ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋರುತ್ತಿಹುದು ಕೇಶವಾಪುರ ಕೆರೆಯ ನೀರು..

Last Updated 5 ಸೆಪ್ಟೆಂಬರ್ 2017, 9:07 IST
ಅಕ್ಷರ ಗಾತ್ರ

ಚಿಕ್ಕಜಾಜೂರು: ಕೆರೆಯಲ್ಲಿ ಸಂಗ್ರಹವಾದ ಅಪಾರ ಪ್ರಮಾಣದ ನೀರು ಸೋರಿಕೆಯಾಗುತ್ತಿದ್ದು ರೈತರಲ್ಲಿ ಆತಂಕ ಮನೆ ಮಾಡಿರುವ ಸಂಗತಿ ತಡವಾಗಿ ಬೆಳಕಿಗೆ ಬಂದಿದೆ.
ಕಳೆದ ಎರಡು ವಾರಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಸಮೀಪದ ಕೇಶವಾಪುರ ಗ್ರಾಮದ ಕೆರೆಯಲ್ಲಿ ಸುಮಾರು ಐದು ಅಡಿಗೂ ಹೆಚ್ಚು ನೀರು ಬಂದು ಸಂಗ್ರಹವಾಗಿತ್ತು. ಇದರಿಂದ ಗ್ರಾಮಸ್ಥರಲ್ಲಿ ಸಂತಸ ಮನೆ ಮಾಡಿತ್ತು. ಆದರೆ, ಎರಡು ಮೂರು ದಿನಗಳಲ್ಲಿ ಕೆರೆಯ ನೀರು ಎರಡು ಅಡಿಗೆ ಇಳಿದಿರುವುದು ಆತಂಕ ಉಂಟು ಮಾಡಿದೆ.

ಕೊಳವೆ ಒಡೆದು ನೀರು ಪೋಲು: ಕೆರೆಯಲ್ಲಿನ ತೂಬಿನ ಮೂಲಕ ಜಮೀನುಗಳಿಗೆ ನೀಡಿದ್ದ ಸಂಪರ್ಕ ಕೊಳವೆಯನ್ನು ಕೋಡಿಯ ಹೊರ ಭಾಗದಲ್ಲಿ ಯಾರೋ ಕಿಡಿಗೇಡಿಗಳು ಒಡೆದು ಹಾಕಿದ್ದಾರೆ. ಇದರಿಂದ ಕೆರೆಯಲ್ಲಿ ಸಂಗ್ರಹವಾಗಿದ್ದ ಅಪಾರ ಪ್ರಮಾಣದ ನೀರು, 8 ಇಂಚು ದಪ್ಪದ ಕೊಳವೆ ಮೂಲಕ ನಿರಂತರವಾಗಿ ಹರಿದು ಹೋಗಿದೆ.

ಕೇಶವಾಪುರ ಮತ್ತು ಹನುಮನಕಟ್ಟೆ ಗ್ರಾಮಗಳ ಯುವಕರು ಕೆರೆ ಕೋಡಿಯ ಹೊರ ಭಾಗದಲ್ಲಿ ನೀರು ಹರಿಯುತ್ತಿದ್ದುದನ್ನು ಕಂಡು, ನೀರನ್ನು ನಿಲ್ಲಿಸಲು ದಪ್ಪದ ಮರದ ತುಂಡೊಂದನ್ನು ಕೊಳವೆಗೆ ಸೇರಿಸಿ ಹೊರ ಹೋಗುತ್ತಿದ್ದ ನೀರನ್ನು ತಾತ್ಕಾಲಿಕವಾಗಿ ನಿಲ್ಲಿಸಿದ್ದಾರೆ. ನಂತರ ಗ್ರಾಮ ಪಂಚಾಯ್ತಿ ಸದಸ್ಯರ ಗಮನಕ್ಕೆ ತಂದಿದ್ದಾರೆ.

ತಾತ್ಕಾಲಿಕ ದುರಸ್ತಿ: ವಿಷಯ ತಿಳಿದ ಕೇಶವಾಪುರದ ಗ್ರಾಮ ಪಂಚಾಯ್ತಿ ಸದಸ್ಯೆ ಸುನೀತಾ ಮೋಹನ್ ಹಾಗೂ ಸಹಾಯಕ ಎಂಜಿನಿಯರ್‌ ಅನಿಲ್‌ಕುಮಾರ್‌ ತೂಬಿನ
ಸ್ಥಳದಲ್ಲಿ ಜೆಸಿಬಿ ಮತ್ತು ಟ್ರ್ಯಾಕ್ಟರ್‌ನಲ್ಲಿ ಗ್ರಾಮಸ್ಥರ ನೆರವಿನಿಂದ ಮಣ್ಣನ್ನು ಹಾಕಿದ್ದಾರೆ. ಇದರಿಂದ ಬಾರಿ ಪ್ರಮಾಣದ ನೀರು ಹರಿಯುವುದು ನಿಂತಿದೆ. ಆದರೂ, ಸುಮಾರು 2 ಇಂಚಿನಷ್ಟು ನೀರು ಈಗಲೂ ಹರಿಯುತ್ತಿರುವುದು ಕಂಡು ಬಂದಿದೆ.

ದುರಸ್ತಿಗೆ ಆಗ್ರಹ: ಕೆರೆಯು ಕೇಶವಾಪುರದ ಸರ್ವೆ ನಂಬರ್‌ 6ರಲ್ಲಿದ್ದು, ಸುಮಾರು 172 ಎಕರೆ ವಿಸ್ತೀರ್ಣವನ್ನು ಹೊಂದಿದೆ. ಉತ್ತಮ ಮಳೆಯಾದಲ್ಲಿ ಕೆರೆಯಲ್ಲಿ ಸುಮಾರು 20 ಅಡಿಯಷ್ಟು ನೀರು ಸಂಗ್ರಹವಾಗುವುದು. ಈಗ ಕಡಿಮೆ ನೀರು ಇರುವುದರಿಂದ ಈಗಲೇ ದುರಸ್ತಿ ಮಾಡಿದರೆ ಒಳ್ಳೆಯದು. ಇಲ್ಲದಿದ್ದರೆ, ಈ ಕೆರೆಯ ನೀರನ್ನೇ ನೆಚ್ಚಿಕೊಂಡಿರುವ ಕೇಶವಾಪುರ, ಹನುಮನಕಟ್ಟೆ, ಬಿಜ್ಜನಾಳು, ಅಮೃತಾಪುರ, ಅರಸನಘಟ್ಟ, ಚಿಕ್ಕಂದವಾಡಿ ಗ್ರಾಮಗಳ ಕುಡಿಯುವ ಮತ್ತು ತೋಟಗಳ ನೂರಾರು ಕೊಳವೆ ಬಾವಿಗಳ ಅಂತರ್ಜಲ ಕುಸಿದು ಈ ವರ್ಷವೂ ನೀರಿನ ಬರವನ್ನು ಎದುರಿಸ ಬೇಕಾಗುತ್ತದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಜಾನುವಾರುಗಳಿಗೆ ನೀರಿನ ತಾಣ: ಬೇಸಿಗೆಯಲ್ಲಿ ಸುತ್ತಮುತ್ತಲಿನ ಗ್ರಾಮಗಳ ಜಾನುವಾರುಗಳಿಗೆ ಮತ್ತು ಕಾಡು ಪ್ರಾಣಿಗಳಿಗೆ ಇದು ನೀರಿನ ತಾಣವಾಗಿದೆ. ಇದು ಖಾಲಿಯಾದಲ್ಲಿ ಕುಡಿಯುವ ನೀರಿನ ಹಾಹಾಕಾರ ಉಂಟಾಗುತ್ತದೆ.

ಆದ್ದರಿಂದ ಸಂಬಂಧ ಪಟ್ಟ ತಾಲ್ಲೂಕು ಮತ್ತು ಜಿಲ್ಲಾ ಅಧಿಕಾರಿಗಳು ತಕ್ಷಣ ನೀರು ಹರಿಯದಂತೆ ಸಂಪೂರ್ಣವಾಗಿ ದುರಸ್ತಿ ಮಾಡಿಸಬೇಕು ಎಂದು ಕೇಶವಾಪುರ ಮತ್ತು ಹನುಮನಕಟ್ಟೆ ಗ್ರಾಮಸ್ಥರಾದ ಹನುಮಂತಪ್ಪ, ಮಂಜುನಾಥ, ಕೆಂಚವೀರಪ್ಪ, ಮುರುಗೇಂದ್ರಪ್ಪ, ತಿಮ್ಮಣ್ಣ, ಬಸವರಾಜ್‌ ಮತ್ತಿತರರು ಒತ್ತಾಯಿಸಿದ್ದಾರೆ.

ಶೀಘ್ರ ದುರಸ್ತಿಗೆ: ಮೂರ್ನಾಲ್ಕು ದಿನಗಳಲ್ಲಿ ತೂಬಿನ ದುರಸ್ತಿಯನ್ನು ಮಾಡಿಸಿ, ಕೆರೆಯಲ್ಲಿ ಆಗುತ್ತಿರುವ ಸೋರಿಕೆಯನ್ನು ನಿಲ್ಲಿಸಲು ಕ್ರಮ ಕೈಗೊಳ್ಳುವುದಾಗಿ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ರೇಣುಕಾಚಾರ್ಯ ‘ಪ್ರಜಾವಾಣಿ’ಗೆ ಪ್ರತಿಕ್ರಿಯೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT