ಸೋಮವಾರ, ಸೆಪ್ಟೆಂಬರ್ 27, 2021
23 °C
ತಂದೆ ರವಿಕುಮಾರ್‌ಗೆ ಗಾಯ; ಅಮ್ಮ , ಅಕ್ಕ ಬಚಾವ್‌

ಗೋಡೆ ಕುಸಿದು ಬಾಲಕಿ ಸಾವು: ಕುಟುಂಬದವರ ಆಕ್ರಂದನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಜಾಜೂರು: ಸಮೀಪದ ಬಾಣಗೆರೆ ಗ್ರಾಮದಲ್ಲಿ ಶನಿವಾರ ಮನೆಯ ಗೋಡೆ ಕುಸಿದು ಬಾಲಕಿಯೊಬ್ಬಳು ಮೃತಪಟ್ಟಿದ್ದಾಳೆ.

ರವಿಕುಮಾರ್‌ ಅವರ ಮನೆಯ ಗೋಡೆ ಕುಸಿದು ಬಿದ್ದು, ಅವರ ಎರಡನೇ ಮಗಳು ಅರ್ಪಿತಾ (13) ಮೃತ ಪಟ್ಟಿದ್ದಾಳೆ. ಈಕೆ ಚಿಕ್ಕಜಾಜೂರಿನ ಈಡಿಗರ ಓಬಳಸ್ವಾಮಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 7ನೇ ತರಗತಿಯಲ್ಲಿ ಓದುತ್ತಿದ್ದಳು. ಹಲವು ದಿನಗಳಿಂದ ಸುರಿಯುತ್ತಿದ್ದ ಮಳೆಯಿಂದಾಗಿ ಗೋಡೆ ಬಿರುಕು ಬಿಟ್ಟಿತ್ತು. ಶನಿವಾರ ಬೆಳಿಗ್ಗೆ 5.30ಕ್ಕೆ ಕುಸಿದು ಬಿದ್ದಿತು.

‘ಅಮ್ಮ ಕವಿತಾ ಮತ್ತು ನಾನು ಕಸ ಗುಡಿಸಲು ಮನೆಯ ಹೊರಗೆ ಬಂದಿದ್ದೆವು. ಆಗ ಗೋಡೆ ಬಿದ್ದಿತು. ಗೋಡೆಯ ಪಕ್ಕವೇ ಅರ್ಪಿತಾ ಮಲಗಿದ್ದಳು. ಅಪ್ಪ ಸ್ವಲ್ಪ ದೂರದಲ್ಲಿ ಮಲಗಿದ್ದರು. ಅಕ್ಕಪಕ್ಕದವರು ಬಂದು ಗೋಡೆಯ ಕೆಳಗೆ ಸಿಲುಕಿದ್ದ ತಂಗಿ ಹಾಗೂ ಅಪ್ಪನನ್ನು ಹೊರಗೆ ತೆಗೆಯುವ ಕಾರ್ಯದಲ್ಲಿ ನಿರತರಾದರು. ಅಪ್ಪನಿಗೆ ಸ್ವಲ್ಪ ಗಾಯಗಳಾಗಿದ್ದವು. ಅರ್ಪಿತಾಳಿಗೆ ಜ್ಞಾನವಿಲ್ಲದಂತಾಗಿತ್ತು. ತಕ್ಷಣ ಅವಳನ್ನು ಹೊಳಲ್ಕೆರೆ ಆಸ್ಪತ್ರೆಗೆ ಕರೆದುಕೊಂಡು ಹೋದರು. ಆದರೆ, ಆ ವೇಳೆಗಾಗಲೇ ಅವಳು ಮೃತಪಟ್ಟಿದ್ದಾಳೆ ಎಂದು ವೈದ್ಯರು ಹೇಳಿದರಂತೆ’ ಎಂದು ಅರ್ಪಿತಾಳ ಅಕ್ಕ ಅಮೂಲ್ಯಾ ಅಳುತ್ತ ಮಾಹಿತಿ ನೀಡಿದಳು.

ಮಗಳ ಮೇಲೆ ಗೋಡೆ ಕುಸಿದು ಬಿದ್ದು ಆಕೆಗೆ ಗಾಯಗಳಾಗಿವೆ ಅಷ್ಟೇ ಎಂದು ಅಕ್ಕಪಕ್ಕದವರು ಸಮಾಧಾನ ಮಾಡಿದರೂ, ತಾಯಿ ಕವಿತಾ ರೋದಿಸುತ್ತಿದ್ದುದು ಮನಕಲಕುವಂತಿತ್ತು. ನಂತರ, ಮಗಳು ಮೃತಳಾಗಿದ್ದಾಳೆ ಎಂಬ ಮಾಹಿತಿ ತಿಳಿಯುತ್ತಿದ್ದಂತೆ ತಾಯಿ ಹಾಗೂ ಅಮೂಲ್ಯ ಅವರ ಅಳು ಹೆಚ್ಚಾಯಿತು. ಯಾರು ಎಷ್ಟೇ ಸಮಾಧಾನ ಮಾಡಿದರೂ ಅಳು ನಿಲ್ಲಲಿಲ್ಲ. ಆಸ್ಪತ್ರೆಯಿಂದ ಬಾಲಕಿಯ ಮೃತ ದೇಹ ಬರುತ್ತಿದ್ದಂತೆ ತಾಯಿಯ ದುಃಖ ಮತ್ತಷ್ಟು ಹೆಚ್ಚಾಯಿತು.

ವಿಷಯ ತಿಳಿದ ಚಿಕ್ಕಜಾಜೂರು ಎಸ್‌ಐ ಬಾಹುಬಲಿ ಎಂ. ಪಡನಾಡ, ಅಪರಾಧ ವಿಭಾಗದ ಎಸ್‌ಐ ಆರ್‌.ಡಿ. ಸ್ವಾಮಿ ಮತ್ತಿತರರು ಸ್ಥಳಕ್ಕೆ ಬಂದು ಮಾಹಿತಿ ಪಡೆದರು. ನಂತರ, ಚಿಕ್ಕಜಾಜೂರು ಗ್ರಾಮ ಪಂಚಾಯಿತಿ ಉಪಾದ್ಯಕ್ಷ ಪಿ.ಎಸ್‌. ಮೂರ್ತಿ, ಮಾಜಿ ಅಧ್ಯಕ್ಷ ಡಿ.ಸಿ. ಮೋಹನ್‌ ಬಂದು ಸಂತ್ರಸ್ತ ಕುಟುಂಬಕ್ಕೆ ಸಾಂತ್ವನ ಹೇಳಿದರು.

ಕೇಂದ್ರ ಸಚಿವ ಎ. ನಾರಾಯಣಸ್ವಾಮಿ ಅವರ ಕಡೆಯಿಂದ ವೈಯಕ್ತಿಕವಾಗಿ ₹ 20,000ವನ್ನು ತಾಲ್ಲೂಕು ಬಿಜೆಪಿ ಮಂಡಲ ಅಧ್ಯಕ್ಷರಾದ ಸಿದ್ಧೇಶ್‌ ಬಾಲಕಿಯ ಕುಟುಂಬಕ್ಕೆ ನೀಡಿದರು. ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಪಿ.ಎಸ್‌. ಮೂರ್ತಿ ವೈಯಕ್ತಿಕವಾಗಿ ₹ 10,000 ಹಾಗೂ ಗ್ರಾಮ ಪಂಚಾಯಿತಿ ವತಿಯಿಂದ ₹ 10,000 ನೀಡಿದರು. ಶನಿವಾರ ಮಧ್ಯಾಹ್ನ ಅರ್ಪಿತಾಳ ಅಂತ್ಯ ಸಂಸ್ಕಾರ ನಡೆಯಿತು.

ಚಿಕ್ಕಜಾಜೂರು ಗ್ರಾಮ ಪಂಚಾಯಿತಿ ಸದಸ್ಯರಾದ ನಾಗರಾಜ್‌, ಗೋವಿಂದಪ್ಪ, ಗಂಗಣ್ಣ, ಶ್ರೀಕಾಂತ್‌, ಬಿಜೆಪಿ ಮುಖಂಡ ಕುಮಾರ್‌, ಗ್ರಾಮದ ಮುಖಂಡರು ಇದ್ದರು.

‘ಪರಿಶಿಷ್ಟ ಜಾತಿಯವರಾದ ಬಾಲಕಿಯ ತಂದೆ ರವಿಕುಮಾರ್‌ ಬಡವರಾಗಿದ್ದು, ಕೂಲಿಯಿಂದ ಜೀವನ ನಡೆಸುತ್ತಿದ್ದಾರೆ. ಅವರಿಗೆ ಮನೆ ಇಲ್ಲದೇ ಬೀದಿಯಲ್ಲಿ ನಿಲ್ಲುವಂತಾಗಿದೆ. ಆದ್ದರಿಂದ, ಜಿಲ್ಲಾಧಿಕಾರಿ ತಕ್ಷಣ ಈ ಕುಟುಂಬಕ್ಕೆ ಮನೆಯನ್ನು ನಿರ್ಮಿಸಿಕೊಡಲು ವ್ಯವಸ್ಥೆ ಮಾಡಬೇಕು. ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ₹ 5 ಲಕ್ಷವನ್ನು ಬಾಲಕಿಯ ಕುಟುಂಬಕ್ಕೆ ನೀಡಬೇಕು’ ಎಂದು ಕೇಂದ್ರ ಸಚಿವರಾದ ಎ. ನಾರಾಯಣಸ್ವಾಮಿ ಜಿಲ್ಲಾಧಿಕಾರಿಗೆ ದೂರವಾಣಿ ಮೂಲಕ ತಿಳಿಸಿದ್ದಾರೆ. ಮೃತ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡುವಂತೆ ಶಾಸಕ ಎಂ. ಚಂದ್ರಪ್ಪ ಸಹ ಜಿಲ್ಲಾಧಿಕಾರಿಯವರನ್ನು ಒತ್ತಾಯಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.