ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಡೊಗೆರೆ ಕಿರಿಯ ಪ್ರಾಥಮಿಕ ಶಾಲೆ: ಮಳೆ ನೀರಿನಲ್ಲೇ ಪಾಠ ಕೇಳಬೇಕಾದ ಸ್ಥಿತಿ

ಉಡೊಗೆರೆ: ಭೂಮಿಪೂಜೆ ಆಗಿ 5 ತಿಂಗಳು ಕಳೆದರೂ ನಿರ್ಮಾಣವಾಗದ ಕೊಠಡಿ
ಅಕ್ಷರ ಗಾತ್ರ

ಚಿಕ್ಕಜಾಜೂರು:ಸೋರುತಿರುವ ಶಾಲೆ ಕಟ್ಟಡ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಕುಸಿಯುತ್ತಿರುವ ಶಾಲೆಯ ಚಾವಣಿ, ಬಿರುಕು ಬಿಟ್ಟಿರುವ ಗೋಡೆಗಳು. ಮಳೆ ನೀರು ತುಂಬಿರುವ ಕೊಠಡಿಯಲ್ಲಿ ಪಾಠ ಕೇಳುವ ಮಕ್ಕಳು.

ಇದು ಸಮೀಪದ ಉಡೊಗೆರೆ ಗ್ರಾಮದ ಕಿರಿಯ ಪ್ರಾಥಮಿಕ ಶಾಲೆಯ ಸ್ಥಿತಿ.

ನೂತನ ಕೊಠಡಿಗಳ ನಿರ್ಮಾಣಕ್ಕೆ ಭೂಮಿಪೂಜೆ ಆಗಿ ಐದು ತಿಂಗಳು ಕಳೆದರೂ, ಇದುವರೆಗೂ ಶಾಲಾ ಕಟ್ಟಡಕ್ಕೆ ಅಡಿಪಾಯ ಹಾಕಿಲ್ಲ. ಶಿಥಿಲಗೊಂಡ ಕೊಠಡಿ ಯಾವಾಗ ಬೀಳುವುದೋ ಎಂಬ ಭಯದಲ್ಲಿ ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸಲು ಹಿಂದೇಟು ಹಾಕುತ್ತಿದ್ದಾರೆ.

ಶಾಸಕ ಎಂ. ಚಂದ್ರಪ್ಪ ಅವರು ₹ 24 ಲಕ್ಷ ವೆಚ್ಚದಲ್ಲಿ ಎರಡು ಶಾಲಾ ಕೊಠಡಿ ನಿರ್ಮಾಣಕ್ಕೆ ಫೆಬ್ರವರಿ 27ರಂದು ಭೂಮಿಪೂಜೆ ನೆರವೇರಿಸಿದ್ದರು. ಜೂನ್‌ ತಿಂಗಳ ವೇಳೆಗೆ ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ಎಂಜಿನಿಯರ್‌ ಹಾಗೂ ಗುತ್ತಿಗೆದಾರರಿಗೆ ಸೂಚಿಸಿದ್ದರು. ಆದರೆ, ಜುಲೈ ಬಂದದರೂ ಇದುವರೆಗೂ ಗುತ್ತಿಗೆದಾರರಾಗಲೀ, ಎಂಜಿನಿಯರ್‌ಗಳಾಗಲೀ ಶಾಲೆಯತ್ತ ಮುಖ ಮಾಡಿಲ್ಲ ಎಂಬುದು ಗ್ರಾಮಸ್ಥರ ಆರೋಪ.

1949–50ರಲ್ಲಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ನಿರ್ಮಿಸಲಾಗಿತ್ತು. ಆರಂಭದ ದಿನಗಳಲ್ಲಿ ತರಗತಿ ನಡೆಸಲು ಸ್ವಂತ ಕಟ್ಟಡವಿಲ್ಲದಿದ್ದರಿಂದ ದೇವಸ್ಥಾನದಲ್ಲಿಯೇ ಶಿಕ್ಷಕರು ಮಕ್ಕಳಿಗೆ ಪಾಠ ಹೇಳುತ್ತಿದ್ದರು. ಒಂದು ವರ್ಷದ ನಂತರದಲ್ಲಿ ಹೆಂಚಿನ ಚಾವಣೆಯ ಎರಡು ಕೊಠಡಿಗಳ ಕಟ್ಟಡವನ್ನು ಸರ್ಕಾರ ನಿರ್ಮಿಸಿಕೊಟ್ಟಿತ್ತು. 70 ವರ್ಷ ಕಳೆದರೂ ಇಂದಿಗೂ ಇಲ್ಲಿಯೇ ತರಗತಿಗಳನ್ನು ನಡೆಸಲಾಗುತ್ತಿದೆ. ಎರಡೂ ಕೊಠಡಿಗಳು ಮಳೆಗಾಲದಲ್ಲಿ ಸೋರುತ್ತವೆ ಎಂದುಎಸ್‌ಡಿಎಂಸಿ ಅಧ್ಯಕ್ಷಎಚ್‌. ಶಿವಣ್ಣ ಹೇಳಿದರು.

2006-07ನೇ ಸಾಲಿನಲ್ಲಿ ಒಂದು ಕೊಠಡಿಯನ್ನು ಶಿಕ್ಷಣ ಇಲಾಖೆಯಿಂದ ನಿರ್ಮಿಸಲಾಗಿದೆ. ಹೊಸ ಕಟ್ಟಡದಲ್ಲಿ ಒಂದರಿಂದ ಮೂರನೇ ತರಗತಿವರೆಗೆ ಪಾಠಗಳು ನಡೆಯುತ್ತಿವೆ. ಹಳೆಯ ಕಟ್ಟಡದಲ್ಲಿ ಒಂದರಲ್ಲಿ ನಾಲ್ಕು ಮತ್ತು ಐದನೇ ತರಗತಿಗಳು ನಡೆಯುತ್ತಿದ್ದರೆ, ಮತ್ತೊಂದರಲ್ಲಿ ಮುಖ್ಯಶಿಕ್ಷಕರು ಹಾಗೂ ಶಿಕ್ಷಕರ ಕಚೇರಿಯನ್ನು ಮಾಡಿಕೊಳ್ಳಲಾಗಿದೆ. ಸದ್ಯ ಶಾಲೆಯಲ್ಲಿ ಒಂದರಿಂದ ಐದನೇ ತರಗತಿವರೆಗೆ ಒಟ್ಟು 39 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಒಬ್ಬರು ಮುಖ್ಯ ಶಿಕ್ಷಕರು ಹಾಗೂ ಒಬ್ಬ ಸಹ ಶಿಕ್ಷಕರು ಇದ್ದಾರೆ. ಪಾಠ ಪ್ರವಚನಗಳು ಚೆನ್ನಾಗಿ ನಡೆಯುತ್ತಿವೆ. ಆದರೆ ಕೊಠಡಿ ಶಿಥಿಲಗೊಂಡಿರುವುದರಿಂದ ಮಕ್ಕಳ ಭಯದಲ್ಲಿ ಪಾಠ ಕೇಳುವಂತಾಗಿದೆ ಎಂದು ಅವರು ದೂರಿದರು.

ಕೊಠಡಿಯ ಹೆಂಚು ಒಡೆದಿದ್ದು,ಮಳೆನೀರು ಶಾಲೆಯೊಳಗೆ ಸುರಿಯುತ್ತಿದೆ. ಶಿಕ್ಷಕರು, ವಿದ್ಯಾರ್ಥಿಗಳು ನೀರನ್ನು ತೋಡಿ ಹಾಕಿ, ನೆಲವನ್ನು ಒರೆಸಿ ಕೂರುವ ಸ್ಥಿತಿ ಇದೆ. ಶಾಲೆ ನಡೆಯುವ ಸಮಯದಲ್ಲಿ ಮಳೆ ಬಂತೆಂದರೆ ಶಿಕ್ಷಕರು ವಿದ್ಯಾರ್ಥಿಗಳನ್ನು ಅನಿವಾರ್ಯವಾಗಿ ಮನೆಗೆ ಕಳುಹಿಸುವಂತಾಗಿದೆ. ದಾಖಲಾತಿ ಪುಸ್ತಕಗಳು ನೆನೆಯುತ್ತಿವೆ. ಮಳೆಯಿಂದ ಗೋಡೆಗಳು ಶಿಥಿಲಗೊಂಡಿವೆ.

ಹೊಸ ಕಟ್ಟಡ ನಿರ್ಮಿಸದಿದ್ದರೆ ಮಳೆಗಾಲ ಮುಗಿಯುವವರೆಗೂ ಮಕ್ಕಳು ಪಾಠ, ಪಠ್ಯದಿಂದ ದೂರಾಗ
ಬೇಕಾಗುತ್ತದೆ. ತಕ್ಷಣವೇ ಕೊಠಡಿಗಳನ್ನು ನಿರ್ಮಿಸಿ, ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಬೇಕು ಎಂದು ಗ್ರಾಮ ಪಂಚಾಯಿತಿ ಸದಸ್ಯೆ ಕಮಲಾ ಮಂಜಪ್ಪ, ಉಪಾಧ್ಯಕ್ಷೆ ಪ್ರೇಮಾ ಆಂಜಿನಪ್ಪ, ಸದಸ್ಯರಾದ ಆಂಜಿನಪ್ಪ, ಎಚ್‌. ಮಂಜಪ್ಪ, ಓಂಕಾರಪ್ಪ ಆಗ್ರಹಿಸಿದ್ದಾರೆ.

---

ಕೆಲವೇ ದಿನಗಳಲ್ಲಿ ಶಾಲಾ ಕೊಠಡಿಗಳ ನಿರ್ಮಾಣ ಆರಂಭಿಸಲಾಗುವುದು ಎಂದು ಎಂಜಿನಿಯರ್ ಮಾಹಿತಿ ನೀಡಿದ್ದಾರೆ. ಶೀಘ್ರ ಕ್ರಮ ಕೈಗೊಳ್ಳಲಾಗುವುದು.

- ಸಿ.ಎಂ. ತಿಪ್ಪೇಸ್ವಾಮಿ, ಹೊಳಲ್ಕೆರೆ ಕ್ಷೇತ್ರ ಶಿಕ್ಷಣಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT