ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳ ರಕ್ಷಣೆಗೆ ನೂತನ ಲಸಿಕೆ

ಜಿಲ್ಲೆಗೆ ಬಂದಿವೆ 15 ಸಾವಿರ ಡೋಸ್ * ಶ್ವಾಸಕೋಶ ಸಂಬಂಧಿ ಕಾಯಿಲೆಗೆ ತಡೆ
Last Updated 29 ಆಗಸ್ಟ್ 2021, 5:21 IST
ಅಕ್ಷರ ಗಾತ್ರ

ಚಿತ್ರದುರ್ಗ: ಕೋವಿಡ್ ಮತ್ತು ನ್ಯುಮೋನಿಯಾ ಸೇರಿದಂತೆ ಶ್ವಾಸಕೋಶಕ್ಕೆ ಸಂಬಂಧಿಸಿದ ಕಾಯಿಲೆಗಳಿಂದ ಮಕ್ಕಳನ್ನು ರಕ್ಷಿಸಲು ‘ನ್ಯುಮೊಕಾಕಲ್ ಕಾಂಜುಗೇಟ್ (ಪಿಸಿವಿ) ನೂತನ ಲಸಿಕೆ’ಯನ್ನು ಉಚಿತವಾಗಿ ನೀಡಲು ಆರೋಗ್ಯ ಇಲಾಖೆ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳುತ್ತಿದೆ. ಒಂಬತ್ತು ತಿಂಗಳೊಳಗಿನ ಮಗುವಿಗೆ ಮೂರು ಬಾರಿ ಇದನ್ನು ಹಾಕಲಾಗುತ್ತದೆ.

ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಯೋಗದಲ್ಲಿ ‘ರಾಷ್ಟ್ರೀಯ ಆರೋಗ್ಯ ಅಭಿಯಾನ’ದ ಅಡಿಯಲ್ಲಿ ಸಾರ್ವತ್ರಿಕ ಲಸಿಕಾ ಕಾರ್ಯಕ್ರಮ ರೂಪಿಸಲಾಗಿದೆ. ಅದಕ್ಕಾಗಿ ಜಿಲ್ಲೆಗೆ ಮೊದಲ ಹಂತವಾಗಿ 15 ಸಾವಿರ ಡೋಸ್‌ ಲಸಿಕೆ ಈಗಾಗಲೇ ತಲುಪಿವೆ. ಲಸಿಕೆ ನೀಡಲು ಸರ್ಕಾರ ಹಾಗೂ ಆರೋಗ್ಯ ಇಲಾಖೆಯ ಕೇಂದ್ರ ಕಚೇರಿಯ ಸೂಚನೆಗಾಗಿ ಇಲಾಖೆ ಕಾಯುತ್ತಿದೆ.

ನವಜಾತ ಶಿಶುವಿಗೂ ತಾಯಿಯಿಂದ ಕೋವಿಡ್ ತಗುಲಿರುವ ಸಾಕಷ್ಟು ಪ್ರಕರಣಗಳು ವರದಿಯಾಗಿವೆ. ಕೊರೊನಾ ಸೋಂಕು ಶ್ವಾಸಕೋಶವನ್ನು ಸಂಪೂರ್ಣ ಹಾಳು ಮಾಡಿ ಸಾವಿನ ಕೂಪಕ್ಕೆ ತಳ್ಳಲಿದೆ. ಇನ್ನೂ ಅನೇಕ ಮಕ್ಕಳು ನ್ಯುಮೋನಿಯಾ (ನ್ಯುಮೊಕಾಕಲ್) ಕಾಯಿಲೆಯಿಂದ ಬಳಲುತ್ತಿದ್ದಾರೆ. ನ್ಯುಮೊಕಾಕಸ್ ಬ್ಯಾಕ್ಟೀರಿಯಾದಿಂದ ಉಂಟಾಗುವ ಈ ರೋಗ ಕೂಡ ಶ್ವಾಸಕೋಶವನ್ನು ಮತ್ತಷ್ಟು ದುರ್ಬಲಗೊಳಿಸಲಿದೆ. ಇದರಿಂದ ರಕ್ಷಿಸಿಕೊಳ್ಳಲು ಪಿಸಿವಿ ಸಹಕಾರಿಯಾಗಲಿದೆ.

ದೇಶದಲ್ಲಿ 5 ವರ್ಷದೊಳಗಿನ ಶೇ 30ರಷ್ಟು ಮಕ್ಕಳು ಶ್ವಾಸಕೋಶ ಸಂಬಂಧಿ ಕಾಯಿಲೆಯಿಂದಲೇ ಮೃತಪಡುತ್ತಿದ್ದಾರೆ ಎಂದು ಆರೋಗ್ಯ ತಜ್ಞರು ತಿಳಿಸಿದ್ದಾರೆ. ಜಿಲ್ಲೆಯಲ್ಲಿ ವರ್ಷಕ್ಕೆ 200ರಿಂದ 250 ಮಕ್ಕಳು ವಿವಿಧ ಅನಾರೋಗ್ಯ ಸಮಸ್ಯೆಯಿಂದ ಮೃತಪಡುತ್ತಿದ್ದಾರೆ. ಅದರಲ್ಲಿ 50ರಿಂದ 60 ಮಕ್ಕಳ ಸಾವು ನ್ಯುಮೋನಿಯಾದಿಂದ ಆಗುತ್ತಿದೆ ಎಂದು ಇಲಾಖೆ ಅಂದಾಜಿಸಿದೆ.

ನ್ಯುಮೊಕಾಕಲ್ ಕಾಯಿಲೆ ಇರುವ ಮಗು ಕೆಮ್ಮಿದಾಗ ಅಥವಾ ಸೀನಿದಾಗ ಸಿಡಿಯುವ ಹನಿಗಳ ಮೂಲಕ ಒಬ್ಬರಿಂದ ಮತ್ತೊಂದು ಮಗುವಿಗೆ ಹರಡುತ್ತದೆ. ಕೋವಿಡ್‌ನಂತೆ ಇದು ಕೂಡ ಸಾಂಕ್ರಾಮಿಕ ರೋಗದ ಮಾದರಿಯಾಗಿದೆ. ಆದರೆ, ಕೊರೊನಾ ಸೋಂಕಿನಂತೆ ಅತಿ ವೇಗವಾಗಿ ಮಕ್ಕಳಲ್ಲಿ ಇದು ಹರಡುವುದಿಲ್ಲ ಎಂದು ಇಲಾಖೆ ತಿಳಿಸಿದೆ.

ಪಿಸಿವಿ ಮೊದಲ ಡೋಸ್ ಒಂದೂವರೆ ತಿಂಗಳು, ಎರಡನೇ ಡೋಸ್‌ ಮೂರುವರೆ ತಿಂಗಳು ಹಾಗೂ ಬೂಸ್ಟರ್‌ ಡೋಸ್ ಅನ್ನು 9 ತಿಂಗಳ ಮಗುವಿಗೆ ಮಾತ್ರ ನೀಡಲಾಗುತ್ತದೆ. ನ್ಯುಮೊಕಾಕಲ್ ರೋಗದಿಂದ ರಕ್ಷಣೆ ಪಡೆಯಲು ಸಾರ್ವತ್ರಿಕ ಲಸಿಕಾ ಕಾರ್ಯಕ್ರಮ ಆರಂಭದ ನಂತರ ನಿಗದಿತ ವೇಳಾಪಟ್ಟಿಯಂತೆ ಮೂರು ಡೋಸ್‍ಗಳನ್ನು ಮಗುವಿಗೆ ಪೋಷಕರು ಕಡ್ಡಾಯವಾಗಿ ಹಾಕಿಸಬೇಕು. ಒಂದು ವೇಳೆ ಹಾಕಿಸದಿದ್ದರು ಸಿಬ್ಬಂದಿ ಅಥವಾ ಆಶಾ ಕಾರ್ಯಕರ್ತೆಯರು ಮನೆ–ಮನೆಗೆ ಭೇಟಿ ನೀಡಿ ಖಾತ್ರಿ ಪಡಿಸಿಕೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದೆ.

ಮಗುವಿಗೆ ಲಸಿಕೆ ಯಾವ ರೀತಿ ನೀಡಬೇಕು ಎಂಬುದರ ಕುರಿತು ಈಗಾಗಲೇ 15 ದಿನಗಳ ತರಬೇತಿಯನ್ನು ನೀಡಲಾಗಿದೆ. ಇನ್ನು ಕೆಲವೆಡೆ ನೀಡಲಾಗುತ್ತಿದೆ. 1,456 ಆಶಾ ಕಾರ್ಯಕರ್ತೆಯರು, 333 ಕಿರಿಯ ಆರೋಗ್ಯ ಮಹಿಳಾ ಸಹಾಯಕಿಯರು, 100ಕ್ಕೂ ಹೆಚ್ಚು ವೈದ್ಯರ ತಂಡವನ್ನು ಲಸಿಕಾ ಕಾರ್ಯಕ್ರಮ ಅನುಷ್ಠಾನಕ್ಕಾಗಿ ಸಜ್ಜುಗೊಳಿಸಲಾಗಿದೆ.

ಲಸಿಕೆಯನ್ನು ಸಂಗ್ರಹಿಸಿಡಲು ಜಿಲ್ಲೆಯಲ್ಲಿ ಪ್ರಾದೇಶಿಕ ದಾಸ್ತಾನು ಕೇಂದ್ರ ಇದೆ. ಲಸಿಕೆ ರಕ್ಷಣೆಗಾಗಿ ವ್ಯಾಕ್ಸಿನ್ ಕೂಲರ್ ಐಎಲ್‌ಆರ್‌, ವಾಕಿಂಗ್‌ ಕೂಲರ್‌ನಲ್ಲಿ ಡೋಸ್‌‌ಗಳನ್ನು ಸಂಗ್ರಹಿಸಿ ಇಡಲಾಗಿದೆ. ಕೋವಿಡ್ ಮಾರ್ಗಸೂಚಿ ಅನುಸರಿಸಿ, ವಿಶಾಲ ಕೊಠಡಿಯಲ್ಲಿ ಮಗುವಿಗೆ ಲಸಿಕೆ ನೀಡಲು ಸರ್ಕಾರ ಸೂಚನೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT