ಮಂಗಳವಾರ, 18 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊಳಕಾಲ್ಮುರು | ಚೆಕ್‌ಪೋಸ್ಟ್‌ ಕಾರ್ಯ: ಶೈಕ್ಷಣಿಕ ಚಟುವಟಿಕೆಯಿಂದ ಉಪನ್ಯಾಸಕರು ದೂರ

Published 18 ಮೇ 2024, 7:45 IST
Last Updated 18 ಮೇ 2024, 7:45 IST
ಅಕ್ಷರ ಗಾತ್ರ

ಮೊಳಕಾಲ್ಮುರು (ಚಿತ್ರದುರ್ಗ): ಅಂತರ್‌ರಾಜ್ಯ ಗಡಿಗಳಲ್ಲಿ ಸ್ಥಾಪಿಸಿರುವ ಚೆಕ್‌ ಪೋಸ್ಟ್‌ಗಳು ಲೋಕಸಭಾ ಚುನಾವಣೆ ನಂತರವೂ ಕಾರ್ಯ ನಿರ್ವಹಿಸುತ್ತಿವೆ. ಇದರಿಂದಾಗಿ ಇಲ್ಲಿ ಕರ್ತವ್ಯಕ್ಕೆ ನಿಯೋಜನೆಗೊಂಡಿರುವ ಶಿಕ್ಷಣ ಇಲಾಖೆಯ ಸಿಬ್ಬಂದಿ ಶೈಕ್ಷಣಿಕ ಚಟುವಟಿಕೆಗಳಿಂದ ದೂರ ಉಳಿಯುವಂತಾಗಿದ್ದು, ವಿದ್ಯಾರ್ಥಿಗಳ eಪಾಠ, ಪ್ರವಚನಗಳಿಗೆ ತೊಂದರೆ ಉಂಟಾಗುತ್ತಿದೆ.    

ಚಿತ್ರದುರ್ಗ ಜಿಲ್ಲೆಯಲ್ಲಿ ಕಣಕುಪ್ಪೆ, ಎದ್ದಲಬೊಮ್ಮಯ್ಯನ ಹಟ್ಟಿ, ಮಲ್ಲಸಮುದ್ರ, ನಾಗಪ್ಪನಹಳ್ಳಿ ಗೇಟ್‌, ಪಿ.ಡಿ. ಕೋಟೆ, ಜಾಜೂರು, ಊಡೇವು ಗ್ರಾಮಗಳ ಸಮೀಪ ಆಂಧ್ರಪ್ರದೇಶದ ಗಡಿ ಇದೆ. ಈ ಭಾಗಗಳಲ್ಲಿ ಮಾರ್ಚ್‌ 17ರಂದು ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಲಾಗಿತ್ತು. ಎರಡೂ ರಾಜ್ಯಗಳಲ್ಲಿ ಚುನಾವಣೆ ಮುಗಿದಿದೆ. ಆಂಧ್ರ ಸರ್ಕಾರ ಗಡಿಯಲ್ಲಿ ಸ್ಥಾಪಿಸಿದ್ದ 13 ಚೆಕ್‌ಪೋಸ್ಟ್‌ಗಳನ್ನು ತೆರವುಗೊಳಿಸಿದೆ. ಆದರೆ, ಕರ್ನಾಟಕ ಸ್ಥಾಪಿಸಿದ್ದ ಚೆಕ್‌ಪೋಸ್ಟ್‌ಗಳು ಜೂನ್‌ 6ರವರೆಗೆ ಕಾರ್ಯ ನಿರ್ವಹಿಸಬೇಕೆಂದು ಆದೇಶಿಸಲಾಗಿದೆ. 

‘ಈ ಚೆಕ್‌ಪೋಸ್ಟ್‌ಗಳಲ್ಲಿ ನಿಯೋಜನೆಯಾಗಿರುವ ಸಿಬ್ಬಂದಿ ಪೈಕಿ ಪಿಯು, ಪದವಿ ಕಾಲೇಜು ಉಪನ್ಯಾಸಕರು ಮತ್ತು ಪ್ರೌಢಶಾಲೆಗಳ ಮುಖ್ಯಶಿಕ್ಷಕರೂ ಇದ್ದಾರೆ. ಚಿತ್ರದುರ್ಗ ಜಿಲ್ಲೆ ವ್ಯಾಪ್ತಿಯ 7 ಚೆಕ್‌ಪೋಸ್ಟ್‌ಗಳಲ್ಲಿ 13 ಮಂದಿ ಉಪನ್ಯಾಸಕರು ಮತ್ತು ನಾಲ್ವರು ಮುಖ್ಯಶಿಕ್ಷಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ರಾಜ್ಯದ ಉಳಿದ ಚೆಕ್‌ಪೋಸ್ಟ್‌ಗಳಲ್ಲೂ ಶಿಕ್ಷಕರು, ಉಪನ್ಯಾಸಕರೇ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಚೆಕ್‌ಪೋಸ್ಟ್‌ ಸೇವೆ ಮುಂದುವರಿಸಿದ್ದರಿಂದ ಶಾಲೆ, ಕಾಲೇಜುಗಳಲ್ಲಿ ದಾಖಲಾತಿ, ಅಂಕಪಟ್ಟಿ, ವರ್ಗಾವಣೆ ಪತ್ರ ನೀಡಲು, ಮರು ಪರೀಕ್ಷೆಗೆ ವಿದ್ಯಾರ್ಥಿಗಳನ್ನು ಅಣಿಗೊಳಿಸಲು ತೊಂದರೆಯಾಗಿದೆ’ ಎಂದು ಶಿಕ್ಷಕರು ದೂರಿದ್ದಾರೆ. 

‘ರಾಜ್ಯದಲ್ಲಿ ಚುನಾವಣೆ ಮುಗಿದ ಕೂಡಲೇ ಜಿಲ್ಲೆಯ ಗಡಿ ಭಾಗ ಬಿಟ್ಟು ಇತರೆಡೆ ಸ್ಥಾಪಿಸಿದ್ದ ಎಲ್ಲಾ ಚೆಕ್‌ಪೋಸ್ಟ್‌ಗಳನ್ನೂ ತೆರವು ಮಾಡಲಾಗಿತ್ತು. ಮೇ 12ರಂದು ಆಂಧ್ರದಲ್ಲಿ ಮತದಾನ ಇತ್ತು. ಪೂರ್ಣಗೊಂಡ ಬಳಿಕ ಚೆಕ್‌ಪೋಸ್ಟ್‌ಗಳನ್ನು ತೆರವು ಮಾಡಬಹುದು ಎಂದುಕೊಂಡಿದ್ದೆವು. ಆದರೆ ಜೂನ್ 6ರವರೆಗೆ ಕಾರ್ಯನಿರ್ವಹಿಸಲು ಸೂಚಿಸಲಾಗಿದೆ. ಇದು ಅನಗತ್ಯ’ ಎಂದು ಸಿಬ್ಬಂದಿಯೊಬ್ಬರು ಅಸಮಾಧಾನ ವ್ಯಕ್ತಪಡಿಸಿದರು. 

‘ರಜೆ ತೆಗೆದುಕೊಳ್ಳದೇ 3 ತಿಂಗಳಿಂದ ಚೆಕ್‌ಪೋಸ್ಟ್‌ಗಳಲ್ಲಿ ಸೇವೆ ಸಲ್ಲಿಸಿದ್ದೇವೆ. ಕೆಲವರಿಗೆ ಆರೋಗ್ಯ ಸಮಸ್ಯೆಗಳಿವೆ. ವಿದ್ಯಾರ್ಥಿಗಳ ಗುಣಮಟ್ಟದ ಕಲಿಕೆಗೆ ಪೂರಕವಾಗಿ ಬೋಧಿಸಲು ಸಿದ್ಧತೆ ಕೈಗೊಳ್ಳಬೇಕಾದ ಅಗತ್ಯವೂ ಇದೆ. ಇದನ್ನು ಗಮನದಲ್ಲಿಟ್ಟುಕೊಂಡು ನಮ್ಮನ್ನು ಚೆಕ್‌ಪೋಸ್ಟ್‌ ಸೇವೆಯಿಂದ ಬಿಡುಗಡೆ ಮಾಡಬೇಕು. ನಮ್ಮ ಜಾಗಕ್ಕೆ ಬೇರೆ ಇಲಾಖೆಯ ಸಿಬ್ಬಂದಿಯನ್ನು ನಿಯೋಜಿಸಲು ಕ್ರಮ ಕೈಗೊಳ್ಳಬೇಕು’ ಎಂದು ಮನವಿ ಮಾಡಿದ್ದಾರೆ.

ಈ ಬಾರಿ ಬಿಸಿಲ ಬೇಗೆ ಹೆಚ್ಚಿದ್ದರಿಂದ ಚೆಕ್‌ಪೋಸ್ಟ್‌ ಸೇವೆಗೆ ನಿಯೋಜನೆಗೊಂಡಿದ್ದ ಸಿಬ್ಬಂದಿ ನೀರು ಹಾಗೂ ಆಹಾರ ಸಮಸ್ಯೆ ಎದುರಿಸಿದರು. ಸಂಬಂಧಪಟ್ಟವರು ಕನಿಷ್ಠ ಉಪಾಹಾರ ಮತ್ತು ಊಟದ ವ್ಯವಸ್ಥೆಯನ್ನೂ ಮಾಡಲಿಲ್ಲ ಎಂದು 
ಹೆಸರು ಬಹಿರಂಗಪಡಿಸಲು ಬಯಸದ ಸಿಬ್ಬಂದಿ ಅಳಲು ತೋಡಿಕೊಂಡರು.

ಮೊಳಕಾಲ್ಮುರು ವಿಧಾನಸಭಾ ಕ್ಷೇತ್ರದ ಕಣಕುಪ್ಪೆ ಚೆಕ್‌ಪೋಸ್ಟ್‌ನ ನೋಟ 
ಮೊಳಕಾಲ್ಮುರು ವಿಧಾನಸಭಾ ಕ್ಷೇತ್ರದ ಕಣಕುಪ್ಪೆ ಚೆಕ್‌ಪೋಸ್ಟ್‌ನ ನೋಟ 
ಗಡಿಯಲ್ಲಿನ ಚೆಕ್‌ಪೋಸ್ಟ್‌ ಸೇವೆಗೆ ಉಪನ್ಯಾಸಕರನ್ನು ನಿಯೋಜಿಸಿದ್ದರಿಂದ ಆಗುತ್ತಿರುವ ತೊಂದರೆ ಕುರಿತು ಜಿಲ್ಲಾಧಿಕಾರಿಯವರ ಗಮನಕ್ಕೆ ತರಲಾಗುವುದು. ಸೂಕ್ತ ಕ್ರಮ ಕೈಗೊಳ್ಳುವಂತೆಯೂ ಮನವಿ ಮಾಡಲಾಗುವುದು
- ಬಸವನಗೌಡ ಕೋಟೂರ ಸಹಾಯಕ ಚುನಾವಣಾಧಿಕಾರಿ
ಗಡಿ ಭಾಗದ ಚೆಕ್‌ಪೋಸ್ಟ್‌ಗಳಲ್ಲಿ ಉಪನ್ಯಾಸಕರು ಮುಖ್ಯಶಿಕ್ಷಕರು ಕಾರ್ಯನಿರ್ವಹಿಸುತ್ತಿರುವುದರಿಂದ ಆಗುತ್ತಿರುವ ತೊಂದರೆ ಬಗ್ಗೆ ಮಾಹಿತಿ ಪಡೆದು ಸಿಬ್ಬಂದಿ ಬದಲಾವಣೆಗೆ ಕ್ರಮ ಕೈಗೊಳ್ಳಲಾಗುವುದು
- ಟಿ. ವೆಂಕಟೇಶ್‌ ಚಿತ್ರದುರ್ಗದ ಜಿಲ್ಲಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT