ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಖಂಡ ರಾಮಾಯಣ ಪಾರಾಯಣಕ್ಕೆ ಸಿದ್ಧತೆ: 57 ಗಂಟೆ; 24 ಸಾವಿರ ಶ್ಲೋಕ ಪಠಣ

‘ಸಂಸ್ಕೃತಿ ಭಾರತೀ‘ಯಿಂದ ಅಖಂಡ ರಾಮಾಯಣ ಪಾರಾಯಣಕ್ಕೆ ಸಿದ್ಧತೆ
Published 11 ಡಿಸೆಂಬರ್ 2023, 8:07 IST
Last Updated 11 ಡಿಸೆಂಬರ್ 2023, 8:07 IST
ಅಕ್ಷರ ಗಾತ್ರ

ಮಂಗಳೂರು: ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಲೋಕಾರ್ಪಣೆಯ ಸಂದರ್ಭವನ್ನು ಚಿರಸ್ಥಾಯಿಯಾಗಿಸುವ ಆಶಯದೊಂದಿಗೆ ಸಂಸ್ಕೃತ ಭಾರತೀ ಸಂಘಟನೆಯು 24 ಸಾವಿರ ಶ್ಲೋಕಗಳ ಪಠಣದ ಮೂಲಕ ಅಖಂಡ ರಾಮಾಯಣ ಪಾರಾಯಣಕ್ಕೆ ಸಿದ್ಧತೆ ನಡೆಸಿದೆ.

ಬಾಲ ಕಾಂಡ, ಅಯೋಧ್ಯಾ ಕಾಂಡ, ಅರಣ್ಯ ಕಾಂಡ, ಕಿಷ್ಕಿಂಧಾ ಕಾಂಡ, ಸುಂದರ ಕಾಂಡ, ಯುದ್ಧ ಕಾಂಡ, ಉತ್ತರ ಕಾಂಡ ಹೀಗೆ ರಾಮಾಯಣದ ಎಲ್ಲ ಏಳು ಕಾಂಡಗಳ ಸಂಪೂರ್ಣ ಶ್ಲೋಕಗಳನ್ನು ರಾಮ ಭಕ್ತರು ನಿರಂತರ 57 ತಾಸು ಪ್ರಸ್ತುತಿ ಪಡಿಸಲಿದ್ದಾರೆ. 

ಪಾರಾಯಣ ಅನುಷ್ಠಾನ ಹೇಗೆ?: ರಾಮಾಯಣದಲ್ಲಿ ಒಟ್ಟು 24ಸಾವಿರ ಶ್ಲೋಕಗಳು ಇವೆ. ಇದರಲ್ಲಿ ಗಾಯತ್ರಿ ಮಂತ್ರದ 24 ಅಕ್ಷರಗಳು ಅಂತರ್ಭೂತವಾಗಿವೆ. ಅದಕ್ಕನುಗುಣವಾಗಿ ಶ್ಲೋಕ ವಿಭಜನೆ ಮಾಡಲಾಗಿದೆ. ಪ್ರತಿ 1,000 ಶ್ಲೋಕ ಪಠಿಸಲು ತಲಾ 20 ಜನರಂತೆ 24 ಗುಂಪು ರಚಿಸಲಾಗಿದೆ. ಒಂದು ತಂಡವು ಎರಡು ತಾಸಿನಲ್ಲಿ 1,000 ಶ್ಲೋಕಗಳ ಪಠಣ ಮಾಡಲಿದೆ. ಸಂಸ್ಕೃತ ಬಲ್ಲವರು, ‘ಸಂಸ್ಕಾರ ಭಾರತೀ’ಯ ಕಾರ್ಯಕರ್ತರು, ಸಂಸ್ಕೃತ ಶಿಕ್ಷಕರು ತಂಡವನ್ನು ಮುನ್ನಡೆಸಲಿದ್ದಾರೆ ಎನ್ನುತ್ತಾರೆ ಕರ್ನಾಟಕದ ದಕ್ಷಿಣಪ್ರಾಂತ ಪ್ರಚಾರ ಪ್ರಮುಖ ಸತ್ಯನಾರಾಯಣ ಕೆ.ವಿ.

ಜ.19ರ ಸಂಜೆ 4 ಗಂಟೆಗೆ ನಗರದ ಮಣ್ಣಗುಡ್ಡೆಯ ಸಂಘ ನಿಕೇತನದಲ್ಲಿ ಪ್ರಾರಂಭವಾಗುವ ಪಾರಾಯಣವು ಜ.21ರಂದು ಮಧ್ಯಾಹ್ನ ಮುಕ್ತಾಯವಾಗುತ್ತದೆ. ಅಹೋರಾತ್ರಿ 57 ತಾಸು ನಿರಂತರವಾಗಿ ಪಾರಾಯಣ ನಡೆಯುತ್ತದೆ. ಕೊನೆಯಲ್ಲಿ ಶ್ರೀರಾಮ ಪಟ್ಟಾಭಿಷೇಕದ 100 ಶ್ಲೋಕಗಳ ಪಠಣದೊಂದಿಗೆ ಪಾರಾಯಣ ಕೊನೆಗೊಳ್ಳುತ್ತದೆ. ಎರಡು ತಾಸಿನ ಅವಧಿಯಲ್ಲಿ 1,000 ಶ್ಲೋಕಗಳು ಪೂರ್ಣಗೊಳ್ಳುವಂತೆ, ತಂಡದ ಸದಸ್ಯರಿಗೆ ತರಬೇತಿ ನೀಡಲಾಗುತ್ತಿದೆ. ಮಂಗಳೂರು ವಿಭಾಗ ವ್ಯಾಪ್ತಿಯ ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು, ಕೊಡಗು ಜಿಲ್ಲೆಗಳ ಕಾರ್ಯಕರ್ತರು ಭಾಗಿಯಾಗಲಿದ್ದಾರೆ. ಭಕ್ತರು ಕೂಡ ಭಾಗವಹಿಸಿ, ಪಾರಾಯಣದ ದನಿಯಾಗಬಹುದು ಎಂದು ಅವರು ವಿವರಿಸಿದರು.

ರಾಮಾಯಣ ಪಾರಾಯಣದಲ್ಲಿ ಶ್ರದ್ಧೆ, ಎರಡು ತಾಸು ಕುಳಿತುಕೊಳ್ಳುವ ಕ್ಷಮತೆ ಇರುವ ಹಿರಿ–ಕಿರಿಯರು, ಮಹಿಳೆಯರು, ಪುರುಷರು ಸಮಾಜದ ಎಲ್ಲ ವರ್ಗದವರು ಪಾಲ್ಗೊಳ್ಳಲು ಅವಕಾಶವಿದೆ. ಈಗಾಗಲೇ 24 ತಂಡಗಳಿಗೆ ಪ್ರತ್ಯೇಕ ವಾಟ್ಸ್‌ಆ್ಯಪ್ ಗ್ರೂಪ್ ರಚಿಸಲಾಗಿದ್ದು, ತರಬೇತಿ, ಮನನ ಕಾರ್ಯಗಳು ಪ್ರಾರಂಭವಾಗಿವೆ. ಪಂಡಿತರು, ಸಾಹಿತಿಗಳು, ಸಂಸ್ಕೃತ ಪಾಠಶಾಲೆ ವಿದ್ಯಾರ್ಥಿಗಳು, ಭಜನಾ ತಂಡಗಳು ಸಹ ಭಾಗಿಯಾಗಬಹುದು ಎಂದು ‘ಸಂಸ್ಕೃತ ಭಾರತೀ’ಯ ಅಖಿಲ ಭಾರತ ಪ್ರಶಿಕ್ಷಣ ಪ್ರಮುಖ ವಿಶ್ವಾಸ್ ಎಚ್‌.ಆರ್ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT