ಮಂಗಳವಾರ, 16 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮನಸ್ಸು ಹಗುರವಾಗಲು ಯೋಗಾಭ್ಯಾಸ ಸಹಕಾರಿ

ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಅನಿಸಿಕೆ
Published 19 ಜೂನ್ 2024, 14:47 IST
Last Updated 19 ಜೂನ್ 2024, 14:47 IST
ಅಕ್ಷರ ಗಾತ್ರ

ಚಿತ್ರದುರ್ಗ: ಒತ್ತಡದ ಬದುಕಿನಿಂದ ದೇಹ, ಮನಸ್ಸು ಹಗುರವಾಗಲು ಯೋಗಾಭ್ಯಾಸ ಸಹಕಾರಿಯಾಗಿದೆ. ಆದರೆ ಯೋಗವನ್ನು ಒಂದು ಧರ್ಮಕ್ಕೆ ಸಿಮೀತಗೊಳಿಸಬಾರದು ಎಂದು ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ತಿಳಿಸಿದರು.

ನಗರದ ನೀಲಕಂಠೇಶ್ವರ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಬುಧವಾರ ಮುರುಘಾ ಮಠದಿಂದ ಆಯೋಜಿಸಿದ್ದ ಯೋಗ ನಡಿಗೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ‘ಆರೋಗ್ಯ ದೃಷ್ಟಿಯಿಂದ ಯೋಗ ಮುಖ್ಯವಾಗಿದೆ. ಆರೋಗ್ಯಕರ ಮನಸ್ಸಿನ ಗುರಿಯನ್ನು ಹೊಂದುವುದು ಜೀವನ ವಿಧಾನವಾಗಿದೆ’ ಎಂದರು.

‘ಮನುಷ್ಯ ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಜೀವಿ. ಜೀವನ ವಿಧಾನದಲ್ಲಿ ಸಮತೋಲನ ಕಾಯ್ದುಕೊಳ್ಳಲು ಯೋಗವು ಸಹಾಯ ಮಾಡುತ್ತದೆ. ಇಂದಿನ ಯೋಗ ನಡಿಗೆಗೆ ಒಂದಿಷ್ಟು ಅರ್ಥ ಸಿಕ್ಕಿದೆ’ ಎಂದು ತಿಳಿಸಿದರು.

‘ಆರೋಗ್ಯಪೂರ್ಣ ಮನಸ್ಸಿದ್ದರೆ ಪ್ರಬುದ್ಧ ಸಮಾಜ ನಿರ್ಮಿಸಲು ಸಾಧ್ಯ. ಕಳೆದ ಕೆಲವು ವರ್ಷಗಳಿಂದ ಯೋಗದ ಬಗ್ಗೆ ವಿಶ್ವವ್ಯಾಪಿ ವ್ಯಾಪಕ ಚರ್ಚೆಯಾಗುತ್ತಿದೆ. ಇದು ಪ್ರಪಂಚವೇ ಇದರ ಜತೆ ನಡೆಯುತ್ತಿದೆ’ ಎಂದು ಮುರುಘಾಮಠದ ಆಡಳಿತ ಮಂಡಳಿ ಸದಸ್ಯ ಬಸವ ಕುಮಾರ ಸ್ವಾಮೀಜಿ ಹೇಳಿದರು.

‘ಯೋಗವು ಮೆದುಳಿನ ಕಾರ್ಯ ಸುಧಾರಿಸುವ ಜತೆಗೆ ರಕ್ತದೊತ್ತಡ ನಿಯಂತ್ರಣದಲ್ಲಿಡುತ್ತದೆ. ಆತಂಕ, ಹೃದಯಸಂಬಂಧಿ ರೋಗದ ಅಪಾಯವನ್ನು ಕಡಿಮೆ ಮಾಡುತ್ತದೆ. ದೇಹ ಮತ್ತು ಮನಸ್ಸಿನ ನಡುವೆ ಸಾಮರಸ್ಯವನ್ನು ಹೆಚ್ಚಿಸುವಲ್ಲಿ ಯೋಗ ನೆರವಾಗುತ್ತದೆ’ ಎಂದರು.

‘ಯೋಗ ಭಾರತದ ಸಂಸ್ಕೃತಿಯ ಪ್ರತೀಕ. ದೇಹ ಮತ್ತು ಮನಸ್ಸು ಒಂದಾಗುವ ಪ್ರಕ್ರಿಯೆಯೇ ಯೋಗ. ಅದಕ್ಕೆ ಇಂದಿನ ಯೋಗ ನಡಿಗೆಯೇ ಸಾಕ್ಷಿ’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಹೇಳಿದರು.

‘ಯೋಗ ಒಂದು ದಿನಕ್ಕೆ ಸೀಮಿತ ಆಗಬಾರದು. ನಮ್ಮ ಆರೋಗ್ಯ ನಮ್ಮ ಕೈಯಲ್ಲಿದೆ. ಎಲ್ಲರೂ ದುಶ್ಚಟಗಳಿಂದ ದೂರವಿರಬೇಕು. ಇದು ಕುಟುಂಬಕ್ಕೆ ಮತ್ತು ಸಮಾಜಕ್ಕೆ ಒಳ್ಳೆಯದು’ ಎಂದು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂ.ಕೆ.ತಾಜ್‌ಪೀರ್‌ ತಿಳಿಸಿದರು.

ಕಬೀರಾನಂದಾಶ್ರಮದ ಶಿವಲಿಂಗಾನಂದ ಸ್ವಾಮೀಜಿ ಯೋಗ ನಡಿಗೆಗೆ ಚಾಲನೆ ನೀಡಿದರು. ಸಂಸದ ಗೋವಿಂದ ಎಂ.ಕಾರಜೋಳ, ಪೌರಾಯುಕ್ತೆ ಎಂ.ರೇಣುಕಾ, ಕೆಡಿಪಿ ಸದಸ್ಯ ಕೆ.ಸಿ. ನಾಗರಾಜು ಹಾಗೂ ಸ್ವಾಮೀಜಿಗಳು, ವಿದ್ಯಾರ್ಥಿಗಳು ಹೆಜ್ಜೆ ಹಾಕಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT