ಪೌರಕಾರ್ಮಿಕರ ವಸತಿಗೆ ವಿಶೇಷ ಒತ್ತು

7
ಶಾಸಕ ಜಿ.ಎಚ್‌.ತಿಪ್ಪಾರೆಡ್ಡಿ ಭರವಸೆ

ಪೌರಕಾರ್ಮಿಕರ ವಸತಿಗೆ ವಿಶೇಷ ಒತ್ತು

Published:
Updated:
Deccan Herald

ಚಿತ್ರದುರ್ಗ: ಆಶ್ರಯ ಸಮಿತಿ ನಿರ್ಮಿಸಲು ಉದ್ದೇಶಿಸಿರುವ 1,800 ಮನೆಗಳಲ್ಲಿ ಪೌರಕಾರ್ಮಿಕರ ವಸತಿಗೆ ವಿಶೇಷ ಒತ್ತು ನೀಡಲಾಗುವುದು ಎಂದು ಶಾಸಕ ಜಿ.ಎಚ್‌.ತಿಪ್ಪಾರೆಡ್ಡಿ ಆಶ್ವಾಸನೆ ನೀಡಿದರು.

ಅಂಬೇಡ್ಕರ್‌ ಕಲ್ಯಾಣ ಮಂಟಪದಲ್ಲಿ ನಗರಸಭೆ ಗುರುವಾರ ಏರ್ಪಡಿಸಿದ್ದ ಪೌರಕಾರ್ಮಿಕರ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಪೌರಕಾರ್ಮಿಕರ ವಸತಿ ವ್ಯವಸ್ಥೆಗೆ ನಗರಸಭೆಯಲ್ಲಿ ₹ 48 ಲಕ್ಷ ಅನುದಾನ ಮೀಸಲಿಡಲಾಗಿದೆ. ಆದರೆ, ಈ ಹಣದಲ್ಲಿ ಕನಿಷ್ಠ 30 ಜನರಿಗೂ ಸೌಲಭ್ಯ ಒದಿಗಿಸುವುದು ಕಷ್ಟ. ಆಶ್ರಯ ಸಮಿತಿಯ ವ್ಯಾ‍ಪ್ತಿಯಲ್ಲಿ ವಸತಿ ವ್ಯವಸ್ಥೆ ಮಾಡಿಕೊಡಲಾಗುವುದು. ಮನೆ ನೀಡಲು ಈ ಹಿಂದೆ ಇದ್ದ ಅಡೆತಡೆಗಳು ನಿವಾರಣೆಯಾಗಿವೆ’ ಎಂದು ಹೇಳಿದರು.

‘ವಸತಿ ರಹಿತರ ಅರ್ಜಿಗಳನ್ನು ಪರಿಶೀಲಿಸಿ ಆಯ್ಕೆ ಮಾಡುವುದು ನಿಯಮ. ಲಾಟರಿ ಮೂಲಕ ಫಲಾನುಭವಿಗಳನ್ನು ಆಯ್ಕೆ ಮಾಡಲಾಗುತ್ತದೆ. ಆದರೆ, ಪೌರಕಾರ್ಮಿಕರಿಗೆ ಲಾಟರಿ ಪದ್ಧತಿಯ ಆಯ್ಕೆಯಿಂದ ವಿನಾಯಿತಿ ನೀಡಲು ಚರ್ಚಿಸಲಾಗುವುದು’ ಎಂದರು.

‘ನಗರವನ್ನು ಶುಚಿಗೊಳಿಸುವ ಪೌರಕಾರ್ಮಿಕರದು ಘನತೆಯ ಕೆಲಸ. ಆದರೆ, ಅವರ ಮಕ್ಕಳು ಈ ಕೆಲಸ ಮುಂದುವರಿಸುವುದು ಬೇಡ. ಉನ್ನತ ವ್ಯಾಸಂಗ ಮಾಡುವ ಪೌರಕಾರ್ಮಿಕರ ಮಕ್ಕಳಿಗೆ ಸರ್ಕಾರ ಆರ್ಥಿಕ ನೆರವು ನೀಡುತ್ತಿದೆ’ ಎಂದು ಹೇಳಿದರು.

‘ಪರಿಶಿಷ್ಟ ಜಾತಿ ಮತ್ತು ಪಂಗಡದ ಜನರೇ ಹೆಚ್ಚಾಗಿ ಪೌರಕಾರ್ಮಿಕರಾಗುತ್ತಿದ್ದಾರೆ. ದಲಿತರೇ ಹೆಚ್ಚಾಗಿ ಈ ಕೆಲಸ ಆಯ್ಕೆ ಮಾಡಿಕೊಳ್ಳುವುದು ಏಕೆ ಎಂಬ ಪ್ರಶ್ನೆ ಕಾಡುತ್ತಿದೆ. ಮಲ ಹೊರುವ ಪದ್ಧತಿಯನ್ನು ನಿಷೇಧಿಸಿದ್ದರೂ, ಅನೇಕ ಭಾಗಗಳಲ್ಲಿ ಇದು ಜೀವಂತವಾಗಿರುವುದು ದುರಂತ’ ಎಂದು ಬೇಸರ ವ್ಯಕ್ತಪಡಿಸಿದರು.

ಪೌರಕಾರ್ಮಿಕರಿಗೆ ನೀರು ಶುದ್ಧೀಕರಣ ಯಂತ್ರ ಹಾಗೂ ಮಂಚಗಳನ್ನು ವಿತರಣೆ ಮಾಡಲಾಯಿತು. ಕಾರ್ಯನಿರ್ವಾಹಕ ಎಂಜಿನಿಯರ್‌ ರವಿಶಂಕರ್‌, ಪೌರಕಾರ್ಮಿಕ ಸಂಘದ ಮುಖಂಡರಾದ ಡಿ.ದುರ್ಗೇಶ್‌, ರಾಮಚಂದ್ರಪ್ಪ, ಮಹಾಂತೇಶ್‌, ತಿಮ್ಮಕ್ಕ, ಪಾರ್ವತಮ್ಮ, ಮೈಲಾರಪ್ಪ ಇದ್ದರು.

ಭಾವುಕರಾದ ಶಾಸಕ: ಮ್ಯಾನ್‌ಹೋಲ್‌ಗೆ ಬಿದ್ದು ಮೃತಪಡುವ ಪೌರಕಾರ್ಮಿಕರ ಕುರಿತು ಮಾತನಾಡುವ ವೇಳೆ ಶಾಸಕ ತಿಪ್ಪಾರೆಡ್ಡಿ ಭಾವುಕರಾದರು.

‘ಮ್ಯಾನ್‌ಹೋಲ್‌ ಶುಚಿಗೊಳಿಸುವ ವೇಳೆ ಮೃತಪಡುವವರ ಸಂಖ್ಯೆ ಹೆಚ್ಚಾಗಿದೆ. ಈಚೆಗೆ ಉತ್ತರ ಭಾರತದಲ್ಲಿ ಪೌರ್ಕಾರ್ಮಿಕರೊಬ್ಬರು ಹಗ್ಗ ಕಟ್ಟಿಕೊಂಡು ಮ್ಯಾನ್‌ಹೋಲ್‌ಗೆ ಇಳಿದರು. ಹಗ್ಗ ತುಂಡಾದ ಪರಿಣಾಮ ಮೃತಪಟ್ಟರು. ಮಾಧ್ಯಮಗಳಲ್ಲಿ ಇದನ್ನು ನೋಡಿದಾಗ ಕಣ್ಣಲ್ಲಿ ನೀರು ಬಂದಿತು..’ ಎಂದು ಭಾವುಕರಾಗಿ ಮಾತು ನಿಲ್ಲಿಸಿದರು.

ಬಾಕಿ ವೇತನಕ್ಕೆ ಮನವಿ:  5 ತಿಂಗಳಿಂದ ಬಾಕಿ ಉಳಿಸಿಕೊಂಡಿರುವ ವೇತನ ಪಾವತಿಸುವಂತೆ ಪೌರ ಕಾರ್ಮಿಕರು ಶಾಸಕ ತಿಪ್ಪಾರೆಡ್ಡಿ ಅವರನ್ನು ಮನವಿ ಮಾಡಿಕೊಂಡರು.

ಶಾಸಕರು ಭಾಷಣ ಮಾಡುತ್ತಿದ್ದಾಗ ಎದ್ದುನಿಂತ ಪೌರಕಾರ್ಮಿಕರೊಬ್ಬರು, ‘ಮೊದಲು ವೇತನ ಕೊಡಿಸಿ ಸ್ವಾಮಿ..’ ಎಂದು ಕೇಳಿದರು. ಇದಕ್ಕೆ ಮಹಿಳೆಯರೂ ಧ್ವನಿಗೂಡಿಸಿದರು. ‘ವೇತನ ನೀಡದಿದ್ದರೆ ಕುಟುಂಬ ನಿರ್ವಹಣೆ ಮಾಡುವುದು ಹೇಗೆ’ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !