ಗುರುವಾರ, 28 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕವಾಡಿಗರಹಟ್ಟಿ: ಆಶ್ರಯ ಬಡಾವಣೆಯಲ್ಲಿ ವಾಂತಿ–ಭೇದಿಯಿಂದ 13 ಜನ ಅಸ್ವಸ್ಥ

ಕವಾಡಿಗರ ಹಟ್ಟಿ ಸಮೀಪ ಮತ್ತೊಂದು ಘಟನೆ
Published 18 ಆಗಸ್ಟ್ 2023, 15:48 IST
Last Updated 18 ಆಗಸ್ಟ್ 2023, 15:48 IST
ಅಕ್ಷರ ಗಾತ್ರ

ಚಿತ್ರದುರ್ಗ: ಕಲುಷಿತ ನೀರು ಸೇವನೆಯಿಂದ ಆರು ಜನ ಸಾವಿಗೀಡಾಗಿ, ನೂರಾರು ಜನ ಅಸ್ವಸ್ಥರಾಗಿದ್ದ ಇಲ್ಲಿನ ಕವಾಡಿಗರಹಟ್ಟಿ ಸಮೀಪದ ಆಶ್ರಯ ಬಡಾವಣೆಯಲ್ಲಿ ಶುಕ್ರವಾರ ವಾಂತಿ– ಬೇಧಿ ಪ್ರಕರಣಗಳು ವರದಿಯಾಗಿವೆ.

ಅಸ್ವಸ್ಥಗೊಂಡಿರುವ 13 ಜನರ ಪೈಕಿ 10 ಜನರು ಜಿಲ್ಲಾ ಆಸ್ಪತ್ರೆಯಲ್ಲಿ ಹೊರ ರೋಗಿಗಳಾಗಿ ಚಿಕಿತ್ಸೆ ಪಡೆದಿದ್ದಾರೆ. ತೀವ್ರವಾಗಿ ಅಸ್ವಸ್ಥರಾಗಿರುವ ಮೂವರು ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಆಶ್ರಯ ಬಡಾವಣೆಯಲ್ಲಿ ತಾತ್ಕಾಲಿಕ ಚಿಕಿತ್ಸಾ ಕೇಂದ್ರ ತೆರೆಯಲಾಗಿದೆ. ಕಲುಷಿತ ನೀರಿನಿಂದ ವಾಂತಿ– ಭೇದಿ ಕಾಣಿಸಿಕೊಂಡಿರುವ ಅನುಮಾನ ವ್ಯಕ್ತವಾಗಿದ್ದು, ನೀರಿನ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ರವಾನಿಸಲಾಗಿದೆ.

‘ಬಡಾವಣೆಯ ನಿವಾಸಿಗಳಲ್ಲಿ ಎರಡು ದಿನಗಳಿಂದ ವಾಂತಿ–ಭೇದಿ ಕಾಣಿಸಿಕೊಂಡಿದೆ. ಮಾಹಿತಿ ಲಭ್ಯವಾದ ತಕ್ಷಣ ಸ್ಥಳಕ್ಕೆ ತೆರಳಿ ಆರೋಗ್ಯ ತಪಾಸಣೆ ಮಾಡಲಾಗಿದೆ. ಚಿಕಿತ್ಸಾ ಕೇಂದ್ರ ತೆರೆಯಲಾಗಿದ್ದು, ವೈದ್ಯಕೀಯ ಸಿಬ್ಬಂದಿ ನಿಗಾ ವಹಿಸಿದ್ದಾರೆ. ವಾಂತಿ–ಭೇದಿಗೆ ಕಾರಣ ಪತ್ತೆ ಮಾಡಲಾಗುತ್ತಿದೆ’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಆರ್‌.ರಂಗನಾಥ್‌ ಮಾಹಿತಿ ನೀಡಿದ್ದಾರೆ.

ಇಬ್ಬರ ಸಾವು:

ಆಶ್ರಯ ಬಡಾವಣೆಯ ಫಕ್ರುದ್ದೀನ್‌ (76) ಎಂಬುವರು ಗುರುವಾರ ಮೃತಪಟ್ಟಿದ್ದು, ವಾಂತಿ–ಭೇದಿಯೇ ಕಾರಣ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.

ಆಗಸ್ಟ್‌ 7ರಂದು ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಕವಾಡಿಗರಹಟ್ಟಿಯ ಶಿವಮ್ಮ (72) ಶುಕ್ರವಾರ ಮೃತಪಟ್ಟಿದ್ದಾರೆ. ಈ ಇಬ್ಬರ ಸಾವಿಗೆ ವಾಂತಿ–ಭೇದಿ ಕಾರಣವಲ್ಲ ಎಂಬುದಾಗಿ ಆರೋಗ್ಯ ಇಲಾಖೆ ಹೇಳುತ್ತಿದೆ.

‘ವಾಂತಿ–ಭೇದಿ ಸಮಸ್ಯೆಯಿಂದ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದ ಫಕ್ರುದ್ದೀನ್‌ ಅವರಿಗೆ 25 ವರ್ಷಗಳಿಂದ ಕಣ್ಣು ಕಾಣುತ್ತಿರಲಿಲ್ಲ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರಿಗೆ ರಕ್ತದೊತ್ತಡ ಹೆಚ್ಚಾಗಿತ್ತು. ವಾಂತಿ–ಭೇದಿಯಿಂದ ಗುಣಮುಖರಾಗಿದ್ದ ಶಿವಮ್ಮ ಪಾರ್ಶ್ವವಾಯು ಸಮಸ್ಯೆಯಿಂದ ಮೃತಪಟ್ಟಿದ್ದಾರೆ’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಂಗನಾಥ್‌ ಸ್ಪಷ್ಟಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT