ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳೆ ಸಾಲ: ಸೂಚನೆ ನೀಡದೆ ಮುದ್ದತ್ತು ಠೇವಣಿ!

ವಿಜಯಪುರ ಜಿಲ್ಲೆಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಬ್ಯಾಂಕುಗಳ ಕ್ರಮಕ್ಕೆ ರೈತರ ವಿರೋಧ
Last Updated 22 ಜುಲೈ 2018, 17:20 IST
ಅಕ್ಷರ ಗಾತ್ರ

ವಿಜಯಪುರ:ಜಿಲ್ಲೆಯ ಕೆಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಬ್ಯಾಂಕುಗಳಲ್ಲಿ ಯಾವುದೇ ಮುನ್ಸೂಚನೆ ನೀಡದೆ, ರೈತರಿಗೆ ಮಂಜೂರಾದ ಬೆಳೆ ಸಾಲದ ಮೊತ್ತದಲ್ಲಿ ಶೇ 10ರಿಂದ ಶೇ 20ರಷ್ಟು ನಗದನ್ನು ಮುದ್ದತ್ತು ಠೇವಣಿ (ಎಫ್‌ಡಿ) ಮಾಡಿಕೊಳ್ಳಲಾಗಿದೆ ಎಂಬ ದೂರು ಕೇಳಿ ಬಂದಿದೆ.

ಈ ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಹಕಾರಿ ಬ್ಯಾಂಕುಗಳಲ್ಲಿ ರೈತರು ಪಡೆದಿದ್ದ ಬೆಳೆ ಸಾಲದಲ್ಲಿ ₹ 50,000 ಮೊತ್ತವನ್ನು ಮನ್ನಾ ಮಾಡಿದ್ದರು. ಸಾಲ ಪಡೆದ ದಿನಾಂಕದ ವರ್ಷಕ್ಕೆ ಸರಿಯಾಗಿ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಬ್ಯಾಂಕ್‌ಗಳು ಆಯಾ ರೈತರಿಗೆ ಹೊಸ ಸಾಲವನ್ನು ಮಂಜೂರು ಮಾಡಿವೆ. ಆದರೆ, ಮಂಜೂರಾದ ಸಾಲದ ಮೊತ್ತದಲ್ಲೇ ₹ 5,000, ₹ 10,000 ನಗದನ್ನು ತಮ್ಮಲ್ಲೇ ಮುದ್ದತ್ತು ಠೇವಣಿಯನ್ನಾಗಿಟ್ಟುಕೊಂಡಿರುವುದಕ್ಕೆ ರೈತ ಸಮೂಹದಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ.

ಮಾಹಿತಿಯನ್ನೇ ನೀಡಿಲ್ಲ..!

‘ಇಂಡಿ ತಾಲ್ಲೂಕಿನ ಅಗರಖೇಡದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಬ್ಯಾಂಕಿನಲ್ಲಿ ಈ ಹಿಂದೆ ₹ 47,000 ಸಾಲ ಪಡೆದಿದ್ದೆ. ಹಿಂದಿನ ಸರ್ಕಾರ ಆ ಸಾಲವನ್ನು ಮನ್ನಾ ಮಾಡಿತ್ತು. ಪಾಳಿ ಪ್ರಕಾರ 2018ರ ಜೂನ್‌ 4ರಂದು ಸೊಸೈಟಿಯವರು ಹೊಸದಾಗಿ ₹ 53,000 ಸಾಲ ಮಂಜೂರು ಮಾಡಿ, ಉಳಿತಾಯ ಖಾತೆಗೆ ಜಮೆ ಮಾಡಿದ್ದಾರೆ. ಆದರೆ, ಇದರ ಜತೆಯಲ್ಲಿ ಅದೇ ದಿನ ನನಗೆ ಯಾವುದೇ ಮಾಹಿತಿ ನೀಡದೇ ₹ 10,500 ಮೊತ್ತವನ್ನು, ಮುದ್ದತ್ತು ಠೇವಣಿಯನ್ನಾಗಿಟ್ಟುಕೊಂಡಿದ್ದಾರೆ’ ಎಂದು ಸಹಕಾರಿ ಬ್ಯಾಂಕಿನ ಷೇರುದಾರ ಸದಸ್ಯರಾಗಿರುವ ವಿಲಾಸ ಶಿಂಧೆ ಅಸಮಾಧಾನ ವ್ಯಕ್ತಪಡಿಸಿದರು.

’ಅನುಮತಿ ಪಡೆಯದೇ ಮುದ್ದತ್ತು ಠೇವಣಿಗೆ ಹಣ ವರ್ಗಾಯಿಸಿರುವುದರ ಕುರಿತಂತೆ ಡಿಸಿಸಿ ಬ್ಯಾಂಕಿನ ಇಂಡಿ ಶಾಖೆಯಲ್ಲಿ ವಿಚಾರಿಸಿದರೆ, ‘ನಿಮ್ಮ ಮೊತ್ತಕ್ಕೆ ಸಂಬಂಧಿಸಿದ ರಸೀದಿಯನ್ನು ಅಗರಖೇಡ ಸೊಸೈಟಿಗೇ ಕಳುಹಿಸಿಕೊಟ್ಟಿದ್ದೇವೆ.ಅಲ್ಲಿಯೇ ವಿಚಾರಿಸಿಕೊಳ್ಳಿ’ ಎಂದಷ್ಟೇ ಹೇಳಿದರು. ಇಲ್ಲಿಯೂ ಸಮರ್ಪಕ ಉತ್ತರ ಸಿಗಲಿಲ್ಲ’ ಎಂದರು.

‘ಮೊದಲಿಗೆ ನಾವೇ ಕಷ್ಟದಲ್ಲಿದ್ದೇವೆ. ಬ್ಯಾಂಕುಗಳಲ್ಲಿ ಎಫ್‌ಡಿ ಮಾಡುವವರೆಲ್ಲ ರೊಕ್ಕ ಇದ್ದವರು. ಸಾಲದ ಮೊತ್ತದಲ್ಲೇ ಠೇವಣಿಗೆಂದು ಕಡಿತ ಮಾಡಿಕೊಂಡಿದ್ದು ಅನ್ಯಾಯ. ಹೀಗೇಕೆ ಮಾಡಿದ್ದಾರೆ ಎಂಬುದನ್ನು ವಿಜಯಪುರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾಗಿರುವ ಆರೋಗ್ಯ ಸಚಿವ ಶಿವಾನಂದ ಪಾಟೀಲರೇ ಉತ್ತರಿಸಬೇಕು. ಈ ನಿರ್ಧಾರ ಸರ್ಕಾರದ ಸುತ್ತೋಲೆಯೋ ? ಅಥವಾ ಅವರದೇ ನಿರ್ಣಯವೋ ಎಂಬುದನ್ನು ಸ್ಪಷ್ಟಪಡಿಸಬೇಕು’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದು ತಮ್ಮೊಬ್ಬರ ಸ್ಥಿತಿಯಲ್ಲ; ಜಿಲ್ಲೆಯ ಸಾವಿರಾರು ರೈತರ ಅಸಹಾಯಕ ಸ್ಥಿತಿ ಎಂದು ವಿಲಾಸ ಶಿಂಧೆ ಅಲವತ್ತುಕೊಂಡರು.

ಬಲವಂತವಾಗಿ ಎಫ್‌ಡಿ ಮಾಡ್ತಿಲ್ಲ. ಸೊಸೈಟಿಗಳ ಅಭಿವೃದ್ಧಿಗಾಗಿ ಸ್ಥಳೀಯ ಆಡಳಿತ ಮಂಡಳಿಯೇ ರೈತರ ಮನವೊಲಿಸಿ ಮುದ್ದತ್ತು ಠೇವಣಿ ಮಾಡಿಕೊಳ್ಳುತ್ತಿದೆ. ಜತೆಗೆ ಷೇರುಧನವನ್ನು ಪಡೆದಿದೆ.
- ಕೆ.ಬಿ.ರಾಜಣ್ಣ, ಸಿಇಒ, ವಿಜಯಪುರ ಡಿಸಿಸಿ ಬ್ಯಾಂಕ್‌

ಮಾಹಿತಿ ನೀಡದೇ ಸಾಲದ ಮೊತ್ತದಲ್ಲೇ ₹ 10000 ನಗದನ್ನು ಮುದ್ದತ್ತು ಠೇವಣಿಯಾಗಿ ಇಟ್ಟುಕೊಂಡಿದ್ದಾರೆ. ಕೇಳಿದರೆ, ‘ಎಲ್ಲೆಡೆಯೂ ಮಾಡಿದ್ದಾರೆ. ನಾವೂ ಮಾಡಿದ್ದೇವೆ’ ಎನ್ನುತ್ತಾರೆ
- ಭೋಗಣ್ಣ ಕತ್ತಿ, ಕಡಣಿ ಸೊಸೈಟಿ ಸಾಲಗಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT