ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚಳ್ಳಕೆರೆ | ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ಆಗ್ರಹ: ಬಾರುಕೋಲು ಚಳವಳಿ

ರೈತ ಸಂಘ– ವಿವಿಧ ಪ್ರಗತಿಪರ ಸಂಘಟನೆಗಳಿಂದ ಬಾರುಕೋಲು ಚಳವಳಿ
Published 5 ಜುಲೈ 2024, 14:21 IST
Last Updated 5 ಜುಲೈ 2024, 14:21 IST
ಅಕ್ಷರ ಗಾತ್ರ

ಚಳ್ಳಕೆರೆ: ತಾಲ್ಲೂಕಿನ ಹಲವೆಡೆ ಹರಡುತ್ತಿರುವ ಚಿಕೂನ್‍ಗೂನ್ಯಾ, ಡೆಂಗಿ, ಮಲೇರಿಯಾ ಮುಂತಾದ ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ಆಗ್ರಹಿಸಿ ತಾಲ್ಲೂಕು ರೈತ ಸಂಘ ಹಾಗೂ ವಿವಿಧ ಪ್ರಗತಿಪರ ಸಂಘಟನೆಗಳ ಕಾರ್ಯಕರ್ತರು ಶುಕ್ರವಾರ ನಗರದ ತಾಲ್ಲೂಕು ಪಂಚಾಯಿತಿ ಕಚೇರಿ ಮುಂದೆ ಬಾರುಕೋಲು ಚಳವಳಿ ನಡೆಸಿದರು.

ನೇತೃತ್ವ ವಹಿಸಿದ್ದ ರೈತ ಸಂಘಟನೆ ರಾಜ್ಯ ಘಟಕದ ಉಪಾಧ್ಯಕ್ಷ ಬೇಡರೆಡ್ಡಿಹಳ್ಳಿ ಬಸವರೆಡ್ಡಿ, ‘ಸ್ವಚ್ಚತೆ ಹಾಗೂ ನೈರ್ಮಲ್ಯ ಕಾಪಾಡಲು ವಿಫಲವಾಗಿರುವ ಕಾರಣ ಗ್ರಾಮೀಣ ಭಾಗದಲ್ಲಿ ಡೆಂಗಿ, ಚಿಕೂನ್‍ಗೂನ್ಯಾ, ಮಲೇರಿಯಾ ಮುಂತಾದ ಸಾಂಕ್ರಾಮಿಕ ರೋಗದ ಪ್ರಕರಣಗಳು ಹೆಚ್ಚುತ್ತಿವೆ’ ಎಂದು ತಾಲ್ಲೂಕು ಪಂಚಾಯಿತಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

‘ಪ್ರತಿದಿನ ಚರಂಡಿ ಸ್ವಚ್ಛತೆ ಹಾಗೂ ಕಸ ವಿಲೇವಾರಿ ಮಾಡುತ್ತಿಲ್ಲ. ಹೀಗಾಗಿ, ಕೆಲ ಗ್ರಾಮಗಳಲ್ಲಿ ದಿನ ದಿನಕ್ಕೂ ಸೊಳ್ಳೆಗಳ ಕಾಟ ಹೆಚ್ಚುತ್ತಿದೆ. ಜನರಲ್ಲಿ ಜ್ವರ, ಕೆಮ್ಮು, ನೆಗಡಿ ಮುಂತಾದ ಸಾಂಕ್ರಾಮಿಕ ರೋಗಗಳ ಭೀತಿ ಹುಟ್ಟಿಸಿದೆ’ ಎಂದು ಜಿಲ್ಲಾ ಘಟಕದ ಅಧ್ಯಕ್ಷ ಬಾಗೇನಾಳ್ ಕೊಟ್ರಬಸಪ್ಪ ಆತಂಕ ವ್ಯಕ್ತಪಡಿಸಿದರು.

‘ಪಿಡಿಒಗಳು ಕೇಂದ್ರ ಸ್ಥಾನದಲ್ಲಿ ಇದ್ದು ಕರ್ತವ್ಯ ನಿರ್ವಹಿಸಲು ಸೂಚನೆ ನೀಡಬೇಕು. ನರೇಗಾ ಕಾಮಗಾರಿ ಕೆಲಸ ಮತ್ತಷ್ಟು ಚುರುಕುಗೊಳಿಸುವುದರ ಜತೆಗೆ ತಾಲ್ಲೂಕಿನ ಎಲ್ಲ ಗ್ರಾಮಗಳ ಸ್ವಚ್ಛತೆಗೆ ತುರ್ತು ಕ್ರಮ ಕೈಗೊಳ್ಳಬೇಕು’ ಎಂದು ತಾಲ್ಲೂಕು ಘಟಕದ ಅಧ್ಯಕ್ಷ ಡಿ.ಚಂದ್ರಶೇಖರನಾಯ್ಕ ಜಿಲ್ಲಾಧಿಕಾರಿಗೆ ಮನವಿ ಮಾಡಿದರು.

ಕಾರ್ಯಾಧ್ಯಕ್ಷ ಮಿಟ್ಲಕಟ್ಟೆ ಕೆ.ಮಲ್ಲೇಶಪ್ಪ, ಪ್ರಧಾನ ಕಾರ್ಯದರ್ಶಿ ಈರಣ್ಣ, ಎಸ್.ಮಂಜುನಾಥ್ ಮಾತನಾಡಿದರು. ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಸಂತೋಷ್ ಹಾಗೂ ಸಂಪತ್‍ಕುಮಾರ್ ಮನವಿ ಸ್ವೀಕರಿಸಿದರು.

ರೈತ ಮುಖಂಡ ಕನಕ ಶಿವಮೂರ್ತಿ, ಓಬ್ಯಾನಾಯ್ಕ, ಮಲ್ಲಸಮುದ್ರ ಟಿ.ಗಂಗಾಧರ, ಡಿಎಸ್‍ಎಸ್ ಮುಖಂಡ ಮಹೇಶ್‍ಗೊರಪ್ಪ, ಪೃಥ್ವಿರಾಜ, ಹೊನ್ನೂರು ಶ್ರೀನಿವಾಸ್, ರೆಡ್ಡಿನಾಯ್ಕ, ಪಾಪಯ್ಯ, ಮೂಲೆಮನೆ ತಿಪ್ಪೇಸ್ವಾಮಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT