ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರಂಗಕರ್ಮಿ ವಿ.ಜಿ.ಪಾಲ್‌ ನಿಧನ

Published 20 ಮಾರ್ಚ್ 2024, 18:45 IST
Last Updated 20 ಮಾರ್ಚ್ 2024, 18:45 IST
ಅಕ್ಷರ ಗಾತ್ರ

ಮಂಗಳೂರು: ಹಿರಿಯ ನಟ, ನಿರ್ದೇಶಕ, ಸಂಘಟಕ ವೇಣುಗೋಪಾಲ ಟಿ. ಕೋಟ್ಯಾನ್‌ (ವಿ.ಜಿ.ಪಾಲ್) ಅನಾರೋಗ್ಯದಿಂದ ಬುಧವಾರ ರಾತ್ರಿ ನಿಧನರಾದರು.

ತುಳು ರಂಗಭೂಮಿಯಲ್ಲಿ ಐದು ದಶಕಗಳಿಗೂ ಹೆಚ್ಚು ಸೇವೆ ಸಲ್ಲಿಸಿದ್ದ ಅವರು ಹತ್ತಾರು ನಾಟಕಗಳಲ್ಲಿ ಹಾಗೂ ತುಳು ಮತ್ತು ಕನ್ನಡ ಭಾಷೆಯ ಅನೇಕ ಸಿನಿಮಾಗಳಲ್ಲಿ ನಟಿಸಿದ್ದರು. 'ಕಲ್ಲಿಗದ ಕುರುಕ್ಷೇತ್ರ' ತುಳು ನಾಟಕದ ಮೂಲಕ 1961ರಲ್ಲಿ ರಂಗಪ್ರವೇಶ ಮಾಡಿದ ವಿ.ಜಿ.ಪಾಲ್ ಹಾಸ್ಯ ಪಾತ್ರಕ್ಕೊಂದು ಮಾದರಿಯಾಗಿದ್ದರು. ಚಲನಚಿತ್ರಗಳು, ಕಿರುತೆರೆ, ಧ್ವನಿ ಸುರುಳಿಗಳಿಗೆ ಕಂಠದಾನ ಮಾಡಿದ್ದರು. ತುಳು ನಾಟಕಗಳನ್ನು ಪಥಮ ಬಾರಿಗೆ ಕೊಲ್ಲಿ ರಾಷ್ಟ್ರಗಳಲ್ಲಿ ಪ್ರದರ್ಶನ ನೀಡಿದ್ದರು. ಕನ್ನಡದ ಜೀವನ್ಮುಖಿ, ಮಹಾನದಿ ಸಿನಿಮಾಗಳಲ್ಲಿ ನಟಿಸಿದ್ದಾರೆ. ಬಯ್ಯಮಲ್ಲಿಗೆ, ಭಾಗ್ಯವಂತೆದಿ, ಸತ್ಯ ಓಲುಂಡು, ಬಂಗಾರ್‌ ಪಟ್ಲೇರ್‌, ಮಾರಿಬಲೆ, ತುಡರ್‌ ಅವರು ನಟಿಸಿದ ಪ್ರಮುಖ ತುಳು ಸಿನಿಮಾಗಳು.

ಐಟಿಐ ವಿದ್ಯಾಭ್ಯಾಸ ಪಡೆದಿದ್ದ ಅವರು ಮೀನುಗಾರಿಕಾ ಅಭಿವೃದ್ಧಿ ನಿಗಮದಲ್ಲಿ ಹಿರಿಯ ತಾಂತ್ರಿಕ ಸಹಾಯಕರಾಗಿ 2000ದಲ್ಲಿ ನಿವೃತ್ತರಾಗಿದ್ದರು. ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ, ತುಳು ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳೂ ಸೇರಿದಂತೆ ಅವರು ಅನೇಕ ಪ್ರಶಸ್ತಿಗಳಿಗೆ ಭಾಜನರಾಗಿದ್ದರು. ಅವರಿಗೆ 75 ವರ್ಷ ತುಂಬಿದಾಗ ‘ಪಾಲ್‌ ಕಡಲ್‌‘ ಅಭಿನಂದನಾ ಗ್ರಂಥ ಬಿಡುಗಡೆ ಮಾಡಲಾಗಿತ್ತು.

ತನಿಯಪ್ಪ ಕೋಟ್ಯಾನ್‌ ಸೀತಮ್ಮ ದಂಪತಿಯ ಮಗನಾಗಿ ಜನಿಸಿದ್ದ ಅವರು ಸುಶೀಲಾ ಅವರನ್ನು ಮದುವೆಯಾಗಿದ್ದರು. ಅವರಿಗೆ ಇಬ್ಬರು ಪುತ್ರರು ಒಬ್ಬ ಪುತ್ರಿ ಇದ್ದಾರೆ.

ಯೇನೆಪೋಯ ಆಸ್ಪತ್ರೆಯಿಂದ ಗುರುವಾರ ಬೆಳಿಗ್ಗೆ 10 ಗಂಟೆ ಸುಮಾರಿಗೆ ಬೊಕ್ಕಪಟ್ಣದ ಮನೆಗೆ ಪಾರ್ಥೀವ ಶರೀರವನ್ನು ತಂದು ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತದೆ ಎಂದು ಅವರ ಸುಪುತ್ರ ಸಚಿನ್ ಪಾಲ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT