ಸೋಮವಾರ, ಸೆಪ್ಟೆಂಬರ್ 21, 2020
21 °C
ಮಂಗಳೂರು ಘಟನೆಯ ನೆನಪು

ಕೋಯಿಕ್ಕೋಡ್‌ ವಿಮಾನ ದುರಂತ: ಮಂಗಳೂರು ರನ್‌ ವೇ ವಿಸ್ತರಣೆ ಮತ್ತೊಮ್ಮೆ ಚರ್ಚೆಗೆ

ಚಿದಂಬರಪ್ರಸಾದ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ಕೋಯಿಕ್ಕೋಡ್‌ನಲ್ಲಿ ಶುಕ್ರವಾರ ರಾತ್ರಿ ಸಂಭವಿಸಿದ ವಿಮಾನ ದುರಂತದಿಂದಾಗಿ ನಗರದ ಬಜ್ಪೆ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಅಭಿವೃದ್ಧಿಯ ಚರ್ಚೆ ಮತ್ತೆ ಆರಂಭವಾಗಿದೆ. ಎರಡೂ ಟೇಬಲ್‌ ಟಾಪ್‌ ವಿಮಾನ ನಿಲ್ದಾಣಗಳಲ್ಲಿ ದಶಕಗಳ ಅಂತರದಲ್ಲಿ ಅವಘಡಗಳು ಸಂಭವಿಸಿದ್ದು, ಮೂಲಸೌಕರ್ಯದ ಕೊರತೆಯೇ ಕಾರಣ ಎನ್ನುವ ಆರೋಪಗಳು ಕೇಳಿ ಬರುತ್ತಿವೆ.

2010 ರ ಮೇ 22 ರಂದು ಮಂಗಳೂರಿನಲ್ಲಿ ನಡೆದ ವಿಮಾನ ದುರಂತ ಹಾಗೂ 2020 ರ ಆಗಸ್ಟ್‌ 7 ರಂದು ಕೋಯಿಕ್ಕೋಡ್‌ನಲ್ಲಿ ನಡೆದ ವಿಮಾನ ಅವಘಡಗಳಲ್ಲಿ ಸಾಮ್ಯತೆ ಇದೆ ಎನ್ನುವ ಮಾತುಗಳಿವೆ. ಹೀಗಾಗಿ ನಗರದ ವಿಮಾನ ನಿಲ್ದಾಣದಲ್ಲಿ ರನ್‌ವೇ ವಿಸ್ತರಣೆ ಸೇರಿದಂತೆ ಇನ್ನಷ್ಟು ಅಭಿವೃದ್ಧಿ ಕಾರ್ಯಗಳು ನಡೆಯಬೇಕು ಎನ್ನುವ ಒತ್ತಾಯ ಆರಂಭವಾಗಿದೆ.

‘ಕೋಯಿಕ್ಕೋಡ್‌ನಲ್ಲಿ ನಡೆದ ದುರಂತದಿಂದಾಗಿ ಟೈರ್‌–2 ನಗರಗಳ ವಿಮಾನ ನಿಲ್ದಾಣಗಳ ಮೂಲಸೌಕರ್ಯ ಅಭಿವೃದ್ಧಿಗೆ ಒತ್ತು ನೀಡುವುದು ಅಗತ್ಯವಾಗಿದೆ. 2010 ರಲ್ಲಿ ಮಂಗಳೂರಿನಲ್ಲಿ ನಡೆದ ದುರಂತ ಮತ್ತೆ ನೆನಪಾಗುತ್ತಿದ್ದು, ದಶಕ ಕಳೆದರೂ ಮೂಲಸೌಕರ್ಯದಲ್ಲಿ ಅಷ್ಟೊಂದು ಸುಧಾರಣೆ ಆಗಿಲ್ಲ’ ಎಂದು ಬಿಜೆಪಿ ಮುಖಂಡ ಕ್ಯಾ.ಬೃಜೇಶ್‌ ಚೌಟ ಟ್ವೀಟ್‌ ಮಾಡಿದ್ದಾರೆ.

‘ಕಳೆದ ವರ್ಷವೂ ನಗರದಲ್ಲಿ ಒಂದು ವಿಮಾನ ರನ್‌ವೇಯಿಂದ ಜಾರಿದ ಘಟನೆ ನಡೆದಿತ್ತು. 1951 ರಲ್ಲಿಯೇ ಆರಂಭವಾದ ವಿಮಾನ ನಿಲ್ದಾಣ ಇಲ್ಲಿನ ಅಭಿವೃದ್ಧಿಗೆ ಅಗತ್ಯವಾಗಿದೆ. ಸದ್ಯಕ್ಕೆ ಇರುವ ವಿಮಾನ ನಿಲ್ದಾಣದಲ್ಲಿ ರನ್‌ವೇ ವಿಸ್ತರಣೆ ಸಾಧ್ಯವೇ ಇಲ್ಲ ಎನ್ನುವುದಾದರೆ, ಮಂಗಳೂರನ್ನು ಜಾಗತಿಕ ತಾಣವಾಗಿಸುವ ನಿಟ್ಟಿನಲ್ಲಿ ಮತ್ತೊಂದು ವಿಮಾನ ನಿಲ್ದಾಣವನ್ನು ನಿರ್ಮಾಣ ಮಾಡಬಾರದೇಕೆ’ ಎಂದು ಪ್ರಶ್ನಿಸಿದ್ದಾರೆ.

ಟ್ಯಾಕ್ಸಿ ವೇ ನಿರ್ಮಾಣ: ‘ಮಂಗಳೂರು ವಿಮಾನ ನಿಲ್ದಾಣದಲ್ಲಿ ರನ್ ವೇ ವಿಸ್ತರಣೆಯ ಭಾಗವಾಗಿ ಮೊದಲ ಹಂತದ ಟ್ಯಾಕ್ಸಿ ವೇ ನಿರ್ಮಾಣ ಪೂರ್ಣಗೊಂಡಿದ್ದು, ನಿಲ್ದಾಣದ ವಿಮಾನ ನಿರ್ವಹಣೆ ಪ್ರತಿ ಗಂಟೆಗೆ 10 ರಿಂದ 14ಕ್ಕೆ ಏರಿದೆ. ಎರಡನೇ ಹಂತದ ಟ್ಯಾಕ್ಸಿ ವೇ ನಿರ್ಮಾಣ ಕಾಮಗಾರಿ ಭರದಿಂದ ನಡೆಯುತ್ತಿದ್ದು, ಈ ಕಾಮಗಾರಿ ಪೂರ್ಣಗೊಂಡಲ್ಲಿ ನಿಲ್ದಾಣದಲ್ಲಿ ಪ್ರತಿ ಗಂಟೆಗೆ 17 ವಿಮಾನಗಳ ನಿರ್ವಹಣೆ ಸಾಧ್ಯವಾಗಲಿದೆ’ ಎಂದು ಮಂಗಳೂರು ವಿಮಾನ ನಿಲ್ದಾಣ ಪ್ರಾಧಿಕಾರದ ನಿರ್ದೇಶಕ ವಿ.ವಿ. ರಾವ್ ತಿಳಿಸಿದ್ದಾರೆ.

‘ಇದರ ಜತೆಗೆ ಟರ್ಮಿನಲ್‌ ಕಟ್ಟಡದ ವಿಸ್ತರಣೆ ಕಾಮಗಾರಿಯನ್ನು ಕೈಗೊಳ್ಳಲಾಗಿದೆ. ಇದರಿಂದ ಪ್ರತಿ ವರ್ಷ 10 ಲಕ್ಷ ಹೆಚ್ಚುವರಿ ಪ್ರಯಾಣಿಕರನ್ನು ನಿರ್ವಹಿಸಲು ಸಾಧ್ಯವಾಗಲಿದೆ’ ಎನ್ನುತ್ತಾರೆ ಅವರು.

‘ಮಂಗಳೂರು ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಸೌಕರ್ಯಕ್ಕೆ ಅಭಿವೃದ್ಧಿ ಕಾಮಗಾರಿ ನಡೆಸಲಾಗುತ್ತಿದೆ. ವಿಮಾನಗಳ ನಿಲುಗಡೆ ಸ್ಥಳವನ್ನು 10 ರಿಂದ 15ಕ್ಕೆ ಹೆಚ್ಚಿಸಲಾಗಿದೆ. ಟರ್ಮಿನಲ್‌ ಕಟ್ಟಡದ ವಿಸ್ತಾರವೂ ನಡೆಯುತ್ತಿದೆ’ ಎನ್ನುತ್ತಾರೆ ಕೆನರಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಅಧ್ಯಕ್ಷ ಐಸಾಕ್‌ ವಾಸ್‌.

ವಿಮಾನಗಳ ಸಂಖ್ಯೆ ಹೆಚ್ಚಳ: ಕಳೆದ 10 ವರ್ಷಗಳಲ್ಲಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ಸಾಕಷ್ಟು ಪ್ರಗತಿಯಾಗಿದೆ. 2010–11 ರಲ್ಲಿ 8.45 ಲಕ್ಷ ಇದ್ದ ಪ್ರಯಾಣಿಕರ ಸಂಖ್ಯೆ, 2019–20 ರಲ್ಲಿ 18.76 ಲಕ್ಷಕ್ಕೆ ಏರಿದೆ. ಇದರ ಜತೆಗೆ ವಿಮಾನಗಳ ಸಂಚಾರವೂ ಹೆಚ್ಚಾಗಿದೆ. 2010–11 ರಲ್ಲಿ 9,431 ವಿಮಾನಗಳು ಸಂಚರಿಸಿದ್ದರೆ, 2019–20 ರಲ್ಲಿ 15,685 ವಿಮಾನಗಳು ಸಂಚರಿಸಿವೆ ಎಂದು ವಿ.ವಿ. ರಾವ್ ಹೇಳಿದ್ದಾರೆ.

‘ಮಳೆಯಲ್ಲಿ ವಿಮಾನ ಸಂಚಾರ ಇಲ್ಲ’
ಬೆಳಕು ಕಡಿಮೆ ಇರುವುದರಿಂದ ಬಜ್ಪೆಯ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಳೆಯ ಸಂದರ್ಭದಲ್ಲಿ ವಿಮಾನಗಳನ್ನು ಇಳಿಸಲು ಅವಕಾಶವಿಲ್ಲ.

‘ಮಂಗಳೂರು ವಿಮಾನ ನಿಲ್ದಾಣ ಬೆಟ್ಟದ ಮೇಲಿದ್ದು, ಟೇಬಲ್ ಟಾಪ್ ರನ್ ವೇ ಹೊಂದಿದೆ. ಭಾರಿ ಮಳೆಯ ಸಂದರ್ಭದಲ್ಲಿ ಪೈಲೆಟ್‌ಗಳಿಗೆ ಸರಿಯಾಗಿ ಕಾಣುವುದಿಲ್ಲ. ಹೀಗಾಗಿ ಭಾರಿ ಮಳೆ ಆಗುತ್ತಿರುವಾಗ ವಿಮಾನದ ನಿರ್ವಹಣೆಗೆ ಅವಕಾಶ ನೀಡುತ್ತಿಲ್ಲ’ ಎಂದು ವಿ.ವಿ. ರಾವ್‌ ಹೇಳಿದ್ದಾರೆ.

‘ಶನಿವಾರ ಬೆಳಿಗ್ಗೆ ಧಾರಾಕಾರ ಮಳೆ ಆಗುತ್ತಿತ್ತು. ಹೀಗಾಗಿ ಬೆಂಗಳೂರಿನಿಂದ ಬರಬೇಕಿದ್ದ ಇಂಡಿಗೋ ವಿಮಾನಕ್ಕೂ ಇಳಿಯಲು ಅವಕಾಶ ನಿರಾಕರಿಸಲಾಗಿದೆ’ ಎಂದು ಹೇಳಿದ್ದಾರೆ.

ಸುರಕ್ಷಿತ ಲ್ಯಾಂಡಿಂಗ್‌ಗೆ ವ್ಯವಸ್ಥೆ
ಮಂಗಳೂರು ವಿಮಾನ ನಿಲ್ದಾಣದಲ್ಲಿ ಸುರಕ್ಷಿತ ಲ್ಯಾಂಡಿಂಗ್‌ಗೆ ಅಗತ್ಯ ವ್ಯವಸ್ಥೆ ಮಾಡಲಾಗಿದೆ. 2010 ರ ದುರಂತದ ನಂತರ ಸಮಿತಿ ನೀಡಿದ್ದ ಶಿಫಾರಸುಗಳನ್ನು ಕಾರ್ಯರೂಪಕ್ಕೆ ತರಲಾಗಿದೆ ಎನ್ನುವುದು ವಿಮಾನ ನಿಲ್ದಾಣ ಅಧಿಕಾರಿಗಳ ಮಾತು.

‘ರನ್ ವೇ ಅಂತ್ಯದಲ್ಲಿ ಎರಡೂ ಕಡೆಗಳಲ್ಲಿ 240 ಮೀಟರ್‌ ಸುರಕ್ಷಿತ ಪ್ರದೇಶವನ್ನು ನಿರ್ಮಾಣ ಮಾಡಲಾಗಿದೆ. ಅಲ್ಲದೇ ಅದರ ನಂತರವೂ ಮರಳಿನ ಬೆಡ್‌ ಹಾಕಲಾಗಿದೆ’ ಎಂದು ಮಂಗಳೂರು ವಿಮಾನ ನಿಲ್ದಾಣದ ಮಾಜಿ ನಿರ್ದೇಶಕ ವಾಸುದೇವ್‌ ರಾವ್‌ ಹೇಳುತ್ತಾರೆ.

‘ರನ್‌ ವೇ ಕೊನೆಯಲ್ಲಿ 90 ಮೀಟರ್‌ ಸುರಕ್ಷಿತ ಪ್ರದೇಶ ನಿರ್ಮಾಣ ಕಡ್ಡಾಯವಿದೆ. ಆದರೆ, ಮಂಗಳೂರಿನಲ್ಲಿ 240 ಮೀಟರ್‌ ಇದ್ದು, ಅಗತ್ಯಕ್ಕಿಂತಲೂ ಹೆಚ್ಚಾಗಿದೆ’ ಎಂದು ಐಸಾಕ್‌ ವಾಸ್‌ ಹೇಳುತ್ತಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು