ಸೋಮವಾರ, ಆಗಸ್ಟ್ 15, 2022
26 °C

ದಕ್ಷಿಣ ಕನ್ನಡ ಜಿಲ್ಲೆಯ 18ಗ್ರಾ.ಪಂ. ಸೀಲ್‌ಡೌನ್‌: ಏಳು ದಿನ ಸಂಪೂರ್ಣ ಲಾಕ್‌ಡೌನ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: 50ಕ್ಕಿಂತ ಹೆಚ್ಚು ಕೋವಿಡ್‌ ಸಕ್ರಿಯ ಪ್ರಕರಣಗಳು ಇರುವ ಜಿಲ್ಲೆಯ 18 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಸೋಂಕು ತಡೆಗೆ ಮುಂದಾಗಿರುವ ಜಿಲ್ಲಾಡಳಿತವು ಸೋಮವಾರದಿಂದ ಸಂಪೂರ್ಣ ಸೀಲ್‌ಡೌನ್ ಮಾದರಿಯ ಲಾಕ್‌ಡೌನ್‌ ಕ್ರಮಕ್ಕೆ ಹೆಜ್ಜೆ ಇಟ್ಟಿದೆ.

ಜಿಲ್ಲೆಯ ಕೆಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಕೋವಿಡ್‌ ಸೋಂಕಿನ ಪ್ರಕರಣ ಹೆಚ್ಚುತ್ತಿದ್ದು, ಗ್ರಾಮ ಮಟ್ಟದಲ್ಲಿನ ಅಪಾಯ ತಪ್ಪಿಸಲು ಹಾಗೂ ಸೋಂಕಿನ ಸರಪಳಿ ಮುರಿಯಲು ಕಟ್ಟುನಿಟ್ಟಿನ ಕ್ರಮಕ್ಕೆ ಗ್ರಾಮ ಪಂಚಾಯಿತಿ ಮಟ್ಟದ ಕೋವಿಡ್‌ ಕಾರ್ಯಪಡೆಗಳು ಸಜ್ಜಾಗಿವೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 223 ಗ್ರಾಮ ಪಂಚಾಯಿತಿಗಳಿದ್ದು, 457 ಗ್ರಾಮಗಳು ಈ ಪಂಚಾಯಿತಿ ವ್ಯಾಪ್ತಿಗೆ ಬರುತ್ತವೆ. ಸದ್ಯ 18 ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲ ಹಳ್ಳಿಗಳಲ್ಲಿ ಇದೇ 14 ರಂದು ಬೆಳಿಗ್ಗೆ 9 ಗಂಟೆಯಿಂದ ಇದೇ 21, ಬೆಳಿಗ್ಗೆ 9 ಗಂಟೆಯವರಿಗೆ ಸೀಲ್‌ಡೌನ್‌ ಮಾದರಿಯ ಲಾಕ್‌ಡೌನ್‌ ಕ್ರಮ ಜಾರಿಯಾಗುತ್ತಿದೆ. ದಿನಸಿ ಅಂಗಡಿಗಳು ಕೂಡ ಬಂದ್‌ ಆಗಲಿವೆ. ಜನರು ಯಾವುದೇ ಕಾರಣಕ್ಕೂ ಅನಗತ್ಯವಾಗಿ ಹೊರಗೆ ಬರುವಂತಿಲ್ಲ.

ಔಷಧ ಅಂಗಡಿ, ಕ್ಲಿನಿಕ್‌ಗಳು, ಜನೌಷಧ ಕೇಂದ್ರ, ನರ್ಸಿಂಗ್‌ ಹೊಂ, ಟೆಲಿಮೆಡಿಸನ್‌ ಸೌಲಭ್ಯ, ರಕ್ತ ಸಂಗ್ರಹ ಕೇಂದ್ರಗಳು, ಕೆಎಂಎಫ್‌ ಹಾಲಿನ ಮಳಿಗೆ, ಕೃಷಿಕರು ಹಾಲನ್ನು ಡೇರಿಗೆ ನೀಡಲು ಸೀಮಿತ ಅವಧಿ, ರಾಜ್ಯ ಮತ್ತು ಅಂತರರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಪೆಟ್ರೋಲ್‌ ಬಂಕ್‌, ತುರ್ತು ಅಗತ್ಯ ವೈದ್ಯಕೀಯ ಸೇವೆಯ ವಾಹನಗಳ ಸಂಚಾರಕ್ಕೆ ಮಾತ್ರ ಅನುವು ಮಾಡಿಕೊಡಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.

ಈ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಲ್ಲಿ ಲಾಕ್‌ಡೌನ್‌ ಮಾಡಲು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಅವರು ಜಿಲ್ಲಾ ಪಂಚಾಯಿತಿ ಸಿಇಒ ಅವರು ಸಲ್ಲಿಸಿರುವ ಪ್ರಸ್ತಾವಕ್ಕೆ ಅಧಿಕೃತ ಆದೇಶ ನೀಡಿದ್ದಾರೆ. ಕಟ್ಟುನಿಟ್ಟಿನ ಅನುಷ್ಠಾನಕ್ಕೆ ಸ್ಥಳೀಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

‘ಜಿಲ್ಲೆಯ, ಮಂಗಳೂರು, ಬೆಳ್ತಂಗಡಿ, ಸುಳ್ಯ, ಕಡಬ, ಬಂಟ್ವಾಳ ತಾಲ್ಲೂಕುಗಳ 18 ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲ ಹಳ್ಳಿಗಳಲ್ಲಿ ಸೀಲ್‌ಡೌನ್‌ ಮಾದರಿಯ ಲಾಕ್‌ಡೌನ್‌ ಮಾಡಲಾಗುತ್ತಿದೆ. ಅನಗತ್ಯವಾಗಿ ಹೊರಗೆ ಬಂದರೆ ದಂಡ ವಿಧಿಸಿ, ಪ್ರಕರಣ ದಾಖಲಿಸಲಾಗುತ್ತದೆ. ಆಯಾ ಪಂಚಾಯಿತಿ ವ್ಯಾಪ್ತಿಯ ಕಾರ್ಯಪಡೆ ಸದಸ್ಯರಿಗೆ ಸೂಚನೆ ನೀಡಲಾಗಿದೆ’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕುಮಾರ್‌ ತಿಳಿಸಿದರು.

ಕಟ್ಟುನಿಟ್ಟಿನ ನಿಯಮ ಪಾಲನೆಗೆ ಸೂಚನೆ
ಸೀಲ್‌ಡೌನ್‌ ಮಾಡಲಾದ ಗ್ರಾಮ ಪಂಚಾಯಿತಿಗಳಲ್ಲಿ ಅವಶ್ಯಕತೆ ಆಧರಿಸಿ ಪಾವತಿ ಆಧಾರದಲ್ಲಿ ಸಾರ್ವಜನಿಕರಿಗೆ ಅಗತ್ಯ ವಸ್ತುಗಳನ್ನು ಪೂರೈಕೆ ಮಾಡಲು ಸಂಬಂಧಿಸಿದ ಗ್ರಾಮ ಪಂಚಾಯಿತಿ ಕಾರ್ಯಪಡೆಗಳು ಕ್ರಮ ವಹಿಸಲಿವೆ. ಲಾಕ್‌ಡೌನ್‌ ಪರಿಣಾಮಕಾರಿ ಅನುಷ್ಠಾನಕ್ಕೆ ತಹಶೀಲ್ದಾರ್‌ಗಳಿಗೆ ಸೂಚಿಸಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಡಾ. ಕುಮಾರ್‌ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.