತ್ಯೇಕ ಪರೀಕ್ಷಾ ಕೇಂದ್ರ ತೆರೆಯಲಾಗುತ್ತಿತ್ತು. ಈ ಬಾರಿ ಪ್ರತಿ ಕೊಠಡಿಗೆ 24 ವಿದ್ಯಾರ್ಥಿಗಳಂತೆ ಪ್ರತಿ ಪರೀಕ್ಷಾ ಕೇಂದ್ರದಲ್ಲಿ ಕನಿಷ್ಠ 400ರಿಂದ ಗರಿಷ್ಠ 800 ವಿದ್ಯಾರ್ಥಿಗಳಿಗೆ ಆಸನ ವ್ಯವಸ್ಯೆಯಿರುವ ಹಾಗೂ ಮೂಲ ಸೌಕರ್ಯ ಹೊಂದಿರುವ ಪ್ರೌಢಶಾಲೆ ಹಾಗೂ ಪದವಿಪೂರ್ವ ಮತ್ತು ಪದವಿ ಕಾಲೇಜುಗಳಲ್ಲಿ ಪರೀಕ್ಷೆ ನಡೆಸಲಾಗುತ್ತಿದೆ.

ಕಳೆದ ವರ್ಷ ಜಿಲ್ಲೆಯಲ್ಲಿ 96 ಪರೀಕ್ಷಾ ಕೇಂದ್ರಗಳಿದ್ದವು. ಆದರೆ, ಈ ಬಾರಿ 78 ಕೇಂದ್ರಗಳಲ್ಲಿನ 1,007 ಪರೀಕ್ಷಾ ಕೊಠಡಿಗಳಲ್ಲಿ ಪರೀಕ್ಷೆ ನಡೆಯಲಿದ್ದು, 24,228 ವಿದ್ಯಾರ್ಥಿಗಳು ನೋಂದಣಿ ಮಾಡಿಸಿಕೊಂಡಿದ್ದಾರೆ.

ಕೇಂದ್ರಗಳ ಪ್ರವೇಶದ್ವಾರ ಹಾಗೂ ಸಿ.ಸಿ.ಟಿವಿ ಕ್ಯಾಮೆರಾ ಅಳವಡಿಕೆ ಮಾಡಲಾಗಿದೆ. ಪರೀಕ್ಷಾ ಕೇಂದ್ರಗಳ ನೇರ ದೃಶ್ಯಾವಳಿಯನ್ನು ಡಯಟ್‌ ಕೇಂದ್ರದಲ್ಲಿ ಕುಳಿತು ವೀಕ್ಷಿಸಲು ಸಿದ್ಧತೆ ಮಾಡಲಾಗಿದೆ.

ಈ ಬಾರಿ ವಿದ್ಯಾರ್ಥಿಗಳು ಆಯಾ ಕೊಠಡಿಯಲ್ಲಿ ಗೋಡೆಯತ್ತ ಮುಖ ಮಾಡಿಕೊಂಡು ಕುಳಿತು ಪರೀಕ್ಷೆ ಬರೆಯಲಿದ್ದಾರೆ. ನಕಲು ತಡೆಗೆ ಈ ಕ್ರಮದಿಂದ ಅನುಕೂಲವಾಗಲಿದೆ. ವಿಚಕ್ಷಣ ದಳ ಕೊಠಡಿ ಪ್ರವೇಶಿಸಿದಾಗ ಬಹಳಷ್ಟು ವಿದ್ಯಾರ್ಥಿಗಳು ವಿಚಲಿತರಾಗುತ್ತಾರೆ. ವಿದ್ಯಾರ್ಥಿಗಳು ಗೋಡೆಗೆ ಮುಖ ಮಾಡಿ ಕುಳಿತರೆ, ಅವರು ಬಂದು ಹೋಗುವುದು ಗಮನಕ್ಕೆ ಬರುವುದಿಲ್ಲ. ಹೀಗಾಗಿ ಈ ಪದ್ಧತಿ ಅಳವಡಿಸಲಾಗಿದೆ ಎಂದು ಶಿಕ್ಷಣ ಇಲಾಖೆ ಮೂಳಗಳು ಹೇಳಿವೆ.

ತಾಲ್ಲೂಕು ಉಪ ಖಜಾನೆಗಳಿಂದ ನಿಗದಿತ ವೇಳೆಗೆ ತಹಶೀಲ್ದಾರ್‌, ಬಿಇಒ ಹಾಗೂ ಖಜಾನಾಧಿಕಾರಿಗಳ ನೇತೃತ್ವದಲ್ಲಿ ಪ್ರಶ್ನೆಪತ್ರಿಕೆ ಹಾಗೂ ಉತ್ತರ ಪತ್ರಿಕೆಗಳನ್ನು ಹೊರತೆಗೆದು ಮಾರ್ಗಾಧಿಕಾರಿಗಳಿಗೆ ನೀಡಲಿದ್ದಾರೆ. ಪರೀಕ್ಷೆ ನಂತರ ಉತ್ತರ ಪತ್ರಿಕೆಗಳನ್ನು ಅವರೇ ಭದ್ರತಾ ಕೊಠಡಿಗೆ ತಲುಪಿಸಲಿದ್ದಾರೆ. ಪೊಲೀಸ್ ಭದ್ರತೆಯಲ್ಲಿ ಈ ಕಾರ್ಯ ನಡೆಯಲಿದೆ.

ಕಳೆದ ವರ್ಷ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಜಿಲ್ಲೆ ರಾಜ್ಯಕ್ಕೆ ಪ್ರಥಮ ಈ ವರ್ಷವೂ ಅದೇ ಗುರಿ ಸಾಧನೆಯ ಉದ್ದೇಶದೊಂದಿಗೆ ಕಾರ್ಯ
ಈ ಬಾರಿ ಪರೀಕ್ಷಾ ಕೇಂದ್ರಗಳ ಸಂಖ್ಯೆ ಕಡಿಮೆ ಮಾಡಲಾಗಿದೆ. ಒಂದಷ್ಟು ಮಾರ್ಪಾಡು ಮಾಡಲಾಗಿದ್ದು ಇದೇ ಮೊದಲ ಬಾರಿಗೆ ಸಿ.ಸಿ. ಟಿವಿ ಕ್ಯಾಮೆರಾ ಕಣ್ಗಾವಲಿನಲ್ಲಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ
–ಕೆ.ರವಿಶಂಕರ ರೆಡ್ಡಿ ಉಪನಿರ್ದೇಶಕ ಶಾಲಾ ಶಿಕ್ಷಣ ಇಲಾಖೆ ಚಿತ್ರದುರ್ಗ
5 ಸೂಕ್ಷ್ಮ ಪರೀಕ್ಷಾ ಕೇಂದ್ರ
ಜಿಲ್ಲೆಯಲ್ಲಿ ಗುರುತಿಸಲಾಗಿರುವ 5 ಸೂಕ್ಷ್ಮ ಪರೀಕ್ಷಾ ಕೇಂದ್ರಗಳನ್ನು ಗುರುತಿಸಲಾಗಿದೆ. ಚಳ್ಳಕೆರೆಯ ಆದರ್ಶ ವಿದ್ಯಾಲಯ ಭೀಮಸಮುದ್ರದ ಭೀಮೇಶ್ವರ ಪದವಿಪೂರ್ವ ಕಾಲೇಜು ಯಳಗೋಡು ಸರ್ಕಾರಿ ಪದವಿಪೂರ್ವ ಕಾಲೇಜು ಯರಬಳ್ಳಿ ಸರ್ಕಾರಿ ಪದವಿಪೂರ್ವ ಕಾಲೇಜು ಹಾಗೂ ಹಾನಗಲ್‌ ನುಂಕೆಮಲೆ ಸಿದ್ದೇಶ್ವರ ಪ್ರೌಢಶಾಲೆಗಳು ಸೂಕ್ಷ್ಮ ಪರೀಕ್ಷಾ ಕೇಂದ್ರಗಳಾಗಿವೆ. ಈ ಐದು ಕೇಂದ್ರಗಳಲ್ಲಿ 1277 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಈ ಕೇಂದ್ರಗಳಿಗೆ ಹೆಚ್ಚಿನ ಪೊಲೀಸ್‌ ಭದ್ರತೆ ಕಲ್ಪಿಸಲಾಗಿದೆ.
ಉಚಿತ ಪ್ರಯಾಣಕ್ಕೆ ಅವಕಾಶ
ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ನೀಡಲಾಗಿದೆ. ವಾಸ ಸ್ಥಳದಿಂದ ನಿಯೋಜಿತ ಪರೀಕ್ಷಾ ಕೇಂದ್ರದವರೆಗೆ ಹೋಗುವಾಗ ಮತ್ತು ಹಿಂದಿರುಗುವಾಗ ಪರೀಕ್ಷಾ ಪ್ರವೇಶ ಪತ್ರವನ್ನು ತೋರಿಸಿ ಉಚಿತವಾಗಿ ಪ್ರಯಾಣಿಸಬಹುದಾಗಿದೆ ಎಂದು ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಸಿದ್ದೇಶ್ವರ ಎನ್‌.ಹೆಬ್ಬಾಳ್‌ ತಿಳಿಸಿದ್ದಾರೆ. ‘ಬೆಳಿಗ್ಗೆ 10 ರಿಂದ 10.15 ರೊಳಗೆ ಪರೀಕ್ಷಾ ಕೊಠಡಿಯಲ್ಲಿ ವಿದ್ಯಾರ್ಥಿಗಳಿರಬೇಕು. 10.15ಕ್ಕೆ ಪ್ರಶ್ನೆ ಪತ್ರಿಕೆ ವಿತರಣೆ ಮಾಡಲಾಗುತ್ತದೆ. ಪ್ರಶ್ನೆ ಪತ್ರಿಕೆ ಓದಲು 15 ನಿಮಿಷ ಸಮಯ ನೀಡಲಾಗುತ್ತದೆ. ಈ ನಡುವೆ ಉತ್ತರ ಪತ್ರಿಕೆ ನೀಡಿದರೂ ಸಹ 10.30ಕ್ಕೆ ಉತ್ತರ ಬರೆಯಲು ವಿದ್ಯಾರ್ಥಿಗಳು ಪ್ರಾರಂಭಿಸಬೇಕು. ಮಧ್ಯಾಹ್ನ 1.30ಕ್ಕೆ ಪರೀಕ್ಷೆ ಅವಧಿ ಪೂರ್ಣಗೊಳ್ಳಲಿದೆ’ ಎಂದು ನೋಡಲ್‌ ಅಧಿಕಾರಿ ಎನ್‌.ಆರ್‌. ತಿಪ್ಪೇಸ್ವಾಮಿ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT