ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈಜ್ಞಾನಿಕವಾಗಿ ಆಗದ ಕಸ ಸಂಸ್ಕರಣೆ

ವಿಲೇವಾರಿ ಘಟಕದಲ್ಲಿ ಬೃಹತ್ತಾಗಿ ಬೆಳೆಯುತ್ತಿರುವ ಘನ ತ್ಯಾಜ್ಯ
Last Updated 2 ಏಪ್ರಿಲ್ 2018, 10:11 IST
ಅಕ್ಷರ ಗಾತ್ರ

ಗದಗ: ಕಸದ ಸಮಸ್ಯೆಗೆ ಮುಕ್ತಿ ನೀಡುವ ಉದ್ದೇಶದಿಂದ ಆರಂಭಿಸಿದ ‘ಘನತ್ಯಾಜ್ಯ ವಸ್ತು ವಿಲೇವಾರಿ ಘಟಕ’ ಅಧಿಕಾರಿಗಳ ನಿರ್ಲಕ್ಷ್ಯದಿಂದ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಕೆಲವು ವರ್ಷಗಳ ಹಿಂದೆ ಗದಗ–ಬಳಗಾನೂರ ರಸ್ತೆಯ­ಲ್ಲಿ ಇರುವ 25 ಎಕರೆ 4 ಗುಂಟೆ ಪ್ರದೇಶ­ದಲ್ಲಿ ₹2.17 ಕೋಟಿ ವೆಚ್ಚದಲ್ಲಿ ಕಸ ಸಂಸ್ಕರಣಾ ಘಟಕ ನಿರ್ಮಿಸಲಾಗಿದೆ. ಬಡಾವಣೆಗಳು ಹಾಗೂ ಇತರೆಡೆ ಪ್ರತಿದಿನ ಸಂಗ್ರಹಿಸುವ ಅಂದಾಜು 75 ಟನ್‌ ಕಸವನ್ನು ಇಲ್ಲಿಯೇ ಸುರಿಯಲಾಗುತ್ತಿದೆ. ಈಗಾ­ಗಲೇ ಘಟಕವು ಕಸದಿಂದ ಭರ್ತಿ­ಯಾಗಿದೆ. ಕಸ ಬೇರ್ಪಡಿಸಿ ಕೇವಲ 10 ಲಾರಿಗಳಷ್ಟು ಗೊಬ್ಬರ ತಯಾರಿಸಲಾಗಿದೆ. ಈ ಘಟಕದಲ್ಲಿ ದಿನದಿಂದ ದಿನಕ್ಕೆ ತ್ಯಾಜ್ಯ ಹೆಮ್ಮರವಾಗಿ ಬೆಳೆಯುತ್ತಿದೆ. ಭವಿಷ್ಯದಲ್ಲಿ ಕಸ ಸುರಿಯಲು ಸ್ಥಳ ಸಿಗದ ಪರಿಸ್ಥಿತಿ ನಿರ್ಮಾಣವಾಗಲಿದೆ.ಎಲ್ಲವೂ ಅಂದುಕೊಂಡಂತೆ ನಡೆದಿ­ದ್ದರೆ ಯೋಜನೆ ಪೂರ್ಣ ಗೊಂಡು ಗದಗ ನಗರಸಭೆಗೆ ಆದಾಯವೂ ಬರ­ಬೇಕಿತ್ತು. ಆದರೆ, ಈವರೆಗೂ ಕಸ ಸಂಸ್ಕ­ರಣಾ ಘಟಕ ಸರಿಯಾಗಿ ಕೆಲಸ ಮಾಡದ ಕಾರಣ, ಯೋಜನೆಗೆ ಮತ್ತಷ್ಟು ಹಿನ್ನಡೆ ಆದಂತಾಗಿದೆ.

ನಗರಸಭೆ ಆದಾಯಕ್ಕೂ ಕುತ್ತು: ಘಟಕದಲ್ಲಿ ಕಾಂಪೋಸ್ಟ್‌ ಗೊಬ್ಬರ­ವಾಗಿ ಮಾರ್ಪಾಡು ಮಾಡಲು ವಿಂಡೋ ಪ್ಲಾಟ್ ಫಾರ್ಮ್ ಮಾಡ­ಲಾಗಿದೆ. ಆದರೆ, ಪ್ಲಾಟ್ ಫಾರ್ಮ್ ಅನ್ನು ನಿರೀಕ್ಷೆಗೆ ತಕ್ಕಂತೆ ಬಳಕೆ ಮಾಡದ ಕಾರಣ ಅದಕ್ಕೆ ಮಾಡಿದ ವೆಚ್ಚವೂ ವ್ಯರ್ಥವಾಗಿದೆ. ಹಸಿ ಕಸದಿಂದ ಉತ್ಪನ್ನ ಮಾಡಬಹುದಾದ ಕಾಂಪೋಸ್ಟ್‌ ಗೊಬ್ಬರ ತಯಾರಿಸದ ಕಾರಣ ನಗರಸಭೆ ಆದಾಯಕ್ಕೂ ಹೊಡೆತ ಬಿದ್ದಿದೆ. ‘ಘನ ತ್ಯಾಜ್ಯ ವಸ್ತು ವಿಲೇವಾರಿ ಘಟಕದಲ್ಲಿ ಈಗಾಗಲೇ 10 ಲಾರಿ ಗಳಷ್ಟು ಮರಳಿನಂತೆ ಇರುವ ಗೊಬ್ಬರ ತಯಾರಿಸಲಾಗಿದೆ. ಇಲ್ಲಿಗೆ ಬಂದು ಕೆಲವು ರೈತರು, ಈ ಗೊಬ್ಬರವನ್ನು ನೋಡಿಕೊಂಡು ಹೋಗಿದ್ದಾರೆ. ಈವರೆಗೆ ಯಾರೂ ಗೊಬ್ಬರವನ್ನು ಖರೀದಿ ಮಾಡಿಲ್ಲ. ಸದ್ಯ ಒಣ ಕಸವನ್ನು ಬೇರ್ಪಡಿಸಲಾಗುತ್ತಿದೆ. ಸಂಪೂರ್ಣ ಕಸ ಬೇರ್ಪಡಿಸಲು ಆಗಿಲ್ಲ’ ಎಂದು ಹೆಸರು ಹೇಳಲು ಇಚ್ಛಿಸದ ನಗರಸಭೆ ಅಧಿಕಾರಿಯೊಬ್ಬರು ತಿಳಿಸಿದರು.

‘ಘನತ್ಯಾಜ್ಯ ಘಟಕದಲ್ಲಿ ತೆಗ್ಗುಗಳನ್ನು ತೆಗೆದು ಮರಳು ಹಾಗೂ ಗಾಜು ಹಾಕಿರುವುದರಿಂದ ತ್ಯಾಜ್ಯದ ವಿಷ ಭೂಮಿ ಸೇರುತ್ತಿದೆ. ಇದರಿಂದ ಸುತ್ತಮುತ್ತಲಿನ ರೈತರ ಭೂಮಿಗೆ ಹಾನಿಯಾಗುತ್ತದೆ. ನಗರಸಭೆಯಿಂದ ವೈಜ್ಞಾನಿಕವಾಗಿ ಕಸ ವಿಲೇವಾರಿ ಮಾಡಬೇಕು’ ಎಂದು ಗದುಗಿನ ನಿವಾಸಿ, ಸಾಮಾಜಿಕ ಕಾರ್ಯಕರ್ತ ಹೀರಾಲಾಲ್‌ ಸಿಂಗ್ರಿ ಒತ್ತಾಯಿಸಿದರು.

**

ಕಸದ ಸಮಸ್ಯೆ ನಿವಾರಣೆ ಆಗಬೇಕಾದರೆ, ಘನತ್ಯಾಜ್ಯ ವಸ್ತು ವಿಲೇವಾರಿ ಘಟಕ ಸಮರ್ಪಕವಾಗಿ ಕಾರ್ಯನಿರ್ವಹಿಸಬೇಕಿದೆ – ನಾಗರಾಜ ಹಿತ್ತಲಮನಿ, ಗದುಗಿನ ನಿವಾಸಿ.

**

ಹುಚ್ಚೇಶ್ವರ ಅಣ್ಣಿಗೇರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT