ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಲೆ ಪಾತಾಳಕ್ಕೆ: ಬಿಕರಿಯಾಗದೆ ಉಳಿದ ಟೊಮೊಟೊ

Last Updated 22 ಅಕ್ಟೋಬರ್ 2012, 4:20 IST
ಅಕ್ಷರ ಗಾತ್ರ

ಹೊಳಲ್ಕೆರೆ: ಈ ಬಾರಿಯ ದಸರಾ ಹಬ್ಬ ಟೊಮೆಟೊ ಬೆಳೆಗಾರರಿಗೆ ಸಂತಸ ತಂದಿಲ್ಲ. ಪಟ್ಟಣದಲ್ಲಿ ಭಾನುವಾರದ ಸಂತೆಯಲ್ಲಿ 35 ಕೆಜಿಯ ಒಂದು ಬಾಕ್ಸ್ ಟೊಮೆಟೊ ಕೇವಲ ರೂ. 20ಕ್ಕೆ, 15 ಕೆಜಿಯ ಒಂದು ಚೀಲ ರೂ. 5 ರಿಂದ 10ಕ್ಕೆ ಮಾರಾಟವಾದವು. ಮಾರುಕಟ್ಟೆಗೆ ಒಂದೇ ದಿನ ಅತಿಹೆಚ್ಚು ಟೊಮೆಟೊ ಬಂದಿದ್ದರಿಂದ ಅರ್ಧಕ್ಕರ್ಧ ಟೊಮೆಟೊ ಬಾಕ್ಸ್‌ಗಳು ಮಾರಾಟವಾಗದೆ ಉಳಿದವು.

ಕೆಲವು ರೈತರು ಕೊನೆಕೊನೆಗೆ ಚಿಲ್ಲರೆ ಕಾಸು ಪಡೆದು ಟೊಮೆಟೊ ಚೀಲಗಳನ್ನು ಕೊಟ್ಟು ಹೋದರು. ಇನ್ನು ಕೆಲವರು ಆಟೋರಿಕ್ಷಾಗಳಲ್ಲಿ ವಿವಿಧ ಬಡಾವಣೆಗಳಿಗೆ ಹೋಗಿ 15 ಕೆಜಿಯ ಒಂದು ಚೀಲಕ್ಕೆ ರೂ. 10 ರಂತೆ ಮಾರಾಟ ಮಾಡಿದರು.

ಕಣ್ಣೀರಿಟ್ಟ ರೈತರು
ಮೂರು ತಿಂಗಳವರೆಗೆ ಬೆವರು ಹರಿಸಿ ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗದೆ ರೈತರು ಅಸಹಾಯಕರಾಗಿದ್ದರು. ಎಲ್ಲರ ಮುಖದಲ್ಲೂ ನೋವಿನ ಗೆರೆಗಳು ಎದ್ದು ಕಾಣುತ್ತಿದ್ದವು. `ಇದೆಂತಾ ವ್ಯವಸ್ಥೆ ಸಾರ್, ಒಂದು ಕೆಜಿ ಟೊಮೆಟೊನ ರೂ. 1ಕ್ಕೂ ಕೇಳುತ್ತಿಲ್ಲ. ರೈತರ ಶ್ರಮಕ್ಕೆ ಇಷ್ಟೇನಾ ಬೆಲೆ? ಇಷ್ಟು ಕಡಿಮೆ ಬೆಲೆಗೆ ಮಾರಾಟ ಮಾಡಲು ನಮಗೆ ನಾಚಿಕೆಯಾಗುತ್ತಿದೆ. ಅರ್ಧ ಟೀ ಕುಡಿದರೆ ರೂ. 5 ಕೊಡಬೇಕು. ಇನ್ನು ತಿಂಡಿ ತಿಂದರೆ ರೂ. 50 ಆಗುತ್ತದೆ. ರೂ. 1ಕ್ಕೆ ಒಂದು ಚಾಕೊಲೇಟ್ ಕೂಡ ಬರುವುದಿಲ್ಲ. ಹೀಗಾದರೆ ರೈತನ ಕತೆ ಮುಗಿದಂತೆ~ ಎಂದು ಮಾರಾಟವಾಗದೆ ಉಳಿದ ಟೊಮೆಟೊ ಕಾಯುತ್ತಾ ಕುಳಿತಿದ್ದ ಕೆಲವು ರೈತರು ನೋವಿನಿಂದ ನುಡಿದರು.

ಟೊಮೆಟೊ ಬಿಡಿಸಲು ಒಬ್ಬ ಕೂಲಿ ಆಳಿಗೆ ರೂ. 150 ರಿಂದ 200 ಕೇಳುತ್ತಾರೆ. ಒಂದು ಖಾಲಿ ಚೀಲಕ್ಕೆ ರೂ. 5 ಕೊಡಬೇಕು. ಬೀಜ, ಗೊಬ್ಬರ, ಔಷಧಿ, ಬೇಸಾಯಕ್ಕೆ ಸಾವಿರಾರು ಖರ್ಚಾಗುತ್ತದೆ. 10 ಕೆಜಿಯ ಒಂದು ಚೀಲ ಟೊಮೆಟೊ ಪಟ್ಟಣಕ್ಕೆ ತರಲು ಲಗೇಜ್ ಆಟೋಗೆ  ರೂ. 5 ಕೊಡಬೇಕು. ದೂರದ ಹಳ್ಳಿಗಳಾದರೆ ಇನ್ನೂ ಜಾಸ್ತಿ ಆಗುತ್ತದೆ. ಇಲ್ಲಿಯೂ ಚೀಲಕ್ಕೆ  ರೂ. 5  ಸುಂಕ ಕೊಡಬೇಕು. ಇದೆಲ್ಲಾ ಸೇರಿ 10 ಕೆಜಿಯ ಒಂದು ಕುಚ್ಚು ಟೊಮೆಟೊ ಪಟ್ಟಣಕ್ಕೆ ತರಲು ಕನಿಷ್ಠ  ರೂ. 50 ಖರ್ಚಾಗುತ್ತದೆ.

ಇಲ್ಲಿ ನೋಡಿದರೆ  ರೂ. 5, 10ಕ್ಕೆ ಕೇಳುತ್ತಾರೆ. ನಾವು ದಾವಣಗೆರೆ ಜಿಲ್ಲೆಯ ಮಾಯಕೊಂಡ, ಹಿಂಡಸಕಟ್ಟೆ ಸುತ್ತಮುತ್ತಲ ಹಳ್ಳಿಗಳಿಂದ 35 ಕೆಜಿಯ ಸುಮಾರು 400 ಬಾಕ್ಸ್ ಟೊಮೆಟೊ ತಂದಿದ್ದೇವೆ.  ರೂ. 100ಕ್ಕೆ 5 ಬಾಕ್ಸ್ ಕೇಳುತ್ತಾರೆ. ಎಲ್ಲವೂ ಹಾಗೇ ಉಳಿದಿವೆ. ಇವನ್ನು ವಾಪಸ್ ತೆಗೆದುಕೊಂಡು ಹೋಗಲೂ ಆಗುತ್ತಿಲ್ಲ. ಬಿಟ್ಟು ಹೋಗಲೂ ಆಗುತ್ತಿಲ್ಲ. ಲಾಭ ಹೋಗಲಿ ನಮಗೆ ಬಾಡಿಗೆ ಹಣವೂ ಸಿಗುವುದಿಲ್ಲ. ಹೊಲದಲ್ಲಿ ಕೊಳೆತು ಹೋದರೂ ಇನ್ನು ಮುಂದೆ ಟೊಮೆಟೊ ತರುವುದಿಲ್ಲ ಎನ್ನುತ್ತಾರೆ ರೈತರಾದ ಸಿದ್ದಪ್ಪ, ರಮೇಶ್, ನಾಗಪ್ಪ.

ವೈಜ್ಞಾನಿಕ ಬೆಲೆ ನೀಡಿ
ಎಲ್ಲಾ ರಾಜಕೀಯ ಪಕ್ಷಗಳು ಸ್ವಾರ್ಥ ಚಿಂತನೆಯಲ್ಲಿ ತೊಡಗಿದ್ದು, ರೈತರ ಬಗ್ಗೆ ಕಾಳಜಿ ಇಲ್ಲದಿರುವುದೇ ಇದಕ್ಕೆಲ್ಲ ಕಾರಣ. ಕೈಗಾರಿಕೋದ್ಯಮಿಗಳು ತಮ್ಮ ಉತ್ಪನ್ನಗಳಿಗೆ ತಾವೇ ಬೆಲೆ ನಿಗದಿ ಮಾಡುತ್ತಾರೆ. ಆದರೆ ರೈತನ ಉತ್ಪನ್ನಗಳಿಗೆ ಮಾತ್ರ ವ್ಯಾಪಾರಿಗಳು ಬೆಲೆ ಕಟ್ಟುತ್ತಾರೆ. ಇಂತಹ ದ್ವಿಮುಖ ಬೆಲೆನೀತಿಗಳಿಂದ ರೈತ ಮೋಸ ಹೋಗುತ್ತಿದ್ದಾನೆ. ಸರ್ಕಾರ ಒಂದು ಕ್ವಿಂಟಲ್ ಟೊಮೆಟೊಗೆ   ರೂ. 250 ಬೆಂಬಲಬೆಲೆ ನಿಗದಿ ಮಾಡುವ ಮೂಲಕ ದೇಶದ ಅನ್ನದಾತನನ್ನು ವ್ಯಂಗ್ಯ ಮಾಡುತ್ತಿದೆ.

ಇವರಿಗೆ ರೈತನ ಪರಿಶ್ರಮದ ಅರಿವಿದ್ದರೆ ಇಂತಹ ಬಾಲಿಶತನ ಪ್ರದರ್ಶಿಸುತ್ತಿರಲಿಲ್ಲ. ಅವರ ಅನೀತಿಗಳಿಂದ ರೈತನ ಸಾಲ ಮಣ್ಣಲ್ಲಿ ಕರಗಿ ಹೋಗುತ್ತಿದೆ. ರೈತ ತನ್ನ ಪರಿಶ್ರಮದ ಶೇ 30 ರಷ್ಟು ಪ್ರತಿಫಲ ಮಾತ್ರ ಪಡೆಯುತ್ತಿದ್ದು, ಶೇ 70 ರಷ್ಟನ್ನು ಸರ್ಕಾರವೇ ಲಾಭ ಪಡೆಯುತ್ತಿದೆ. ಇದರಿಂದ ರೈತ ಯಾವತ್ತೂ ಸರ್ಕಾರದ ಸಾಲಗಾರನಲ್ಲ. ಪರಿಶ್ರಮ ಮತ್ತು ಹಾಕಿದ ಬಂಡವಾಳಕ್ಕೆ ತಕ್ಕಂತೆ ವೈಜ್ಞಾನಿಕ ಬೆಲೆ ನಿಗದಿ ಮಾಡಬೇಕು. ಅಲ್ಲಿಯರೆಗೆ ರೈತ ಮೋಸಹೋಗುವುದು ತಪ್ಪುವುದಿಲ್ಲ ಎಂದು ಹೇಳುತ್ತಾರೆ ರೈತ ಸಂಘದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಈಚಘಟ್ಟದ ಸಿದ್ದವೀರಪ್ಪ.
                                                          

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT