ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಕೀಯ ಕ್ಷೇತ್ರದ ಶುದ್ಧೀಕರಣವೇ ಬಿಜೆಪಿ ಸಂಕಲ್ಪ

ಬೀಜದುಂಡೆ ಭೂಮಿ ಸಮರ್ಪಣಾ ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡ ಅರುಣ್‌ಕುಮಾರ್
Last Updated 4 ಜುಲೈ 2021, 12:34 IST
ಅಕ್ಷರ ಗಾತ್ರ

ಚಿತ್ರದುರ್ಗ: ‘ದೇಶದಲ್ಲಿನ ನಗರ, ಪಟ್ಟಣ, ಗ್ರಾಮಗಳ ಸ್ವಚ್ಛತೆಗೆ ಮಾತ್ರ ಪ್ರಧಾನಿ ಮೋದಿ ಅವರ ಸ್ವಚ್ಛ ಭಾರತ ಸೀಮಿತವಾಗಿಲ್ಲ. ರಾಜಕೀಯ ಸೇರಿ ವಿವಿಧ ಕ್ಷೇತ್ರದ ಶುದ್ಧೀಕರಣದ ಪರಿಕಲ್ಪನೆಯನ್ನು ಒಳಗೊಂಡಿದೆ’ ಎಂದು ಬಿಜೆಪಿ ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಅರುಣ್‌ಕುಮಾರ್ ಹೇಳಿದರು.

ಇಲ್ಲಿಯ ಜೋಗಿಮಟ್ಟಿ ಅರಣ್ಯ ಪ್ರದೇಶದಲ್ಲಿ ಡಾ. ಶ್ಯಾಮಪ್ರಸಾದ್ ಮುಖರ್ಜಿ ಅವರ ಜಯಂತಿ ಅಂಗವಾಗಿ ಬಿಜೆಪಿ ಜಿಲ್ಲಾ ಘಟಕದಿಂದ ಭಾನುವಾರ ಆಯೋಜಿಸಿದ್ದ ‘ಬೀಜದುಂಡೆ ಭೂಮಿ ಸಮರ್ಪಣಾ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ವಂಶ ಪರಂಪರೆ, ತುಷ್ಟೀಕರಣ, ಸ್ವಜನ ಪಕ್ಷಪಾತ, ಹಣದ ಪ್ರಾಬಲ್ಯ ಹಾಗೂ ಜಾತಿವಾದಗಳಿಂದ ರಾಜಕೀಯ ಕ್ಷೇತ್ರ ಮುಕ್ತವಾಗಬೇಕು ಎಂಬ ಉದ್ದೇಶದಿಂದ ಡಾ. ಶ್ಯಾಮಪ್ರಸಾದ್ ಮುಖರ್ಜಿ ಜನಸಂಘ ಕಟ್ಟಿ ಬೆಳೆಸಿದ್ದಾರೆ. ಆ ಕನಸುಗಳನ್ನು ಈಡೇರಿಸುವ ಸಂಕಲ್ಪ ತೊಟ್ಟು ಕೇಂದ್ರದ ಗೃಹ ಸಚಿವ ಅಮಿತ್ ಶಾ ಕೆಲಸ ಮಾಡುತ್ತಿದ್ದಾರೆ. ಆದ್ದರಿಂದ ಪಕ್ಷದ ಎಲ್ಲ ಕಾರ್ಯಕರ್ತರು ಕೈಜೋಡಿಸಿ ಇದನ್ನು ಸಾಕಾರಗೊಳಿಸಬೇಕು’ ಎಂದು ಸಲಹೆ ನೀಡಿದರು.

ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ್, ‘ಕರ್ನಾಟಕದ ಜನರಿಗಿಂತ ಕೇರಳದವರು ಉತ್ತಮ ಗಾಳಿ ಸೇವನೆಯ ಕಾರಣಕ್ಕೆ ಹೆಚ್ಚು ವರ್ಷ ಬದುಕುತ್ತಾರೆ. ಕೋವಿಡ್ ಸಂದರ್ಭದಲ್ಲಿ ನಾವು ಧಾರುಣ ಸ್ಥಿತಿ ಅನುಭವಿಸಿದ್ದೇವೆ. ಇದನ್ನು ಅರ್ಥ ಮಾಡಿಕೊಂಡು ಆಮ್ಲಜನಕ ಉತ್ಪಾದಿಸುವ ಮರ-ಗಿಡಗಳನ್ನು ಹೆಚ್ಚು ಬೆಳೆಸಬೇಕು’ ಎಂದು ಸಲಹೆ ನೀಡಿದರು.

ಇದೇ ವೇಳೆ ಜೋಗಿಮಟ್ಟಿ ಅರಣ್ಯ ಪ್ರದೇಶದೊಳಗೆ ಬಿಜೆಪಿಯ ನೂರಾರು ಕಾರ್ಯಕರ್ತರು ತಂಡಗಳಾಗಿ ಸಂಚರಿಸಿ 25 ಸಾವಿರ ಬೀಜದುಂಡೆಗಳನ್ನು ಎಸೆದರು.

ಸಂಸದ ಎ. ನಾರಾಯಣಸ್ವಾಮಿ, ಶಾಸಕರಾದ ಜಿ.ಎಚ್. ತಿಪ್ಪಾರೆಡ್ಡಿ, ಎಂ. ಚಂದ್ರಪ್ಪ, ಬಿಜೆಪಿ ರಾಜ್ಯ ಘಟಕದ ಕಾರ್ಯದರ್ಶಿ ಕೆ.ಎಸ್. ನವೀನ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ. ಬದರೀನಾಥ್, ಮುಖಂಡರಾದ ಸಿದ್ದೇಶ್ ಯಾದವ್, ಸುರೇಶ್ ಸಿದ್ದಾಪುರ, ಜಯಪಾಲಯ್ಯ, ನಾಗರಾಜ್ ನಂದಿ, ಜಿ.ಎಸ್. ಅನಿತ್, ಸಿದ್ದಾರ್ಥ್, ವೆಂಕಟೇಶ್ ಯಾದವ್, ಶಶಿಧರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT