ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರದುರ್ಗ: ಸಂಭ್ರಮದ ಬನಶಂಕರಿ ರಥೋತ್ಸವ

ಸರತಿ ಸಾಲಿನಲ್ಲಿ ನಿಂತು ದೇವಿಯ ದರ್ಶನ ಪಡೆದ ಸಾವಿರಾರು ಭಕ್ತರು
Last Updated 10 ಜನವರಿ 2020, 14:14 IST
ಅಕ್ಷರ ಗಾತ್ರ

ಚಿತ್ರದುರ್ಗ: ಐತಿಹಾಸಿಕ ಕಲ್ಲಿನಕೋಟೆ ಆವರಣದಲ್ಲಿ ಇರುವ ಬನಶಂಕರಿ ದೇವತೆಯ ರಥೋತ್ಸವವೂ ಶುಕ್ರವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.

ಬನದ ಹುಣ್ಣಿಮೆ ಅಂಗವಾಗಿ ಬನಶಂಕರಿ ದೇಗುಲದ ಭಕ್ತ ಸಮಿತಿ ಪದಾಧಿಕಾರಿಗಳು ದೇವಿಯ ಜಾತ್ರಾ ಮಹೋತ್ಸವವನ್ನು ಪ್ರತಿ ವರ್ಷದಂತೆ ಈ ಬಾರಿಯೂ ವಿಶೇಷವಾಗಿ ಆಯೋಜಿಸಿದ್ದರು.

ರಥೋತ್ಸವದ ಅಂಗವಾಗಿ ಗರ್ಭಗುಡಿಯಲ್ಲಿರುವ ಬನಶಂಕರಿ ದೇವತೆಗೆ ಬೆಳಿಗ್ಗೆಯಿಂದಲೇ ವಿಶೇಷ ಪೂಜೆಗಳು ನೆರವೇರಿದವು. ಅಲ್ಲದೆ, ರಥೋತ್ಸವಕ್ಕಾಗಿ ಸಿದ್ಧತೆಗಳು ನಡೆಯಿತು.

ವಿವಿಧ ಪುಷ್ಪಗಳಿಂದ ಸಿಂಗರಿಸಿದ್ದ ದೇವಿಯ ಉತ್ಸವ ಮೂರ್ತಿಯನ್ನು ಸಂಜೆ ರಥದಲ್ಲಿ ಪ್ರತಿಷ್ಠಾಪಿಸಲಾಯಿತು. ಭಕ್ತರು ತಂದಂತಹ ಹೂವಿನ ಹಾರಗಳಿಂದ ರಥವನ್ನು ಸುತ್ತಲೂ ಅಲಂಕರಿಸಿದ್ದರು. ಜತೆಗೆ ತೇರಿನ ಮೇಲ್ಭಾಗದಲ್ಲಿ ಬಾವುಟ ಮತ್ತು ಧ್ವಜ ರಾರಾಜಿಸುತ್ತಿತ್ತು.

ರಥದ ಮುಂಭಾಗದಲ್ಲಿ ಅನ್ನದ ಎಡೆಯನ್ನು ಇಟ್ಟು ದೇವತೆಗೆ ಪೂಜೆ ಸಲ್ಲಿಸಿದ ನಂತರ ಬನಶಂಕರಿ ದೇವಿಯ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಇದೇ ಸಂದರ್ಭದಲ್ಲಿ ಭಕ್ತರು ಜಯಘೋಷದೊಂದಿಗೆ ತೇರನ್ನು ಎಳೆಯುವ ಮೂಲಕ ಭಕ್ತಿ ಸಮರ್ಪಿಸಿದರು.

ಇಲ್ಲಿನ ಬುರುಜನಹಟ್ಟಿ ವೃತ್ತದಲ್ಲಿ ಇರುವ ಬನಶಂಕರಿ ದೇಗುಲದಲ್ಲಿಯೂ ಬನದ ಹುಣ್ಣಿಮೆ ಅಂಗವಾಗಿ ದೇವತೆಗೆ ವಿಶೇಷ ಪೂಜೆ ನೆರವೇರಿತು.

ರಥೋತ್ಸವ ನಡೆಯುವ ಸ್ಥಳಕ್ಕೆ ಕರೆದೊಯ್ಯುವ ಬನಶಂಕರಿ ದೇವತೆಯ ಮೂರ್ತಿಗೂ ವಿಶೇಷವಾಗಿ ಪುಷ್ಪಗಳಿಂದ ಅಲಂಕರಿಸಿದ್ದರು. ಹೂವಿನ ಪಲ್ಲಕ್ಕಿಯಲ್ಲಿ ಅದ್ದೂರಿ ಮೆರವಣಿಗೆ ಮೂಲಕ ದೇವಿಯನ್ನು ಭಕ್ತರು ಕರೆತಂದರು.

ರಥೋತ್ಸವದ ಬಳಿಕ ಭಕ್ತರು ಸರತಿ ಸಾಲಿನಲ್ಲಿ ನಿಂತು ಬನಶಂಕರಿ ದೇಗುಲ ಪ್ರವೇಶಿಸಿ ಪೂಜಾ ಕಾರ್ಯದಲ್ಲಿ ಪಾಲ್ಗೊಂಡರು. ನಂತರ ದೇವಾಂಗ ಸಮುದಾಯದಿಂದ ನೆರೆದಿದ್ದ ಭಕ್ತರಿಗೆ ಪ್ರಸಾದ ವಿತರಿಸಲಾಯಿತು.

ಬನದ ಹುಣ್ಣಿಮೆ ಅಂಗವಾಗಿ ಮನೆಗಳಲ್ಲಿಯೂ ದೇವರಿಗೆ ಪೂಜೆ ಸಲ್ಲಿಸಲಾಯಿತು. ಹೋಳಿಗೆ, ಸಿಹಿತಿಂಡಿಗಳನ್ನು ತಯಾರಿಸಿ ಜಾತ್ರೆಯನ್ನು ಸಂಭ್ರಮದಿಂದ ಆಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT