ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೆಡಿಎಸ್ ಅಭ್ಯರ್ಥಿ ಗೆಲ್ಲಿಸಲು ಕಾಂಗ್ರೆಸ್ ಮುಖಂಡರ ಪಣ

Last Updated 21 ಮಾರ್ಚ್ 2019, 14:06 IST
ಅಕ್ಷರ ಗಾತ್ರ

ಶಿವಮೊಗ್ಗ: ಜೆಡಿಎಸ್‌ ಅಭ್ಯರ್ಥಿ ಎಸ್‌.ಮಧು ಬಂಗಾರಪ್ಪ ಅವರ ಗೆಲುವಿಗೆ ಶಕ್ತಿಮೀರಿ ಶ್ರಮಿಸಲು ಕಾಂಗ್ರೆಸ್ ನಾಯಕರು ಪಕ್ಷದ ಜನಪ್ರತಿನಿಧಿಗಳು, ಕಾರ್ಯಕರ್ತರಿಗೆ ಸೂಚಿಸಿದರು.

ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಗುರುವಾರ ಲೋಕಸಭಾ ಚುನಾವಣೆಯ ಪ್ರಯುಕ್ತ ಹಮ್ಮಿಕೊಂಡಿದ್ದ ಕಾಂಗ್ರೆಸ್‌–ಜೆಡಿಎಸ್ ಸಂಘಟನಾ ಸಭೆಯಲ್ಲಿ ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ವಿಧಾನ ಪರಿಷತ್ ಸದಸ್ಯ ಆರ್.ಪ್ರಸನ್ನಕುಮಾರ್, ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಎಚ್‌.ಎಸ್. ಸುಂದರೇಶ್, ಮಾಜಿ ಅಧ್ಯಕ್ಷ ತೀ.ನಾ.ಶ್ರೀನಿವಾಸ್, ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ಎಸ್.ಪಿ. ಶೇಷಾದ್ರಿ, ಮಹಿಳಾ ಅಧ್ಯಕ್ಷೆ ಅನಿತಾಕುಮಾರಿ, ಚುನಾವಣಾ ಕಹಳೆ ಮೊಳಗಿಸಿದರು.

ಈ ಚುನಾವಣೆ ಗೆಲ್ಲಲೇಬೇಕು. ಸಣ್ಣಪುಟ್ಟ ಭಿನ್ನಾಭಿಪ್ರಾಯ ಮರೆತು ಎರಡೂ ಪಕ್ಷಗಳ ಕಾರ್ಯಕರ್ತರು ಒಟ್ಟಿಗೆ ಹೋರಾಟ ನಡೆಸಬೇಕು. ಮೋದಿ ಸರ್ಕಾರದ ವೈಫಲ್ಯ, ರಾಜ್ಯದ ಸಮ್ಮಿಶ್ರ ಸರ್ಕಾರದ ಸಾಧನೆಗಳನ್ನು ಮತದಾರರಿಗೆ ತಲುಪಿಸಬೇಕು. ಮತದಾರರ ಮನ ಗೆಲ್ಲಲು ಹಗಲಿರುಳು ಶ್ರಮಿಸಬೇಕು ಎಂದು ಕೋರಿದರು.

ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಸಾಧನೆಗಳೆಲ್ಲವೂ ಶೂನ್ಯ. ಇದು ಸುಳ್ಳು ಮತ್ತು ಸತ್ಯಗಳ ನಡುವಿನ ಹಣಾಹಣಿ. ಬಿಜೆಪಿ ಮುಖಂಡರು ಸುಳ್ಳಿನ ಸರಮಾಲೆ ಕಟ್ಟುತ್ತಿದ್ದಾರೆ. ದೇಶದ ಆರ್ಥಿಕ ಪರಿಸ್ಥಿತಿ ಬುಡಮೇಲು ಮಾಡುತ್ತಿದ್ದಾರೆ. 10 ಕೋಟಿ ಉದ್ಯೋಗ ನಷ್ಟ ಮಾಡಿದ್ದಾರೆ. ಎಸ್ಸೆಸ್ಸೆಲ್ಸಿ ತೇರ್ಗಡೆಯಾಗದ ಪ್ರಧಾನಿ ಮೋದಿ ಅವರು ಉದ್ಯೋಗ ಕೇಳುವ ಯುವ ಜನರಿಗೆ ಪಕೋಡ, ಚಹಾ ಮಾರಿ ಬದುಕಿ ಎಂದು ಹೇಳುತ್ತಿದ್ದಾರೆ. 2014ರ ಚುನಾವಣೆಗೂ ಮೊದಲು ನೀಡಿದ್ದ ಉದ್ಯೋಗದ ಭರವಸೆ ಸೇರಿದಂತೆ ಯಾವುದೂ ಈಡೇರಿಲ್ಲ ಎಂದು ದೂರಿದರು.

ಕ್ಷೇತ್ರದ ವ್ಯಾಪ್ತಿಯಲ್ಲಿ ಈಗಾಗಲೇ ಜಂಟಿ ಪ್ರಚಾರ ಕಾರ್ಯ ಆರಂಭವಾಗಿದೆ. ಎರಡೂ ಪಕ್ಷದ ಕಾರ್ಯಕರ್ತರು ಸಣ್ಣಪುಟ್ಟ ಭಿನ್ನಾಭಿಪ್ರಾಯ ಮರೆತು ಬಾರಿ ಮತಗಳ ಅಂತರದಿಂದ ಮಧು ಅವರನ್ನು ಗೆಲ್ಲಿಸಬೇಕು. ದೇಶ ರಕ್ಷಿಸಲು ಈ ಮೈತ್ರಿ ಮಾಡಿಕೊಂಡಿದ್ದೇವೆ. ಮಧುಬಂಗಾರಪ್ಪ ಅವರು ಸಂಸದರಾದರೆ ಎರಡೂ ಪಕ್ಷಗಳ ಬಲ ಹೆಚ್ಚಾಗುತ್ತದೆ. ರಾಹುಲ್ ಗಾಂಧಿ ಪ್ರಾಧಾನಿಯಾಗುತ್ತಾರೆ ಎಂದು ಭವಿಷ್ಯ ನುಡಿದರು.

ಕ್ಷೇತ್ರದ ಹಲವೆಡೆ ಚುನಾವಣಾ ಪ್ರಚಾರದ ದಿನಾಂಕಗಳನ್ನು ನಿಗದಿ ಮಾಡಲಾಗಿದೆ. ಬೂತ್‌ಮಟ್ಟದಲ್ಲಿ ಅಧ್ಯಕ್ಷರ ನೇಮಕವಾಗಿದೆ. ತರಬೇತಿ ಶಿಬಿರಗಳನನೂ ಆಯೋಜಿಸಲಾಗಿದೆ. ಹೊಸ ಸದಸ್ಯರ ನೋಂದಣಿ ಕಾರ್ಯವೂ ಭರದಿಂದ ಸಾಗಿದೆ. ಎಲ್ಲರೂ ಸೇರಿ ಮತದಾರರ ಮನೆ, ಮನ ತಲುಪಬೇಕು ಎಂದು ಸಲಹೆ ನೀಡಿದರು.

ಜೆಡಿಎಸ್‌ ಅಭ್ಯರ್ಥಿ ಮಧುಬಂಗಾರಪ್ಪ, ನಾಲ್ಕು ತಿಂಗಳ ಹಿಂದೆ ನಡೆದಿದ್ದ ಉಪ ಚುನಾವಣೆಯಲ್ಲಿ ಸಮಯದ ಕೊರತೆ ಇತ್ತು. ಆದರೆ, ಈ ಬಾರಿ ಅಂತಹ ಆತಂಕಗಳಿಲ್ಲ. ಹಾಗಾಗಿ ಎಲ್ಲರೂ ಒಟ್ಟಾಗಿ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದ್ದೇವೆ’ ಎಂದರು.

ರಾಜ್ಯಮಟ್ಟದಲ್ಲಿಯೂ ಎರಡೂ ಪಕ್ಷಗಳು ಒಟ್ಟಾಗಿ ಹೋಗಬೇಕು. ಕಾಂಗ್ರೆಸ್‌–ಜೆಡಿಎಸ್ ಸಹಕಾರದ ಪರಿಣಾಮ ಮತದಾರರ ಸಹಕಾರ ಎರಡು ಪಟ್ಟು ಹೆಚ್ಚಿರಬೇಕು. ಎರಡೂ ಪಕ್ಷದ ಕಾರ್ಯಕರ್ತರು, ಮುಖಂಡರು, ಜನಪ್ರತಿನಿಧಿಗಳು ಬೂತ್ ಮಟ್ಟದಲ್ಲಿ ನಿರಂತರ ಕೆಲಸ ಮಾಡಬೇಕು. ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯ ಅವರು ಜಿಲ್ಲೆಗೆ ನೀಡಿದ ಯೋಜನೆ ಮತದಾರರಿಗೆ ತಿಳಿಸಬೇಕು ಎಂದು ಕೋರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT