ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಳಲ್ಕೆರೆ: ರುದ್ರಭೂಮಿಗೆ ಮೂಲಸೌಕರ್ಯಗಳ ಕೊರತೆ

Last Updated 1 ಡಿಸೆಂಬರ್ 2022, 5:44 IST
ಅಕ್ಷರ ಗಾತ್ರ

ಹೊಳಲ್ಕೆರೆ: ತಾಲ್ಲೂಕಿನಲ್ಲಿರುವ ಬಹುತೇಕ ಸ್ಮಶಾನಗಳು ಮುಳ್ಳಿನ ಪೊದೆಗಳಿಂದ ತುಂಬಿದ್ದು, ಒಳಗೆ ಹೋಗಲು ದಾರಿಯೇ ಇಲ್ಲದಂತಾಗಿದೆ.

ಶವ ಸಂಸ್ಕಾರಕ್ಕೆ ತೆರಳುವ ಮುನ್ನ ಕುಟುಂಬದವರೇ ಸ್ಮಶಾನದಲ್ಲಿನ ಮುಳ್ಳಿನ ಪೊದೆಗಳನ್ನು ಕಡಿದು ದಾರಿ ಮಾಡಿಕೊಳ್ಳಬೇಕಾದ ಪರಿಸ್ಥಿತಿ ಇದೆ. ಇನ್ನು ವರ್ಷಕ್ಕೊಮ್ಮೆ ಹಿರಿಯರ ಹಬ್ಬಗಳಲ್ಲಿ ಸಮಾಧಿ ಪೂಜೆಗೆ ತೆರಳುವವರೂ ಸ್ಮಶಾನದ ಜಾಗ ಸ್ವಚ್ಛ ಮಾಡಿಕೊಳ್ಳಬೇಕಿದೆ.

ಕಂದಾಯ ಇಲಾಖೆ ತಾಲ್ಲೂಕಿನ 200 ಹಳ್ಳಿಗಳಲ್ಲಿ ಸ್ಮಶಾನಗಳಿಗೆ ಭೂಮಿ ಮಂಜೂರು ಮಾಡಿದ್ದು, ಗ್ರಾಮ ಪಂಚಾಯಿತಿಗಳಿಗೆ ಪಹಣಿಯನ್ನೂ ನೀಡಿದೆ. ಸರ್ಕಾರಿ ಜಾಗದ ಲಭ್ಯತೆ ಆಧಾರದ ಮೇಲೆ 20 ಗುಂಟೆಯಿಂದ 10 ಎಕರೆಯವರೆಗೂ ಸ್ಮಶಾನಕ್ಕೆ ಭೂಮಿ ಮಂಜೂರು ಮಾಡಲಾಗಿದೆ. ವಿವಿಧ ಜನಾಂಗದವರು ಸ್ಮಶಾನಕ್ಕೆ ಅರ್ಜಿಗಳನ್ನು ಸಲ್ಲಿಸಿದ್ದು, ನಕ್ಷೆಯಾದ ಕಡೆ ಭೂಮಿ ಮಂಜೂರು ಮಾಡಲಾಗಿದೆ. ಸ್ಮಶಾನ ಅಭಿವೃದ್ಧಿ ಹೊಣೆ ಗ್ರಾಮ ಪಂಚಾಯಿತಿಗೆ ಸೇರಿದ್ದು, ಕೆಲವೆಡೆ ಮಾತ್ರ ಕಾಮಗಾರಿ ನಡೆಸಲಾಗಿದೆ.

ಪಟ್ಟಣದಲ್ಲಿ ಪುರಸಭೆ ಲೆಕ್ಕದಲ್ಲಿ ಪರಿಶಿಷ್ಟರು, ಕುರುಬ, ವೀರಶೈವ, ಬ್ರಾಹ್ಮಣ, ಗೊಲ್ಲ ಸಮುದಾಯಗಳಿಗೆ ಸೇರಿದ 7 ಸ್ಮಶಾನಗಳಿದ್ದರೂ, ಮೂಲ ಸೌಕರ್ಯಗಳಿಲ್ಲ. ಚಿತ್ರದುರ್ಗ ರಸ್ತೆಯ ಕೊನೆಯಲ್ಲಿ ಒಂಟಿಕಂಬದ ಮಠದ ಜಮೀನಿಗೆ ಹೊಂದಿಕೊಂಡು ಒಂದು ಸ್ಮಶಾನ ಇದೆ. ಇಲ್ಲಿ ಎಲ್ಲಾ ಜನಾಂಗದವರ ಶವಸಂಸ್ಕಾರ ನಡೆಯುತ್ತಿದ್ದು, ಅಭಿವೃದ್ಧಿ ಕಂಡಿಲ್ಲ. ಈ ಸ್ಮಶಾನಕ್ಕೆ ಹೋಗಲು ದಾರಿಯೇ ಇಲ್ಲ.

ಸ್ಮಶಾನದ ತುಂಬ ಗಿಡಗಳು ಬೆಳೆದಿದ್ದು, ಸ್ವಚ್ಛತೆ ಮರೆಯಾಗಿದೆ. ಬ್ರಾಹ್ಮಣರು ಪಟ್ಟಣದ ಹಿರೇಕೆರೆ ಹಿನ್ನೀರು ಪ್ರದೇಶದಲ್ಲಿ ಶವ ಸಂಸ್ಕಾರಕ್ಕೆ ವಿದ್ಯುತ್ ಘಟಕ ನಿರ್ಮಿಸಿಕೊಂಡಿದ್ದಾರೆ. ಯಾದವ ಸಮಾಜದ ಸ್ಮಶಾನ ಹೊನ್ನೆಕೆರೆ ಹಿಂಭಾಗದಲ್ಲಿ ಇದ್ದು, ಹಿನ್ನೀರು ಆವರಿಸಿದೆ. ಪರಿಶಿಷ್ಟರ ಸ್ಮಶಾನ ಕೆಸರುಗಟ್ಟೆ ಕೆರೆ ಹಿನ್ನೀರು ಪ್ರದೇಶದಲ್ಲಿದ್ದು, ಸೌಕರ್ಯಗಳಿಲ್ಲ.

ತಾಲ್ಲೂಕಿನ ಮಲ್ಲಾಡಿಹಳ್ಳಿಯ ಕೆಂಗುಂಟೆ ರಸ್ತೆಯ ಪಕ್ಕದಲ್ಲಿ ಪರಿಶಿಷ್ಟರಿಗೆ ಮೀಸಲಾದ ಸ್ಮಶಾನ ಇದ್ದು, ಸೀಮೆಜಾಲಿ ಬೆಳೆದಿವೆ. 2015-16ನೇ ಸಾಲಿನಲ್ಲಿ ಉದ್ಯೋಗ ಖಾತರಿ ಯೋಜನೆಯಲ್ಲಿ ಈ ಸ್ಮಶಾನವನ್ನು ₹ 3 ಲಕ್ಷ ವೆಚ್ಚದಲ್ಲಿ ಅಭಿವೃದ್ಧಿ ಮಾಡಲಾಗಿದ್ದರೂ, ಮುಳ್ಳಿನ ಪೊದೆಗಳು ಬೆಳೆದಿವೆ.

‘ಅಂತ್ಯಸಂಸ್ಕಾರದ ಜಾಗ ಸ್ವಚ್ಛವಾಗಿರಬೇಕು. ಸ್ಮಶಾನದಲ್ಲಿ ಶವ ಇಡಲು ಕಟ್ಟೆಯಂತಹ ಜಾಗ, ಸಂಬಂಧಿಕರು ಕೂರಲು ನೆರಳಿನ ವ್ಯವಸ್ಥೆ, ಕೈ ಕಾಲು ತೊಳೆಯಲು ನೀರಿನ ಸೌಲಭ್ಯ ಒದಗಿಸಬೇಕು. ಸರ್ಕಾರ ಸ್ಮಶಾನಗಳ ಅಭಿವೃದ್ಧಿಗೆ ಒತ್ತು ನೀಡಬೇಕು’ ಎಂದು ಸ್ಥಳೀಯರು ಕೋರಿದ್ದಾರೆ.

ಗ್ರಾಮದಲ್ಲಿರುವ ಪರಿಶಿಷ್ಟರ ಸ್ಮಶಾನದಲ್ಲಿ ಸೀಮೆಜಾಲಿ ಗಿಡಗಳು ಬೆಳೆದಿದ್ದು, ಒಳಗೆ ಹೋಗುವುದು ದುಸ್ತರವಾಗಿದೆ. ಗ್ರಾಮ ಪಂಚಾಯಿತಿಯವರು ಸ್ಮಶಾನ ಸ್ವಚ್ಛಗೊಳಿಸಲಿ.

–ಎಲ್. ರಂಗಸ್ವಾಮಿ, ಮಲ್ಲಾಡಿಹಳ್ಳಿ

ಸ್ಮಶಾನಗಳಲ್ಲಿ ಮುಳ್ಳಿನ ಗಿಡ, ಗಂಟಿಗಳು ಬೆಳೆದಿವೆ. ಶೀಘ್ರವೇ ಪಟ್ಟಣ ವ್ಯಾಪ್ತಿಯಲ್ಲಿರುವ ಸ್ಮಶಾನಗಳನ್ನು ಸ್ವಚ್ಛಗೊಳಿಸಲಾಗುವುದು.

–ಆರ್.ಎ. ಅಶೋಕ್, ಪುರಸಭೆ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT