ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ನಿಂದ ಮತ್ತೆ ನಾಲ್ವರು ಸಾವು

ದಕ್ಷಿಣ ಕನ್ನಡ: 73 ಮಂದಿಯಲ್ಲಿ ಸೋಂಕು ಪತ್ತೆ
Last Updated 15 ಜುಲೈ 2020, 17:17 IST
ಅಕ್ಷರ ಗಾತ್ರ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಂಗಳವಾರ ತಡರಾತ್ರಿ ಮತ್ತು ಬುಧವಾರ ತಲಾ ಇಬ್ಬರು ಕೋವಿಡ್‌ ಸೋಂಕಿತರು ಮೃತಪಟ್ಟಿದ್ದಾರೆ. ಇದರೊಂದಿಗೆ ಜಿಲ್ಲೆಯಲ್ಲಿ ಕೋವಿಡ್‌ ಸೋಂಕಿತರ ಸಂಖ್ಯೆ 57ಕ್ಕೇರಿದೆ.

ಏಪ್ರಿಲ್‌ 19ರಂದು ಜಿಲ್ಲೆಯಲ್ಲಿ ಕೋವಿಡ್‌ ಸೋಂಕಿನಿಂದ ಮೊದಲ ಸಾವು ಸಂಭವಿಸಿತ್ತು. ಆ ಬಳಿಕ ಸಾವಿನ ಸಂಖ್ಯೆ ನಿರಂತರವಾಗಿ ಏರುಗತಿಯಲ್ಲಿ ಸಾಗಿದೆ.

ಮಧುಮೇಹ ಮತ್ತು ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದ ಸುಳ್ಯ ತಾಲ್ಲೂಕಿನ 60 ವರ್ಷದ ಮಹಿಳೆ ಹಾಗೂ ಅಧಿಕ ರಕ್ತದೊತ್ತಡ ಮತ್ತು ನ್ಯುಮೋನಿಯಾದಿಂದ ಬಳಲುತ್ತಿದ್ದ ಬಂಟ್ವಾಳ ತಾಲ್ಲೂಕಿನ 73 ವರ್ಷದ ಪುರುಷನಿಗೆ ಕೋವಿಡ್‌ ಸೋಂಕು ತಗುಲಿತ್ತು. ಇಬ್ಬರಿಗೂ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಮಂಗಳವಾರ ಇಬ್ಬರೂ ಮೃತಪಟ್ಟಿದ್ದಾರೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್‌ ತಿಳಿಸಿದ್ದಾರೆ.

ಮೂತ್ರಪಿಂಡದ ಗಂಭೀರ ಸಮಸ್ಯೆ, ಉಸಿರಾಟದ ತೊಂದರೆ ಮತ್ತು ಹೃದ್ರೋಗಗಳಿಂದ ಬಳಲುತ್ತಿದ್ದ ಬಂಟ್ವಾಳ ತಾಲ್ಲೂಕಿನ 70 ವರ್ಷದ ಪುರುಷನಿಗೆ ಕೋವಿಡ್‌ ಸೋಂಕು ತಗುಲಿತ್ತು. ಅವರಿಗೆ ತೀವ್ರನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಹೃದ್ರೋಗ, ಮಧುಮೇಹ ಮತ್ತು ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದ ಬಂಟ್ವಾಳ ತಾಲ್ಲೂಕಿನ 68 ವರ್ಷದ ಮಹಿಳೆಗೂ ಸೋಂಕು ತಗುಲಿತ್ತು. ಇಬ್ಬರೂ ಬುಧವಾರ ಮೃತಪಟ್ಟಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

73 ಮಂದಿಯಲ್ಲಿ ಸೋಂಕು: 136 ಜನರ ಗಂಟಲು ಮತ್ತು ಮೂಗಿನ ದ್ರವದ ಮಾದರಿಗಳ ಪರೀಕ್ಷಾ ವರದಿಗಳು ಬುಧವಾರ ಲಭಿಸಿವೆ. 73 ಮಂದಿಗೆ ಕೋವಿಡ್‌–19 ಸೋಂಕು ತಗುಲಿರುವುದು ದೃಢಪಟ್ಟಿದೆ. 63 ಜನರ ವರದಿಗಳು ನೆಗೆಟಿವ್‌ ಆಗಿವೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

‘ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿದ್ದ 11 ಮಂದಿ, ಶೀತ ಜ್ವರದಿಂದ ಆಸ್ಪತ್ರೆಗೆ ದಾಖಲಾಗಿದ್ದ 23 ಮಂದಿ, ಉಸಿರಾಟದ ತೀವ್ರ ತೊಂದರೆ ಎದುರಿಸುತ್ತಿರುವ ಮೂವರು, ವಿದೇಶದಿಂದ ಬಂದಿರುವ ಮೂವರು, ಅಂತರ ಜಿಲ್ಲಾ ಪ್ರಯಾಣ ಮಾಡಿರುವ ಒಬ್ಬರಲ್ಲಿ ಸೋಂಕು ಪತ್ತೆಯಾಗಿದೆ. 32 ಮಂದಿಗೆ ಸೋಂಕು ಯಾವ ಮೂಲದಿಂದ ತಗುಲಿದೆ ಎಂಬುದನ್ನು ಪತ್ತೆಹಚ್ಚಲಾಗುತ್ತಿದೆ’ ಎಂದು ಮಾಹಿತಿ ನೀಡಿದ್ದಾರೆ.

ಜಿಲ್ಲೆಯಲ್ಲಿ ಈವರೆಗೆ 25,265 ಜನರ ಗಂಟಲು ಮತ್ತು ಮೂಗಿನ ದ್ರವದ ಮಾದರಿಗಳ ಪರೀಕ್ಷೆ ನಡೆಸಲಾಗಿದೆ. ಬುಧವಾರದ 73 ಪ್ರಕರಣಗಳೊಂದಿಗೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 2,525ಕ್ಕೇರಿದೆ. ಈವರೆಗೆ ಒಟ್ಟು 22,740 ನೆಗೆಟಿವ್‌ ವರದಿಗಳು ಬಂದಿವೆ.

104 ಮಂದಿ ಗುಣಮುಖ: ವೆನ್ಲಾಕ್‌ ಜಿಲ್ಲಾ ಕೋವಿಡ್‌ ಆಸ್ಪತ್ರೆ ಮತ್ತು ಜಿಲ್ಲೆಯ ವಿವಿಧ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 104 ಮಂದಿ ಕೋವಿಡ್‌ ಸೋಂಕಿತರು ಗುಣಮುಖರಾಗಿದ್ದು, ಬುಧವಾರ ಮನೆಗಳಿಗೆ ಮರಳಿದ್ದಾರೆ.

ಈವರೆಗೆ ಒಟ್ಟು 1,089 ಮಂದಿ ಕೋವಿಡ್‌ ಸೋಂಕಿತರು ಗುಣಮುಖರಾಗಿದ್ದಾರೆ. 1,379 ಸಕ್ರಿಯ ಪ್ರಕರಣಗಳಿದ್ದು, ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಮುಂದುವರಿದಿದೆ.

ಶವ ಪಡೆಯಲು ಕಾದಿರುವ ಕುಟುಂಬ

ಕಿನ್ನಿಗೋಳಿ ಸಮೀಪದ ಎಸ್ಕೋಡಿಯ 45 ವರ್ಷದ ಪುರುಷ ಅಧಿಕ ರಕ್ತದೊತ್ತಡ ಮತ್ತು ಆಸ್ತಮಾ ಸಮಸ್ಯೆಗಳಿಂದ ಬಳಲುತ್ತಿದ್ದರು. ಸೋಮವಾರ ರಾತ್ರಿ ಅವರನ್ನು ವೆನ್ಲಾಕ್‌ ಕೋವಿಡ್‌ ಆಸ್ಪತ್ರೆಗೆ ದಾಖಲಿಸಿದ್ದು, ಮಂಗಳವಾರ ಸಂಜೆ 6 ಗಂಟೆಗೆ ಮೃತಪಟ್ಟಿದ್ದಾರೆ. ಕೋವಿಡ್‌ ವರದಿ ಬಾರದ ಕಾರಣದಿಂದ 24 ಗಂಟೆ ಕಳೆದರೂ ಕುಟುಂಬಕ್ಕೆ ಶವ ಹಸ್ತಾಂತರಿಸಿಲ್ಲ.

‘ನಾವು ದಲಿತ ಕುಟುಂಬದವರು. ನಮ್ಮ ಸಂಬಂಧಿ ಮೃತಪಟ್ಟು 24 ಗಂಟೆ ಕಳೆದಿದೆ. ವರದಿ ಬಂದಿಲ್ಲ ಎಂದು ವೈದ್ಯರು ಹೇಳುತ್ತಿದ್ದಾರೆ. ಶವಾಗಾರದ ಎದುರು ಕಾದು ಸುಸ್ತಾಯಿತು. ಮನೆಯತ್ತ ಮರಳುತ್ತಿದ್ದೇವೆ’ ಎಂದು ಮೃತರ ಸಂಬಂಧಿ ಬೇಸರ ವ್ಯಕ್ತಪಡಿಸಿದರು.

ಈ ಕುರಿತು ಪ್ರತಿಕ್ರಿಯಿಸಿದ ಪ್ರಭಾರ ಜಿಲ್ಲಾ ಆರೋಗ್ಯಾಧಿಕಾರಿ ಡಾ.ರತ್ನಾಕರ್‌, ‘ಗಂಟಲಿನ ದ್ರವ ಸಂಗ್ರಹಿಸಿದ ಬಳಿಕ ವ್ಯಕ್ತಿ ಮೃತಪಟ್ಟಿದ್ದರೆ ಅಥವಾ ಮೃತದೇಹದಿಂದ ಮಾದರಿ ಸಂಗ್ರಹಿಸಿದ್ದರೆ ವರದಿ ಬರುವವರೆಗೂ ಶವ ಹಸ್ತಾಂತರಿಸಲು ಅವಕಾಶವಿಲ್ಲ. ವಿಳಂಬದ ಹಿಂದೆ ಬೇರೆ ಕಾರಣಗಳಿರುವುದಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT