ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು| ಒಳ ಮೀಸಲಾತಿಯಿಂದ ಆದಿದ್ರಾವಿಡರಿಗೆ ಅನ್ಯಾಯ: ಶಿವಾನಂದ ಬಲ್ಲಾಳ್‌ ಬಾಗ್‌

Last Updated 12 ಏಪ್ರಿಲ್ 2023, 9:02 IST
ಅಕ್ಷರ ಗಾತ್ರ

ಮಂಗಳೂರು: ‘ರಾಜ್ಯ ಸರ್ಕಾರ ಜಾರಿಗೆ ತಂದಿರುವ ಒಳಮೀಸಲಾತಿಯಿಂದ ಆದಿದ್ರಾವಿಡ ಸಮಾಜಕ್ಕೆ ಅನ್ಯಯವಾಗಿದೆ’ ಎಂದು ಕರ್ನಾಟಕ ಆದಿದ್ರಾವಿಡ ಸಮಾಜಸೇವಾ ಸಂಘದ ಅಧ್ಯಕ್ಷ ಶಿವಾನಂದ ಬಲ್ಲಾಳ್‌ ಬಾಗ್‌ ಹೇಳಿದರು.

ಇಲ್ಲಿ ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು, ‘ಒಳಮೀಸಲಾತಿ ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿದೆ. ಸರ್ಕಾರ ತಕ್ಷಣವೇ ಒಳ ಮೀಸಲಾತಿಯನ್ನು ಹಿಂಪಡೆದು ಆದಿ ದ್ರಾವಿಡ ಸಮಾಜಕ್ಕೆಆಗಿರುವ ಅನ್ಯಾಯ ಸರಿಪಡಿಸಬೇಕು. ಇಲ್ಲದಿದ್ದರೆ ಹೋರಾಟದ ಹಾದಿಯನ್ನು ಹಿಡಿಯಬೇಕಾದೀತು. ಮುಂದಿನ ಸರ್ಕಾರವಾದರೂ ಈ ತಪ್ಪನ್ನು ಸರಿಪಡಿಸಬೇಕು’ ಎಂದು ಅವರು ಒತ್ತಾಯಿಸಿದರು.

‘ರಾಜ್ಯದ ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ, ಚಿಕ್ಕಮಗಳುರು, ಹಾಸನ, ಕೊಡಗು ಹಾಗೂ ಕೇರಳದ ಕಾಸರಗೋಡು ಜಿಲ್ಲೆಗಳಲ್ಲಿ ಆದಿದ್ರಾವಿಡ ಸಮಾಜದವರು ಗಣನೀಯ ಸಂಖ್ಯೆಯಲ್ಲಿದ್ದಾರೆ. ಸತ್ಯ ಸಾರಾಮಾಣಿ ಕುಲದೈವವನ್ನು ಆರಾಧನೆ ಮಾಡಿಕೊಂಡು ಬಂದ ಸಮಾಜ ನಮ್ಮದು. ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಈಗಲೂ ನಮ್ಮ ಸಮಾಜ ಹಿಂದುಳಿದಿದೆ. ಬಹುತೇಕರು ಕೂಲಿ ಮಾಡಿ ಜೀವನ ನಡೆಸುತ್ತಿದ್ದಾರೆ’ ಎಂದರು.

ಸಂಘದ ಪ್ರಧಾನ ಕಾರ್ಯದರ್ಶಿ ರಮೇಶ್‌ ಉಳ್ಳಾಲ್‌ ಮಾತನಾಡಿ,‘ಸುಳ್ಯ ಮೀಸಲು ಕ್ಷೇತ್ರದಿಂದ ಈ ಸಲ ಆದಿದ್ರಾವಿಡ ಸಮಾಜದ ಭಾಗಿರಥಿ ಮುರುಳ್ಯ ಅವರನ್ನು ಅಭ್ಯರ್ಥಿಯನ್ನಾಗಿಸಲು ಬಿಜೆಪಿ ನಿರ್ಧರಿಸಿರುವುದು ಸ್ವಾಗತಾರ್ಹ. ಇದಕ್ಕಾಗಿ ಬಿಜೆಪಿಯ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌, ಜಿಲ್ಲಾ ಘಟಕದ ಅಧ್ಯಕ್ಷ ಸುದರ್ಶನ ಮೂಡುಬಿದಿರೆ ಹಾಗೂ ಸಹಕರಿಸಿದ ಪಕ್ಷದ ಎಲ್ಲ ಮುಖಂಡರಿಗೆ ಕೃತಜ್ಞತೆ ಸಲ್ಲಿಸುತ್ತೇವೆ’ ಎಂದರು.

‘1972ರಲ್ಲಿ ಸುಳ್ಯ ವಿಧಾನಸಭಾ ಕ್ಷೇತ್ರದಿಂದ ಆದಿದ್ರಾವಿಡ ಸಮಾಜದ ಪಿ.ಡಿ.ಬಂಗೇರ ಅವರು ಗೆದ್ದಿದ್ದರು. ಆ ಬಳಿಕ ನಮ್ಮ ಸಮಾಜದ ಯಾವ ನಾಯಕರಿಗೂ ಶಾಸಕರಾಗುವ ಅವಕಾಶ ಒದಗಿ ಬಂದಿರಲಿಲ್ಲ’ ಎಂದರು.

ಸುದ್ದಿಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಸುರೇಶ ಕೆ., ಸಂಘಟನಾ ಸಂಚಾಲಕ ಪ್ರೇಮನಾಥ ಪಿ.ಬಿ. ಜೊತೆ ಕಾರ್ಯದರ್ಶಿ ತನಿಯಪ್ಪ ಪಡ್ಡಾಯೂರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT