ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರ್ಮಿಸಿ 2 ವರ್ಷ ಪೂರ್ಣ: ಸೇವೆಗೆ ಸಿಗದ ಬೃಹತ್ ನೆಲತೊಟ್ಟಿಗಳು

, ಹೆಚ್ಚಿದ ವಿತರಣೆ ಸಮಸ್ಯೆ
Last Updated 12 ಜೂನ್ 2022, 4:47 IST
ಅಕ್ಷರ ಗಾತ್ರ

ಮೊಳಕಾಲ್ಮುರು: ತಾಲ್ಲೂಕಿನ ದೊಡ್ಡ ಹಾಗೂ ಜಿಲ್ಲೆಯ ಪ್ರಮುಖ ಗ್ರಾಮೀಣ ವಾಣಿಜ್ಯ ಗ್ರಾಮ ಎಂದು ಗುರುತಿಸಿ
ಕೊಂಡಿರುವ ರಾಂಪುರದಲ್ಲಿ ಕುಡಿಯುವ ನೀರಿನ ಅಭಾವಕ್ಕೆ ಸೇವೆಯಿಂದ ದೂರವಾಗಿರುವ ನೂತನ ಬೃಹತ್ ನೆಲತೊಟ್ಟಿಗಳು ಕಾರಣ ಎಂಬ ಆರೋಪ ಕೇಳಿ ಬಂದಿದೆ.

ಅಂದಾಜು 4 ಸಾವಿರ ಮನೆಗಳನ್ನು ಹೊಂದಿರುವ ರಾಂಪುರದಲ್ಲಿ 15 ಸಾವಿರ ಜನಸಂಖ್ಯೆಯಿದೆ. 40ಕ್ಕೂ ಹೆಚ್ಚು ಗ್ರಾಮಗಳ ಜನರು ನಿತ್ಯದ ಕೆಲಸಗಳಿಗೆ ಇಲ್ಲಿಗೆ ಬಂದು ಹೋಗುವ ಕಾರಣ 25,000 ಜನರಿಗೆ ನಿತ್ಯ ನೀರು ಸರಬರಾಜು ಮಾಡುವ ಹೊಣೆ ಸ್ಥಳೀಯ ಗ್ರಾಮ ಪಂಚಾಯಿತಿಗೆ
ಇದೆ.

ಸ್ಥಳೀಯವಾಗಿ ನೀರಿನ ಲಭ್ಯತೆ ಕಡಿಮೆಯಿರುವ ಕಾರಣ 8 ಕಿ.ಮೀ. ದೂರದ ಜೆ.ಬಿ. ಹಳ್ಳಿಯಿಂದ ಪೈಪ್‌ಲೈನ್ ಮೂಲಕ ರಾಂಪುರಕ್ಕೆ ನೀರು ಸರಬರಾಜು ಮಾಡಲಾಗುತ್ತಿದೆ. ಬರುವ ನೀರನ್ನು ನೇರವಾಗಿ ವಾರ್ಡ್‌ವಾರು ನಲ್ಲಿಗಳಿಗೆ ಬಿಡಲಾಗುತ್ತಿದೆ. ಇದರಿಂದ ಕೊನೆ ಮನೆಗಳಿಗೆ ರಭಸ ಕಡಿಮೆಯಾಗಿ ನೀರು ಸರಿಯಾಗಿ ಬರುತ್ತಿಲ್ಲ ಎಂಬ ದೂರಿನ ಪರಿಣಾಮವಾಗಿ ನೀರು ಶೇಖರಣೆ ಮಾಡಿಕೊಂಡು ಅದನ್ನು ಮರು ಪಂಪ್ ಮಾಡಿ ನೀಡಲು ಮಾರ್ಗ ಮಧ್ಯೆ ತಲಾ 1 ಲಕ್ಷ ಲೀಟರ್ ಸಾಮರ್ಥ್ಯದ ಎರಡು ಬೃಹತ್ ನೆಲ
ತೊಟ್ಟಿಗಳನ್ನು ನಿರ್ಮಿಸಲಾಗಿದೆ.

ಜಿಲ್ಲಾ ಪಂಚಾಯಿತಿಯ ಗ್ರಾಮೀಣ ಕುಡಿಯುವ ನೀರು ಯೋಜನೆಯ ಅನುದಾನದಲ್ಲಿ ಈ ತೊಟ್ಟಿಗಳನ್ನು ನಿರ್ಮಿಸಲಾಗಿದೆ. ತೊಟ್ಟಿ ನಿರ್ಮಾಣ, ಪೈಪ್ ಅಳವಡಿಕೆ, ವಿದ್ಯುತ್ ಸಂಪರ್ಕ ಪೂರ್ಣಗೊಂಡ ನಂತರ ಗ್ರಾಮ ಪಂಚಾಯಿತಿ ತೊಟ್ಟಿಗಳನ್ನು ವಶಕ್ಕೆ ಪಡೆಯಬೇಕಿದೆ. ಒಂದು ತೊಟ್ಟಿಯ ಕಾರ್ಯ ಕಳೆದ ವಾರ ಪೂರ್ಣವಾಗಿದ್ದು, ಮತ್ತೊಂದು ತೊಟ್ಟಿಯದ್ದು ಮುಗಿದಿಲ್ಲ ಎಂದು ಪಿಡಿಒ ಗುಂಡಪ್ಪ ಮಾಹಿತಿ ನೀಡಿದರು.

ಜಿಲ್ಲಾ ಪಂಚಾಯಿತಿ ಪ್ರಭಾರ ಕಾರ್ಯಪಾಲಕ ಎಂಜಿನಿಯರ್ ಪವನ್ ಮಾತನಾಡಿ, ‘ಗುತ್ತಿಗೆದಾರರು ವಿಳಂಬ ಮಾಡಿದ್ದು ಸಮಸ್ಯೆಗೆ ಕಾರಣವಾಗಿದೆ. ಈಚೆಗೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ವೇಳೆ ತೊಟ್ಟಿಗಳ ಸಂಪರ್ಕ ಪೈಪ್‌ಗಳನ್ನು ಕಿತ್ತು ಹಾಕಿದ್ದಾರೆ. ಈ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ಆದಷ್ಟು ಶೀಘ್ರ ಇದನ್ನು ಸರಿಪಡಿಸಿ ಸೇವೆಗೆ ನೀಡಲಾಗುವುದು’ ಎಂದರು.

‘ಟ್ಯಾಂಕ್‌ಗಳನ್ನು ನಿರ್ಮಿಸಿ 2 ವರ್ಷಗಳಾಗಿವೆ. ಗ್ರಾಮದಲ್ಲಿ ನೀರಿನ ಸಮಸ್ಯೆ ಹೆಚ್ಚಾಗಿದ್ದು ಜನರು ಸದಸ್ಯರನ್ನು ದೂರುತ್ತಿದ್ದಾರೆ. ಸಂಬಂಧಪಟ್ಟ ಹಿರಿಯ ಅಧಿಕಾರಿಗಳಿಗೆ ಹೇಳಿದರೆ ಗಮನಕ್ಕೆ ತೆಗೆದುಕೊಳ್ಳುತ್ತಿಲ್ಲ. ಅಪಾರ ಅನುದಾನ ವ್ಯರ್ಥವಾಗುತ್ತಿರುವುದಕ್ಕೆ ಗ್ರಾಮ ಪಂಚಾಯಿತಿ, ಜಿಲ್ಲಾ ಪಂಚಾಯಿತಿಯ ಸಮನ್ವಯದ ಕೊರತೆ ಕಾರಣವಾಗಿದೆ. ಈ ಬಗ್ಗೆ ಈಚೆಗೆ ಪ್ರತಿಭಟನೆ ನಡೆಸಲಾಗಿತ್ತು’ ಎಂದು ಸದಸ್ಯ ತಿಪ್ಪೇಶ್ ಹೇಳಿದರು.

ಹೆದ್ದಾರಿ ಗುತ್ತಿಗೆ ಕಂಪನಿ ಮಾಡಿರುವ ಯಡವಟ್ಟು ಸಮಸ್ಯೆಗೆ ಮುಖ್ಯ ಕಾರಣವಾಗಿದೆ. ಗುತ್ತಿಗೆದಾರರಿಗೆ ಸಮಸ್ಯೆ ಮನವರಿಕೆ ಮಾಡಿದ್ದು ಸ್ಥಳ ಭೇಟಿ ಮಾಡಿ ಸರಿಪಡಿಸಲಾಗುವುದು.

- ಪವನ್, ಜಿಲ್ಲಾ ಪಂಚಾಯಿತಿ ಎಂಜಿನಿಯರ್, ಮೊಳಕಾಲ್ಮುರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT