ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ದೇಶಕ್ಕೆ ದಕ್ಷ ನಾಯಕತ್ವ ಅವಶ್ಯ’

Last Updated 14 ಜನವರಿ 2019, 15:03 IST
ಅಕ್ಷರ ಗಾತ್ರ

ಚನ್ನಪಟ್ಟಣ: ಗ್ರಾಮ ಕೇಂದ್ರಿತವಾಗಿರುವ ದೇಶಕ್ಕೆ ದಕ್ಷ ಯುವ ನಾಯಕರ ಅವಶ್ಯ ಇದೆ ಎಂದು ಗ್ರಾಮ ಪಂಚಾಯಿತಿ ಸದಸ್ಯೆ ಜಿ.ಎಸ್.ಕೋಮಲ ಅಭಿಪ್ರಾಯಪಟ್ಟರು.

ತಾಲ್ಲೂಕಿನ ದೊಡ್ಡಮಳೂರಿನಲ್ಲಿ ರಮಣಶ್ರೀ ಅಕಾಡೆಮಿ ಆಫ್ ಮ್ಯಾನೇಜ್ ಮೆಂಟ್ ಹಾಗೂ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಯೋಗದೊಂದಿಗೆ ಸೋಮವಾರ ನಡೆದ 7 ದಿನಗಳ ರಾಷ್ಟ್ರೀಯ ಸೇವಾ ಯೋಜನೆ ವಿಶೇಷ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.

ಗ್ರಾಮೀಣರ ಬದುಕು ಹಲವು ಸಂಕಷ್ಟಕ್ಕೆ ಸಿಲುಕಿದೆ. ಜತೆಗೆ ಗ್ರಾಮಾಂತರ ಪ್ರದೇಶಗಳಲ್ಲಿ ಸಮಸ್ಯೆಗಳು ತಾಂಡವಾಡುತ್ತಿವೆ. ಇದನ್ನು ಸಮರ್ಥವಾಗಿ ನಿಭಾಯಿಸುವ ಯುವ ನಾಯಕತ್ವದ ಅವಶ್ಯ ಇದೆ. ಇಂತಹ ನಾಯಕತ್ವ ವಹಿಸಿಕೊಳ್ಳಲು ಯುವಕರು ಮುಂದೆ ಬರಬೇಕು. ಗ್ರಾಮೀಣರ ಬದುಕು ಹಸನುಗೊಳಿಸುವ ಮಹತ್ವದ ಯೋಜನೆ ರೂವಾರಿಗಳಾಗಬೇಕೆಂದು ಶಿಬಿರಾರ್ಥಿಗಳಿಗೆ ಸಲಹೆ ನೀಡಿದರು.

ಶಿಬಿರ ಉದ್ಘಾಟಿಸಿದ ಚನ್ನಾಂಬಿಕಾ ಪದವಿ ಕಾಲೇಜು ಪ್ರಾಂಶುಪಾಲ ವಿಜಯ್ ರಾಂಪುರ ಮಾತನಾಡಿ, ದೇಶ ಸರ್ವತೋಮುಖ ಅಭಿವೃದ್ಧಿಗೆ ಯುವಶಕ್ತಿಯೇ ಜೀವಾಳ. ಸಮಸ್ಯೆಗಳ ಸುಳಿಯಲ್ಲಿ ಸಿಲುಕಿ ನಲುಗುತ್ತಿರುವ ದೇಶಕ್ಕೆ ಯುವಶಕ್ತಿಯನ್ನು ವರವಾಗಿ ಮಾರ್ಪಡಿಸಿ
ಕೊಳ್ಳಬೇಕಾದ ಅನಿವಾರ್ಯತೆ ಇದೆ. ವಿದ್ಯಾರ್ಥಿಗಳು ಕ್ರಿಯಾಶೀಲ ಮನೋಭಾವ ರೂಢಿಸಿಕೊಂಡರೆ ಭವಿಷ್ಯದ ಜೀವನ ಸುಗಮವಾಗುತ್ತದೆ. ಗ್ರಾಮೀಣ ಸಂಸ್ಕೃತಿ ಅನುಸರಿಸುವ ಜತೆಗೆ ಸಮಾಜದ ಹೊಣೆ ಯುವಸಮೂಹದ್ದಾಗಿದೆ ಎಂದು ಅಭಿಪ್ರಾಯಪಟ್ಟರು.

ಉಪನ್ಯಾಸಕ ಕೆ.ರಾಮು ಮಾತನಾಡಿ, ಶಿಬಿರದಲ್ಲಿ ಭಾಗವಹಿಸುವುದು ಕೇವಲ ನೆಪವಾಗದೆ ಬಹುಕಾಲ ಉಳಿಯುವಂತಹ ಕೆಲಸವಾಗಬೇಕು. ಪರಸ್ಪರ ಜ್ಞಾನ ಹಂಚಿಕೆಯಾಗಬೇಕು ಎಂದು ತಿಳಿಸಿದರು.

ಮಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಎ.ರಮೇಶ್ ಅಧ್ಯಕ್ಷತೆ ವಹಿಸಿದ್ದರು. ಜಾನಪದ ಗಾಯಕ ಚೌ.ಪು.ಸ್ವಾಮಿ, ಗ್ರಾ.ಪಂ.ಕಾರ್ಯದರ್ಶಿ ಶಶಿಕಿರಣ್, ನಿವೃತ್ತ ಸಬ್ ಇನ್ ಸ್ಪೆಕ್ಟರ್ ಸುಬ್ಬೇಗೌಡ, ಶಿಬಿರಾಧಿಕಾರಿ ಎಂ.ರವಿಕುಮಾರ್, ಆಡಳಿತಾಧಿಕಾರಿ ಎಸ್.ದೇವೇಂದ್ರ ಕುಮಾರ್, ಉಪನ್ಯಾಸಕರಾದ ಕೆ.ಪಿ.ರೇಷ್ಮಾ, ಆರ್.ಉಷಾ, ಸ್ವಾತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT