ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಜಾಬ್ ವಿವಾದ: ಲಾಠಿ ಬೀಸಿ ಗುಂಪು ಚದುರಿಸಿದ ಪೊಲೀಸರು

ಕೇಸರಿ, ನೀಲಿ ಶಾಲು ಧರಿಸಿದ ವಿದ್ಯಾರ್ಥಿಗಳ ಮಾತಿನ ಚಕಮಕಿ
Last Updated 9 ಫೆಬ್ರುವರಿ 2022, 4:00 IST
ಅಕ್ಷರ ಗಾತ್ರ

ಹೊಸದುರ್ಗ: ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಿಜಾಬ್‌–ಕೇಸರಿ ಹಾಗೂ ನೀಲಿ ಶಾಲು ವಿವಾದ ವಿದ್ಯಾರ್ಥಿಗಳ ನಡುವಿನ ಘರ್ಷಣೆಗೆ ಕಾರಣವಾಗಿದ್ದು, ಪಟ್ಟಣದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಪರಿಸ್ಥಿತಿಯನ್ನು ತಿಳಿಗೊಳಿಸಲು ಪೊಲೀಸರು ಲಾಠಿ ಬೀಸಿ ವಿದ್ಯಾರ್ಥಿಗಳನ್ನು ಚದುರಿಸಿದ್ದಾರೆ. ಮಂಗಳವಾರದ ಎಲ್ಲಾ ತರಗತಿಗಳನ್ನು ರದ್ದು ಮಾಡಲಾಯಿತು.

ಕೇಸರಿ ಶಾಲು ಧರಿಸಿ ಮಂಗಳವಾರ ಕಾಲೇಜಿಗೆ ಹಾಜರಾದ ವಿದ್ಯಾರ್ಥಿಗಳ ಗುಂಪನ್ನು ಸಿಬ್ಬಂದಿ ಪ್ರವೇಶ ದ್ವಾರದಲ್ಲೇ ತಡೆದರು. ಹಿಜಾಬ್‌ ಧರಿಸಿದ ವಿದ್ಯಾರ್ಥಿಗಳು ಅದಾಗಲೇ ಕಾಲೇಜು ಪ್ರವೇಶಿಸಿದ್ದರು. ಇದರಿಂದ ಕುಪಿತಗೊಂಡ ಕೇಸರಿ ಶಾಲು ಧರಿಸಿದ ವಿದ್ಯಾರ್ಥಿಗಳ ಗುಂಪು ಕಾಲೇಜು ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿತು. ಪ್ರವೇಶ ಕಲ್ಪಿಸುವಂತೆ ಆಗ್ರಹಿಸಿ ಪ್ರತಿಭಟನೆ ಆರಂಭಿಸಿತು.

ಪ್ರತಿನಿತ್ಯ ನಡೆಯುವಂತೆ ಮಂಗಳವಾರ ಬಿ.ಎಸ್ಸಿ ವಿದ್ಯಾರ್ಥಿ ಗಳಿಗೆ ಬೆಳಿಗ್ಗೆ 8ಕ್ಕೆ ತರಗತಿಗಳು ಆರಂಭವಾಗಿದ್ದು, ಬಿ.ಎ, ಬಿ.ಕಾಂ ತರಗತಿಗಳು ಬೆಳಿಗ್ಗೆ 9ಕ್ಕೆ ಆರಂಭವಾಗಿದ್ದವು. 11 ಗಂಟೆಯವರೆಗೆ ಸುಗಮವಾಗಿ ನಡೆಯುತ್ತಿದ್ದವು. ಕಾಲೇಜಿನ ಗೇಟ್‌ನಲ್ಲೇ ವಿದ್ಯಾರ್ಥಿಗಳ ಗುರುತಿನ ಚೀಟಿ ನೋಡಿ ಕಾಲೇಜಿನ ಒಳಗೆ ಬಿಡಲಾಗುತ್ತಿತ್ತು. ಆದರೆ ವಿದ್ಯಾರ್ಥಿಗಳು ಕೇಸರ್ ಟವಲ್ ಪರಿಶೀಲಿಸುತ್ತಿದ್ದಾರೆ ಎಂದು ತಪ್ಪಾಗಿ ಭಾವಿಸಿದ್ದರು. ಇದರ ಜೊತೆಗೆ ಕಾಲೇಜು ಬ್ಯಾಗ್‌ಗಳಲ್ಲಿ ಪರಿಶೀಲಿಸಿದಾಗ ಕೇಸರಿ ಟವಲ್ ಇರುವುದು ಕಂಡು ಬಂತು. ಆ ವೇಳೆ ಅವರನ್ನು ತರಗತಿಗಳಿಗೆ ಬಿಡದೇ ಒಂದು ಗಂಟೆ ಕಾಲ ಹೊರಗೆ ನಿಲ್ಲಿಸಲಾಗಿತ್ತು.

‘ಈ ಎಲ್ಲಾ ನಿಯಮಗಳು ನಮಗೆ ಮಾತ್ರನಾ ಅಥವಾ ಎಲ್ಲಾ ವಿದ್ಯಾರ್ಥಿಗಳಿಗೂ ಅನ್ವಯವಾಗುತ್ತಾ ಎಂದು ಕೆಲವು ವಿದ್ಯಾರ್ಥಿಗಳು ಆಕ್ಷೇಪ ವ್ಯಕ್ತಪಡಿಸಿದರು. ಅಲ್ಲದೇ ಜೈಶ್ರೀರಾಮ್ ಎಂದು ಘೋಷಣೆ ಕೂಗುತ್ತಾ ರಸ್ತೆಗೆ ತೆರಳಿದರು.

ಬೆಳಿಗ್ಗೆ 11.30ಕ್ಕೆ ಕೇಸರಿ ಟವಲ್ ಧರಿಸಿದ 30 ವಿದ್ಯಾರ್ಥಿಗಳು ಏಕಾಏಕಿ ಕಾಂಪೌಂಡ್ ಹಾರಿ ತರಗತಿಗಳಿಗೆ ಹೋಗಲು ಯತ್ನಿಸಿದರು. ಈ ವೇಳೆ ಪ್ರಾಂಶುಪಾಲ ಮಂಜುನಾಥ್ ಅವರು ‘ವಿದ್ಯಾರ್ಥಿಗಳು ಈ ರೀತಿ ವರ್ತಿಸುವುದು ತಪ್ಪು, ಎಲ್ಲರೂ ಒಂದಾಗಿ ಬಾಳಬೇಕು. ಇಲ್ಲಿ ಯಾವುದೇ ಜಾತಿ, ಧರ್ಮದ ಭೇದವಿಲ್ಲ. ನಿಮ್ಮ ವರ್ತನೆ ಸರಿಯಿಲ್ಲ, ಕಾಲೇಜಿನ ನಿಯಮಗಳನ್ನು ಪಾಲನೆ ಮಾಡಬೇಕು’ ಎಂದರು.

ಆಗ ಒಬ್ಬ ವಿದ್ಯಾರ್ಥಿ, ‘ಹಿಜಾಬ್ ಧರಿಸಿರುವವರಿಗೆ ತರಗತಿಗಳಿಗೆ ಪ್ರವೇಶವಿದೆ. ಕೇಸರಿ ಟವಲ್ ಧರಿಸಿರುವವರಿಗೆ ಪ್ರವೇಶ ಯಾಕಿಲ್ಲ. ಇದೆಂತಹ ನಿಯಮ’ ಎಂದು ಪ್ರಾಂಶುಪಾಲರ ಜೊತೆ ಮಾತಿಗಿಳಿದ. ಪ್ರಾಂಶುಪಾಲರು ಮನವೊಲಿಸಲು ಎಷ್ಟೇ ಪ್ರಯತ್ನಿಸಿದರೂ ವಿದ್ಯಾರ್ಥಿಗಳು ಕೇಳುವ ಸ್ಥಿತಿಯಲ್ಲಿರಲಿಲ್ಲ.

ಆಗ ಪ್ರಾಂಶುಪಾಲರು ಶಿವಮೊಗ್ಗದ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ಪ್ರಾದೇಶಿಕ ಜಂಟಿ ನಿರ್ದೇಶಕರಿಗೆ ದೂರವಾಣಿ ಕರೆ ಮಾಡಿ ನಡೆಯುತ್ತಿರುವ ವಿದ್ಯಮಾನಗಳನ್ನು ವಿವರಿಸಿದರು. ಕೂಡಲೇ ತರಗತಿಗಳನ್ನು ಬಂದ್ ಮಾಡುವಂತೆ ಜಂಟಿ ನಿರ್ದೇಶಕರು ಆದೇಶಿಸಿದರು. ಆ ವೇಳೆ ಕಾಲೇಜನ್ನು ಬಂದ್ ಮಾಡಿದ ಪ್ರಾಂಶುಪಾಲರು ವಿದ್ಯಾರ್ಥಿಗಳನ್ನು ಮನೆಗೆ ಹೋಗುವಂತೆ ಸೂಚಿಸಿದರು.

ಬಳಿಕ ಕೆಲವು ಮುಸ್ಲಿಂ ಯುವಕರು ಹಾಗೂ ಹೊಸದುರ್ಗ ಭೀಮ್ ಸಂಘಟನೆಯ ಯುವಕರು ಜೈಭೀಮ್ ಘೋಷಣೆ ಕೂಗುತ್ತಾ ನೀಲಿ ಟವಲ್ ಧರಿಸಿ, ಕಾಲೇಜು ಆವರಣದೊಳಗೆ ಪ್ರವೇಶಿಸಿದರು. ಟಿ.ಬಿ. ವೃತ್ತದಲ್ಲಿ ಕೇಸರಿ ಹಾಗೂ ನೀಲಿ ಟವಲ್‌ ಧರಿಸಿದ ಯುವಕರ ನಡುವೆ ಮಾತಿನ ಚಕಮಕಿ ನಡೆಯಿತು. ನೀಲಿ ಟವಲ್‌ ಧರಿಸಿದವರು ಇಲ್ಲಿನ ಅಂಬೇಡ್ಕರ್ ಪ್ರತಿಮೆಗೆ ಹೂವಿನ ಹಾರ ಹಾಕಿ, ಗಾಂಧಿ ವೃತ್ತದವರೆಗೂ ಜೈಭೀಮ್ ಘೋಷಣೆ ಕೂಗುತ್ತಾ ಸಾಗಿದರು. ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ಗುಂಪನ್ನು ಚದುರಿಸಿ, ಪರಿಸ್ಥಿತಿ ತಿಳಿಗೊಳಿಸಿದರು.

‘ಹಿಜಾಬ್ ಧರಿಸುವುದು ಮುಸ್ಲಿಂ ಸಮುದಾಯದ ಧಾರ್ಮಿಕ ಆಚರಣೆ‌. ಅದರಿಂದ ಯಾರಿಗೂ ತೊಂದರೆಯಿಲ್ಲ. ತರಗತಿ ಪ್ರವೇಶಿಸಿದ ಕೂಡಲೇ ಅವರು ಹಿಜಾಬ್ ತೆಗೆಯುತ್ತಾರೆ. ಪಿಯುಸಿ ಮುಗಿಸಿದ ಎಲ್ಲಾ ಮುಸ್ಲಿಂ ಮಹಿಳೆಯರು ಹಿಜಾಬ್ ಧರಿಸುವುದು ಸಂಪ್ರದಾಯ. ಇಷ್ಟು ದಿನ ಸಹೋದರತ್ವದಿಂದ ಬಾಳುತ್ತಿದ್ದವರು ಈಗ ಏಕೆ ವಿರೋಧ ಮಾಡುತ್ತಿದ್ದಾರೆ’ ಎಂಬುದು ವಿದ್ಯಾರ್ಥಿ ಸರ್ಫರಾಜ್ ಪ್ರಶ್ನೆ.

‘ಅಂಬೇಡ್ಕರ್ ಕೊಟ್ಟ ಸಂವಿಧಾನದಲ್ಲಿ ಸರ್ವರೂ ಒಂದೇ ಎಂದು ದಾಖಲಿಸಲಾಗಿದೆ. ಕೇಸರಿ ಟವಲ್ ಹಾಕಿರುವ ಕಾರಣಕ್ಕೆ ನಮ್ಮನ್ನು ತರಗತಿಗೆ ಪ್ರವೇಶಿಸಲು ಅನುಮತಿ ನೀಡುತ್ತಿಲ್ಲ. ಕಾಲೇಜಿನಲ್ಲಿ ಸಮವಸ್ತ್ರ ಇಲ್ಲ ಎಂದು ಅವರಿಷ್ಟದ ಬಟ್ಟೆ ತೊಡುತ್ತಾರೆ. ನಾವೂ ಹಾಗೆಯೇ ಕೇಸರಿ ಟವಲ್ ಧರಿಸುತ್ತೇವೆ. ಸಮವಸ್ತ್ರ ಕಡ್ಡಾಯ ಮಾಡಲಿ. ಸಮವಸ್ತ್ರವನ್ನೇ ಧರಿಸುತ್ತೇವೆ’ ಎಂದು ವಿದ್ಯಾರ್ಥಿನಿ ಲಿಖಿತ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT