ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾದಯಾತ್ರೆಯಲ್ಲಿ ಬುಡಕಟ್ಟು ಸಂಸ್ಕೃತಿ ಮೆರವಣಿಗೆ

ಭರಮಸಾಗರದಿಂದ ಮಾರಘಟ್ಟ ತಲುಪಿದ ಹೋರಾಟಗಾರರು
Last Updated 23 ಜನವರಿ 2021, 1:21 IST
ಅಕ್ಷರ ಗಾತ್ರ

ಭರಮಸಾಗರ: ಕುರುಬ ಸಮುದಾಯಕ್ಕೆ ಪರಿಶಿಷ್ಟ ಪಂಗಡದ ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿ ಕಾಗಿನೆಲೆ ಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ ನೇತೃತ್ವದಲ್ಲಿ ಬೆಂಗಳೂರಿಗೆ ತೆರಳುತ್ತಿರುವ ಪಾದಯಾತ್ರೆ ಹೋರಾಟಕ್ಕಷ್ಟೇ ಸೀಮಿತವಾಗಿಲ್ಲ. ಪಾದಯಾತ್ರೆಯೊಂದಿಗೆ ಬುಡಕಟ್ಟು ಸಾಂಸ್ಕೃತಿಕ ವೈಭವದ ಮೆರವಣಿಗೆಯೂ ಸಾಗುತ್ತಿದೆ.

ಎಂಟನೇ ದಿನದ ಪಾದಯಾತ್ರೆ ಭರಮಸಾಗರದಿಂದ ಮಾರಘಟ್ಟ ಗ್ರಾಮದವರೆಗೆ ಶುಕ್ರವಾರ ಅಚ್ಚುಕಟ್ಟಾಗಿ ನಡೆಯಿತು. ಸುಮಾರು 18 ಕಿ.ಮೀ ದೂರದವರೆಗೆ ಸಾಗಿದ ಪಾದಯಾತ್ರೆಯಲ್ಲಿ ಹೊಸದುರ್ಗದ ಶಾಖಾ ಮಠದ ಈಶ್ವರಾನಂದಪುರಿ ಸ್ವಾಮೀಜಿ ಹಾಗೂಸಮುದಾಯದ ಮುಖಂಡರು ಹೆಜ್ಜೆ ಹಾಕಿದರು.

ಭರಮಸಾಗರದ ಬಸವೇಶ್ವರ ಸಮುದಾಯ ಭವನದಿಂದ ಬೆಳಿಗ್ಗೆ 5.30ಕ್ಕೆ ಪಾದಯಾತ್ರೆ ಆರಂಭಗೊಂಡಿತು. ಮಹಿಳೆಯರು ಸ್ವಾಮೀಜಿ ಅವರಿಗೆ ಕಾಕಡಾರತಿ ಬೆಳಗಿ ಬೀಳ್ಕೊಟ್ಟರು. ನಸುಕಿನಲ್ಲಿ ಗೊರವರು ಇಂಪಾಗಿ ಕೊಳಲುಊದಿ ಡಮರು ಬಾರಿಸಿದರು. ಡೊಳ್ಳು ಕುಣಿತದ ಕಲಾವಿದರು ಡೊಳ್ಳು ಬಾರಿಸುತ್ತಾ, ನೃತ್ಯ ಮಾಡುತ್ತಾ ಸಾಗಿದರು. ವಿವಿಧ ವೇಷಧಾರಿಗಳು ಗಮನ ಸೆಳೆಯುತ್ತಿದ್ದರು. ಪಾದಯಾತ್ರೆಯಲ್ಲಿ ಬುಡಕಟ್ಟು ಸಂಸ್ಕೃತಿಯ ವೈಭವ ಮೇಳೈಸಿದಂತೆ ಭಾಸವಾಗುತ್ತಿತ್ತು.

ಮುಂದೆ ಸಾಗುತ್ತಿದ್ದ ಸಾರೋಟ್ ವಾಹನದಲ್ಲಿನ ಕನಕ ವಿಗ್ರಹಕ್ಕೆ ಪೂಜೆ ಸಲ್ಲಿಸಲಾಯಿತು. ಕನಕದಾಸರ ಭಕ್ತಿಗೀತೆಗಳು ಮಾರ್ಗದ ಉದ್ದಕ್ಕೂ ಮೊಳಗಿದವು. ಭರಮಸಾಗರ, ಹಂಪನೂರು, ಜಗಳೂರು ಕುಷ್ಟಗಿ, ಗಂಗಾವತಿ, ಕೊಪ್ಪಳ ಭಾಗದಿಂದ ಬಂದಿದ್ದ ಸಮುದಾಯದ ಮುಖಂಡರು ಸಹ ಪಾದಯಾತ್ರೆಯನ್ನು ಹುರಿದುಂಬಿಸಿದರು. ಮಹಿಳೆಯರು ಇಳಕಲ್ ಸೀರೆಯುಟ್ಟು ದೇಸಿ ಸಂಸ್ಕೃತಿಯಲ್ಲಿ ವಿಜೃಂಭಿಸಿದರು.

ಪಾದಯಾತ್ರೆಯು ಕೊಳಹಾಳು, ಚಿಕ್ಕಬೆನ್ನೂರು ಗ್ರಾಮ ತಲುಪಿ ಉಪಹಾರ ಸ್ವೀಕರಿಸಿತು. ಗ್ರಾಮದ ಬಸವೇಶ್ವರ ಪ್ರೌಢಶಾಲಾ ಆವರಣದಲ್ಲಿನಂತರ ಜಾಗೃತಿ ಕಾರ್ಯಕ್ರಮ ನಡೆಯಿತು.ಬಳಿಕ ಸಿರಿಗೆರೆ ಕ್ರಾಸ್, ವಿಜಾಪುರ, ಲಕ್ಷ್ಮೀಸಾಗರದ ಮೂಲಕ ಮಾರಘಟ್ಟ ಗ್ರಾಮ ತಲುಪಿತು.

ಬೃಹತ್ ಪಾದಯಾತ್ರೆಯಲ್ಲಿ ಸಿದ್ಧರಾಮಾನಂದಪುರಿ ಸ್ವಾಮೀಜಿ, ಶಿವಾನಂದಪುರಿ ಸ್ವಾಮೀಜಿ, ಸೋಮಲಿಂಗೇಶ್ವರ ಸ್ವಾಮೀಜಿ, ಬೆಂಗಳೂರು ಮುತ್ತೇಶ್ವರ ಸ್ವಾಮೀಜಿ, ಶರಭಯ್ಯ ಸ್ವಾಮೀಜಿ, ಮಾದಯ್ಯ ಸ್ವಾಮೀಜಿ, ರೇವಣಸಿದ್ದೇಶ್ವರ ಸ್ವಾಮೀಜಿ, ಪರಮಾನಂದ ಸ್ವಾಮೀಜಿ, ಮುರಳೀಧರ ಸ್ವಾಮೀಜಿ, ಕೃಷ್ಣಾನಂದ ಸ್ವಾಮೀಜಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಅಧ್ಯಕ್ಷೆ ಶಶಿಕಲಾ ಸುರೇಶ್ ಬಾಬು, ಸದಸ್ಯ ಅನಂತ್, ಕುರುಬ ಸಮುದಾಯದ ಮುಖಂಡ ಬಿ.ಟಿ.ಜಗದೀಶ್, ಶ್ರೀರಾಮ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT