ಮಂಗಳೂರು–ಕುವೈತ್ ವಿಮಾನ: ಅನನುಕೂಲವೇ ಹೆಚ್ಚು

ಮಂಗಳೂರು: ಇಲ್ಲಿಂದ ಕುವೈತ್‌ಗೆ ತೆರಳುವ ಏರ್ ಇಂಡಿಯಾ ವಿಮಾನಗಳ ವೇಳಾಪಟ್ಟಿಯನ್ನು ನವೆಂಬರ್‌ನಿಂದ ಪರಿಷ್ಕರಿಸಲಾಗಿದ್ದು, ಈ ಬಾರಿಯೂ ಅನುಕೂಲ ಕಲ್ಪಿಸಿಲ್ಲ ಎನ್ನುವ ಆರೋಪ ಕುವೈತ್‌ನ ಅನಿವಾಸಿ ಕರಾವಳಿಗರಿಂದ ಕೇಳಿಬಂದಿದೆ.
ಕೋವಿಡ್–19 ಮೊದಲ ಅಲೆಯವರೆಗೆ ಸಮರ್ಪಕವಾಗಿದ್ದ ಮಂಗಳೂರು-ಕುವೈತ್ ವಿಮಾನದ ವೇಳಾಪಟ್ಟಿ, ಬಳಿಕ ದಿಢೀರನೆ ಬದಲಾಗಿದೆ. ಗುರುವಾರ ಕುವೈತ್‌ನಿಂದ ಹೊರಟು ಮಂಗಳೂರಿಗೆ ಬರುವವರಿಗೆ ಮೊದಲಿನ ವೇಳಾಪಟ್ಟಿ ಅನುಕೂಲವಾಗಿತ್ತು. ಕುವೈತ್
ನಲ್ಲಿ ಶುಕ್ರವಾರ ಮತ್ತು ಶನಿವಾರ ವಾರಾಂತ್ಯ ರಜೆ ಇರುವುದರಿಂದ, ಕರಾವಳಿ ಜನರು ಊರಿಗೆ ಬಂದು ಹೋಗಲು ಪ್ರಯೋಜನವಾಗುತ್ತಿತ್ತು. ರಜೆ ಇಲ್ಲದೆ ಭಾನುವಾರ ಮತ್ತೆ ಕೆಲಸಕ್ಕೆ ಹಾಜರಾಗಲು ಅವಕಾಶ ಸಿಗುತ್ತಿತ್ತು.
ನಂತರ ಈ ವೇಳಾಪಟ್ಟಿಯನ್ನು ಹಠಾತ್ತಾಗಿ ಬದಲಾಯಿಸಲಾಗಿದ್ದು, ವಿಮಾನ ಸಂಚಾರವನ್ನು ರಾತ್ರಿಯ ಬದಲು ಹಗಲಿಗೆ ನಿಗದಿಪಡಿಸಲಾಗಿತ್ತು. ಇದರಿಂದಾಗಿ ಕುವೈತ್‌ನಿಂದ ಮಂಗಳೂರಿಗೆ ಬರುವ ಜನರು ವಾರದ ಕರ್ತವ್ಯದ ಅವಧಿಯಲ್ಲಿ ರಜೆ ಹಾಕಿ ಬರಬೇಕಾಗುತ್ತಿತ್ತು. ಈ ಸಮಯವನ್ನು ಹಿಂದಿನಂತೆ ಮರು ನಿಗದಿಪಡಿಸುವಂತೆ ಕುವೈತ್‌ನ ಕರಾವಳಿಗರ ಸಂಘಟನೆಗಳು ಸಂಸದರಿಗೆ ಮನವಿ ಸಲ್ಲಿಸಿದ್ದವು.
ವಾರದ ಮಧ್ಯೆ ವಿಮಾನ: ಹೊಸ ವೇಳಾಪಟ್ಟಿ ಪ್ರಕಾರ ಮಂಗಳೂರಿನಿಂದ ಪ್ರತಿ ಮಂಗಳವಾರ ಬೆಳಿಗ್ಗೆ 6 ಗಂಟೆಗೆ ಕುವೈತ್‌ಗೆ ವಿಮಾನ ಹೊರಡಲಿದೆ. ಪ್ರತಿ ಬುಧವಾರ ಬೆಳಿಗ್ಗೆ 8.45ಕ್ಕೆ ಕುವೈತ್‌ನಿಂದ ಮಂಗಳೂರಿಗೆ ಪ್ರಯಾಣ ಬೆಳೆಸಲಿದೆ. ಇದು ಕುವೈತ್‌ನಲ್ಲಿರುವ ಕರಾವಳಿ ಉದ್ಯೋಗಿಗಳಿಗೆ ಅನುಕೂಲ ಆಗುವುದಿಲ್ಲ. ವಾರದ ಮಧ್ಯೆ ವಿಮಾನ ಸಂಚಾರ ನಿಗದಿ ಆಗಿದ್ದರಿಂದ ಊರಿಗೆ ಬಂದು ಹೋಗಬೇಕಾದರೆ ರಜೆ ಹಾಕಬೇಕಾಗುತ್ತದೆ. ಹಾಗಾಗಿ ಈ ವೇಳಾಪಟ್ಟಿಯನ್ನು ಹಿಂದಿನಂತೆ ರಾತ್ರಿಗೆ ಬದಲಾಯಿಸುವುದೇ ಸೂಕ್ತ ಎಂದು ಒತ್ತಾಯಿಸಿದ್ದಾರೆ. ‘ನ.30ರ ವರೆಗೆ ವಂದೇ ಭಾರತ್ ಮಿಷನ್‌ನಡಿ ಈ ರೀತಿ ವಿಮಾನ ಸಂಚರಿಸುತ್ತದೆ. ಕೋವಿಡ್–19 ವೇಳೆಯ ಸಂಚಾರ ಇದಾಗಿದ್ದು, ಇದು ತಾತ್ಕಾಲಿಕ ವೇಳಾಪಟ್ಟಿ. ಹಾಗಾಗಿ ಮತ್ತೆ ವೇಳಾಪಟ್ಟಿ ಪರಿಷ್ಕರಣೆಯಾಗುವ ಸಂಭವ ಇದೆ’ ಎಂದು ಏರ್ ಇಂಡಿಯಾ ಮಂಗಳೂರಿನ ಅಧಿಕಾರಿಗಳು ಹೇಳುತ್ತಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.