ಮಂಗಳವಾರ, ಡಿಸೆಂಬರ್ 1, 2020
23 °C

ಹೋರಾಟಗಾರರ ಬಾಯಿಗೆ ಬಟ್ಟೆ ಕಟ್ಟಿದ ಸರ್ಕಾರ: ಕೋಡಿಹಳ್ಳಿ ಚಂದ್ರಶೇಖರ್ ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಿರಿಯೂರು: ‘ದೇಶದಲ್ಲಿ ಕೋಟಿ ಕೋಟಿ ಜನರಿಗೆ ಕೊರೊನಾ ಸೋಂಕು ಬಂದು ಹೋಗಿದೆ. ಕೊರೊನಾ ಹೆಸರಿನಲ್ಲಿ ಜನರಲ್ಲಿ ಆತಂಕ ಸೃಷ್ಟಿಸಿ ಜನ ವಿರೋಧಿ ತೀರ್ಮಾನಗಳ ವಿರುದ್ಧ ದನಿ ಎತ್ತದಂತೆ ಸರ್ಕಾರ ಹೋರಾಟಗಾರರ ಬಾಯಿಗೆ ಬಟ್ಟೆ ಕಟ್ಟಿತು’ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ರಾಜ್ಯ ಘಟಕದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಆರೋಪಿಸಿದರು.

ನಗರದ ಗಾಂಧಿ ವೃತ್ತದಲ್ಲಿ ತಾಲ್ಲೂಕು ರೈತ ಸಂಘ ಹಾಗೂ ಹಸಿರು ಸೇನೆ ಕಚೇರಿಯನ್ನು ಉದ್ಘಾಟಿಸಿ ನಂತರ ಎಪಿಎಂಸಿ ಆವರಣದಲ್ಲಿ ನಡೆದ ರೈತ ಜಾಗೃತಿ ಸಮಾವೇಶಕ್ಕೆ ಚಾಲನೆ ನೀಡಿ ಮಾತನಾಡಿದರು.

‘ಕೊರೊನಾ ಭಯದಿಂದ ದೇಶದ ಜನರನ್ನು ಮುಕ್ತಗೊಳಿಸುವ ಬದಲು ಪ್ರಧಾನಿಯವರು ರೈತ ವಿರೋಧಿಯಾದ ಎಪಿಎಂಸಿ ಕಾಯ್ದೆಯನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸಿದರು. ಲಾಕ್‌ಡೌನ್ ಘೋಷಿಸಿ ಆರು ತಿಂಗಳು ದೇಶವನ್ನು ಅಭಿವೃದ್ಧಿ ಶೂನ್ಯ ಮಾಡಿದರು. ಪೊಲೀಸರ ಲಾಠಿಗೆ ಶಕ್ತಿ ಕೊಟ್ಟರು. ಹೂವು, ರೇಷ್ಮೆ ಬೆಳೆಗಾರರಿಗೆ ರಾಜ್ಯ ಸರ್ಕಾರ ಕೊಟ್ಟ ನೆರವು ಅಲ್ಪ. ಶೇಂಗಾ, ಈರುಳ್ಳಿ, ತೊಗರಿ ಸೇರಿದಂತೆ ಎಲ್ಲ ಬೆಳೆಗಳಿಗೆ ನಷ್ಟ ಪರಿಹಾರ ಕೊಡಬೇಕು. ಕೇಂದ್ರದಿಂದ ಬರಬೇಕಿರುವ ₹ 13 ಸಾವಿರ ಕೋಟಿ ಜಿಎಸ್‌ಟಿ ಬಾಕಿ ತರಿಸಿಕೊಂಡು ರೈತರಿಗೆ ಪರಿಹಾರ ನೀಡಬೇಕು’ ಎಂದು ಆಗ್ರಹಿಸಿದರು.

‘ಮತದಾರರಿಗೆ ಹೆಂಡ, ಹಣ ಹಂಚಿ ಉಪ ಚುನಾವಣೆ ನಡೆಸಿದ್ದಾಯಿತು. ಇನ್ನಾದರು ಸರ್ಕಾರ ಚುನಾವಣೆ ಗುಂಗಿನಿಂದ ಹೊರಬಂದು ರೈತರ ಸಮಸ್ಯೆಗಳ ಇತ್ಯರ್ಥಕ್ಕೆ ಮುಂದಾಗಬೇಕು. ಇಲ್ಲವಾದಲ್ಲಿ ಎಪಿಎಂಸಿ, ಭೂಸುಧಾರಣೆ ಕಾಯ್ದೆಗಳ ವಿರುದ್ಧ ಜನಾಂದೋಲನ ರೂಪಿಸಬೇಕಾಗುತ್ತದೆ’ ಎಂದು ಎಚ್ಚರಿಸಿದರು.

ಸಂಘದ ರಾಜ್ಯ ಘಟಕದ ಕಾರ್ಯಾಧ್ಯಕ್ಷ ಈಚಘಟ್ಟ ಸಿದ್ದವೀರಪ್ಪ, ‘ಜಿಲ್ಲೆಯಲ್ಲಿ ಬಿಜೆಪಿಯ ನಾಲ್ವರು ಶಾಸಕರು, ಒಬ್ಬರು ಸಚಿವರಿದ್ದರೂ ಪಕ್ಷ ನಿಷ್ಠೆಗಾಗಿ ರೈತಪರವಾದ ದನಿ ಎತ್ತುತ್ತಿಲ್ಲ. ಇಂತಹ ಶಾಸಕರು ನಮಗೆ ಬೇಕೆ ಎಂದು ರೈತರು ಚಿಂತಿಸಬೇಕಿದೆ. ರಸ್ತೆ, ಚೆಕ್ ಡ್ಯಾಂ, ಕಟ್ಟಡ ಕಟ್ಟಿದರೆ ಅವರ ಹೊಣೆಗಾರಿಕೆ ಮುಗಿಯಿತೇ? ಬಿಕ್ಕಟ್ಟಿನಲ್ಲಿರುವ ಕೃಷಿಯನ್ನು ಸುಧಾರಿಸುವುದು ಬೇಡವೇ?’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘72 ವರ್ಷಗಳಿಂದ ಜಿಲ್ಲೆಗೆ ನೀರಾವರಿ ವಿಚಾರದಲ್ಲಿ ಅನ್ಯಾಯವಾಗಿದೆ. ಸಂಘಟಿತ ಹೋರಾಟದ ಮೂಲಕ ವಾಣಿ ವಿಲಾಸ ಜಲಾಶಯ ಭರ್ತಿಯಾಗುವಂತೆ ಮಾಡಿ ಜಿಲ್ಲೆಯ ಎಲ್ಲ ಜನರಿಗೆ ನೀರು ಸಿಗುವಂತೆ ಮಾಡಬೇಕು. ವೇದಾವತಿ ನದಿ ಉಳಿಸುವ ಹೋರಾಟ ಮುಂದುವರಿಸೋಣ’ ಎಂದು ಮನವಿ ಮಾಡಿದರು.

ಸಂಘದ ತಾಲ್ಲೂಕು ಅಧ್ಯಕ್ಷ ಕೆ.ಟಿ.ತಿಪ್ಪೇಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಘಟಕದ ಉಪಾಧ್ಯಕ್ಷ ರೆಡ್ಡಿಹಳ್ಳಿ ವೀರಣ್ಣ, ಕೃಷಿಕ ಸಮಾಜದ ಅಧ್ಯಕ್ಷ ಎಚ್.ಆರ್.ತಿಮ್ಮಯ್ಯ, ಹಿರಿಯ ರೈತ ಮುಖಂಡ ಸಿ.ಸಿದ್ಧರಾಮಣ್ಣ, ಮಾತನಾಡಿದರು. ಕಸವನಹಳ್ಳಿ ರಮೇಶ್ ಸ್ವಾಗತಿಸಿದರು. ಜಿಲ್ಲಾಧ್ಯಕ್ಷ ಚಿಕ್ಕಕಟ್ಟಿಗೆರೆ ನಾಗರಾಜ್, ಆಲೂರು ವೀರಣ್ಣ, ಮಹಿಳಾ ವಿಭಾಗದ ಅಧ್ಯಕ್ಷೆ ಶಶಿಕಲಾ, ಅರಳೀಕೆರೆ ತಿಪ್ಪೇಸ್ವಾಮಿ, ತಿಮ್ಮಾರೆಡ್ಡಿ, ಷಫೀವುಲ್ಲಾ, ಕುಂದಲಗುರ ಶ್ರೀನಿವಾಸ್, ಸೋಮಣ್ಣ, ಬಬ್ಬೂರು ಸಿದ್ದಪ್ಪ ಅವರೂ ಉಪಸ್ಥಿತರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು