ಮಂಗಳವಾರ, ಆಗಸ್ಟ್ 9, 2022
20 °C
ಆರ್‌ಜಿಯುಎಚ್‌ಎಸ್‌: ಹಂಗಾಮಿ ಕುಲಪತಿಯಾಗಿ ಡಾ. ಜಯಕರ ನೇಮಕ

ಹಂಗಾಮಿ ಕುಲಪತಿ ನೇಮಕ: ಅಶ್ವತ್ಥನಾರಾಯಣ – ಸುಧಾಕರ್‌ ನಡುವೆ ಮುಸುಕಿನ ಗುದ್ದಾಟ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯಕ್ಕೆ (ಆರ್‌ಜಿಯುಎಚ್‌ಎಸ್‌) ಹಂಗಾಮಿ ಕುಲಪತಿಯಾಗಿ ಡಾ.ಎಸ್‌.ಎಂ. ಜಯಕರ  ಅವರನ್ನು ನೇಮಿಸಿದ ವಿಚಾರ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌. ಅಶ್ವತ್ಥನಾರಾಯಣ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್‌ ನಡುವೆ ಮುಸುಕಿನ ಗುದ್ದಾಟಕ್ಕೆ ಕಾರಣವಾಗಿದೆ.

ಜಯಕರ ಅವರ ನೇಮಕಾತಿಯ ಹಿಂದೆ ಅಶ್ವತ್ಥನಾರಾಯಣ ಇದ್ದಾರೆಂದು ಸುಧಾಕರ್‌ ಅಸಮಾಧಾನಗೊಂಡಿದ್ದಾರೆ ಎನ್ನಲಾಗಿದೆ. ಹಾಲಿ ಕುಲಪತಿ ಎಸ್‌. ಸಚ್ಚಿದಾನಂದ ಅವರು ಸೋಮವಾರ (ಜೂನ್‌ 14) ನಿವೃತ್ತಿಯಾಗಿದ್ದು, ಹಂಗಾಮಿ ಕುಲಪತಿಯಾಗಿ ಜಯಕರ ಅವರು ಅಧಿಕಾರ ವಹಿಸಿಕೊಂಡಿದ್ದಾರೆ.

‘ರಾಜೀವ್‌ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯಕ್ಕೆ ಹಂಗಾಮಿ ಕುಲಪತಿ ನೇಮಕ ನನ್ನ ಗಮನಕ್ಕೇ ಬಂದಿಲ್ಲ. ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ನೇಮಕಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರ ಜೊತೆ ಚರ್ಚಿಸಬೇಕಾಗಿತ್ತು. ಆದರೆ ಕೋವಿಡ್‌ನಿಂದಾಗಿ ಸಾಧ್ಯವಾಗಿಲ್ಲ. ಮುಖ್ಯಮಂತ್ರಿ ಜೊತೆ ಈ ಬಗ್ಗೆ ಚರ್ಚಿಸಿದ್ದು, ಕೆಲವು ವಿಷಯಗಳನ್ನು ಹೇಳಿದ್ದಾರೆ. ಆ ವಿಷಯಗಳನ್ನು ರಾಜ್ಯಪಾಲರ ಗಮನಕ್ಕೆ ತರುತ್ತೇನೆ’ ಎಂದು ಸುಧಾಕರ್‌ ಸೋಮವಾರ ಹೇಳಿದ್ದರು.

‘ಕುಲಪತಿ ಸ್ಥಾನಕ್ಕೆ ಯಾವ ರೀತಿಯ ಸಂಸ್ಕಾರ, ಯಾವ ರೀತಿಯ ಶೈಕ್ಷಣಿಕ ಅರ್ಹತೆ ಇರುವ ಉತ್ತಮರನ್ನು ತರಬೇಕೆಂಬ ವಿಚಾರದಲ್ಲಿ ರಾಜ್ಯ ಸರ್ಕಾರಕ್ಕೆ ಸ್ಪಷ್ಟತೆ ಇದೆ. ಆ ಬಗ್ಗೆ ರಾಜ್ಯಪಾಲರ ಗಮನಕ್ಕೆ ತರಲಾಗುವುದು. ಅನುಮಾನಕ್ಕೂ ಅವಕಾಶವಿಲ್ಲದ ಶುದ್ಧ ಚಾರಿತ್ರ್ಯವಿರುವ ವ್ಯಕ್ತಿ ಮಾತ್ರ ಕುಲಪತಿಯಾಗಲು ಯೋಗ್ಯವೇ ಹೊರತು ಯಾವುದೇ ಅಪವಾದ ಹೊತ್ತುಕೊಂಡವರು ಕುಲಪತಿ ಕುರ್ಚಿಯಲ್ಲಿ ಕೂರಲು ಸಾಧ್ಯವಿಲ್ಲ’ ಎಂದೂ ಹೇಳಿದ್ದರು.

ಈ ಬಗ್ಗೆ ಮಂಗಳವಾರ ಪ್ರತಿಕ್ರಿಯಿಸಿದ ಅಶ್ವತ್ಥನಾರಾಯಣ, ‘ಹಂಗಾಮಿ ಕುಲಪತಿ ನೇಮಕ ಪಾರದರ್ಶಕ, ಕಾನೂನು ಪ್ರಕಾರವೇ ಆಗಿದೆ. ರಾಜ್ಯಪಾಲರು ಈ ನೇಮಕ ಮಾಡಿದ್ದಾರೆ. ಇದರಲ್ಲಿ ನನ್ನ ಯಾವುದೇ ಪಾತ್ರ ಇಲ್ಲ. ಕಾನೂನು ವ್ಯಾಪ್ತಿ ಮೀರಿ ನೇಮಕ ಮಾಡಲು ಆಗುವುದಿಲ್ಲ, ನೇಮಕದ ಹಿಂದೆ ನನ್ನ ಪ್ರಭಾವ ಇದೆ ಎನ್ನುವುದು ಸುಳ್ಳು. ಎಲ್ಲ ಊಹಾಪೋಹ’ ಎಂದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು