ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಳ್ಳಕೆರೆ: ಸಾಧನೆಗೆ ಅಡ್ಡಿಯಾಗದ ದೃಷ್ಟಿದೋಷ

625ಕ್ಕೆ 625 ಅಂಕ ಪಡೆದು ಟಾಪರ್‌ ಆದ ಮುಕ್ತಾ
Last Updated 10 ಆಗಸ್ಟ್ 2021, 4:12 IST
ಅಕ್ಷರ ಗಾತ್ರ

ಚಳ್ಳಕೆರೆ: ದೃಷ್ಟಿದೋಷದ ಸಮಸ್ಯೆಯನ್ನು ಲೆಕ್ಕಿಸದೆ ಶ್ರದ್ಧೆ ಹಾಗೂ ಪರಿಶ್ರಮದಿಂದ ಓದಿದ ನಗರದ ವಾಸವಿ ಇಂಗ್ಲಿಷ್‌ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿನಿ ಮುಕ್ತಾ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 625ಕ್ಕೆ 625 ಅಂಕ ಪಡೆದು ಜಿಲ್ಲೆಗೆ ಟಾಪರ್ ಆಗಿದ್ದಾಳೆ. ಟಾಪರ್ ಆದ ತಾಲ್ಲೂಕಿನ ಮೊದಲ ವಿದ್ಯಾರ್ಥಿನಿ ಎಂಬ ಹೆಗ್ಗಳಿಕೆಗೆ ಪಾತ್ರಳಾಗಿದ್ದಾಳೆ.

ನಗರದ ಹಳೆಟೌನಿನ ನಿವಾಸಿ ಮುಕ್ತಾ ತಂದೆ–ತಾಯಿ ಇಬ್ಬರೂ ಶಿಕ್ಷಕರು. ತಾಯಿ ಅಪರ್ಣ ತಾಲ್ಲೂಕಿನ ತಳಕು ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಹಾಗೂ ತಂದೆ ತಿಪ್ಪೇಸ್ವಾಮಿ ಮನಮೈಯನಹಟ್ಟಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

‘ಪ್ರೌಢಶಾಲೆಯಲ್ಲಿ ಆರಂಭದಿಂದಲೂ ಸತತ ಅಭ್ಯಾಸ ನಡೆಸುತ್ತಿದ್ದಳು. ತಾನು ಓದಿದ ಪಾಠದ ಟಿಪ್ಪಣಿ ಮಾಡಿಕೊಂಡು ಅಭ್ಯಾಸ ನಡೆಸುತ್ತಿದ್ದಳು. ಎಲ್ಲಾ ಲಘು ಪರೀಕ್ಷೆಯಲ್ಲಿ ಮುಕ್ತಾರವರು ಮೇಲುಗೈ ಸಾಧಿಸಿದ್ದಳು’ ಎಂದರು ಶಾಲೆ ಆಡಳಿತ ಮಂಡಳಿಯ ಶ್ರೀಧರ್.

‘ಫಲಿತಾಂಶ ಕೇಳಿ ತುಂಬಾ ಖುಷಿ ಆಯ್ತು. ನನ್ನ ಓದಿಗೆ ಸಹೋದರಿ ಭಾವನಾ ಅವರೇ ಸ್ಫೂರ್ತಿ. ಓದಿನಲ್ಲಿ ಅಕ್ಕನ ದಾರಿಯಲ್ಲೇ ನಡೆಯುತ್ತೇನೆ’ ಎಂದು ಮುಕ್ತಾ ಸಂತಸ ಹಂಚಿಕೊಂಡಳು.

‘ದೊಡ್ಡವಳು ವೈದ್ಯಕೀಯ ಪದವಿ ಪಡೆದಿದ್ದಾಳೆ. ಚಿಕ್ಕವಳು ಪರೀಕ್ಷೆಯಲ್ಲಿ ಟಾಪರ್ ಆಗುತ್ತಾಳೆ ಎಂಬ ನಿರೀಕ್ಷೆ ಮೊದಲೇ ಇತ್ತು. ನಿರೀಕ್ಷೆಯಂತೆ ಫಲಿತಾಂಶ ಬಂದಿದೆ’ ಎಂದು ತಾಯಿ ಅಪರ್ಣ ಸಂತಸ ವ್ಯಕ್ತಪಡಿಸಿದರು.

ಮುಕ್ತಾಗೆ ದೃಷ್ಟಿದೋಷ ಇದೆ. ಬೆಂಗಳೂರು, ಶಿವಮೊಗ್ಗ ಹಾಗೂ ದಾವಣೆಗೆರೆ ಮುಂತಾದ ಆಸ್ಪತ್ರೆಯಲ್ಲಿ ನೇತ್ರ ಪರೀಕ್ಷೆ ಮಾಡಿಸಿದ್ದು, 18 ವರ್ಷದ ನಂತರ ನೇತ್ರ ಚಿಕಿತ್ಸೆ ಮಾಡುವಂತೆ ವೈದ್ಯರು ಸಲಹೆ ನೀಡಿದ್ದಾರೆ ಎಂದು ಅವರು ಹೇಳಿದರು.

‘ಟಾಪರ್ ಆದ ತಾಲ್ಲೂಕಿಗೆ ಮೊದಲ ವಿದ್ಯಾರ್ಥಿನಿ ಮುಕ್ತಾಗೆ ಅಭಿನಂದನೆ. ಮುಂದಿನ ದಿನಗಳಲ್ಲಿ ಇಲಾಖೆಯಿಂದ ಗೌರವಿಸಲಾಗುವುದು’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್. ಸುರೇಶ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT