ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಟೆನಾಡಲ್ಲಿ ‘ಪ್ರವಾಸೋದ್ಯಮ’ ಜಾಥಾ

ಹೆಚ್ಚುವರಿ ಜಿಲ್ಲಾಧಿಕಾರಿ ಇ. ಬಾಲಕೃಷ್ಣ ಚಾಲನೆ
Last Updated 28 ಸೆಪ್ಟೆಂಬರ್ 2022, 4:41 IST
ಅಕ್ಷರ ಗಾತ್ರ

ಚಿತ್ರದುರ್ಗ: ವಿಶ್ವ ಪ್ರವಾಸೋದ್ಯಮ ದಿನಾಚರಣೆ ಅಂಗವಾಗಿ ಕೋಟೆನಾಡು ಚಿತ್ರದುರ್ಗದಲ್ಲಿ ಮಂಗಳವಾರ ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ ಹಾಗೂ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿಯಿಂದ ವಿಭಿನ್ನ ಕಾರ್ಯಕ್ರಮಗಳು ನಡೆದವು.

ನಗರದ ಒನಕೆ ಓಬವ್ವ ವೃತ್ತದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಇ.ಬಾಲಕೃಷ್ಣ ‘ಪ್ರವಾಸೋದ್ಯಮ ಪುನರಾವಲೋಕನ’ ಸಂದೇಶದ ಪ್ರವಾಸೋದ್ಯಮ ಜಾಥಾಕ್ಕೆ ಚಾಲನೆ ನೀಡಿದರು.

ಮದಕರಿ ನಾಯಕ ವೃತ್ತ, ರಂಗಯ್ಯನಬಾಗಿಲು, ಉಚ್ಚಂಗಿ ಯಲ್ಲಮ್ಮ ದೇಗುಲದ ಮಾರ್ಗವಾಗಿ ಐತಿಹಾಸಿಕ ಕೋಟೆ ಆವರಣದಲ್ಲಿ ಮುಕ್ತಾಯಗೊಂಡಿತು. ಕಲಾ ತಂಡಗಳು, ಶಾಲಾ ಮಕ್ಕಳು, ಪ್ರವಾಸಿ ಮಾರ್ಗದರ್ಶಿಗಳು ಹಾಗೂ ಪ್ರವಾಸಿ ಮಿತ್ರರು, ಸಾಹಸಿ ಜ್ಯೋತಿರಾಜ್‌ ತಂಡ ಹೆಜ್ಜೆ ಹಾಕಿತು.

‘ದೇಶದ ಭವ್ಯ ಇತಿಹಾಸ, ಪ್ರಾಚೀನ ಪರಂಪರೆ ಹಾಗೂ ಸಂಸ್ಕೃತಿ ಅರಿಯಲು ಪ್ರವಾಸ ಅವಶ್ಯವಾಗಿದೆ. ದೇಶ ಸುತ್ತಿನೋಡು, ಕೋಶ ಓದಿ ನೋಡು ಎನ್ನುವ ನಾಣ್ಣುಡಿಯಂತೆ ಪ್ರವಾಸ ನಮ್ಮ ಜ್ಞಾನ ವಿಸ್ತಾರ ಮಾಡಿಕೊಳ್ಳಲು ಪ್ರಮುಖ ಸಾಧನವಾಗಿದೆ’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಇ.ಬಾಲಕೃಷ್ಣ ಹೇಳಿದರು.

‘ಚಿತ್ರದುರ್ಗ ಐತಿಹಾಸಿಕ ನಗರವಾಗಿದೆ. ಇಲ್ಲಿನ ಏಳುಸುತ್ತಿನ ಕೋಟೆಯ ಬಗ್ಗೆ ಜನರು ತಿಳಿದುಕೊಳ್ಳಬೇಕು. ಇದರ ಇತಿಹಾಸ ಪ್ರಪಂಚದ ಮೂಲೆ ಮೂಲೆ ತಲುಪಿಸಬೇಕು. ಮಕ್ಕಳು ಐತಿಹಾಸಿಕ ಸ್ಮಾರಕಗಳಿಗೆ ಭೇಟಿ ನೀಡಿ ಮಾಹಿತಿ ತಿಳಿದುಕೊಳ್ಳಬೇಕು’ ಎಂದರು.

ಸಾಹಸಿ ಜ್ಯೋತಿರಾಜ್‌ ಮಾತನಾಡಿ, ‘ತಮಿಳುನಾಡಿನಿಂದ ಬಂದ ನನಗೆ ಚಿತ್ರದುರ್ಗದ ಕಲ್ಲಿನ ಕೋಟೆ ಜೀವನ ಕಟ್ಟಿಕೊಟ್ಟಿದೆ. ಪ್ರವಾಸಿಗರು ತೋರುವ ಪ್ರೀತಿ ಹಾಗೂ ಸಹಾಯಕ್ಕೆ ನಾನು ಚಿರಋಣಿ. ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು 2007 ರಲ್ಲಿ ಕೋಟೆಯಲ್ಲಿ ನಾನು ನೆಲೆ ನಿಲ್ಲಲು ಅವಕಾಶ ಕಲ್ಪಿಸಿಕೊಟ್ಟರು’ ಎಂದು ನೆನೆದರು.

‘ಐತಿಹಾಸಿ ಕೋಟೆಯ ಗೋಡೆ, ಕಲ್ಲು, ಬೆಟ್ಟ, ಗುಡ್ಡಗಳನ್ನು ಏರುತ್ತಾ ಸಾಹಸ ಪ್ರದರ್ಶಿಸುವ ನನಗೆ ಪ್ರವಾಸಿಗರೇ ಹಣ ನೀಡಿ ಸುರಕ್ಷಾ ಪರಿಕರ ನೀಡಿದ್ದಾರೆ. ಗೋಡೆ ಏರುವ ಕ್ರೀಡೆಗಾಗಿ ಯುವಕರನ್ನು ತರಬೇತಿಗೊಳಿಸುತ್ತಿದ್ದೇನೆ. ಹಲವಾರು ಯುವಕರು ದೈಹಿಕ ತರಬೇತಿ ಪಡೆದು ಪೊಲೀಸ್ ಹಾಗೂ ಸೇನೆಗೆ ಆಯ್ಕೆಯಾಗಿದ್ದಾರೆ’ ಎಂದರು.

ಪ್ರವಾಸೋದ್ಯಮ ಇಲಾಖೆಯ ಟಿಎಸ್‌ಪಿ ಯೋಜನೆಯಡಿ ನಾಲ್ಕು ಕಲಾವಿದರಿಗೆ ಸಂಗೀತ ವಾದ್ಯಗಳನ್ನು ವಿತರಿಸಲಾಯಿತು. ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಜಿತೇಂದ್ರನಾಥ್‌, ಸಿಬ್ಬಂದಿ ಸಂದೀಪ್‌, ಹಿರಿಯ ಪ್ರವಾಸಿ ಮಾರ್ಗದರ್ಶಿ ತಿಪ್ಪೇಸ್ವಾಮಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT