ಭಾನುವಾರ, ಸೆಪ್ಟೆಂಬರ್ 19, 2021
23 °C
ಸಾರಿಗೆ ಸಚಿವ ಬಿ.ಶ್ರೀರಾಮುಲು ಮೇಲಿದೆ ಜಿಲ್ಲೆಯ ಜನರ ನಿರೀಕ್ಷೆ

ಚಿತ್ರದುರ್ಗ: ಕೈಗೂಡಬೇಕಿದೆ ಹೈಟೆಕ್‌ ಬಸ್‌ ನಿಲ್ದಾಣದ ಕನಸು

ಜಿ.ಬಿ.ನಾಗರಾಜ್‌ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ಐತಿಹಾಸಿಕ ನಗರಿಯಲ್ಲೊಂದು ಹೈಟೆಕ್‌ ಬಸ್‌ ನಿಲ್ದಾಣ ನಿರ್ಮಿಸಬೇಕೆಂಬ ಬೇಡಿಕೆ ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿದೆ. ಜಿಲ್ಲೆಯವರೇ ಆಗಿರುವ ಬಿ.ಶ್ರೀರಾಮುಲು ಸಾರಿಗೆ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದರಿಂದ ಈ ಕನಸು ಇನ್ನಾದರೂ ಕೈಗೂಡಬಹುದೇ ಎಂಬ ನಿರೀಕ್ಷೆ ಜನರಲ್ಲಿ ಹೆಚ್ಚಾಗಿದೆ.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (ಕೆಎಸ್‌ಆರ್‌ಟಿಸಿ) ಚಿತ್ರದುರ್ಗ ವಿಭಾಗ ಆರಂಭವಾಗಿ ಹಲವು ವರ್ಷಗಳು ಕಳೆದಿವೆ. ಚಳ್ಳಕೆರೆ, ಹೊಸದುರ್ಗ ಹಾಗೂ ಪಾವಗಡದ ಘಟಕಗಳನ್ನು ಒಳಗೊಂಡ ವಿಭಾಗದಲ್ಲಿ ಹಲವು ಸಮಸ್ಯೆಗಳಿವೆ. ಕೋವಿಡ್‌ ಕಾಣಿಸಿಕೊಂಡ ಬಳಿಕ ಸಮಸ್ಯೆಗಳ ತೀವ್ರತೆ ಇನ್ನೂ ಹೆಚ್ಚಾಗಿದೆ. ಇವುಗಳನ್ನು ಸಚಿವರು ನಿಭಾಯಿಸಿ ಜಿಲ್ಲೆಯ ಅಗತ್ಯಗಳನ್ನು ಹೇಗೆ ಪೂರೈಸಬಲ್ಲರು ಎಂಬ ಕುತೂಹಲ ಮೂಡಿದೆ.

ಚಿತ್ರದುರ್ಗ ನಗರದಲ್ಲಿರುವ ಬಸ್‌ ನಿಲ್ದಾಣ ಕಿರಿದಾಗಿದೆ. ಕುಡಿಯುವ ನೀರು ಸೇರಿ ಹಲವು ಸೌಲಭ್ಯಗಳ ಕೊರತೆ ಇದೆ. ಈ ನಿಲ್ದಾಣದ ಮೂಲಕ ನಿತ್ಯ ನೂರಾರು ಬಸ್‌ಗಳು ಸಂಚರಿಸುತ್ತವೆ. ಬೆಳಿಗ್ಗೆ, ಮಧ್ಯಾಹ್ನ ಹಾಗೂ ಸಂಜೆಯ ಸಮಯದಲ್ಲಿ ಬಸ್‌ ನಿಲ್ದಾಣದಲ್ಲಿ ಕಾಲಿಡಲು ಸ್ಥಳಾವಕಾಶ ಇಲ್ಲದಷ್ಟು ಬಸ್‌ಗಳಿರುತ್ತವೆ. ಬೆಂಗಳೂರಿಗೆ ಅತಿ ಹೆಚ್ಚು ಬಸ್‌ಗಳು ಸಂಚರಿಸುತ್ತಿದ್ದರೂ ಮೂರು ಪ್ಲಾಟ್‌ಫಾರ್ಮ್‌ಗಳನ್ನು ನಿಗದಿಪಡಿಸಲಾಗಿದೆ. ಜಾಗದ ಕೊರತೆಯಿಂದ ಅನೇಕ ಬಸ್‌ಗಳನ್ನು ಎಲ್ಲೆಂದರಲ್ಲಿ ನಿಲುಗಡೆ ಮಾಡಲಾಗುತ್ತಿದೆ.

‘ಬಸ್‌ಗಳು ಹೆಚ್ಚಾಗಿದ್ದ ಸಂದರ್ಭದಲ್ಲಿ ನಿಲ್ದಾಣಕ್ಕೆ ಬರುವುದು ಕಿರಿಕಿರಿ ಅನಿಸುತ್ತದೆ. ಪ್ರಯಾಣಿಕರಿಗೆ ಸೇವೆ ಒದಗಿಸಲು ಸರಿಯಾದ ಪ್ಲಾಟ್‌ಫಾರ್ಮ್‌ ಕೂಡ ಸಿಗುವುದಿಲ್ಲ. ಸಂಚಾರ ದಟ್ಟಣೆ ಉಂಟಾಗಿ ಅಪಘಾತ ಸಂಭವಿಸಿದ ನಿದರ್ಶನಗಳೂ ಇವೆ’ ಎಂದು ಚಾಲಕರೊಬ್ಬರು ಬೇಸರ ಹೊರಹಾಕಿದರು.

ಬಸ್‌ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳು ಕಿರಿದಾಗಿವೆ. ಪುಣೆ–ಬೆಂಗಳೂರು ರಾಷ್ಟ್ರೀಯ ಹೆದ್ದಾರಿ, ಮಂಗಳೂರು–ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿಯ ಮೂಲಕ ಸಂಚರಿಸುವ ಬಸ್‌ಗಳು ಬಸ್‌ ನಿಲ್ದಾಣ ತಲುಪಲು ಸಂಚಾರ ದಟ್ಟಣೆಯಲ್ಲಿ ಸಿಲುಕಬೇಕಿದೆ. ನಗರದ ಮಧ್ಯಭಾಗದಲ್ಲಿರುವ ನಿಲ್ದಾಣಕ್ಕೆ ಬರುವುದು ಹಾಗೂ ಹೊರ ಹೋಗುವುದು ಸಮಸ್ಯೆಯಾಗಿ ಪರಿಣಮಿಸಿದೆ. ಸುಗಮ ಸಂಚಾರಕ್ಕೆ ಅನುಕೂಲವಾಗುವ ಸ್ಥಳದಲ್ಲಿ ಬಸ್‌ ನಿಲ್ದಾಣವಿದ್ದರೆ ಸೂಕ್ತ ಎಂಬುದು ಚಾಲಕರು ಹಾಗೂ ಪ್ರಯಾಣಿಕರ ಒತ್ತಾಯ.

ಈ ಸಮಸ್ಯೆಗಳನ್ನು ಮನಗಂಡು ಪ್ರತ್ಯೇಕ ಹಾಗೂ ಸುಸಜ್ಜಿತ ಬಸ್‌ ನಿಲ್ದಾಣ ನಿರ್ಮಾಣ ಮಾಡಬೇಕು ಎಂಬ ಬೇಡಿಕೆ ಹಲವು ವರ್ಷಗಳ ಹಿಂದೆ ಮುನ್ನೆಲೆಗೆ ಬಂದಿತ್ತು. ಹೈಟೆಕ್‌ ಬಸ್‌ ನಿಲ್ದಾಣಕ್ಕೆ ಬಿ.ಡಿ.ರಸ್ತೆಯ ಎಲ್‌ಐಸಿ ಮುಂಭಾಗದಲ್ಲಿರುವ ಕೆಎಸ್‌ಆರ್‌ಟಿಸಿ ಡಿಪೊ ಜಾಗ ಗುರುತಿಸಲಾಗಿತ್ತು. ಕ್ರಿಯಾ ಯೋಜನೆ ಸಿದ್ಧಪಡಿಸುವ ಹಂತದಲ್ಲೇ ಇದು ನನೆಗುದಿಗೆ ಬಿದ್ದಿತು.

ಕೆಎಸ್‌ಆರ್‌ಟಿಸಿಗೆ ಸೇರಿ 11 ಎಕರೆ ಜಾಗ ಇಲ್ಲಿದೆ. ಮೂರು ಎಕರೆಯಲ್ಲಿ ಡಿಪೊ ಇದ್ದು, 9 ಎಕರೆ ಭೂಮಿ ಪಾಳುಬಿದ್ದಿದೆ. ಪುಣೆ–ಬೆಂಗಳೂರು ರಾಷ್ಟ್ರೀಯ ಹೆದ್ದಾರಿಗೆ ಸಮೀಪದಲ್ಲೇ ಇರುವ ಈ ಜಾಗ ಹೈಟೆಕ್‌ ಬಸ್‌ ನಿಲ್ದಾಣಕ್ಕೆ ಸೂಕ್ತವಾಗಿದೆ. ವಾಣಿಜ್ಯ ಮಳಿಗೆಯ ಜೊತೆಗೆ ನಿಲ್ದಾಣ ನಿರ್ಮಿಸಿದರೆ ನಿಗಮಕ್ಕೂ ಆದಾಯ ಬರುವ ಸಾಧ್ಯತೆ ಇದೆ. 2018ರಲ್ಲಿ ಸಾರಿಗೆ ಸಚಿವರಾಗಿದ್ದ ಡಿ.ಸಿ. ತಮ್ಮಣ್ಣ ಸ್ಥಳ ಪರಿಶೀಲನೆ ಕೂಡ ಮಾಡಿದ್ದರು. ಆದರೆ, ಇದು ಕಾರ್ಯರೂಪಕ್ಕೆ ಬರಲಿಲ್ಲ.

ಅಸಮರ್ಪಕ ನಗರ ಸಾರಿಗೆ
ಜಿಲ್ಲಾ ಕೇಂದ್ರವಾದ ಚಿತ್ರದುರ್ಗದಲ್ಲಿ ನಗರ ಸಾರಿಗೆ ವ್ಯವಸ್ಥೆ ಅಸಮರ್ಪಕವಾಗಿದೆ. ನಗರದ ಪ್ರಮುಖ ಬಡಾವಣೆ, ಪ್ರವಾಸಿ ತಾಣಗಳಿಗೆ ಸಂಪರ್ಕ ಕಲ್ಪಸುವ ಬಸ್‌ ವ್ಯವಸ್ಥೆ ಇಲ್ಲಿಲ್ಲ.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ನಗರ ಸಾರಿಗೆಗೆ ಹತ್ತು ಬಸ್‌ಗಳನ್ನು ಮೀಸಲಿಟ್ಟಿದೆ. ಹತ್ತಕ್ಕೂ ಹೆಚ್ಚು ಮಾರ್ಗಗಳನ್ನು ಗುರುತಿಸಲಾಗಿದೆ. ನಿತ್ಯ ಬೆಳಿಗ್ಗೆ 7ರಿಂದ ರಾತ್ರಿ 7ರವರೆಗೆ ಸೇವೆ ಲಭ್ಯವಿದೆ. ಸಕಾಲಕ್ಕೆ ಬಸ್‌ ಸಂಚರಿಸುವುದಿಲ್ಲ ಎಂಬ ಆರೋಪಗಳಿವೆ.

ಪ್ರತಿ ತಾಲ್ಲೂಕಿಗೆ ಬೇಕಿದೆ ಘಟಕ
ಜಿಲ್ಲೆಯ ಮೂರು ತಾಲ್ಲೂಕಿನಲ್ಲಿ ಇನ್ನೂ ಕೆಎಸ್‌ಆರ್‌ಟಿಸಿ ಘಟಕಗಳಿಲ್ಲ. ಪ್ರತಿ ತಾಲ್ಲೂಕಿನಲ್ಲಿ ಘಟಕ ನಿರ್ಮಿಸುವಂತೆ ಪ್ರಯಾಣಿಕರು ನಿಗಮದ ಎದುರು ಬೇಡಿಕೆ ಮುಂದಿಡುತ್ತಿದ್ದಾರೆ.

ಹಿರಿಯೂರಿನಲ್ಲಿ ಬಸ್‌ ನಿಲ್ದಾಣವಿದ್ದರೂ ಘಟಕ ಸ್ಥಾಪನೆಯಾಗಿಲ್ಲ. ಹೊಳಲ್ಕೆರೆಯಲ್ಲಿ ಈಗಷ್ಟೇ ಬಸ್‌ ನಿಲ್ದಾಣ ಸಜ್ಜಾಗಿದೆ. ಮೊಳಕಾಲ್ಮುರು ತಾಲ್ಲೂಕು ಕೇಂದ್ರದಲ್ಲಿ ಬಸ್‌ ನಿಲ್ದಾಣ ಹಾಗೂ ಘಟಕ ಎರಡೂ ಇಲ್ಲ. ಇದರಿಂದ ಸಾರಿಗೆ ಬಸ್‌ ಸೇವೆ ಪಡೆಯಲು ಜನರು ಕಷ್ಟಪಡುವಂತಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.