ಸೋಮವಾರ, ಸೆಪ್ಟೆಂಬರ್ 20, 2021
21 °C
ಎಬಿವಿಪಿಯಿಂದ ಮಂಗಳೂರು ವಿವಿ ಕುಲಪತಿಗೆ ಮನವಿ

ಸ್ನಾತಕ, ಸ್ನಾತಕೋತ್ತರ ಪದವಿ ಫಲಿತಾಂಶ ಪ್ರಕಟಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ಮಂಗಳೂರು ವಿಶ್ವವಿದ್ಯಾಲಯದ ಸ್ನಾತಕ ಹಾಗೂ ಸ್ನಾತಕೋತ್ತರ ಪರೀಕ್ಷೆಯ ಮೌಲ್ಯಮಾಪನವನ್ನು ತಕ್ಷಣವೇ ನಡೆಸಿ ಫಲಿತಾಂಶ ಪ್ರಕಟಿಸುವಂತೆ ಎಬಿವಿಪಿ ವತಿಯಿಂದ ಕುಲಪತಿ ಹಾಗೂ ಪರೀಕ್ಷಾಂಗ ಕುಲಸಚಿವರಿಗೆ ಶುಕ್ರವಾರ ಮನವಿ ಸಲ್ಲಿಸಲಾಯಿತು.

ಕ್ಲಿಷ್ಟ ಪರಿಸ್ಥಿತಿಗಳ ನಡುವೆಯೂ ಮಂಗಳೂರು ವಿಶ್ವವಿದ್ಯಾಲಯ ಸ್ನಾತಕ ಹಾಗೂ ಸ್ನಾತಕೋತ್ತರ ಪರೀಕ್ಷೆಗಳನ್ನು ಯಶಸ್ವಿಯಾಗಿ ಮುಗಿಸಿದೆ. ಈಗಾಗಲೇ ಶೈಕ್ಷಣಿಕ ವರ್ಷವೂ ಆರು ತಿಂಗಳು ತಡವಾಗಿದ್ದು, ಈಗ ಮುಗಿದಿರುವ ಎಲ್ಲ ಸೆಮಿಸ್ಟರ್‌ಗಳ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಮಾಡಿ ಕೂಡಲೇ ಫಲಿತಾಂಶ ಪ್ರಕಟಿಸಬೇಕು ಎಂದು ಒತ್ತಾಯಿಸಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪದವಿ ವಿದ್ಯಾರ್ಥಿಗಳಿಗೆ ಭೌತಿಕ ತರಗತಿಗಳಿಗೆ ಅವಕಾಶವಿಲ್ಲ. ಉತ್ತರ ಪತ್ರಿಕೆಗಳನ್ನು ಈಗಾಗಲೇ ಮೌಲ್ಯಮಾಪನ ಕೊಠಡಿಯಲ್ಲಿ ಇರಿಸಲಾಗಿದೆ. 2 ಮತ್ತು 4ನೇ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಬಡ್ತಿ ನೀಡಲು 1 ಮತ್ತು 3ನೇ ಸೆಮಿಸ್ಟರ್‌ನ ಫಲಿತಾಂಶವನ್ನು ಪ್ರಕಟಿಸಲೇಬೇಕಾದ ಅಗತ್ಯವಿದೆ ಎಂದು ತಿಳಿಸಿದೆ.

ಪರೀಕ್ಷೆಯ ಫಲಿತಾಂಶ ವಿಳಂಬವಾದಲ್ಲಿ ವಿದ್ಯಾರ್ಥಿಗಳಲ್ಲಿ ಆತಂಕ ಉಂಟಾಗುವ ಸಾಧ್ಯತೆ ಇದೆ. ಇದರಿಂದ ವಿದ್ಯಾರ್ಥಿಗಳು ಮತ್ತು ಪೋಷಕರ ಊಹಾಪೋಹಗಳಿಗೆ ಕಾರಣವಾಗಬಹುದು. ಐಐಟಿ, ಐಐಎಂ ಹಾಗೂ ಐಐಎಸ್ಸಿಯಂತಹ ಶಿಕ್ಷಣ ಸಂಸ್ಥೆಗಳಲ್ಲಿ ಸ್ನಾತಕೋತ್ತರ ಪದವಿಗೆ ಪ್ರವೇಶ ಪಡೆಯಲು ಐದನೇ ಸೆಮಿಸ್ಟರ್‌ನ ಅಂಕಪಟ್ಟಿ ಕಡ್ಡಾಯವಾಗಿದೆ ಎಂದು ಹೇಳಿದೆ.

ಈ ಸೆಮಿಸ್ಟರ್ ಮೌಲ್ಯಮಾಪನ ಪ್ರಕ್ರಿಯೆ ಬೇಗ ಮುಗಿದರೆ, ಮುಂದಿನ ಶೈಕ್ಷಣಿಕ ವರ್ಷವನ್ನು ಪ್ರಾರಂಭಿಸಲು ಸುಲಭವಾಗುತ್ತದೆ. ಕೂಡಲೇ 1, 3, 5 ನೇ ಸೆಮಿಸ್ಟರ್‌ನ ತರಗತಿಗಳನ್ನು ಆರಂಭಿಸಿ, ಎಲ್ಲ ಸೆಮಿಸ್ಟರ್‌ನ ಅಂಕಪಟ್ಟಿಗಳನ್ನು ವಿತರಿಸಲು ಸುಲಭವಾಗುತ್ತದೆ. ವಿಶ್ವವಿದ್ಯಾಲಯ ಮತ್ತು ವಿದ್ಯಾರ್ಥಿಗಳು 2, 4 ಮತ್ತು 6ನೇ ಸೆಮಿಸ್ಟರ್ ಬಗ್ಗೆ ಗಮನ ಹರಿಸಲು ಇದರಿಂದ ಅನುಕೂಲ ಆಗಲಿದೆ ಎಂದು ತಿಳಿಸಿದೆ.

6 ನೇ ಸೆಮಿಸ್ಟರ್‌ನ ಪರೀಕ್ಷೆಯ ನಂತರ 1, 3 ಮತ್ತು 5 ನೇ ಸೆಮಿಸ್ಟರ್‌ನ ಮೌಲ್ಯಮಾಪನ ಮಾಡುವ ಯೋಜನೆ ಮಾಡದೇ, ಈ ಕೂಡಲೇ ಮೌಲ್ಯಮಾಪನ ಮಾಡಬೇಕು. ಫಲಿತಾಂಶವನ್ನು ನೀಡಬೇಕು ಎಂದು ಎಬಿವಿಪಿ ರಾಜ್ಯ ಸಹ ಕಾರ್ಯದರ್ಶಿ ಮಣಿಕಂಠ ಕಳಸ ಸಲ್ಲಿಸಿರುವ ಮನವಿಯಲ್ಲಿ ಒತ್ತಾಯಿಸಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.