ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಚ್ಚುತ್ತಿರುವ ಬಿಸಿಲಿನ ತಾಪ; ಕೋಳಿ ಫಾರಂ ತೇವಾಂಶ ಕಾಪಾಡಲು ಹರಸಾಹಸ

ʼಫಾಗರ್ಸ್‌ʼ ಪದ್ಧತಿ ಮೊರೆ
Published 6 ಏಪ್ರಿಲ್ 2024, 7:22 IST
Last Updated 6 ಏಪ್ರಿಲ್ 2024, 7:22 IST
ಅಕ್ಷರ ಗಾತ್ರ

ಮೊಳಕಾಲ್ಮುರು (ಚಿತ್ರದುರ್ಗ): ಹೆಚ್ಚುತ್ತಿರುವ ಬಿಸಿಲಿನ ತಾಪದಿಂದಾಗಿ ಮೊಟ್ಟೆ ಕೋಳಿ ಸಾಕಣೆದಾರರು ಹೈರಾಣಾಗಿದ್ದು, ಫಾರಂ ಒಳಗಡೆಯ ತೇವಾಂಶ ಕಾಪಾಡಿಕೊಳ್ಳಲು ಹಲವು ಪದ್ಧತಿಗಳ ಮೊರೆ ಹೋಗಿದ್ದಾರೆ.

ರಾಜ್ಯದಲ್ಲಿ ಅತಿ ಹೆಚ್ಚು ಮೊಟ್ಟೆ ಕೋಳಿ ಸಾಗಣೆಯ ಜಿಲ್ಲೆಗಳಲ್ಲಿ ಚಿತ್ರದುರ್ಗವೂ ಒಂದಾಗಿದ್ದು, ಮೊಳಕಾಲ್ಮುರು ಮತ್ತು ಚಳ್ಳಕೆರೆ ತಾಲ್ಲೂಕುಗಳು ಸಾಕಣೆಯಲ್ಲಿ ಮಂಚೂಣಿಯಲ್ಲಿವೆ. ಎರಡು ತಾಲ್ಲೂಕುಗಳಲ್ಲಿ ಅಂದಾಜು 30 ಲಕ್ಷದಷ್ಟು ಮೊಟ್ಟೆ ಕೋಳಿ ಸಾಕಣೆ ಮಾಡಲಾಗುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಪ್ರತಿ ಬೇಸಿಗೆಯಲ್ಲೂ ಕೋಳಿ ಆರೋಗ್ಯ ಕಾಪಾಡುವುದು ಸವಾಲಾಗುತ್ತಿದ್ದು, ಈ ವರ್ಷ ಇನ್ನಷ್ಟು ಬಿಗಡಾಯಿಸಿದೆ ಎಂದು ಸಾಕಣೆದಾರರು ಅಳಲು ತೋಡಿಕೊಂಡಿದ್ದಾರೆ.

‘ಮೊಟ್ಟೆ ಕೋಳಿ ಸಾಕಣೆಗೆ 32ರಿಂದ 34 ಡಿಗ್ರಿ ಉಷ್ಣಾಂಶ ಅನುಕೂಲಕರ. ಈಗ 40 ಡಿಗ್ರಿ ದಾಖಲಾಗುತ್ತಿದೆ. ಈ ವಾತಾವರಣದಲ್ಲಿ ಕೋಳಿಗಳು ಸಾವು ಸಂಭವಿಸುತ್ತದೆ. ಜತೆಗೆ ಆಹಾರ, ನೀರು ಸೇವನೆ ಮಾಡುವುದಿಲ್ಲ. ಕುಡಿಯುವ ನೀರಿನ ಜತೆ ಎಲೆಕ್ರೋಲೈಟ್ಸ್‌ ಮತ್ತು ವಿಟಮಿನ್‌ ‘ಸಿ’, ವಿಟಮಿನ್‌ ‘ಬಿ’ ಹೆಚ್ಚು ನೀಡಲಾಗುತ್ತಿದೆ. ಜತೆಗೆ ಫಾರಂ ಒಳಗಡೆ ಉಷ್ಣಾಂಶ ಕಡಿಮೆ ಮಾಡುವ ಮಾರ್ಗಗಳನ್ನು ಅನುಸರಿಸುವುದು ಕಡ್ಡಾಯವಾಗಿದೆ’ ಎಂದು ಸಾಕಣೆದಾರ ಮೊಗಲಹಳ್ಳಿಯ ಗೋವಿಂದರೆಡ್ಡಿ ಹೇಳಿದರು.

‘ನಮ್ಮ ಫಾರಂನ ಚಾವಣಿಗಳಿಗೆ ನೀರಿನ ಸ್ಪ್ರಿಂಕ್ಲರ್ ಅಳವಡಿಸಲಾಗಿದೆ. ದಿನಕ್ಕೆ 4 ಸಲ 10ರಿಂದ 15 ನಿಮಿಷ ನೀರು ಬಿಡಲಾಗುತ್ತಿದೆ. ಜತೆಗೆ ಚಾವಣಿಗೆ ಗೋಣಿ ತಾಟು ಹಾಕಲಾಗಿದೆ. ಈ ವರ್ಷ ಹೊಸ ಪ್ರಯತ್ನವಾಗಿ ಅಡಿಗೆ ಸಿಪ್ಪೆಯನ್ನೂ ಹಾಕಲಾಗಿದೆ. ಕೆಲವರು ಗೋದಿ, ನವಣೆ ಹುಲ್ಲು ಹಾಸಿದ್ದಾರೆ. ಪ್ರತಿ ಕೋಳಿಗೆ ಇದರಿಂದ ₹ 4ರಿಂದ ₹ 5 ಖರ್ಚು ಹೆಚ್ಚುವರಿ ಬರುತ್ತಿದೆ. ಪ್ರತಿದಿನ 10 ಕೋಳಿ ಸಾಯುತ್ತಿದ್ದವು. ಈಗ ಸಾವಿನ ಪ್ರಮಾಣ ಕಡಿಮೆಯಾಗಿರುವ ಜತೆಗೆ ಕೋಳಿಯು ಆಹಾರ ಸೇವಿಸುವಲ್ಲಿ ಸುಧಾರಣೆ ಕಂಡಿದೆ’ ಎಂದು ಅವರು ಮಾಹಿತಿ ನೀಡಿದರು.

ಫಾರಂನಲ್ಲಿ ಒಳಗಡೆ ‘ಫಾಗರ್ಸ್‌’ ಪದ್ಧತಿ ಅಳವಡಿಸಲಾಗಿದೆ. ದಿನಕ್ಕೆ 4 ಸಲ 10 ನಿಮಿಷಗಳ ಕಾಲ ನೀರು ಬಿಡಲಾಗುತ್ತಿದೆ. ಬಿಟ್ಟ ನೀರಿನ ಕಣಗಳು ಕೋಳಿಗಳ ಮೇಲೆ ಹಾಗೂ ಕೋಳಿ ಸಾಕಣೆ ಪೆಟ್ಟಿಗೆ ಮೇಲೆ ಬೀಳುವ ಪರಿಣಾಮ ಉಂಷ್ಣಾಶ ಕಡಿಮೆಯಾಗುತ್ತದೆ. 38– 40 ಡಿಗ್ರಿ ಉಷ್ಣಾಂಶ ‘ಫಾಗರ್ಸ್‌’ ಪದ್ಧತಿಯಲ್ಲಿ ನೀರು ಬಿಟ್ಟಾಗ 5– 6 ಡಿಗ್ರಿಯಷ್ಟು ಕಡಿಮೆ ಆಗುತ್ತಿದೆ. ಇದರಿಂದ ಕೋಳಿಗಳ ಸಾವಿನ ಸಂಖ್ಯೆ ಕಡಿಮೆಯಾಗುವ ಜತೆಗೆ ಮೊಟ್ಟೆ ಗಾತ್ರ ಸುಧಾರಣೆಗೆ ಕಾರಣವಾಗಿದೆ ಎಂದು ಭೈರಾಪುರದ ಸಾಧನಾ ಪೌಲ್ಟ್ರಿ ಫಾರಂನ ಮಾಲೀಕ ಎಂ.ಟಿ. ಹರೀಶ್‌ ತಿಳಿಸಿದರು.

ಅಮಕುಂದಿಯಲ್ಲಿ ಫಾರಂ ಒಳಗಡೆ ಕೋಳಿಗಳಿಗೆ ಫಾಗರ್ಸ್‌ ಅಳವಡಿಸಿರುವುದು
ಅಮಕುಂದಿಯಲ್ಲಿ ಫಾರಂ ಒಳಗಡೆ ಕೋಳಿಗಳಿಗೆ ಫಾಗರ್ಸ್‌ ಅಳವಡಿಸಿರುವುದು

‘ಉಷ್ಣಾಂಶ ಕಡಿಮೆ ಮಾಡುವ ಮಾರ್ಗೋಪಾಯಗಳ ಜತೆಗೆ ವಿಟಮಿನ್‌ಯುಕ್ತ ನೀರು, ಆಹಾರ ಪೂರೈಕೆ ಅನಿವಾರ್ಯ. ಇದನ್ನು ಜೂನ್‌ ತಿಂಗಳ ಅಂತ್ಯದವರೆಗೂ ಮಾಡಬೇಕಿರುವುದು ನಮ್ಮ ಮುಂದಿರುವ ಸವಾಲು. ಹೆಚ್ಚುವರಿ ಹಣ ಖರ್ಚು ಮಾಡಿ ಕೋಳಿ ಉದ್ಯಮ ಆರಂಭಿಸಿದ್ದೇವೆ. ಆದರೆ ಬೇಸಿಗೆಯಲ್ಲಿ ಮೊಟ್ಟೆ ದರ ಕುಸಿಯುತ್ತದೆ. ಈಗ ದರ ಸರಾಸರಿ ಪ್ರತಿ ಮೊಟ್ಟೆಗೆ ₹ 4.50 ಇದೆ’ ಎಂದು ಬೇಸರ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT