ಭರಮಸಾಗರ (ಚಿತ್ರದುರ್ಗ): ಇಲ್ಲಿಗೆ ಸಮೀಪದ ಇಸಾಮುದ್ರ ಲಂಬಾಣಿಹಟ್ಟಿಯ ಒಂದೇ ಕುಟುಂಬದ ಮೂವರು ಅನುಮಾನಾಸ್ಪದವಾಗಿ ಮೃತಪಟ್ಟಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿರುವ ಘಟನೆ ಸೋಮವಾರ ತಡರಾತ್ರಿ ನಡೆದಿದೆ.
ತಿಪ್ಪನಾಯ್ಕ (45), ಗುಂಡಿಬಾಯಿ (80),ಸುಧಾಬಾಯಿ (40) ಮೃತಪಟ್ಟವರು. ರಾಹುಲ್ (19) ಮತ್ತು ರಮ್ಯಾ (16) ಗಂಭೀರವಾಗಿದ್ದಾರೆ. ವಿಷ ಆಹಾರ ಸೇವನೆ ಮಾಡಿರುವ ಅನುಮಾನ ವ್ಯಕ್ತವಾಗಿದೆ.
ಕುಟುಂಬದ ಸದಸ್ಯರೆಲ್ಲರೂ ಸೋಮವಾರ ರಾತ್ರಿ 10 ಗಂಟೆಗೆ ಊಟ ಮಾಡಿ ಮಲಗಿದ್ದಾರೆ. ರಾತ್ರಿ ಸುಮಾರು 11.30ಕ್ಕೆ ವಾಂತಿ ಮಾಡಿಕೊಂಡಿದ್ದಾರೆ. ನೆರೆಹೊರೆಯವರು ತಕ್ಷಣ ಇವರನ್ನು ಭರಮಸಾಗರ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಮಾರ್ಗ ಮಧ್ಯದಲ್ಲಿ ಗುಂಡಿಬಾಯಿ ಮತ್ತು ಸುಧಾಬಾಯಿ ಮೃತಪಟ್ಟಿದ್ದಾರೆ. ತಿಪ್ಪನಾಯ್ಕ ದಾವಣಗೆರೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಆಕಸ್ಮಿಕ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ವಿಷಾಹಾರ ಸೇವನೆಯೇ ಸಾವಿಗೆ ಕಾರಣ ಎಂದು ಅನುಮಾನಿಸಲಾಗಿದೆ. ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮಹಾನಿಂಗ ನಂದಗಾವಿ, ಡಿವೈಎಸ್ಪಿ ಪಾಂಡುರಂಗಪ್ಪ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.