ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಡಿ ವಿವಾದ: ಶಿವಾಜಿ ಚರಿತ್ರೆಯಲ್ಲಿ ಉತ್ತರ

ಚಿತ್ರದುರ್ಗ: ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯಲ್ಲಿ ಸಂಸದ ಬಿ.ಎನ್. ಚಂದ್ರಪ್ಪ
Last Updated 20 ಫೆಬ್ರುವರಿ 2017, 5:37 IST
ಅಕ್ಷರ ಗಾತ್ರ

ಚಿತ್ರದುರ್ಗ: ‘ಛತ್ರಪತಿ ಶಿವಾಜಿ ಮಹಾರಾಜರ ವ್ಯಕ್ತಿತ್ವ, ಅವರು ಅನುಸರಿಸಿದ ಶಿವಶರಣ ಆದರ್ಶಗಳನ್ನು ಸರಿಯಾಗಿ ಅರ್ಥ ಮಾಡಿಕೊಂಡರೆ ದೇಶ, ಭಾಷೆ, ಗಡಿ ವಿಷಯದಲ್ಲಿ ಗುದ್ದಾಡುತ್ತಿರುವವರಿಗೆ ಸೂಕ್ತ ಉತ್ತರ ದೊರೆಯುತ್ತದೆ’ ಎಂದು ಸಂಸದ ಬಿ.ಎನ್.ಚಂದ್ರಪ್ಪ ಅಭಿಪ್ರಾಯಪಟ್ಟರು.

ನಗರದ ಗುರುಭವನದಲ್ಲಿ ಭಾನುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ನಗರಸಭೆ ಚಿತ್ರದುರ್ಗ ಇವರ ಸಹಯೋಗದಲ್ಲಿ ಏರ್ಪಡಿಸಲಾಗಿದ್ದ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಆಚರಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

‘ಭಾರತದಲ್ಲಿ ಹುಟ್ಟಿದ ಪ್ರತಿಯೊಬ್ಬರೂ ಸಹೋದರತ್ವ ಭಾವನೆಯಿಂದ ಬದುಕಬೇಕೆಂಬ ತತ್ವಾದರ್ಶಗಳನ್ನು ಮೈಗೂಡಿಸಿಕೊಂಡಿದ್ದ ಶಿವಾಜಿ, ಶಿವಶರಣರ ಆದರ್ಶದಂತೆ ಬದುಕಿ ದೇವಮಾನವರಾಗಿದ್ದರು. ಅಂಥವರ ವಿಚಾರಗಳನ್ನು ಅರ್ಥ ಮಾಡಿಕೊಂಡರೆ, ಗಡಿ, ಭಾಷೆಯ ತಂಟೆಯೇ ಉದ್ಭವಿಸದು’ ಎಂದು ಅಭಿಪ್ರಾಯಪಟ್ಟರು.

‘ಭಾಷೆ, ಗಡಿ ಮೀರಿ ದೇಶದ ಒಳಿತಿಗಾಗಿ ಸೈನಿಕರನ್ನು ಸಂಘಟಿಸಿ ಸ್ವತಂತ್ರ ಸಾಮ್ರಾಜ್ಯ ಕಟ್ಟಿ ಆದರ್ಶಪ್ರಾಯವಾಗಿ ಮಹಾರಾಷ್ಟ್ರದಲ್ಲಿ ತಮ್ಮ ಸಾಮ್ರಾಜ್ಯವನ್ನು ಶಿವಾಜಿ ಸ್ಥಾಪಿಸಿದರು. ಬೆಂಗಳೂರಿನಲ್ಲಿ ಶಿಕ್ಷಣ ಮತ್ತು ಎಲ್ಲಾ ಯುದ್ಧಕಲೆಗಳನ್ನು ಕರಗತ ಮಾಡಿಕೊಂಡು ಕರ್ನಾಟಕ, ಮಹಾರಾಷ್ಟ್ರವನ್ನು ಮೊಘಲರ ಮತ್ತು ಸುಲ್ತಾನರ ದಬ್ಬಾಳಿಕೆಯನ್ನು ಹಿಮ್ಮೆಟ್ಟಿಸಿದ ಧೀರ ಸೇನಾನಿಯಾಗಿದ್ದರು’ ಎಂದು ಸ್ಮರಿಸಿದರು.

ಪ್ರಾಧ್ಯಾಪಕ ಡಾ.ಜೆ.ಕರಿಯಪ್ಪ ಮಾಳಿಗೆ, ಶಿವಾಜಿ ಮಹಾರಾಜರ ಕುರಿತು ಉಪನ್ಯಾಸ ನೀಡಿದರು.‘ವಿಜಯನಗರ ಸಾಮ್ರಾಜ್ಯಕ್ಕೆ ಭೇಟಿ ನೀಡಿದ ಛತ್ರಪತಿ ಶಿವಾಜಿ ಮಹಾರಾಜರು ಇಂತಹುದೇ ಒಂದು ಸಾಮ್ರಾಜ್ಯವನ್ನು ಕಟ್ಟಬೇಕೆಂಬ ಸಂಕಲ್ಪ ಮಾಡಿದ್ದರು.  ಕರ್ನಾಟಕದಲ್ಲೇ ಗುಡ್ಡಗಾಡು, ಬಡಜನರನ್ನು ಒಂದುಗೂಡಿಸಿ ಎಲ್ಲಾ ಜಾತಿಯವರನ್ನು ಸೇರಿಸಿಕೊಂಡು ಸೈನ್ಯ ಕಟ್ಟಿ ಸ್ವಾಭಿಮಾನದ ಸಂಕೇತವಾಗಿ ಸಾಮ್ರಾಜ್ಯ ಕಟ್ಟಿದ ಚತುರಮತಿ ನಾಯಕ ಛತ್ರಪತಿ ಶಿವಾಜಿ’ ಎಂದು ವಿವರಿಸಿದರು.

‘ಮೊಘಲರ, ಸುಲ್ತಾನರ ದಬ್ಬಾಳಿಕೆಗಳ ನಡುವೆ ತಾಯಿ ಜೀಜಾಬಾಯಿ ಹಾಗೂ ಸಂತರಾದ ರಾಮದಾಸ, ತುಕಾರಾಂ ಅವರ ಮಾಗದರ್ಶನದಂತೆ ಮರಾಠ ಸಾಮ್ರಾಜ್ಯವನ್ನು ಕಟ್ಟಿ ಶತ್ರುಗಳನ್ನು ಹಿಮ್ಮೆಟ್ಟಿಸಿದರು. ದೇಶದ ಉದ್ದಗಲಕ್ಕೂ ಸಾಮ್ರಾಜ್ಯ ವಿಸ್ತರಿಸಿದರು.

‘ಶತ್ರುಗಳಿಂದಲೂ ಹೊಗಳಿಸಿಕೊಂಡ ಏಕಮಾತ್ರ ವ್ಯಕ್ತಿ ಛತ್ರಪತಿ ಶಿವಾಜಿ. ಮಹಿಳೆಯರ ಬಗ್ಗೆ ಗೌರವ, ಮಕ್ಕಳ ರಕ್ಷಣೆ ಬಗ್ಗೆ ಅಪಾರ ಕಾಳಜಿ ಹೊಂದಿದ್ದ ಶಿವಾಜಿ ತಮ್ಮ ಸಾಧನೆಯ ಜೊತೆಗೆ ಸಾಮರಸ್ಯದ ಜೀವನಕ್ಕೆ ಬುನಾದಿ ಹಾಕಿದ್ದಾರೆ’ ಎಂದರು.

ಮರಾಠ ಸಮಾಜದ ಅಧ್ಯಕ್ಷ ಸುರೇಶ್‌ರಾವ್, ಉಷಾಬಾಯಿ ಮಾತನಾಡಿ ‘ಮರಾಠ ಸಮುದಾಯದವರು ಶೈಕ್ಷಣಿಕವಾಗಿ, ಸಾಮಾಜಿಕ, ರಾಜಕೀಯ
ವಾಗಿ ಮುಖ್ಯವಾಹಿನಿಗೆ ಬರಬೇಕಿದೆ’ ಎಂದರು.

ಅಗ್ನಿಶಾಮಕ ದಳದಲ್ಲಿ ಶ್ರೇಷ್ಠ ಸೇವೆ ಸಲ್ಲಿಸಿರುವ ಶಿವಾನಂದಪ್ಪ ಅವರಿಗೆ ಸನ್ಮಾನಿಸಿದರು. ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಿತೇಶ್ ಪಾಟೀಲ್, ಹೆಚ್ಚುವರಿ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ, ತಹಶೀಲ್ದಾರ್ ಮಲ್ಲಿಕಾರ್ಜುನ, ಪೌರಾಯುಕ್ತ ಸಿ.ಚಂದ್ರಪ್ಪ, ಮರಾಠ ಸಮಾಜದ ಕಾರ್ಯದರ್ಶಿ ಜೆ.ಗೋಪಾಲ ರಾವ್ ಜಾಧವ್ ಭಾಗವಹಿಸಿದ್ದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ನೀಲಮ್ಮ ಸ್ವಾಗತಿಸಿದರು. ವೇಣುಗೋಪಾಲ್ ಸಂಗಡಿಗರು ನಾಡಗೀತೆ ಹಾಡಿದರು. ಕಾರ್ಯಕ್ರಮದಲ್ಲಿ ಬಾಲನಟಿ ಅಪೂರ್ವಾ  ಭರತನಾಟ್ಯ ಪ್ರದರ್ಶಿಸಿದರು. ಸಮಾರಂಭಕ್ಕೂ ಮುನ್ನ ನಗರದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಭಾವಚಿತ್ರ ಹಾಗೂ ವಿವಿಧ ಜನಪದ ಕಲಾತಂಡದೊಂದಿಗೆ ಮೆರವಣಿಗೆ ಏರ್ಪಡಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT