ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಲಾ ತೋಟ ಉಳಿಸಲು ಟ್ಯಾಂಕರ್‌ ನೀರಿಗೆ ಮೊರೆ

ಲಕ್ಕಿಹಳ್ಳಿ ಪ್ರೌಢಶಾಲಾ ಶಿಕ್ಷಕ ಟಿ. ದಿನೇಶ್‌ ಮಾದರಿಕಾರ್ಯ
ಶ್ವೇತಾ ಜಿ.
Published 3 ಮೇ 2024, 6:36 IST
Last Updated 3 ಮೇ 2024, 6:36 IST
ಅಕ್ಷರ ಗಾತ್ರ

ಹೊಸದುರ್ಗ: ಸಮೀಪದ ಲಕ್ಕಿಹಳ್ಳಿ ಪ್ರೌಢಶಾಲಾ ಶಿಕ್ಷಕ ಟಿ. ದಿನೇಶ್‌ ಅವರು ತಮ್ಮ ಶಾಲಾ ಆವರಣದಲ್ಲಿ ಬೆಳೆಸಿದ್ದ ಅಡಿಕೆ ಗಿಡಗಳನ್ನು ಉಳಿಸಿಕೊಳ್ಳಲು ತಮ್ಮ ಸ್ವಂತ ಖರ್ಚಿನಲ್ಲಿ ಟ್ಯಾಂಕರ್‌ ನೀರು ಹಾಯಿಸುವ ಮೂಲಕ ಹಲವರಿಗೆ ಮಾದರಿಯಾಗಿದ್ದಾರೆ.

ಲಕ್ಕಿಹಳ್ಳಿ ಸರ್ಕಾರಿ ಪ್ರೌಢಶಾಲಾ ಆವರಣ ವರ್ಷಗಳ ಹಿಂದೆ ಪೊದೆ, ಕಲ್ಲು–ಮುಳ್ಳುಗಳಿಂದ ಕೂಡಿತ್ತು. ಕೆಲವು ವರ್ಷಗಳ ಹಿಂದೆ ಜಿಲ್ಲಾ ಪಂಚಾಯಿತಿ ಸದಸ್ಯರಾಗಿದ್ದ ವಿಜಯಲಕ್ಷ್ಮಿ ಪ್ರಕಾಶ್‌ ಅವರ ಸಹಕಾರದಿಂದ 110 ಅಡಿಕೆ ಸಸಿಗಳನ್ನು ನೆಡಲಾಗಿತ್ತು. ಆಗಲೂ ಮುಖ್ಯಶಿಕ್ಷಕ ದಿನೇಶ್‌ ಸ್ವಂತ ಖರ್ಚಿನಲ್ಲಿ ಡ್ರಿಪ್‌ ಅಳವಡಿಸಿದ್ದರು.

ಶಾಲೆಯಲ್ಲಿಯೇ ಕೊಳವೆಬಾವಿ ಇದ್ದಿದ್ದರಿಂದ ನೀರಿಗೆ ಸಮಸ್ಯೆ ಇರಲಿಲ್ಲ. ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ಸಹಕಾರದಿಂದ ಅಡಿಕೆ ಗಿಡಗಳು ಉತ್ಕೃಷ್ಟವಾಗಿ ಬೆಳೆಯುತ್ತಿದ್ದವು. ಈ ಅಡಿಕೆ ಗಿಡಗಳಿಂದ ಶಾಲೆಗೆ ₹ 50,000ದಿಂದ ₹ 1 ಲಕ್ಷದವರೆಗೂ ಆದಾಯ ಪಡೆಯುವ ನೀರಿಕ್ಷೆ ಹೊಂದಿದ್ದರು. ಜಿಲ್ಲಾ ಪಂಚಾಯಿತಿ ಸಿಇಒ ಸಹ ಈ ತೋಟದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದರು. ಆದರೆ, ಕಳೆದ ಸಾಲಿನಲ್ಲಿ ಮಳೆ ಕೊರತೆಯಿಂದಾಗಿ ಗಿಡಗಳೀಗ ಒಣಗುತ್ತಿದ್ದು, ಅವುಗಳನ್ನು ಉಳಿಸಿಕೊಳ್ಳುವ ಕೆಲಸ ಸಾಗಿದೆ.

‘ಮಾರ್ಚ್‌ ತಿಂಗಳಲ್ಲಿ ಕೊಳವೆಬಾವಿಯಲ್ಲಿ ನೀರಿನ ಪ್ರಮಾಣ ಕಡಿಮೆಯಾಯಿತು. ಮಾರ್ಚ್‌ ಅಂತ್ಯದ ವೇಳೆಗೆ ಸಂಪೂರ್ಣ ಬತ್ತಿತು. ಮಕ್ಕಳಂತೆ ಜೋಪಾನ ಮಾಡಿದ್ದ ಮೂರು ವರ್ಷದ ಅಡಿಕೆ ಗಿಡಗಳು ಒಣಗುತ್ತಿದ್ದವು. ಅಡಿಕೆ ಗಿಡಗಳನ್ನು ಹೇಗಾದರೂ ಉಳಿಸಿಕೊಳ್ಳಲೇಬೇಕು ಎಂದು ಟ್ಯಾಂಕರ್‌ ನೀರಿನ ಮೊರೆ ಹೋಗಲಾಯಿತು’ ಎಂದು ಮುಖ್ಯಶಿಕ್ಷಕರು ತಿಳಿಸಿದರು.

‘ಟ್ಯಾಂಕರ್‌ ನೀರಿಗೆ ₹ 1,300 ಇದೆ. ಶಾಲೆಗಾಗಿ ₹ 1000ಕ್ಕೆ ನೀರು ಪೂರೈಸುತ್ತಿದ್ದಾರೆ. ದಿನ ಬಿಟ್ಟು ದಿನ ನೀರು ಹಾಯಿಸಲಾಗುತ್ತಿದ್ದು, ಗಿಡಗಳು ಉಳಿಯುವ ವಿಶ್ವಾಸವಿದೆ. ಗ್ರಾಮ ಪಂಚಾಯಿತಿ ವತಿಯಿಂದ ಪೈಪ್‌ಲೈನ್‌ ಸಂಪರ್ಕ ಒದಗಿಸಲಾಗಿದ್ದು, ನೀರು ಹಾಯಿಸುವುದು ಸುಲಭವಾಗಿದೆ. ಶಾಲೆಗೆ ಆದಾಯದ ಮೂಲವಾಗಲಿರುವ ಗಿಡಗಳನ್ನು ರಕ್ಷಿಸುವುದು ನಮ್ಮ ಜವಾಬ್ದಾರಿ’ ಎಂದು ಅವರು ಹೇಳಿದರು

ಮುಖ್ಯಶಿಕ್ಷಕರಿಗೆ ದೈಹಿಕ ಶಿಕ್ಷಕ ಬಿ. ಬಸವರಾಜಪ್ಪ ಸಹ ನೆರವಾಗಿದ್ದಾರೆ.

ಹೊಸದುರ್ಗದ ಲಕ್ಕಿಹಳ್ಳಿ ಗ್ರಾಮದ ಸರ್ಕಾರಿ ಶಾಲೆಯ ಆವರಣದಲ್ಲಿರುವ ಅಡಿಕೆ ಗಿಡಗಳಿಗೆ ಟ್ಯಾಂಕರ್‌ ಮೂಲಕ ನೀರು ಹಾಯಿಸುತ್ತಿರುವ ಮುಖ್ಯಶಿಕ್ಷಕ ದಿನೇಶ ಟಿ.
ಹೊಸದುರ್ಗದ ಲಕ್ಕಿಹಳ್ಳಿ ಗ್ರಾಮದ ಸರ್ಕಾರಿ ಶಾಲೆಯ ಆವರಣದಲ್ಲಿರುವ ಅಡಿಕೆ ಗಿಡಗಳಿಗೆ ಟ್ಯಾಂಕರ್‌ ಮೂಲಕ ನೀರು ಹಾಯಿಸುತ್ತಿರುವ ಮುಖ್ಯಶಿಕ್ಷಕ ದಿನೇಶ ಟಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT