ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಲ್ಕು ಕಡೆ ಒಣ ತ್ಯಾಜ್ಯ ಸಂಗ್ರಹ ಕೇಂದ್ರ

ಉಳ್ಳಾಲ ನಗರಸಭೆ ಮಾದರಿ ಅಳವಡಿಸಲು ಮುಂದಾದ ಪಾಲಿಕೆ
Last Updated 23 ಅಕ್ಟೋಬರ್ 2020, 16:15 IST
ಅಕ್ಷರ ಗಾತ್ರ

ಮಂಗಳೂರು: ನಗರದಲ್ಲಿ ತ್ಯಾಜ್ಯದ ಸಮಸ್ಯೆ ವಿಪರೀತವಾಗುತ್ತಿದ್ದು, ಹೈಕೋರ್ಟ್‌ ಸೂಚನೆಯಂತೆ ಒಣ ಕಸ ಮತ್ತು ಹಸಿ ಕಸ ಬೇರ್ಪಡಿಸುವುದು ಇದೀಗ ಅನಿವಾರ್ಯವಾಗಿದೆ. ಪಾಲಿಕೆಯಿಂದ ದಂಡ ಪ್ರಯೋಗದ ಅಸ್ತ್ರ ಬಳಸಿದರೂ, ಕಸ ವಿಂಗಡನೆ ಪರಿಣಾಮಕಾರಿ ಆಗುತ್ತಿಲ್ಲ. ಇದೀಗ ಮಹಾನಗರ ಪಾಲಿಕೆಯು ನಗರದ ನಾಲ್ಕು ಕಡೆಗಳಲ್ಲಿ ಒಣ ತ್ಯಾಜ್ಯ ಸಂಗ್ರಹ ಕೇಂದ್ರಗಳನ್ನು ಆರಂಭಿಸಲು ಚಿಂತನೆ ನಡೆಸಿದೆ.

ಈಗಾಗಲೇ ಉಳ್ಳಾಲ ನಗರಸಭೆಯಲ್ಲಿ ಅಳವಡಿಸಿರುವ ಮಾದರಿಯಲ್ಲಿಯೇ ಖಾಸಗಿ ಸಂಸ್ಥೆಗಳ ಜೊತೆಗೂಡಿ ಸ್ವಚ್ಛ ಭಾರತ ಮಿಷನ್‌ ಅಡಿಯಲ್ಲಿ ಒಣ ತ್ಯಾಜ್ಯ ಸಂಗ್ರಹ ಕೇಂದ್ರಗಳನ್ನು ಆರಂಭಿಸಲು ರೂಪುರೇಷೆ ಸಿದ್ಧಪಡಿಸಲಾಗುತ್ತಿದೆ.

ಉಳ್ಳಾಲ ನಗರಸಭೆಯು, ಹಸಿರು ದಳ ಮತ್ತು ಎಪಿಡಿ ಫೌಂಡೇಶನ್‌ಗಳ ಜೊತೆಗೆ ಒಪ್ಪಂದ ಮಾಡಿಕೊಂಡಿದ್ದು, ಜಿಲ್ಲೆಯ ಮೊದಲ ಒಣ ತ್ಯಾಜ್ಯ ಸಂಗ್ರಹ ಕೇಂದ್ರವನ್ನು ಆರಂಭಿಸಿದೆ. ಉಳ್ಳಾಲದಲ್ಲಿ ನಿತ್ಯ 18 ಟನ್‌ ಕಸ ಸಂಗ್ರಹವಾಗುತ್ತಿದ್ದು, ಈ ಪೈಕಿ 4–5 ಟನ್‌ ಒಣ ಕಸವಾಗಿದೆ. ಒಪ್ಪಂದದ ಪ್ರಕಾರ ಉಳ್ಳಾಲ ನಗರಸಭೆಯು ಕಸದ ಸಂಗ್ರಹಣೆ, ಸಂಸ್ಕರಣೆ ಹಾಗೂ ಮರುಬಳಕೆ ಮಾಡಬಹುದಾದ ತ್ಯಾಜ್ಯದ ದಾಸ್ತಾನಿಗೆ ಸೌಲಭ್ಯ ಒದಗಿಸಲಿದೆ. ಹಸಿರು ದಳ ಮತ್ತು ಎಪಿಡಿ ಫೌಂಡೇಶನ್‌ ತಾಂತ್ರಿಕತೆಯನ್ನು ಒದಗಿಸಲಿದ್ದು, ಜೊತೆಗೆ ತ್ಯಾಜ್ಯ ನಿರ್ವಹಣೆಯ ತರಬೇತಿಯನ್ನು ನೀಡಲಿದೆ.

ಮಂಗಳೂರಿನಲ್ಲಿಯೂ ಉಳ್ಳಾಲ ನಗರಸಭೆ ಮಾದರಿಯ ನಾಲ್ಕು ಒಣ ತ್ಯಾಜ್ಯ ಸಂಗ್ರಹ ಕೇಂದ್ರಗಳನ್ನು ಆರಂಭಿಸಲು ಪಾಲಿಕೆಯ ಆಡಳಿತ ಮಂಡಳಿ ಚಿಂತಿಸುತ್ತಿದೆ ಎಂದು ಪಾಲಿಕೆ ಪರಿಸರ ಎಂಜಿನಿಯರ್‌ ಮಧು ಮನೋಹರ್ ತಿಳಿಸಿದ್ದಾರೆ.

ಈಗಾಗಲೇ ಕೆಲವು ಎನ್‌ಜಿಒಗಳು ಈ ನಿಟ್ಟಿನಲ್ಲಿ ಆಸಕ್ತಿ ತೋರಿವೆ. ಒಣ ತ್ಯಾಜ್ಯ ಸಂಗ್ರಹ ಕೇಂದ್ರ ಆರಂಭಿಸುವ ಕುರಿತು ಪಾಲಿಕೆಯಿಂದ ಟೆಂಡರ್‌ ಕರೆಯಲಾಗುವುದು. ಆಯ್ಕೆಯಾಗುವ ಸಂಸ್ಥೆಗಳು ಒಣ ಕಸ ಸಂಗ್ರಹಣೆ, ವಿಂಗಡನೆ ಹಾಗೂ ವಿಲೇವಾರಿಯನ್ನು ನೋಡಿಕೊಳ್ಳಲಿವೆ ಎಂದು ಹೇಳಿದ್ದಾರೆ.

ಕೋವಿಡ್‌ ಲಾಕ್‌ಡೌನ್‌ಗೂ ಮುನ್ನ ನಗರದಲ್ಲಿ ನಿತ್ಯ 330 ಟನ್‌ ತ್ಯಾಜ್ಯ ಸಂಗ್ರಹವಾಗುತ್ತಿತ್ತು. ಇದೀಗ ಸರಾಸರಿ 276 ಟನ್‌ ತ್ಯಾಜ್ಯ ಸಂಗ್ರಹ ಆಗುತ್ತಿದೆ. ಆದರೆ, ಪಚ್ಚನಾಡಿಯ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ನಿತ್ಯ 200 ಟನ್‌ ತ್ಯಾಜ್ಯದ ಸಾಮರ್ಥ್ಯವಿದೆ. ಸ್ವಚ್ಛ ಭಾರತ ಮಿಷನ್‌ ಅಡಿಯಲ್ಲಿ ಈ ಸಾಮರ್ಥ್ಯವನ್ನು ಹೆಚ್ಚಿಸಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT