ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರನ್ನು ಸಂಕಷ್ಟಕ್ಕೀಡು ಮಾಡಿದ ಕೆಎಫ್‌ಡಿ, ಕೊರೊನಾ

ಮಂಗನ ಕಾಯಿಲೆ ಪೀಡಿತ ಪ್ರದೇಶದ ನಾಗರಿಕರ ಬವಣೆ
Last Updated 2 ಏಪ್ರಿಲ್ 2020, 12:46 IST
ಅಕ್ಷರ ಗಾತ್ರ

ಕಾರ್ಗಲ್: ಸಾಗರ ತಾಲ್ಲೂಕಿನ ಮಂಗನ ಕಾಯಿಲೆ ಪೀಡಿತ ಪ್ರದೇಶಗಳಲ್ಲಿ ಪ್ರಮುಖವಾದ ಅರಳಗೋಡು ಗ್ರಾಮ ಪಂಚಾಯಿತಿ, ಭಾನುಕುಳಿ ಗ್ರಾಮ ಪಂಚಾಯಿತಿ ಮತ್ತು ಜೋಗ ಕಾರ್ಗಲ್ ಪಟ್ಟಣ ಪಂಚಾಯಿತಿ ಹೆನ್ನಿ ಮಜಿರೆ ಗ್ರಾಮಗಳಲ್ಲಿ ಕೃಷಿ ಕೆಲಸಕ್ಕೆ, ತೋಟ ಮತ್ತು ಜಮೀನುಗಳಿಗೆ ಹೋದರೆ ಎಲ್ಲಿ ಕೆಎಫ್‌ಡಿ ವೈರಸ್ ಮೈಗಂಟಿಕೊಳ್ಳುವುದೋ ಎಂಬ ಭಯ, ಕೊರೊನಾ ತಗುಲುವ ಭೀತಿ ಜನರನ್ನು ಬವಣೆಗೆ ನೂಕಿದೆ.

2019ರ ಸಾಲಿನಲ್ಲಿ ಸರಣಿ ಸಾವುಗಳು ಸಂಭವಿಸಿ ನೂರಾರು ರೋಗಿಗಳು ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮರಳಿ ಬಂದಿದ್ದರು. ಶೇ 93ರಷ್ಟು ಅರಣ್ಯ ವಾಸಿಗಳಿಗೆ ಮತ್ತು ಇತರೆ ಪ್ರದೇಶದ ನಾಗರಿಕರಿಗೆ ಕೆಎಫ್‌ಡಿ ರೋಗ ನಿರೋಧಕ ಚುಚ್ಚುಮದ್ದನ್ನು ನೀಡಲಾಗಿತ್ತು. ಪ್ರಥಮ, ದ್ವಿತೀಯ ಮತ್ತು 3ನೇ ಹಂತದ ಚುಚ್ಚುಮದ್ದುಗಳನ್ನು ನೀಡಿದ ಕಾರಣ ಈ ವರ್ಷ ಮಂಗನ ಕಾಯಿಲೆ ಗೋಚರವಾಗುವುದಿಲ್ಲ ಎಂಬ ನಂಬಿಕೆಯಲ್ಲಿ ಗ್ರಾಮಸ್ಥರು ಇದ್ದರು.

ಬೇಸಿಗೆಯ ಬಿಸಿಲಿಗೆ ಅಲ್ಲಲ್ಲಿ ಅರಣ್ಯವಾಸಿಗಳಲ್ಲಿ ಜ್ವರ ಕಾಣಿಸಿಕೊಂಡು ರಕ್ತ ತಪಾಸಣೆ ನಡೆದಾಗ ಕೆಎಫ್‌ಡಿ ವೈರಸ್ ಇರುವಿಕೆ ಖಚಿತವಾಗಿ ಬಿಟ್ಟಿತ್ತು. ಚಿಕಿತ್ಸೆಗೆಂದು ಅರಳಗೋಡು ಆಸ್ಪತ್ರೆ, ಸಾಗರ ಉಪವಿಭಾಗ ಆಸ್ಪತ್ರೆ, ಸಾಗರ ಉಪವಿಭಾಗೀಯ ಆಸ್ಪತ್ರೆಯಿಂದ ಜಿಲ್ಲಾ ಮೆಗ್ಗಾನ್ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ಜನರು ದಾಖಲಾಗುತ್ತಿದ್ದಾರೆ.

ಮಣಿಪಾಲ ಆಸ್ಪತ್ರೆಯಲ್ಲಿದ್ದ ಉಚಿತ ಚಿಕಿತ್ಸೆಯನ್ನು ಯಡಿಯೂರಪ್ಪ ಸರ್ಕಾರ ಸ್ಥಗಿತಗೊಳಿಸಿತ್ತು. ಮತ್ತೇ ಸಾವಿನ ಸರಪಳಿ ಬೆಳೆಯಿತು. ಮಂಡವಳ್ಳಿ ಚೌಡಪ್ಪನ ಸಾವಿನೊಂದಿಗೆ ಮುಂದವರೆದ ಸಾವಿನ ಸರಪಳಿ ಕಸಗುಪ್ಪೆ ಕೋಮರಾಜ್ ಸಾವಿನೊಂದಿಗೆ ನಾಗರಿಕರು ಮತ್ತೇ ಬೀದಿಗಿಳಿದು ಚಿಕಿತ್ಸೆ ಮತ್ತಿತರ ಸೌಲಭ್ಯಗಳಿಗಾಗಿ ಹೋರಾಟ ಮಾಡುವ ಅನಿವಾರ್ಯತೆ ಎದುರಾಯಿತು.

ಮಲೆನಾಡಿನ ಶಾಸಕರು ಮತ್ತು ಸಾಗರ ಶಾಸಕ ಹರತಾಳು ಹಾಲಪ್ಪ ಸದನದಲ್ಲಿ ಮಂಗನ ಕಾಯಿಲೆ ಬಗ್ಗೆ ಪ್ರಸ್ತಾಪಿಸಿದ್ದರಿಂದ ಮತ್ತೆ ಮಣಿಪಾಲ ಆಸ್ಪತ್ರೆಯಲ್ಲಿ ಮಂಗನ ಕಾಯಿಲೆ ಸೋಂಕಿತರಿಗೆ ಉಚಿತ ಚಿಕಿತ್ಸೆ ದೊರೆಯುವಂತಾದದ್ದು ಅಲ್ಪ ಮಟ್ಟಿನ ಸಮಾಧಾನ ನೀಡಿದೆ.

ಈ ಮಧ್ಯೆ ಕೃಷಿ, ಕೂಲಿ ಚಟುವಟಿಕೆಗೆ ಸದ್ಯ ವಿರಾಮ ಹೇಳಿ ಜಮೀನುಗಳಿಂದ ಹೊರಬಂದರೆ 21 ದಿನಗಳ ಜನತಾ ಕರ್ಪ್ಯೂ ಆದೇಶದಂತೆ ಮನೆಯಿಂದ ಹೊರ ಹೋಗುವಂತಿಲ್ಲ ಎಂಬುದು ಈ ಭಾಗದ ಜನರ ಪಾಲಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

ಅಂಗಳದಲ್ಲಿ ಒಣಗಿಸಿದ ಅಡಿಕೆ, ಕಾಳುಮೆಣಸು, ಏಲಕ್ಕಿ ಬೆಳೆ, ತೆಂಗು, ಮಾವು, ಬಾಳೆ, ಸೊಪ್ಪು ತರಕಾರಿಗಳನ್ನು ಪೇಟೆಗೆ ಒಯ್ದು ಮಾರಾಟ ಮಾಡುವಂತಿಲ್ಲ. ಪೇಟೆಯವರು ಹಳ್ಳಿಗಳಿಗೆ ಖರೀದಿಗೆ ಬರುವಂತಿಲ್ಲ. ಹೀಗಾಗಿ ಹಣಕಾಸಿನ ಮುಗ್ಗಟ್ಟು ರೈತರನ್ನು ಆವರಿಸಿಕೊಂಡಿದೆ.

‘ಮಂಗನ ಕಾಯಿಲೆ ಭೀತಿಯಿಂದ ಒಂದು ಹಂತದಲ್ಲಿ ಮನೆ ಮತ್ತು ಜಮೀನುಗಳನ್ನು ಮಾರಾಟ ಮಾಡಿ ಪಟ್ಟಣ ಸೇರುವ ಹಿನ್ನೆಲೆಯಲ್ಲಿ ನಮ್ಮ ಜಾನುವಾರನ್ನು ಮಾರಾಟ ಮಾಡಿದ್ದೇವೆ. ಆದರೆ ಕೊರೊನಾ ಭೀತಿ ನೋಡಿದಾಗ ಪಟ್ಟಣದ ಸಹವಾಸವೂ ಬೇಡ. ಪೂರ್ವಜರು ಮಾಡಿಟ್ಟ ಇಲ್ಲಿನ ಜಮೀನುಗಳಲ್ಲಿ ನೆಲೆ ಕಂಡು ಕೊಳ್ಳುವುದೇ ಉತ್ತಮ ಎಂಬ ಭಾವನೆ ಜನರಲ್ಲಿ ಮೂಡಿದೆ’ ಎಂದು ಪ್ರಗತಿಪರ ಕೃಷಿಕ ಮಹಾಬಲಗಿರಿ ಅಳಗೋಡು ಅಭಿಪ್ರಾಯಪಡುತ್ತಾರೆ.

‘ಮಂಗನ ಕಾಯಿಲೆ ಪೀಡಿತರಾಗಿ ಮೃತಪಟ್ಟವರ ಅವಲಂಬಿತ ಕುಟುಂಬಗಳಿಗೆ ಸಮಗ್ರ ಪರಿಹಾರ ದೊರೆತಿಲ್ಲ. ಅವಲಂಬಿತ ಕುಟುಂಬಗಳ ಬಹುಪಾಲು ಸದಸ್ಯರಿಗೆ ಈವರೆಗೂ ವಿಧವಾ ವೇತನ, ವೃದ್ಧಾಪ್ಯ ವೇತನ, ರಾಷ್ಟ್ರೀಯ ಕುಟುಂಬ ಪರಿಹಾರ ನಿಧಿ ಠೇವಣಿ ದೊರೆತಿಲ್ಲ. ಈ ಬಗ್ಗೆ ಸಂಬಂಧಪಟ್ಟವರು ಗಮನಹರಿಸಬೇಕು’ ಎಂದು ಸಮಾಜ ಸೇವಕ ಮಂಜಯ್ಯ ಜೈನ್ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT