ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟರ್ಮ್ ಇನ್ಷೂರನ್ಸ್ ಪಾಲಿಸಿ; ಎಷ್ಟು ಸೂಕ್ತ

Last Updated 27 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ಈಗಿನ ದಿನಮಾನಗಳಲ್ಲಿ ಎಲ್ಲ ಮಾಹಿತಿಯನ್ನು ಬೆರಳೆಣಿಕೆಯಲ್ಲಿ ಪಡೆಯುವ ಕಾರಣ ಯಾವುದೇ ವಸ್ತುವನ್ನು ಖರೀದಿಸುವಾಗ ಆ ವಸ್ತುವಿನ ಬೆಲೆ ಬೇರೆ ಕಂಪನಿಗಳಲ್ಲಿ ಎಷ್ಟಿದೆ ಎಂದು ತುಲನಾತ್ಮಕವಾಗಿ ತಿಳಿಯುವುದು ಬಹು ಸುಲಭ. ಹಾಗೆಯೇ ಇಂದು ಜೀವ ವಿಮೆ ಪಡೆಯಬೇಕಾದರೆ ಕೇಂದ್ರ ಸರ್ಕಾರಿ ಸ್ವಾಮ್ಯದ ಎಲ್.ಐ.ಸಿ.(ಭಾರತೀಯ ಜೀವ ವಿಮಾ ನಿಗಮದ) ಜೊತೆಗೆ ಸುಮಾರು 23 ಖಾಸಗಿ ಜೀವ ವಿಮಾ ಕಂಪನಿಗಳೂ ದೇಶದ ಜನರಿಗೆ ಜೀವ ವಿಮೆ ಸೌಲಭ್ಯ ನೀಡುತ್ತಿವೆ.

ಇತ್ತೀಚಿನ ದಿನಗಳಲ್ಲಿ ಸಾಂಪ್ರದಾಯಿಕ ಹಾಗೂ ಲಾಭಾಂಶ ನೀಡುವ ಪಾಲಿಸಿಗಳ ಬದಲಾಗಿ, ಬಹಳಷ್ಟು ಜನರು ‘ಟರ್ಮ್ ಇನ್ಶುರನ್ಸ್‌’ ಪಾಲಿಸಿಗಳನ್ನು ಕೊಳ್ಳಲು ಮುಂದಾಗುತ್ತಿದ್ದಾರೆ. ಅದರಲ್ಲೂ ಬಹಳಷ್ಟು ವಿಮಾ ಕಂಪನಿಗಳು ಟರ್ಮ್ ಇನ್ಶುರನ್ಸ್‌ ಪಾಲಿಸಿ ನೀಡುವಲ್ಲಿ ಸ್ಪರ್ಧಾತ್ಮಕ ದರದ ಅತಿ ಕಡಿಮೆ ಪ್ರೀಮಿಯಂನಲ್ಲಿ ಈ ಯೋಜನೆಗಳನ್ನು ನೀಡಲು ಪೈಪೋಟಿಗೆ ಇಳಿದಿವೆ.

ಅದರಲ್ಲೂ ಟರ್ಮ್ ಇನ್ಶುರನ್ಸ್‌ ಪ್ರೀಮಿಯಂನ್ನು ತುಲನಾತ್ಮಕವಾಗಿ ನೋಡಲು ಹಣಕಾಸು ಸೇವೆ ನೀಡುವ ಸಾಕಷ್ಟು ಕಂಪನಿಗಳು ಹಾಗೂ ಮೊಬೈಲ್ ಅಪ್ಲಿಕೇಷನ್‌ಗಳು, ಅತಿ ಕಡಿಮೆ ದರದ ಪ್ರಿಮಿಯಂ ತಿಳಿಸುತ್ತವೆ.

ಹೀಗೆ ಕನಿಷ್ಠ ದರದಲ್ಲಿ ಗರಿಷ್ಠ ವಿಮಾ ರಕ್ಷಣೆ ನೀಡುವ ಜೀವ ವಿಮಾ ಕಂಪನಿಯ ಯೋಜನೆ ಖರೀದಿಸುವುದು ಜನರಿಗೆ ಹೆಚ್ಚು ಆಕರ್ಷಕವೆನಿಸುತ್ತದೆ. ಲಾಭಾಂಶ ನೀಡುವ ಪಾಲಿಸಿಕೊಳ್ಳುವ ಬದಲಾಗಿ ಅತಿ ಹೆಚ್ಚು ವಿಮೆ ರಕ್ಷಣೆ ನೀಡುವ ಟರ್ಮ್ ಇನ್ಶುರನ್ಸ್‌ ಪಾಲಿಸಿಯನ್ನು ಪಡೆದು, ಹೂಡಿಕೆಗಾಗಿ ಇರುವ ಮೊತ್ತವನ್ನು ಬೇರೆ ರೀತಿಯ ಲಾಭದಾಯಕವೆನಿಸುವ ಯೋಜನೆಗಳಲ್ಲಿ ವಿನಿಯೋಗಿಸಬಹುದಾಗಿದೆ ಎಂಬುದು ಬಹಳ ಜನರ ಅಭಿಪ್ರಾಯವಾಗಿದೆ.

* ಆದರೆ ಲಾಭಾಂಶದ ಜೊತೆಗೆ ವಿಮೆ ರಕ್ಷಣೆ ನೀಡುವ ಪಾಲಿಸಿಗಳಿಂದ ಪಡೆಯುವ ಸಾಕಷ್ಟು ಸವಲತ್ತುಗಳು, ಟರ್ಮ್ ಇನ್ಶುರನ್ಸ್‌ ನೀಡುವ ಪಾಲಿಸಿಗಳು ನೀಡುವುದಿಲ್ಲ ಎನ್ನುವುದನ್ನು ಮರೆಯಬಾರದು.

* ಹಾಗೆಯೇ ಜೀವ ವಿಮೆಯು ದೀರ್ಘಕಾಲದ ಒಪ್ಪಂದವಾದ ಕಾರಣ ಲಾಭಾಂಶ ನೀಡುವ ಪಾಲಿಸಿಗಳನ್ನು ಪಡೆಯುವುದರಿಂದ ನಿರಂತರ ಉಳಿತಾಯದ ಜೊತೆಗೆ ವಿಮೆ ರಕ್ಷಣೆ ಸಿಗುವುದಲ್ಲದೇ, ಯೋಜನೆ ಪರಿಪಕ್ವಗೊಂಡ (ಮ್ಯಾಚುರಿಟಿ) ನಂತರ ವಿಮೆ ಮೊತ್ತ, ಬೋನಸ್ ಜತೆಗೆ ಹಾಗೂ ಆದಾಯ ತೆರಿಗೆ ವಿನಾಯಿತಿಯೊಂದಿಗೆ ಉತ್ತಮ ಮೊತ್ತವು ಕೈಸೇರುವುದು. ಟರ್ಮ್ ಇನ್ಶುರನ್ಸ್‌ ಪಾಲಿಸಿಯ ಅವಧಿಯಲ್ಲಿ ಮಾತ್ರ ವಿಮೆ ರಕ್ಷಣೆ ಇರುತ್ತದೆ. ಅವಧಿಯ ನಂತರ ಯಾವುದೇ ಮೊತ್ತ ಸಿಗುವುದಿಲ್ಲ ಎನ್ನುವುದು ಗಮನಿಸಬೇಕಾದ ಸಂಗತಿ.

* ಲಾಭಾಂಶ ನೀಡುವ ವಿಮೆ ಯೋಜನೆಗಳಿಂದ ಹಣಕಾಸು ತೊಂದರೆ ಎನಿಸಿದಾಗ ಸಾಲ ಸೌಲಭ್ಯ ಪಡೆಯಲು ಅವಕಾಶವಿರುತ್ತದೆ. ಹಾಗೆಯೇ ಹಣ ಹಿಂದಿರುಗಿಸುವ (ಮನಿಬ್ಯಾಕ್) ಯೋಜನೆಗಳಲ್ಲಿ ನಿಯಮಿತ ಕಾಲಕ್ಕೆ ಹಣ ಪಡೆಯುವುದರ ಜೊತೆಗೆ ಪೂರ್ಣ ಪ್ರಮಾಣದ ವಿಮೆ ರಕ್ಷಣೆ ಮುಂದುವರೆಯುತ್ತದೆ. ಅಲ್ಲದೇ 3 ವರ್ಷಕ್ಕೂ ಮೇಲ್ಪಟ್ಟು ಪ್ರೀಮಿಯಂ ಪಾವತಿಸಿದ್ದರೆ ಮುಂದೆ ತುಂಬಲು ಆಗದಿದ್ದರೆ ಸರಂಡರ್ ವ್ಯಾಲ್ಯೂ ದೊರೆಯುತ್ತದೆ. ಆದರೆ ಟರ್ಮ್ ಇನ್ಶುರನ್ಸ್‌ ಪಾಲಿಸಿಗಳಲ್ಲಿ ಈ ಸೌಲಭ್ಯ ಇರುವುದಿಲ್ಲ.

* ಲಾಭಾಂಶ ನೀಡುವ ವಿಮೆ ಯೋಜನೆಗಳಲ್ಲಿ ಪ್ರೀಮಿಯಂ ಪಾವತಿಸುವ ವಿಧಾನ ಅಂದರೆ ವಾರ್ಷಿಕ, ಅರ್ಧ ವಾರ್ಷಿಕ ಅಥವಾ ತ್ರೈಮಾಸಿಕವಾಗಿ ಪಾವತಿಸುವ ಪ್ರೀಮಿಯಂಗಳಿಗೆ 30 ದಿನಗಳ ಗ್ರೇಸ್ ಅವಧಿ ಇರುತ್ತದೆ. ಈ ಅವಧಿ ಮೀರಿಯೂ ತಾವು ಪ್ರೀಮಿಯಂ ಅಲ್ಪ ಬಡ್ಡಿಯೊಂದಿಗೆ ಪಾವತಿಸಲು ಅವಕಾಶವಿದೆ. ಆದರೆ ಟರ್ಮ್ ಇನ್ಶುರನ್ಸ್‌ ಪಾಲಿಸಿಗಳಲ್ಲಿ ಗ್ರೇಸ್ ಅವಧಿ ಮುಗಿದ ನಂತರ ಮತ್ತೆ ಎಲ್ಲಾ ವೈದ್ಯಕೀಯ ತಪಾಸಣೆಯ ಅವಶ್ಯಕತೆ ಇದೆ. ಹೀಗಾಗಿ ಪಾಲಿಸಿಗೆ ಮತ್ತೆ ಚಾಲನೆ ನೀಡದೇ (ರಿವೈವಲ್ ಮಾಡದೇ) ಹಾಗೇ ಬಿಡುವವರೇ ಜಾಸ್ತಿ.

* ಲಾಭಾಂಶ ನೀಡುವ ಪಾಲಿಸಿಗಳು ಉಳಿತಾಯದ ವಿಧಾನವನ್ನು ನಿರಂತರವಾಗಿಸುತ್ತವೆ. ಟರ್ಮ್ ಇನ್ಶುರನ್ಸ್‌ ಪಾಲಿಸಿಯಲ್ಲಿ ಉಳಿತಾಯದ ಉದ್ದೇಶ ಇರುವುದಿಲ್ಲ.

* ಇಲ್ಲಿ ಬಹುಮುಖ್ಯವಾಗಿ ಗಮನಿಸಬೇಕಾದ ವಿಷಯ ಏನೆಂದರೆ, ಅತಿ ಹೆಚ್ಚು ವಿಮೆ ರಕ್ಷಣೆ ಕಡಿಮೆ ಪ್ರಿಮಿಯಂ ದರದಲ್ಲಿ ದೊರೆಯುತ್ತದೆ ಎಂದರೆ ಆ ಕಂಪನಿಯ ಲಾಭಾಂಶ ಅಥವಾ ಲೈಫ್ ಫಂಡ್ ಎಷ್ಟಿದೆ ಎಂಬುದನ್ನು ಗಣನೆಗೆ ತೆಗೆದುಕೊಳ್ಳಲು ಮರೆಯಬಾರದು.

ಏಕೆಂದರೆ ಬಹಳಷ್ಟು ಜನರಿಂದ ಹಣ ಸಂಗ್ರಹಿಸಿ ವಿಮೆ ರಕ್ಷಣೆಯಾದ ಡೆತ್-ಕ್ಲೇಮ್ ನೀಡುವುದು ಕೆಲವೇ ಜನರಿಗೆ. ಹೀಗೆ ಸಂಗ್ರಹಿಸಿದ ಮೊತ್ತದ ಅತಿ ಹೆಚ್ಚು ಹಣವು ಬರೀ ಡೆತ್-ಕ್ಲೇಮ್ ನೀಡಲು ವಿನಿಯೋಗವಾದಲ್ಲಿ ಆ ಕಂಪನಿಯ ಆರ್ಥಿಕ ಪರಿಸ್ಥಿತಿ ಏನಾಗಬಹುದೆಂದು ನೀವೇ ಊಹಿಸಿ. ಹೀಗೆ ಕಂಪನಿಯ ಹಣಕಾಸು ಪರಿಸ್ಥಿತಿ ಅಧೋಗತಿಗೆ ಬಂದಾಗ ಅಥವಾ ಲೈಫ್ ಫಂಡ್‌ಗೆ ಹಾನಿಯಾದಾಗ, ಆ ಕಂಪನಿಯು ನೀಡಿದ ಭರವಸೆಯನ್ನು ಈಡೇರಿಸುವುದು ಕಷ್ಟ. ಇಲ್ಲದೇ ಇದ್ದರೆ ಡೆತ್-ಕ್ಲೇಮ್ ಪಡೆಯುವ ಕುಟುಂಬದವರಿಗೆ ಏನೋ ಸಬೂಬು ಹೇಳಿ ಕ್ಲೇಮ್ ಹಣ ನೀಡುವಲ್ಲಿ ನಿರಾಕರಿಸಬಹುದು.

ಹೀಗಾಗಿ ನಾವು ವಿಮೆ ರಕ್ಷಣೆ ಪಡೆಯುವಾಗ ಕಡಿಮೆ ದರದ ಪ್ರೀಮಿಯಂನಲ್ಲಿ ದೊರೆಯುತ್ತದೆ ಎಂದು ಆತುರವಾಗಿ ಪಡೆಯುವ ಬದಲು ಆ ಕಂಪನಿಯ ಆರ್ಥಿಕ ಸದೃಢತೆ ಕಡೆಗೆ ಗಮನಹರಿಸಬೇಕಾಗುವುದು ಅವಶ್ಯ.ಜೀವ ವಿಮೆ ರಕ್ಷಣೆ ಪಡೆಯುವುದು ನಮ್ಮ ಆಪತ್ಕಾಲದಲ್ಲಿ ನಮ್ಮ ಕುಟುಂಬದವರಿಗೆ ಆರ್ಥಿಕ ಸಹಾಯ ಸುಲಭವಾಗಿ ದೊರೆಯಲೆಂದು. ಆದರೆ, ಈ ಉದ್ದೇಶ ಈಡೆರದೇ ಇದ್ದಲ್ಲಿ ಎಷ್ಟೇ ದೊಡ್ಡ ವಿಮೆ ರಕ್ಷಣೆ ಪಡೆದರೂ ವ್ಯರ್ಥ. ಹೀಗಾಗಿ ಜೀವ ವಿಮೆ ಪಡೆಯುವಾಗ ಲಾಭಾಂಶ ನೀಡುವ ವಿಮೆ ಯೋಜನೆ ಪಡೆಯುವುದೋ ಅಥವಾ ಟರ್ಮ್ ಇನ್ಶುರನ್ಸ್‌ ಪಡೆಯುವುದೋ ಎನ್ನುವುದು ಅವರವರ ವಿವೇಚನೆಗೆ ಬಿಟ್ಟದ್ದು.

ವಿವಿಧ ಬಗೆಯ ಟರ್ಮ್‌ ಇನ್ಶುರನ್ಸ್‌ ಪಾಲಿಸಿ

ಇಲ್ಲಿ ಟರ್ಮ್ ಇನ್ಶುರನ್ಸ್ ಪಾಲಿಸಿ ಹಾಗೂ ಲಾಭಾಂಶದ ಜೊತೆಗೆ ವಿಮೆ ರಕ್ಷಣೆ ನೀಡುವ ಪಾಲಿಸಿಗಳ ವ್ಯತ್ಯಾಸಗಳ ಬಗ್ಗೆ ವಿವರಿಸಲಾಗಿದೆ. ಹಾಗೆಯೇ ಟರ್ಮ್ ಇನ್ಶುರನ್ಸ್ ಪಾಲಿಸಿ ಬಗ್ಗೆ ಕೆಲವು ಕಂಪನಿಗಳು ಹೊಂದಿರುವ ವಿಮೆ ಸೌಲಭ್ಯದ ವಿವರ ಹೀಗಿದೆ. ಕೆಲವು ಕಂಪನಿಗಳು ಏಕ ಕಂತಿನಲ್ಲಿ (ಸಿಂಗಲ್ ಪ್ರೀಮಿಯಂ) ಪಾವತಿಸಿಕೊಂಡು ನಿರ್ದಿಷ್ಟಪಡಿಸಿದ ಅವಧಿಯವರೆಗೆ ವಿಮೆ ರಕ್ಷಣೆ ನೀಡುವ ಸೌಲಭ್ಯ ಒದಗಿಸುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT